Viral news: ಬೆಂಗಳೂರಿನ ಬೀದಿಯಲ್ಲಿ ಮಹಿಳೆಯರ ಒಪ್ಪಿಗೆಯಿಲ್ಲದೆ ವಿಡಿಯೊ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್: ಯುವತಿಯ ದೂರು
Viral News: ಕಿಡಿಗೇಡಿಯೊಬ್ಬನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಲವಾರು ಮಹಿಳೆಯರು ಬೆಂಗಳೂರಿನ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿರುವ ವೀಡಿಯೊ ರೀಲ್ಸ್‌ಗಳಿವೆ. ಹೆಚ್ಚಿನವುಗಳನ್ನು ಅಶ್ಲೀಲ ರೀತಿಯಲ್ಲಿ ಚಿತ್ರೀಕರಿಸಲಾಗಿದೆ. ಎಲ್ಲಾ ವಿಡಿಯೊಗಳನ್ನು ಅವರಿಗೆ ಅರಿವಿಲ್ಲದಂತೆ ಸೆರೆಹಿಡಿಯಲಾಗಿದೆ ಎಂದು ಯುವತಿ ದೂರಿದ್ದಾರೆ.


ಬೆಂಗಳೂರು: ಚರ್ಚ್ ಸ್ಟ್ರೀಟ್ ಮತ್ತು ಬೆಂಗಳೂರಿನ (Bengaluru) ಇತರ ಭಾಗಗಳಲ್ಲಿ ಮಹಿಳೆಯರು ನಡೆದುಕೊಂಡು ಹೋಗುವಾಗ ಅವರ ಒಪ್ಪಿಗೆಯಿಲ್ಲದೆ ಅವರ ರೀಲ್‌ಗಳನ್ನು ಚಿತ್ರಿಸಿ ಇನ್‌ಸ್ಟಗ್ರಾಂನಲ್ಲಿ (Instagram reels) ಪೋಸ್ಟ್ ಮಾಡುತ್ತಿರುವ ಖಾತೆಯ ಬಗ್ಗೆ ಯುವತಿಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಕಳವಳ (Viral news) ವ್ಯಕ್ತಪಡಿಸಿದ್ದಾರೆ. ತಮ್ಮ ಒಪ್ಪಿಗೆಯಿಲ್ಲದೆ ತಮ್ಮನ್ನು ಚಿತ್ರೀಕರಿಸಲಾಗಿದೆ. ಈ ಪೋಸ್ಟ್ ಅನ್ನು ತೆಗೆದುಹಾಕುವಂತೆ ಒತ್ತಾಯಿಸಿದರೂ ತೆಗೆದುಹಾಕಲಾಗಿಲ್ಲ ಎಂದು ಯುವತಿ ದೂರಿಕೊಂಡಿದ್ದಾರೆ.
ಆ ರೀಲ್‌ನ ಪರಿಣಾಮ ತನಗೆ ಜನರಿಂದ ಅಶ್ಲೀಲ ಸಂದೇಶಗಳು ಬರುತ್ತಿವೆ. ಆ ಕಿಡಿಗೇಡಿ ಖಾತೆಯನ್ನು ರಿಪೋರ್ಟ್ ಮಾಡಿದ್ದರೂ ಏನೂ ಬದಲಾಗಿಲ್ಲ ಎಂದು ಅವರು ಹೇಳಿಕೊಂಡಿದ್ದಾಳೆ. ಆ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಲವಾರು ಮಹಿಳೆಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೀಡಿಯೊಗಳಿವೆ. ಹೆಚ್ಚಿನವುಗಳನ್ನು ಅಶ್ಲೀಲ ರೀತಿಯಲ್ಲಿ ಚಿತ್ರೀಕರಿಸಲಾಗಿದೆ. ಎಲ್ಲಾ ವಿಡಿಯೊಗಳನ್ನು ಅವರಿಗೆ ಅರಿವಿಲ್ಲದಂತೆ ಸೆರೆಹಿಡಿಯಲಾಗಿದೆ ಎಂದು ಅವರು ದೂರಿದ್ದಾರೆ.
ʼಆ ವ್ಯಕ್ತಿ ಚರ್ಚ್ ಸ್ಟ್ರೀಟ್‌ನಲ್ಲಿ 'ಅವ್ಯವಸ್ಥೆ'ಯನ್ನು ಚಿತ್ರೀಕರಿಸುವಂತೆ ನಟಿಸುತ್ತಾ ಓಡಾಡುತ್ತಾನೆ. ಆದರೆ ವಾಸ್ತವದಲ್ಲಿ ಆತ ಮಹಿಳೆಯರನ್ನು ಹಿಂಬಾಲಿಸಿ ಅವರ ಒಪ್ಪಿಗೆಯಿಲ್ಲದೆ ರೆಕಾರ್ಡ್ ಮಾಡುತ್ತಿರುತ್ತಾನೆ. ಅದು ನನಗೂ ಆಗಿದೆ. ಇತರ ಅನೇಕರಿಗೆ ಅವರನ್ನೂ ಚಿತ್ರೀಕರಿಸಲಾಗಿದೆ ಎಂದು ತಿಳಿದಿಲ್ಲ. ನನ್ನ ಖಾತೆಯು ಸಾರ್ವಜನಿಕವಾಗಿದೆ ಎಂಬ ಕಾರಣಕ್ಕೆ ನಾನು ಸಾರ್ವಜನಿಕವಾಗಿ ಚಿತ್ರೀಕರಿಸಲು ಒಪ್ಪುತ್ತೇನೆ ಎಂದರ್ಥವಲ್ಲ. Instagramನಲ್ಲಿ ವ್ಯೂಯರ್ಶಿಪ್ ಹೆಚ್ಚಾಗಿಸುವುದಕ್ಕೆ ಹೀಗೆ ಮಾಡುವುದು ಸರಿಯಾದುದಲ್ಲʼ ಎಂದು ಅವರು ದೂರಿದ್ದಾರೆ.
ʼಆ ವ್ಯಕ್ತಿ ಸಿಕ್ಕಿಬೀಳುತ್ತಾನೆ ಎಂದು ನಾನು ಭಾವಿಸುತ್ತೇನೆ. @blrcitypolice @cybercrimecid ಅನ್ನು ಟ್ಯಾಗ್ ಮಾಡಿದ್ದೇನೆ. ಅದು ಸರಿಯಾದ ಅಧಿಕಾರಿಗಳನ್ನು ತಲುಪುತ್ತದೆ ಎಂಬ ಭರವಸೆಯಿದೆ. ದಯವಿಟ್ಟು ಅದನ್ನು ತೆಗೆದುಹಾಕಲು ನನಗೆ ಸಹಾಯ ಮಾಡಿ. ನಾನು ಖಾತೆಯನ್ನು ರಿಪೋರ್ಟ್ ಮಾಡಿರುವುದರಿಂದ ಆ ಖಾತೆಯನ್ನು ಉಲ್ಲೇಖಿಸಲು ಅಥವಾ ಟ್ಯಾಗ್ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ. ಆದರೆ ಖಾತೆಯ ಬಳಕೆದಾರನ ಹೆಸರು ವೀಡಿಯೊದಲ್ಲಿದೆʼ ಎಂದು ಮಹಿಳೆ Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಂಗಳೂರು ಪೊಲೀಸರು ಇನ್ನೂ ಪೋಸ್ಟ್‌ಗೆ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ: Viral Video: ಪರೀಕ್ಷೆಯಲ್ಲಿ ಮಗ ಫೇಲ್ ಆಗಿದ್ದಕ್ಕೆ ಕ್ರೂರಿ ಅಪ್ಪ ಮಾಡಿದ್ದೇನು ನೋಡಿ; ಬೆಚ್ಚಿಬೀಳಿಸುವ ವಿಡಿಯೊ ವೈರಲ್!