Caste census: ಇನ್ನೊಮ್ಮೆ ಸಮೀಕ್ಷೆ ಮಾಡಿ: ಜಾತಿ ಗಣತಿ ವರದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ಷೇಪ
'ಜಾತಿ ಗಣತಿಗೆ ನಮ್ಮ ವಿರೋಧ ಯಾವತ್ತೂ ಇಲ್ಲ. ಆದರೆ ಈ ಜಾತಿ ಗಣತಿಯಲ್ಲಿ ವೀರಶೈವ- ಲಿಂಗಾಯತರನ್ನು ಪ್ರತ್ಯೇಕ ಮಾಡಿ ಗಣತಿ ಮಾಡಲಾಗಿದೆ. ಹಾಗಾಗಿ ಜಾತಿ ಗಣತಿಯನ್ನು ಇನ್ನೊಮ್ಮೆ ವೀರಶೈವ-ಲಿಂಗಾಯತರನ್ನು ಒಟ್ಟಾಗಿ ಪರಿಗಣಿಸಿ ಮಾಡಬೇಕು’ ಎಂದು ರಾಜ್ಯ ಸರ್ಕಾರವನ್ನು ಸಚಿವೆ ಆಗ್ರಹಿಸಿದರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ರಾಜ್ಯ ಸಚಿವ ಸಂಪುಟದ (Karnataka Cabinet) ಮುಂದೆ ಮಂಡನೆಯಾಗಿರುವ ಜಾತಿ ಗಣತಿ (Caste census) ವರದಿಯಲ್ಲಿನ ಜಾತಿವಾರು ಅಂಕಿ ಅಂಶದ ಬಗ್ಗೆ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ನಿಂದ (BJP - JDS) ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಜಾತಿ ಗಣತಿ ನಡೆಸಬೇಕೆಂದು ಹೇಳಿದ್ದಾರೆ. ಆ ಮೂಲಕ ಜಾತಿ ಗಣತಿ ವರದಿಗೆ ತಕರಾರು ಮಂಡಿಸಿದ ಮೊದಲ ಸಚಿವರೆನಿಸಿದ್ದಾರೆ. ಇನ್ನೊಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರೂ ಸಹ ಇಂದು ಈ ಬಗ್ಗೆ ಚರ್ಚಿಸಲು ಒಕ್ಕಲಿಗ ಶಾಸಕರ ಮಹತ್ವದ ಸಭೆ ಕರೆದಿದ್ದಾರೆ.
ಜನಗಣತಿಯಲ್ಲಿನ ಜಾತಿವಾರು ಅಂಕಿ-ಅಂಶದ ಬಗ್ಗೆ ಹಲವು ಸಚಿವರಲ್ಲಿ ಆಕ್ಷೇಪವಿದ್ದರೂ ಯಾರೂ ಬಹಿರಂಗವಾಗಿ ಹೇಳಿಕೆ ನೀಡದೆ ಗುರುವಾರ ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸುತ್ತೇವೆ ಎಂದಷ್ಟೇ ಹೇಳಿದ್ದರು. ಆದರೆ ಸಚಿವೆ ಲಕ್ಷ್ಮೀ ಇದಕ್ಕಿಂತ ಭಿನ್ನ ಹೇಳಿಕೆ ನೀಡಿದ್ದಾರೆ. ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಲಕ್ಷ್ಮೀ ಅವರು, ‘ಜಾತಿ ಗಣತಿಗೆ ನಮ್ಮ ವಿರೋಧ ಯಾವತ್ತೂ ಇಲ್ಲ. ಆದರೆ ಈ ಜಾತಿ ಗಣತಿಯಲ್ಲಿ ವೀರಶೈವ- ಲಿಂಗಾಯತರನ್ನು ಪ್ರತ್ಯೇಕ ಮಾಡಿ ಗಣತಿ ಮಾಡಲಾಗಿದೆ. ಹಾಗಾಗಿ ಜಾತಿ ಗಣತಿಯನ್ನು ಇನ್ನೊಮ್ಮೆ ವೀರಶೈವ-ಲಿಂಗಾಯತರನ್ನು ಒಟ್ಟಾಗಿ ಪರಿಗಣಿಸಿ ಮಾಡಬೇಕು’ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
‘ಜಾತಿ ಗಣತಿ ವರದಿಯಲ್ಲಿ ಬೇರೆ ಎಲ್ಲಾ ಜಾತಿಯ ಜನರು ಹೆಚ್ಚಾಗಿ ಕಾಣುತ್ತಿದ್ದಾರೆ. ಆದರೆ ವೀರಶೈವ- ಲಿಂಗಾಯತ ಪ್ರತ್ಯೇಕವಾಗಿ ಪರಿಗಣಿಸಿದ್ದರಿಂದ ಒಡೆದು ಹೋಗಿದ್ದು, ಅಂಕಿ ಅಂಶ ಕಡಿಮೆ ಕಾಣಿಸುತ್ತಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಒಕ್ಕಲಿಗ ಶಾಸಕರ ಸಭೆ
ಬೆಂಗಳೂರಿನ ಕುಮಾರ ಪಾರ್ಕ್ ಗಾಂಧಿ ಭವನ ರಸ್ತೆಯಲ್ಲಿರುವ ಡಿಸಿಎಂ ಅವರ ಸರ್ಕಾರಿ ನಿವಾಸದಲ್ಲಿ ದಿನಾಂಕ 15-04-2025 ರಂದು ಮಂಗಳವಾರ ಸಂಜೆ 6 ಗಂಟೆಗೆ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಶಾಸಕರ ಸಭೆ ಕರೆಯಲಾಗಿದೆ. ಎಲ್ಲರಿಗೂ ನ್ಯಾಯ ಒದಗಿಸುವ ಪಕ್ಷ ಕಾಂಗ್ರೆಸ್, ಧರ್ಮದ ಆಧಾರದಲ್ಲಿ ಟೆಂಡರ್ ನೀಡಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಹಕ್ಕುಗಳನ್ನು ಕಾಂಗ್ರೆಸ್ ಸರ್ಕಾರ ಕಸಿಯುತ್ತಿದೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, "ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೂ ಮೀಸಲಾತಿ ನೀಡಲಾಗಿದೆ. ಸಮಾಜದಲ್ಲಿ ಯಾರು ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ನಮ್ಮ ಆದ್ಯತೆ. ಕಾಂಗ್ರೆಸ್ ಪಕ್ಷ ಸಮಾಜದ ಎಲ್ಲಾ ವರ್ಗಗಳಿಗೂ ನ್ಯಾಯ ಒದಗಿಸುವ ಪಕ್ಷ" ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: Cabinet meeting: ಜಾತಿ ಗಣತಿ ವರದಿ ಜಾರಿ ಬಗ್ಗೆ ಚರ್ಚೆಗೆ ಏ.17ರಂದು ವಿಶೇಷ ಸಚಿವ ಸಂಪುಟ ಸಭೆ