MI vs DC: ವಾಂಖೇಡೆಯಲ್ಲಿ ನಾಳೆ ಮುಂಬೈ-ಡೆಲ್ಲಿ ಪ್ಲೇ-ಆಫ್ ಕಾದಾಟ; ಡೆಲ್ಲಿ ಸೋತರೆ ಟೂರ್ನಿಯಿಂದ ಔಟ್
ಡೆಲ್ಲಿಗೆ ಹೋಲಿಸಿದರೆ ಮುಂಬೈ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ವೈವಿಧ್ಯಮಯವಾಗಿದ್ದು ಬಲಿಷ್ಠವಾಗಿದೆ. ರೋಹಿತ್ ಶರ್ಮ, ದಕ್ಷಿಣ ಆಫ್ರಿಕಾದ ರಯಾನ್ ರಿಕೆಲ್ಟನ್, ಸೂರ್ಯಕುಮಾರ್ ಯಾದವ್ ಪ್ರಚಂಡ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ. ಮೊದಲ ಮುಖಾಮುಖಿಯಲ್ಲಿ ಮುಂಬೈ ವಿರುದ್ಧ ಡೆಲ್ಲಿ ಸೋಲು ಕಂಡಿತ್ತು.


ಮುಂಬಯಿ: ಪ್ಲೇ ಆಫ್ ರೇಸ್‌ನಲ್ಲಿ(IPL playoffs) ಉಳಿದಿರುವ ಎರಡು ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಬುಧವಾರ ವಾಂಖೇಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ(wankhede stadium) ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಡೆಲ್ಲಿ ಕ್ಯಾಪಿಟಲ್ಸ್(MI vs DC) ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಹೀಗಾಗಿ ಡೆಲ್ಲಿಗೆ ಇದು ಮಸ್ಟ್ ವಿನ್ ಪಂದ್ಯವಾಗಿದೆ. ಈಗಾಗಲೇ ಮೂರು ತಂಡಗಳು ಪ್ಲೇ ಆಫ್ ಪ್ರವೇಶಿಸಿದೆ. ಮೊದಲ ಮುಖಾಮುಖಿಯಲ್ಲಿ ಮುಂಬೈ ತಂಡ ಡೆಲ್ಲಿಯನ್ನು ಸೋಲಿಸಿತ್ತು. ಈ ಸೋಲಿಗೆ ಸೇಡು ತೀರಿಸುವ ಅವಕಾಶ ಇದೀಗ ಡೆಲ್ಲಿ ಮುಂದಿದೆ.
ಮುಂಬೈ ಸೋತರೂ ಮತ್ತೊಂದು ಅವಕಾಶ
ಮುಂಬೈ ಇಂಡಿಯನ್ಸ್ 12 ಪಂದ್ಯಗಳನ್ನಾಡಿದ್ದು, 7ರಲ್ಲಿ ಗೆದ್ದು 14 ಅಂಕ ಗಳಿಸಿದೆ. ಡೆಲ್ಲಿ ತಂಡ 12 ಪಂದ್ಯಗಳನ್ನಾಡಿ 13 ಅಂಕ ಹೊಂದಿದೆ. ಒಂದೊಮ್ಮೆ ನಾಳಿನ ಪಂದ್ಯದಲ್ಲಿ ಮುಂಬೈ ಸೋತರೆ ಟೂರ್ನಿಯಿಂದ ಹೊರಬೀಳುದಿಲ್ಲ. ಪಂಜಾಬ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಮುಂಬೈ ಗೆದ್ದರೆ, ಡೆಲ್ಲಿ ತಂಡ ತನ್ನ ಕೊನೆಯ ಪಂದ್ಯದಲ್ಲಿ ಸೋತರೆ ಆಗ ಮುಂಬೈ ಒಂದು ಅಂಕದ ಮುನ್ನಡೆಯಿಂದ ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶ ಮಾಡಲಿದೆ. ಆದರೆ ಡೆಲ್ಲಿಗೆ ನಾಕೌಟ್ ಹಂತ ತಲುಪಲು ಎರಡು ಪಂದ್ಯ ಗೆಲ್ಲಬೇಕು.
ರಾಹುಲ್ ಮೇಲೆ ತಂಡ ವಿಶ್ವಾಸ
ಕಳೆದ ಗುಜರಾತ್ ಟೈಟಾನ್ಸ್ ವಿರುದ್ಧ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಅವರ ಆಕರ್ಷಕ ಶತಕ ಬಾರಿಸಿ ಮಿಂಚಿದ್ದರು. ಆರಂಭಿಕನಾಗಿ ಆಡಲಿಳಿದ ಅವರು ಕೊನೆಯ ಓವರ್ ಎಸೆತದ ತನಕ ಕ್ರೀಸ್ ಆಕ್ರಮಿಸಿಕೊಂಡು ತಂಡಕ್ಕೆ ನೆರವಾಗಿದ್ದರು. ಹೀಗಾಗಿ ಈ ಪಂದ್ಯದಲ್ಲಿಯೂ ತಂಡ ಅವರ ಮೇಲೆ ವಿಶ್ವಾಸ ಇಟ್ಟಿದೆ. ಈ ಪಂದ್ಯದಲ್ಲಿಯೂ ರಾಹುಲ್ ಆರಂಭಿಕನಾಗಿ ಆಡುವುದು ಖಚಿತವಾಗಿದೆ. ಆದರೆ ಅವರಿಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡುವ ಸೂಕ್ತ ಆಟಗಾರರ ತಂಡದಲ್ಲಿ ಇರದೇ ಇರುವುದು ಹಿನ್ನಡೆಯಾಗಿದೆ. ಡು ಪ್ಲೆಸಿಸ್ ಇದ್ದರೂ ಕೂಡ ಅವರಿಂದ ನಿರೀಕ್ಷಿತ ಆಟ ಕಂಡುಬರುತ್ತಿಲ್ಲ. ಯುವ ಬ್ಯಾಟರ್ ಅಭಿಷೇಕ್ ಪೋರೆಲ್ ಅಲ್ಲೊಂದು ಇಲ್ಲೊಂದು ಪಂದ್ಯದಲ್ಲಿ ಮಾತ್ರ ಪ್ರದರ್ಶನ ತೋರುತ್ತಿದ್ದಾರೆ. ಹೀಗಾಗಿ ಅವರ ಮೇಲೂ ಹೆಚ್ಚು ನಂಬಿಕೆ ಇಡುವಂತಿಲ್ಲ.
ಮಿಚೆಲ್ ಸ್ಟಾರ್ಕ್ ಗೈರು ತಂಡದ ಬೌಲಿಂಗ್ ವಿಭಾಗವನ್ನು ದುರ್ಬಲಗೊಳಿಸುವಂತೆ ಮಾಡಿದೆ. ಇದಕ್ಕೆ ಕಳೆದ ಪಂದ್ಯವೇ ಉತ್ತಮ ಸಾಕ್ಷಿ. 200 ರನ್‌ಗಳನ್ನು ಎದುರಾಳಿ ತಂಡ ವಿಕೆಟ್ ನಷ್ಟವಿಲ್ಲದೆ ಚೇಸಿಂಗ್ ಮಾಡಿ ಗೆದಿತ್ತು. ಚೆನ್ನೈನ ಟಿ. ನಟರಾಜನ್ ಸಂಪೂರ್ಣ ಫಿಟ್ ಆದಂತೆ ತೋರುತ್ತಿಲ್ಲ. ಕಳೆದ ಪಂದ್ಯದಲ್ಲಿ ದುಬಾರಿಯಾಗಿ ಪರಿಣಮಿಸಿದ್ದರು. ಅನುಭವಿ ಕುಲ್‌ದೀಪ್ ಕೂಡ ಸ್ಪಿನ್ ಮೋಡಿ ಮಾಡುತ್ತಿಲ್ಲ.
ಇದನ್ನೂ ಓದಿ IPL 2025 Exit: ಪ್ಲೇ ಆಫ್‌ನಿಂದ 5 ತಂಡ ಔಟ್; ಉಳಿದ ಒಂದು ಸ್ಥಾನಕ್ಕೆ 2 ತಂಡಗಳ ಮಧ್ಯೆ ಫೈಟ್
ಮುಂಬೈ ಬಲಿಷ್ಠ
ಡೆಲ್ಲಿಗೆ ಹೋಲಿಸಿದರೆ ಮುಂಬೈ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ವೈವಿಧ್ಯಮಯವಾಗಿದ್ದು ಬಲಿಷ್ಠವಾಗಿದೆ. ರೋಹಿತ್ ಶರ್ಮ, ದಕ್ಷಿಣ ಆಫ್ರಿಕಾದ ರಯಾನ್ ರಿಕೆಲ್ಟನ್, ಸೂರ್ಯಕುಮಾರ್ ಯಾದವ್ ಪ್ರಚಂಡ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಜತೆಗೆ ಬೌಲಿಂಗ್‌ನಲ್ಲಿಯೂ ಕೊಡುಗೆ ನೀಡುತ್ತಿದ್ದಾರೆ. ಜಸ್‌ಪ್ರೀತ್ ಬುಮ್ರಾ ಮತ್ತು ಟ್ರೆಂಟ್ ಬೌಲ್ಟ್ ಕೂಡ ಅಪಾಯಕಾರಿಯಾಗಿದ್ದಾರೆ.