#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Tumul Election: ತುಮುಲ್ ಅಧ್ಯಕ್ಷ ಸ್ಥಾನ ದಲಿತರಿಗೆ ಕೊಟ್ಟಿದ್ದಕ್ಕೆ ಕೋಪವೇಕೆ?: ಎಂಎಲ್‌ಸಿ ರಾಜೇಂದ್ರ ಆಕ್ರೋಶ

Madhugiri News: ಶಾಸಕ ವೆಂಕಟೇಶ್ ಅವರನ್ನು ನಾಮ ನಿರ್ದೇಶನ ಮಾಡಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ದಲಿತರನ್ನು ಅಧ್ಯಕ್ಷರಾಗಿ ಮಾಡಿದರೆ ನಿಮಗೆ ಇಷ್ಟೊಂದು ಕೋಪವೇಕೆ? ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್‌ ವಿರುದ್ಧ ಎಂಎಲ್‌ಸಿ ರಾಜೇಂದ್ರ ಆಕ್ರೋಶ ಕಿಡಿಕಾರಿದ್ದಾರೆ.

ತುಮುಲ್ ಅಧ್ಯಕ್ಷ ಸ್ಥಾನ ದಲಿತರಿಗೆ ಕೊಟ್ಟಿದ್ದಕ್ಕೆ ಕೋಪವೇಕೆ?: ಎಂಎಲ್‌ಸಿ ರಾಜೇಂದ್ರ ಆಕ್ರೋಶ

Profile Prabhakara R Feb 4, 2025 7:34 PM

ಮಧುಗಿರಿ: ದಲಿತ ಸಮುದಾಯದ ಪಾವಗಡ ಶಾಸಕ ವೆಂಕಟೇಶ್ ಅವರನ್ನು ತುಮುಲ್ ಅಧ್ಯಕ್ಷರನ್ನಾಗಿ (Tumul Election) ಮಾಡಿದರೆ ಇವರಿಗೆ ಇಷ್ಟೊಂದು ಕೋಪವೇಕೆ? ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್‌ಗೆ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಟಾಂಗ್ ನೀಡಿದರು.

ತುಮುಲ್ ಉಪ ಕಚೇರಿ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಕನಾಯಕನಹಳ್ಳಿಯ ಮಾಜಿ ಸಚಿವರು, ಸಚಿವ ರಾಜಣ್ಣನವರ ಬಗ್ಗೆ ನಾಲಾಯಕ್ ಎಂದು ಹೇಳಿಕೆ ನೀಡಿದ್ದು, ಇದೇ ಬಿಜೆಪಿಯವರು ಸೋಮಶೇಖರ್ ಮತ್ತು ಬಾಲಚಂದ್ರ ಜಾರಕಿಹೊಳಿಯವರನ್ನು ನಾಮ ನಿರ್ದೇಶನ ಮಾಡಿ ಅಧ್ಯಕ್ಷರಾಗಿ ಮಾಡಿದ್ದರು. ಈ ಸಂದರ್ಭದಲ್ಲಿ ಮೌನ ವಹಿಸಿದ್ದ ಮಾಜಿ ಸಚಿವರಿಗೆ ರೈತರ ಕಪಾಳಕ್ಕೆ ಹೊಡೆದಂತೆ ಆಗಲಿಲ್ಲವಾ? ಎಂದರು.

ನಿಮ್ಮ ದುರಹಂಕಾರದಿಂದ ಸೋತಿದ್ದೀರ

ಶಾಸಕ ವೆಂಕಟೇಶ್ ಅವರನ್ನು ನಾಮ ನಿರ್ದೇಶನ ಮಾಡಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ದಲಿತರನ್ನು ಅಧ್ಯಕ್ಷರಾಗಿ ಮಾಡಿದರೆ ನಿಮಗೆ ಇಷ್ಟೊಂದು ಕೋಪವೇಕೆ? ನೀವು ಹಿರಿಯರಿದ್ದೀರಾ ಎಂಬ ಹಿನ್ನೆಲೆಯಲ್ಲಿ ನಿಮಗೆ ಗೌರವ ನೀಡುತ್ತಿದ್ದೇವೆ. ನಿಮ್ಮ ತಾಲೂಕಿನಲ್ಲಿ ನಿರ್ದೇಶಕರನ್ನು ಗೆಲ್ಲಿಸಲು ನೀವೆಷ್ಟು ಶ್ರಮ ಹಾಕಿದ್ದೀರಿ. ಕಾನೂನು ಪಂಡಿತರಾದ ನಿಮ್ಮ ದುರಹಂಕಾರದಿಂದ ನಿಮ್ಮ ಕ್ಷೇತ್ರದ ಜನತೆಯೇ ನಿಮ್ಮನ್ನು ಸೋಲಿಸಿದ್ದಾರೆ ಎಂದು ಮಾಜಿ ಸಚಿವ ಮಾಧುಸ್ವಾಮಿ ಅವರಿಗೆ ಟಾಂಗ್ ನೀಡಿದರು.

ನಮ್ಮ ಪಕ್ಷದ ಗುಬ್ಬಿ ಶಾಸಕರು ದಲಿತರ ಬಗ್ಗೆ ಕಾಳಜಿ ಇರುವಂತೆ ಮಾತನಾಡಿದ್ದು, ತುಮುಲ್ ನಿರ್ದೇಶಕರ ಚುನಾವಣೆಯಲ್ಲಿ ನಿಮ್ಮ ಮನೆಯವರನ್ನು ನಿಲ್ಲಿಸದೇ ದಲಿತರೊಬ್ಬರನ್ನು ನಿಲ್ಲಿಸಿದ್ದರೆ ಆಗ ನಿಮ್ಮ ದಲಿತರ ಬಗೆಗಿನ ಕಾಳಜಿ ಮೆಚ್ಚುತ್ತಿದ್ದೆವು. ಜಿಲ್ಲಾ ಉಸ್ತುವಾರಿ ಸಚಿವರಾದ ಪರಮೇಶ್ವರ್ ಮತ್ತು ಸಚಿವ ರಾಜಣ್ಣ ಅವರು ನಿಮ್ಮ ಮನೆಯವರನ್ನು ಅಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದರಾ? ನೀವು ನನ್ನ ಚುನಾವಣೆಗೆ ಶ್ರಮಿಸಿದ್ದೇನೆ ಎಂದು ಹೇಳಿಕೆ ನೀಡಿದ್ದೀರಿ. ನಾನೂ ನಿಮ್ಮ ಪರವಾಗಿ ಪ್ರಚಾರ ನಡೆಸಿದ್ದೇನೆ. ದಲಿತರು ಅಧ್ಯಕ್ಷರಾದ ಹಿನ್ನೆಲೆಯಲ್ಲಿ ನಿಮಗೆ ತಡೆಯಲು ಸಾಧ್ಯವಾಗದೇ ಹೀಗೆಲ್ಲ ಮಾತನಾಡುತ್ತಿದ್ದೀರಾ, ವಾಸುರವರು ನನಗೆ ಉತ್ತಮ ಸ್ನೇಹಿತರು ಎಂಬ ಹಿನ್ನೆಲೆಯಲ್ಲಿ ಅವರಿಗೆ ಮನವಿ ಮಾಡುತ್ತಿದ್ದೇನೆ. ನಿಮ್ಮ ಮಾತುಗಳನ್ನು ಇಲ್ಲಿಗೆ ನಿಲ್ಲಿಸಿ, ನೀವು ಹೆಚ್ಚು ಮಾತನಾಡಿದಷ್ಟು, ನಿಮ್ಮ ತಾಲೂಕಿನಲ್ಲೇ ನಿಮಗೆ ಹೆಚ್ಚು ಅನನುಕೂಲವಾಗುತ್ತದೆ ಎಂದು ಶ್ರೀನಿವಾಸ್‌ಗೆ ಕುಟುಕಿದರು.

ಈ ಸುದ್ದಿಯನ್ನೂ ಓದಿ | Conversion case: ಹೆಚ್ಚುತ್ತಿರುವ ಡಿಜಿಟಲ್ ಮತಾಂತರ; ಕ್ರಮಕ್ಕೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹ!

ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷರಾಗಿ ಚಂದ್ರಮೌಳಿ ಆಯ್ಕೆ

Veerashaiva Samaja

ತುಮಕೂರು: ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ಎಸ್.ಜಿ.ಚಂದ್ರಮೌಳಿ ಅವರನ್ನು ವಿವಿಧ ಸಮಾಜಗಳ ಮುಖಂಡರು ಸನ್ಮಾನಿಸಿ, ಅಭಿನಂದಿಸಿದರು.

ನಗರದ ವಿಘ್ನೇಶ್ವರ ಕಂಫರ್ಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅಭಿನಂದಿಸಿ ಮಾತನಾಡಿದ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಸಮಾಜ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಚಂದ್ರಮೌಳಿಯವರು, ಎಲ್ಲಾ ಸಮಾಜದವರೊಂದಿಗೆ ಸಹಕಾರ ಮನೋಭಾವದಿಂದ ಇದ್ದು ಅವರೊಂದಿಗೆ ಸ್ಪಂದಿಸಿಕೊಂಡು ಬರುತ್ತಿದ್ದಾರೆ. ಅನೇಕ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಿಗೆ ನೆರವು ನೀಡಿದ್ದಾರೆ. ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾಗುವವರಿಗೆ ಮಾರ್ಗದರ್ಶನ ನೀಡುತ್ತಾ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ಚಂದ್ರಮೌಳಿಯವರು ವೀರಶೈವ ಸಮಾಜ ಸೇವಾ ಸಮಿತಿ ಉಪಾಧ್ಯಕ್ಷರಾಗಿದ್ದಾಗ ನಗರದ ಗಂಗಸಂದ್ರದಲ್ಲಿ ಸುಸಜ್ಜಿತ ರುದ್ರಭೂಮಿ ನಿರ್ಮಾಣ ಹಾಗೂ ಹಾಲಿ ಇರುವ ರುದ್ರಭೂಮಿಯಲ್ಲಿ ಅಗತ್ಯ ಸೌಕರ್ಯ ಒದಗಿಸಲು ಸಹಕಾರಿಯಾಗಿದ್ದಾರೆ. ವೀರಶೈವ ಸಮಾಜದ ಸೇವಾಕಾರ್ಯಗಳೊಂದಿಗೆ ತುಮಕೂರು ನಗರದಲ್ಲಿ ವಿವಿಧ ಕಾರ್ಯಗಳಿಗೆ ಕೈ ಜೋಡಿಸಿದ್ದಾರೆ. ಸಮಾಜ ಸೇವಾ ಕೆಲಸಗಳಿಗೆ ಚಂದ್ರಮೌಳಿಯವರ ಮನೆ, ಮನ ಸದಾ ತೆರೆದಿರುತ್ತದೆ ಎಂದರು.

ನ್ಯಾಯವಾದಿ ಆರ್.ಎನ್.ವೆಂಕಟಾಚಲ, ಮುಖಂಡರಾದ ಕೊಪ್ಪಳ್ ನಾಗರಾಜು, ಕನ್ನಡ ಮತ್ತು ಸಂಸ್ಕೃತಿ ವೇದಿಕೆ ರಾಜ್ಯಾಧ್ಯಕ್ಷ ಕನ್ನಡ ಪ್ರಕಾಶ್, ಸಮಾಜ ಸೇವಕ ನಟರಾಜ್ ಶೆಟ್ಟಿ, ಮುಖಂಡರಾದ ಶಾಂತಕುಮಾರ್, ಶಬ್ಬೀರ್ ಅಹ್ಮದ್, ಹೊಸಕೋಟೆ ನಟರಾಜು, ಅನಿಲ್, ಕೋಮಲ ವೀರಭದ್ರಯ್ಯ ಮೊದಲಾದವರು ಚಂದ್ರಮೌಳಿಯವರನ್ನು ಅಭಿನಂದಿಸಿ ಮಾತನಾಡಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎಸ್.ಜಿ.ಚಂದ್ರಮೌಳಿ, ಅಂದಿನಿಂದಲೂ ವೀರಶೈವ ಸಮಾಜವು ಎಲ್ಲಾ ಸಮಾಜದವರ ಜೊತೆ ಸೌಹಾರ್ದತೆಯಿಂದ ಹೊಂದಾಣಿಕೆ ಮಾಡಿಕೊಂಡು ಬೆಳೆದುಬಂದಿದೆ, ಮುಂದೆಯೂ ಹಾಗೇ ಎಲ್ಲಾ ಸಮಾಜಗಳೊಂದಿಗೆ ಇರುತ್ತದೆ ಎಂದು ಹೇಳಿದರು.

ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಲಕ್ಷ್ಮಣ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಸವರಾಜು, ದಾರಿದೀಪ ಸಂಸ್ಥೆಯ ಶಿವಕುಮಾರ್, ಗುತ್ತಿಗೆದಾರ ಉದಯಕುಮಾರ್, ಬಿಜೆಪಿ ಮುಖಂಡ ವಿನಯ್‌ಕುಮಾರ್ ಮೊದಲಾದವರು ಭಾಗವಹಿಸಿದ್ದರು.