ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Chalo: ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಸಮಾಜ ತಿರಸ್ಕರಿಸಬೇಕು: ಜೋಶಿ

Pralhad joshi: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಪ್ರಕರಣವನ್ನು NIA ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಧರ್ಮಸ್ಥಳ ಚಲೋ ಸಮಾವೇಶದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಮಾತನಾಡಿದ್ದು, ಧರ್ಮಸ್ಥಳದ ಪರದ ಹೋರಾಟ ರಾಜಕೀಯವಲ್ಲ, ಇದು ಧರ್ಮ - ಸಂಸ್ಕೃತಿಯ ರಕ್ಷಣೆಗಾಗಿ ನಡೆಯುತ್ತಿರುವ ಪ್ರಾಮಾಣಿಕ ಹೋರಾಟ ಎಂದು ಹೇಳಿದರು.

ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಸಮಾಜ ತಿರಸ್ಕರಿಸಬೇಕು: ಜೋಶಿ

-

Prabhakara R Prabhakara R Sep 1, 2025 4:34 PM

ಧರ್ಮಸ್ಥಳ: ಧರ್ಮಸ್ಥಳ ಐತಿಹಾಸಿಕ ಸ್ಥಳ, ಪವಿತ್ರ ಭೂಮಿ. ಧರ್ಮಸ್ಥಳದ ಹೆಸರಿಗೆ ಕಪ್ಪು ಚುಕ್ಕೆ ಹಚ್ಚಲು ಪಣತೊಟ್ಟ ಕಾಣದ ಕೈಗಳು ಇಂದು ಹೆದರಿವೆ. ಈ ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಸಮಾಜ ತಿರಸ್ಕಾರ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕರೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಪ್ರಕರಣವನ್ನು NIA ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಧರ್ಮಸ್ಥಳ ಚಲೋ ಸಮಾವೇಶದಲ್ಲಿ (Dharmasthala Chalo) ಅವರು ಮಾತನಾಡಿದರು.

ದೇಶದಲ್ಲಿ ಕಾಂಗ್ರೆಸ್‌ ಪಾರ್ಟಿ ಸದಾ ಕಾಲಕ್ಕೂ ಹಿಂದೂ ಸಮಾಜವನ್ನು ತಿರಸ್ಕಾರ ಮಾಡಿ, ಅಲ್ಪ ಸಂಖ್ಯಾತರ ತುಷ್ಟೀಕರಣ ಮಾಡುತ್ತಲೇ ಬಂದಿದೆ. ಆಪರೇಷನ್‌ ಸಿಂದೂರ ಬಳಿಕ ಭಾರತದ ಎಷ್ಟು ವಿಮಾನ ಉರುಳಿದವು ಎಂದು ಕಾಂಗ್ರೆಸ್‌ ಪ್ರಶ್ನಿಸುತ್ತದೆ. ಈ ದೇಶದಲ್ಲಿರುವ ಬಹು ಸಂಖ್ಯಾತರ ವಿರುದ್ಧವಾಗಿ ಕಾಂಗ್ರೆಸ್‌ ಷಡ್ಯಂತ್ರ ಮಾಡುತ್ತಲೇ ಬಂದಿದೆ. ಶನಿ ಸಿಂಗಾಪುರ, ಶಬರಿಮಲೆ ವಿರುದ್ಧ ಷಡ್ಯಂತ್ರ ನಡೆಯಿತು. ಈಗ ಧರ್ಮಸ್ಥಳದ ವಿರುದ್ಧ ಕುತಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಧರ್ಮಸ್ಥಳ ಪ್ರಕರಣದ ಬಗ್ಗೆ ಯಾವ ತನಿಖೆಯನ್ನಾದರೂ ಮಾಡಲಿ ಎಂದು ನಾವು ಹೇಳಿದ್ದೆವು. ಮೊದಲಿಗೆ ಎಸ್‌ಐಟಿ ಬೇಕಿಲ್ಲ ಎಂದು ಹೇಳಿ ಮತ್ತೆ ಯಾಕೆ ರಚಿಸಿದಿರಿ? ಯಾರೋ ಒಬ್ಬ ಬುರುಡೆ ತಂದು ಕೊಟ್ಟಾಗ, ಅವನ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಆ ಬುರುಡೆ ಎಲ್ಲಿಂದ ತಂದೆ ಎಂದು ಯಾಕೆ ಪ್ರಶ್ನಿಸಲಿಲ್ಲ. 16 ಗುಂಡಿ ಅಗೆದರೂ ಏನೂ ಸಿಗಲಿಲ್ಲ ಎಂದು ಕಿಡಿಕಾರಿದರು.



ಸುಮಾರು 30-40 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏನೇ ಪ್ರಯತ್ನ ಮಾಡಿದರೂ ಹಿಂದುತ್ವ ಪರ ಇರುವ ಬಿಜೆಪಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿ ಇಲ್ಲಿನ ದೇವಸ್ಥಾನಗಳು, ಧಾರ್ಮಿಕ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ.

ಧರ್ಮಸ್ಥಳ ಐತಿಹಾಸಿಕ ಸ್ಥಳ, ಪವಿತ್ರ ಭೂಮಿ. ಧರ್ಮಸ್ಥಳ- ನಮ್ಮ ಧರ್ಮ, ನಂಬಿಕೆ ಮತ್ತು ಇತಿಹಾಸ ಹಾಗೂ ಧಾರ್ಮಿಕತೆಯ ಭವಿಷ್ಯದ ಸಂಬಂಧ ಹೊಂದಿದೆ. ಧರ್ಮಸ್ಥಳದ ಹೆಸರಿಗೆ ಕಪ್ಪು ಚುಕ್ಕೆ ಹಚ್ಚಲು ಪಣತೊಟ್ಟ ಕಾಣದ ಕೈಗಳು ಇಂದು ಹೆದರಿವೆ. ಧರ್ಮಸ್ಥಳದ ಪಾವಿತ್ರ್ಯತೆಯನ್ನು ಹಾಳು ಮಾಡಬೇಕೆಂಬ ಪಿತೂರಿ ಮುರಿದು ಹೋಗುತ್ತಿದೆ. ಧರ್ಮಸ್ಥಳದ ಮೇಲೆ ನಡೆದ ದಾಳಿಗೆ ಧರ್ಮವೇ ಉತ್ತರವನ್ನು ನೀಡುತ್ತಿದೆ ಎಂದು ಹೇಳಿದರು.

ಅಂದು ಇತಿಹಾಸದಲ್ಲಿ ಭಾರತದ ಹಿಂದೂ ದೇವಾಲಯಗಳ ಮೇಲೆ ಆಕ್ರಮಣಗಳು ನಡೆದವು. ಇಂದು ಸಹ ನಮ್ಮ ದೇವಾಲಯಗಳ ಮೇಲೆ ಎಡಪಂಥೀಯ ಸರ್ಕಾರಗಳು, ಕಾಣದ ಕೈಗಳ ಆಕ್ರಮಣ ಮುಂದುವರಿಯುತ್ತಲೇ ಇದೆ. ದೇವಾಲಯಗಳು ನಮ್ಮ ಧರ್ಮದ ಪ್ರಾಣವಾಯು. ಇವು ಯಾರ ಆಸ್ತಿ ಅಲ್ಲ, ಇದು ಭಕ್ತರ ಆಧ್ಯಾತ್ಮಿಕ ಕೇಂದ್ರ. ಧರ್ಮಸ್ಥಳದ ಪರದ ಹೋರಾಟ ರಾಜಕೀಯವಲ್ಲ, ಇದು ಧರ್ಮ - ಸಂಸ್ಕೃತಿಯ ರಕ್ಷಣೆಗಾಗಿ ನಡೆಯುತ್ತಿರುವ ಪ್ರಾಮಾಣಿಕ ಹೋರಾಟ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Dharmasthala Chalo: ಧರ್ಮಸ್ಥಳ ವಿರುದ್ಧ ಅಪಪ್ರಚಾರಕ್ಕೆ ಇತಿಶ್ರೀ ಹಾಡಲು ಧರ್ಮ ಜಾಗೃತಿ ಸಮಾವೇಶ: ವಿಜಯೇಂದ್ರ

ಈ ಸಂದರ್ಭದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ,, ವಿರೋಧ ಪಕ್ಷದ ನಾಯಕರಾದ ಆರ್‌.ಅಶೋಕ್‌, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್‌ ಶೆಟ್ಟರ್‌, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಶಾಸಕರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ್‌, ಸಂಸದರಾದ ತೇಜಸ್ವಿ ಸೂರ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ, ಎಂಎಲ್‌ಸಿ ಸಿ.ಟಿ.ರವಿ ಸೇರಿ ನಳೀನ್ ಕುಮಾರ್ ಕಟೀಲ್, ಸೇರಿದಂತೆ ಹಲವಾರು ಕಮಲ ನಾಯಕರು ಉಪಸ್ಥಿತರಿದ್ದರು.