Mysore News: ಮೈಸೂರು ಮಹಾರಾಣಿ ಕಾಲೇಜಿನ ಗೋಡೆ ಕುಸಿದು ಓರ್ವ ಸಾವು
ಮೈಸೂರು ನಗರದ ಮಹಾರಾಣಿ ಕಾಲೇಜಿನಲ್ಲಿ ಶಿಥಿಲ ಕಟ್ಟಡದ ದುರಸ್ತಿ ವೇಳೆ ಗೋಡೆ ಕುಸಿದು, ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಮೃತನನ್ನು ಮೈಸೂರಿನ ಗೌಸಿಯಾ ನಗರದ ನಿವಾಸಿ ಸದ್ದಾಂ ಎಂದು ಗುರುತಿಸಲಾಗಿದೆ. ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![ಮೈಸೂರು ಮಹಾರಾಣಿ ಕಾಲೇಜಿನ ಗೋಡೆ ಕುಸಿದು ಓರ್ವ ಸಾವು](https://cdn-vishwavani-prod.hindverse.com/media/original_images/Mysore_News_LVJMQYW.jpg)
ಗೋಡೆ ಕುಸಿತ.
![Profile](https://vishwavani.news/static/img/user.png)
ಮೈಸೂರು: ನಗರದ ಮಹಾರಾಣಿ ಕಾಲೇಜಿನಲ್ಲಿ ಶಿಥಿಲ ಕಟ್ಟಡದ ದುರಸ್ತಿ ವೇಳೆ ಗೋಡೆ ಕುಸಿದು, ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ (Mysore News). ಮೈಸೂರಿನ ಗೌಸಿಯಾ ನಗರದ ನಿವಾಸಿ ಸದ್ದಾಂ ಮೃತ ಯುವಕ. ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಪೊಲೀಸರಿಂದ ರಕ್ಷಣಾ ಕಾರ್ಯ ಮುಂದುವರಿದಿದೆ. ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹೇಗಾಯ್ತು?
ಮಹಾರಾಣಿ ಕಾಲೇಜು ಕಟ್ಟಡ ಶಿಥಿಲಗೊಂಡಿದ್ದರಿಂದ ದುರಸ್ತಿ ಕಾರ್ಯ ನಡೆಯುತ್ತಿತ್ತು. ಕಿಟಕಿಗಳನ್ನು ತೆಗೆದು ಹಾಕುವ ವೇಳೆ ಕಟ್ಟಡ ಕುಸಿದಿದೆ. ಜೆಸಿಬಿ ಮೂಲಕ ಅವಶೇಷಗಳನ್ನು ತೆರವು ಮಾಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಶಾಸಕ ಹರೀಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರ್ಮಿಕರು ಹೊಸ ಕಟ್ಟಡ ನಿರ್ಮಾಣಕ್ಕಾಗಿ ಶಿಥಿಲಗೊಂಡಿದ್ದ ಕಟ್ಟಡವನ್ನು ಒಡೆಯುವ ಕೆಲಸ ಮಾಡುತ್ತಿದ್ದರು. ಹಳೆಯ ಕಟ್ಟಡದಲ್ಲಿದ್ದ ಸಾಮಗ್ರಿಯನ್ನು ತೆರವುಗೊಳಿಸಿದ ಬಳಿಕ ಮೂವರು ಕಾರ್ಮಿಕರು ಕಿಟಕಿಗಳನ್ನು ತೆರವು ಮಾಡಲು ಮುಂದಾಗಿದ್ದಾರೆ. ಆಗ ಗೋಡೆ ಕುಸಿದಿದೆ. ಇಬ್ಬರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ಅವಶೇಷಗಳಡಿ ಸಿಲುಕಿಕೊಂಡಿದ್ದ ಸದ್ದಾಂ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಶಾಸಕರಾದ ಹರೀಶ್ ಗೌಡ, ತನ್ವೀರ್ ಸೇಠ್ ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ನಗರ ಪೊಲೀಸ್ ಕಮಿಷನರ್ ಸೀಮಾ ಲಟ್ಕರ್ ಸೇರಿದಂತೆ ಸ್ಥಳದಲ್ಲೇ ಮೊಕ್ಕಂ ಹೂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Koppal News: ಕೊಪ್ಪಳ ಫ್ಯಾಕ್ಟರಿಯಲ್ಲಿ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿ ಒಬ್ಬ ಕಾರ್ಮಿಕ ಸಾವು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ತಿರುಮಣಿ ಸೋಲಾರ್ ಪಾರ್ಕ್‌ನಲ್ಲಿ ಬಂಡೆ ಸ್ಫೋಟದ ವೇಳೆ ಕಾರ್ಮಿಕ ಸಾವು
ಪಾವಗಡ: ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ತಿರುಮಣಿ ಸಮೀಪ ಸೋಲಾರ್ ಪಾರ್ಕ್‌ನಲ್ಲಿ (Pavagada Solar Park) ಬಂಡೆ ಸ್ಫೋಟದ ವೇಳೆ ಒಬ್ಬ ಕಾರ್ಮಿಕ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ರಾಯಚೂರು ಮೂಲದ ಬಸವರಾಜು ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಅಚ್ಚಮ್ಮನಹಳ್ಳಿಯ ಶಿವಯ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ವಿವರ
KSPDCLನಿಂದ 1002 ಎಕರೆ ಪ್ರದೇಶವನ್ನು ಸೋಲಾರ್ ಪಾರ್ಕ್ ನಿರ್ಮಾಣಕ್ಕೆ JSW ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಪಾರ್ಕ್ ನಿರ್ಮಾಣಕ್ಕಾಗಿ ಬಂಡೆ ಬ್ಲಾಸ್ಟ್ ಮಾಡುತ್ತಿದ್ದ ವೇಳೆ ಸ್ಫೋಟಕ ಸಿಡಿದು ಸಮೀಪದಲ್ಲಿ ಇದ್ದ ಬಸವರಾಜು ಸ್ಥಳದಲ್ಲಿ ಸಾವನ್ನಪ್ಪಿದ್ದು, ಕಾರ್ಮಿಕ ಶಿವಯ್ಯ ಗಂಭೀರ ಗಾಯಗೊಂಡು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟದಿಂದ ಅಕ್ಕಪಕ್ಕದ ಜಾಗ ಹಾಗೂ ಬೆಟ್ಟಕ್ಕೂ ಬೆಂಕಿ ಹಬ್ಬಿದ್ದು, ಸ್ಥಳೀಯರು ಆತಂಕಗೊಂಡಿದ್ದರು. ಬಂಡೆ ಬ್ಲಾಸ್ಟ್ ಮಾಡಲು ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಬಳಸಿರುವುದು ದುರಂತಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ.