- ನಾರಾಯಣ ಯಾಜಿ

ತದಾಗಚ್ಛ ಮಹಾಬಾಹೋ! ಚಾರಿತ್ರಂ ರಕ್ಷಿತಂ ತ್ವಯಾ.
ಅಚ್ಛಲಂ ಮಿತ್ರಭಾವೇನ ಸತಾಂ ದಾರಾವಲೋಕನಮ್৷৷ ಕಿ.33.61৷৷
ಮಹಾವೀರನೇ, ಇದುತನಕ ನಿನ್ನ ಸದಾಚಾರಕ್ಕೆ ಅನುಗುಣವಾಗಿ ಅಂತಃಪುರ ಸ್ತ್ರೀಯರಿರುವ ಸ್ಥಳಕ್ಕೆ ಬರಬಾರದೆಂದು ಹೊರಗೆ ನಿಂತಿರುವೆ. ನಾನೇ ನಿನ್ನನ್ನು ಒಳಗೆ ಕರೆಯುತ್ತಿದ್ದೇನೆ. ಸ್ನೇಹವಿಷಯದಲ್ಲಿರುವಾಗ ಇತರರ ಭಾರ್ಯೆಯರನ್ನು ನೋಡುವುದರಲ್ಲಿ ದೋಷವಿಲ್ಲ.
ಕ್ರೋಧಾವಿಷ್ಟನಾಗಿ ಕಿಷ್ಕಿಂಧೆಗೆ ಸುಗ್ರೀವನನ್ನು ದಂಡಿಸಲು ಬಂದ ಲಕ್ಷ್ಮಣನನ್ನು ಸಮಾಧಾನಿಸುವ ತಾರೆ, ವಾಲಿವಧೆಯ ನಂತರವೂ, ಓರ್ವ ಚತುರಮತಿಯಾಗಿ ರಾಜನೀತಿ ತಜ್ಞಳಾಗಿ, ತನ್ನ ದೊರೆಯನ್ನು ರಕ್ಷಿಸಿಕೊಳ್ಳುವ ಸಚಿವೆಯಾಗಿ ಕಾಣಿಸುತ್ತಾಳೆ.
ಮೊದಲ ಭಾಗದಲ್ಲಿ ವಾಲಿಯನ್ನು ಅತಿಯಾಗಿ ಪ್ರೀತಿಸಿದ ತಾರೆ ಎರಡನೆ ಭಾಗಕ್ಕೆ ಬರುವಾಗ ಸುಗ್ರೀವನ ನೆಚ್ಚಿನ ಸ್ತ್ರೀಯಾಗಿದ್ದಾಳೆ. ಸುಗ್ರೀವನ ಸಂಗಡ ವಿಲಾಸದಲ್ಲಿ ಮಗ್ನರಾಗಿದ್ದಾಳೆ. ವಾಲಿಯ ನೆನಪೂ ಸಹ ಆಕೆಗೆ ಇಲ್ಲ. ಇದೊಂದು ಕ್ಲಿಷ್ಟವಾದ ಸನ್ನಿವೇಶ. ವಾಲಿಯ ಮೇಲಿನ ಆಕೆಯ ಪ್ರೀತಿ ಪ್ರಶ್ನಾತೀತ. ಆದರೆ ಈಗ ಅದೇ ಒಲವನ್ನು ಸುಗ್ರೀವನ ಮೇಲೆ ತೋರಿಸುತ್ತಿದ್ದಾಳೆ. ಪ್ರಾಯಕ್ಕೆ ಬಂದ ಮಗ ಅಂಗದ ಇದ್ದಾನೆ. ಆತನಿಗೆ ಸುಗ್ರೀವನ ಮೇಲೆ ಅಸಹನೆ ಇದೆ. ಹೀಗಿರುವಾಗ ಅಷ್ಟು ಬೇಗ ತಾರೆ ವಾಲಿಯನ್ನು ಮರೆತು ಸುಗ್ರೀವನನ್ನು ಸೇರಿದ್ದೇಕೆ ಎನ್ನುವ ಸಂಶಯ ಕಾಡುತ್ತದೆ.
ವಾಲ್ಮೀಕಿ ಆಕೆಯನ್ನು ಓರ್ವ ಸಚಿವೆಯಾಗಿ, ದುರ್ಗದ ರಕ್ಷಣೆಯ ಜವಾಬ್ದಾರಿಯನ್ನು ತನ್ನ ಆದ್ಯಕರ್ತವ್ಯವೆಂದು ನಂಬಿದ ಪ್ರಬುದ್ಧ ಹೆಣ್ಣಾಗಿ ಚಿತ್ರಿಸಿದ್ದಾರೆ. ವಾಲಿಯ ದೌರ್ಜನ್ಯ, ಹೆಣ್ಣಿನ ಕುರಿತಾದ ಕಾಮಾತುರತೆಗಳು ಆಕೆಗೆ ತಿಳಿದಿವೆ. ವಾಲಿಯಿಂದ ಸೋತ ರಾವಣ ಆತನನ್ನು ಗೆದ್ದಿದ್ದು ವಾಲಿಯಲ್ಲಿರುವ ಸ್ತ್ರೀಮೋಹದ ಕಾರಣದಿಂದಲೇ. ಲಂಕೆಯಲ್ಲಿರುವ ಎಲ್ಲಾ ಸ್ತ್ರೀಯರನ್ನೂ, ಸಾಮ್ರಾಜ್ಯವನ್ನೂ, ತಾನು ಅನುಭವಿಸುತ್ತಿರುವ ಭೋಗವೆಲ್ಲವನ್ನೂ ಇನ್ನು ಮುಂದೆ ವಾಲಿಯೊಡನೆ ಸಮಾನವಾಗಿ ಹಂಚಿಕೊಳ್ಳುವೆ ಎನ್ನುವು ಆಮಿಷವನ್ನು ತೋರಿಸಿದ್ದ. ಬಾಹುಬಲದಲ್ಲಿ ಸೋತ ರಾವಣ ಬುದ್ಢಿಬಲದಲ್ಲಿ ವಾಲಿಯನ್ನು ಗೆದ್ದಿದ್ದಷ್ಟೇ ಅಲ್ಲ, ಆತನ ಅಂತಃಪುರದಲ್ಲಿ ಇಬ್ಬರೂ ಸೇರಿ ತಿಂಗಳಾನುಗಟ್ಟಲೆ ಭೋಗದಲ್ಲಿ ಮೈಮರೆತಿದ್ದರು. ಕೊನೆಗೆ ಲಂಕೆಯಿಂದ ಆತನ ಮಂತ್ರಿ ಪ್ರಹಸ್ತ ಬಂದು ಒತ್ತಾಯದಿಂದಲೇ ರಾವಣನನ್ನು ಲಂಕೆಗೆ ಕರೆದೊಯ್ಯಬೇಕಾಯಿತು.
ಮದುವೆ ಎನ್ನುವುದು ಹೆಣ್ಣಿಗೆ ರಕ್ಷಣೆಗಾಗಿ ಎನ್ನುವ ನಂಬಿಕೆಯಿದ್ದ ಕಾಲವದು. ಹಾಗಾಗಿಯೇ ಧರ್ಮಶಾಸ್ತ್ರ ಅನೇಕ ಸಂಕೀರ್ಣ ಸಂದರ್ಭದಲ್ಲಿ ಸ್ತ್ರೀ ಪುನರ್ವಿವಾಹವನ್ನು ಆಗಬಹುದೆನ್ನುತ್ತದೆ. ವಾನರರಂತಹ ಬುಡಕಟ್ಟು ಜನಾಂಗದಲ್ಲಿಯಂತೂ ಇಂತಹ ಸಂಕೀರ್ಣ ಸಂದರ್ಭದಲ್ಲಿ ಓರ್ವ ಅಬಲೆ ತನ್ನ ದೈಹಿಕ ಮತ್ತು ಸಾಮಾಜಿಕ ಅವಶ್ಯಕತೆಗಳಿಗೆ ಪುರುಷನನ್ನು ಹೊಂದಬೇಕಾದ ಅವಶ್ಯಕತೆ ಇದೆ. ಆದರೆ ರುಮೆಯನ್ನು ವಾಲಿ ಪತಿ ಸುಗ್ರೀವ ಬದುಕಿದ್ದಾಗಲೇ ಬಲತ್ಕಾರದಿಂದ ಇಟ್ಟುಕೊಂಡಿದ್ದು ಧರ್ಮವಲ್ಲ ಎನ್ನುವ ಮಾತನ್ನು ರಾಮ
ಅಸ್ಯತ್ವಂ ಧರಮಾಣಸ್ಯ ಸುಗ್ರೀವಸ್ಯ ಮಹಾತ್ಮನಃ.
ರುಮಾಯಾಂ ವರ್ತಸೇ ಕಾಮಾತ್ಸ್ನುಷಾಯಾಂ ಪಾಪಕರ್ಮಕೃತ್ ৷৷ ಕಿ.18.19৷৷
ಇನ್ನೂ ಜೀವಂತವಾಗಿರುವ,ಧರ್ಮಾತ್ಮನಾದ, ನಿನ್ನ ತಮ್ಮನಾದ ಸುಗ್ರೀವನ ಪತ್ನಿಯಾದ ಮತ್ತು ನಿನ್ನ ಸೊಸೆಯ ಸ್ತಾನದಲ್ಲಿರುವ ರುಮೆಯೊಂದಿಗೆ ಕಾಮಾಂಧನಾಗಿ ವರ್ತಿಸಿರುವೆ. ಎನ್ನುವಲ್ಲಿ “ಧರಮಾಣಸ್ಯ” ಬದುಕಿರುವಾಗಲೇ ಎನ್ನುವ ವಿಶೇಷಣವನ್ನು ಉಪಯೋಗಿಸಲ್ಪಟ್ಟಿರುವುದನ್ನು ಗಮನಿಸಬಹುದು. ಸಹೋದರನು ಸತ್ತಮೇಲೆ ಅಥವಾ ಹಾಗಿ ಭಾವಿಸಲ್ಪಟ್ಟಾಗ ಆತನ ಪತ್ನಿಯನ್ನು ಸ್ವೀಕರಿಸುವುದು ವಾನರರ ಕುಲಧರ್ಮವಾಗಿತ್ತು. ಸೀತಾನ್ವೇಷಣೆಯ ಸಂದರ್ಭದಲ್ಲಿ ಒಮ್ಮೆ ಅಂಗದ ಸುಗ್ರೀವನ ವಿರುದ್ಧ ಬಂಡಾಯ ಎಳಲು ತನ್ನ ಜೊತೆಯಲ್ಲಿರುವ ವಾನರರಿಗೆ ಕರೆಕೊಡುತ್ತಾನೆ. ಅದಕ್ಕೆ ಕಾರಣ ತಾರೆಯನ್ನು ವಾಲಿ ಬದುಕಿರುವಾಗಲೇ ಸುಗ್ರೀವ (ಮಾಯಾವಿಯೊಡನೆ ಹೋರಾಟಮಾಡುವಾಗ ಬಿಲದಲ್ಲಿ ಹೊಕ್ಕಾಗಿನ ಪ್ರಸಂಗ) ತಾರೆಯನ್ನು ಪರಿಗ್ರಹಿಸಿದ್ದು. ಆದರೆ ವಾಲಿ ಮೃತನಾದನಂತರ ತಾರೆ ಸುಗ್ರೀವನ ಸಂಗಡ ಇದ್ದನ್ನು ಅಂಗದ ಆಕ್ಷೇಪಿಸುವುದಿಲ್ಲ. “ಜೀವತೋಮಹಿಷೀಂಪ್ರಿಯಾಂ” ಜೀವಂತದಿಂದ ಇರುವಾಗ ಸಹೋದರನ ಪತ್ನಿಯನ್ನು ಪರಿಗ್ರಹಿಸುವುದು ದೋಷ ಎನ್ನುತ್ತಾನೆ.
ಸುಗ್ರೀವನೊಡನೆಯ ಅವಳ “ಆಘಾತೋತ್ತರ ಹೊಂದಾಣಿಕೆಗೆ- post-traumatic adaptation” ಕಾರಣ ತನ್ನ ವಂಶದ ಕುಡಿಯ ಭವಿಷ್ಯ, ಭದ್ರತೆ ಮತ್ತು ಸಾಮಾಜಿಕವಾಗಿ ತಾನು ಹೊಂದಿದ್ದ ಗೌರವವನ್ನು ಕಾಪಿಟ್ಟುಕೊಳ್ಳುವುದಕ್ಕಾಗಿದೆ. ಇದನ್ನು rooted in both personal resilience and societal expectations ಎಂದು ಆಧುನಿಕ ಮನಃಶಾಸ್ತ್ರದ ಆಧಾರದಲ್ಲಿ ವಿವರಿಸಬಹುದು. ವಾಲಿ ಮಾಯಾವಿಯನ್ನು ಕೊಂದುಬಂದಾಗ ತಾರೆಯೂ ಸುಗ್ರೀವನ ಸಂಗಡ ರಾಜಸಭೆಯಲ್ಲಿ ಇದ್ದಳು; ಸಚಿವೆಯಾಗಿ ಎನ್ನುವುದನ್ನು ಗಮನಿಸಬೇಕು. ಅಂತಃಪುರದ ಜೊತೆ ರಾಜಸಭೆಯಲ್ಲಿಯೂ ಆಕೆಗೆ ಅಮಾತ್ಯಹುದ್ದೆಯ ಹೊಣೆಗಾರಿಕೆಯಿತ್ತು. ಈ ಪ್ರಕರಣದಲ್ಲಿ ಸುಗ್ರೀವನನ್ನು ವಾಲಿ ಓಡಿಸಿದರೂ, ತಾರೆಗೆ ಯಾವ ಶಿಕ್ಷೆಯನ್ನೂ ಕೊಡಲಿಲ್ಲ. ವಾಲಿಯ ವಧೆಗಾಗಿ ರೋಧಿಸುತ್ತಿರುವ ತಾರೆಗೆ ರಾಮ ಯಾವಾಗ ’ಅಂಗದನು ಯುವರಾಜನಾಗುತ್ತಾನ” ಎನ್ನುವ ಭರವಸೆಯನ್ನು ಕೊಟ್ಟನೋ, ಆಗ ಆಕೆ ಅಳುವನ್ನು ನಿಲ್ಲಿಸಿ ನಿಟ್ಟಿಸಿರು ಬಿಟ್ಟಿದ್ದಳು. ಕಾರಣ post-traumatic adaptation.
ವಾಲಿವಧೆಯಾದದ್ದು ಆಷಾಢ ಮಾಸದ ಹುಣ್ಣಿಮೆಯಂದು. ಆ ಸಮಯದಲ್ಲಿ ಮಳೆಗಾಲ. ಮಳೆಗಾಲವಾದುದರಿಂದ ಶ್ರೀರಾಮನೇ ಮುಂದೆ ಬರುವ ಕಾರ್ತಿಕ ಮಾಸದಲ್ಲಿ ರಾವಣ ವಧೆಗೆ ತಕ್ಕ ಸಿದ್ಧತೆಯನ್ನು ಮಾಡಿಕೊಳ್ಳತಕ್ಕದ್ದು ಎಂದು ಹೇಳಿ ಸುಗ್ರೀವನನ್ನು ಕಿಷ್ಕಿಂಧೆಗೆ ವಾಪಾಸು ಕಳಿಸಿದ್ದಾನೆ. ಮಳೆಗಾಲದ ನಾಲ್ಕು ತಿಂಗಳನ್ನು ಅಲ್ಲೇ ಹತ್ತಿರವಿರುವ ಪ್ರಸ್ರವಣ ಪರ್ವತದಲ್ಲಿ ಕಳೆಯಲು ನಿರ್ಧರಿಸುತ್ತಾನೆ. ಸುಗ್ರೀವ ಕಿಷ್ಕಿಂಧೆಗೆ ಬಂದವನೇ ರಾಜ್ಯವನ್ನು ಮಂತ್ರಿಗಳ ಕೈಗೆ ಒಪ್ಪಿಸಿ ಹಗಲು ರಾತ್ರಿ ಎನ್ನದೇ ರುಮೆ ಮತ್ತು ಸುಂದರಿಯಾದ ತಾರೆಯೊಡನೆ ಕಾಮಾಸಕ್ತನಾಗಿದ್ದಾನೆ. ಆಷಾಢ, ಶ್ರಾವಣ, ಭಾದ್ರಪದ ಮಾಸಗಳು ಕಳೆಯುತ್ತಾ ಬಂದರೂ, ಸುಗ್ರೀವ ಅಂತಃಪುರದಿಂದ ಹೊರಬರುವುದೇ ಇಲ್ಲ. ಹನುಮಂತನಿಗೆ ಈಗ ಚಿಂತೆಯಾಯಿತು. ಸುಗ್ರೀವನ ಬಳಿಸಾರಿ, ಶರದ್ಋತುವಿನ ಆಗಮನದ ಕುರಿತು ಸೀತಾನ್ವೇಷಣೆಗೆ ಸಿದ್ಧತೆ ಮಾಡಿಕೊಳ್ಳಬೇಕೆಂದೂ, ಇಲ್ಲದಿದ್ದರೆ ರಾಮನ ಕೋಪಕ್ಕೆ ತುತ್ತಾಗುವೆ ಎಂದೂ ಎಚ್ಚರಿಸುತ್ತಾನೆ. ಎಚ್ಚೆತ್ತ ಸುಗ್ರೀವ ಇನ್ನು ಹದಿನೈದು ದಿವಸದೊಳಗೆ ಪ್ರಪಂಚದ ಎಲ್ಲಾ ಭಾಗಗಳಿಂದಲೂ ವಾನರರ ಸೈನ್ಯವು ಕಿಷ್ಕಿಂಧೆಗೆ ಬಂದುಸೇರಬೇಕು ತಪ್ಪಿದರೆ ಅವರೆಲ್ಲರಿಗೂ ಮರಣದಂಡನೆ ಎನ್ನುವ ಸುಗ್ರೀವಾಜ್ಞೆಯನ್ನು ಹೊರಡಿಸುತ್ತಾನೆ. ಮತ್ತೆ ಅಂತಃಪುರಕ್ಕೆ ಹೋಗಿ ಎಂದಿನಂತೆ ಮದ್ಯಪಾನ ಸ್ತ್ರೀಸಂಗದಲ್ಲಿ ಮುಳುಗಿಬಿಡುತ್ತಾನೆ.
ರಾಮನಿಗೆ ಮಳೆಗಾಲ ಮತ್ತು ಶರದ್ರುತುವಿನ ಪ್ರಶಾಂತಮೋಡಗಳು ಸೀತಾವಿರಹದ ನೋವನ್ನು ಹೆಚ್ಚಿಸಿವೆ. ರಾಮಾಯಣದಲ್ಲಿ ನಕ್ಷತ್ರ, ಋತು ಮುಂತಾದವುಗಳ ವರ್ಣನೆ ವಿವರವಾಗಿ ವರ್ಣಿತವಾಗಿದೆ. ವರ್ಷಾ ಮತ್ತು ಶರದ್ಋತುವಿನಲ್ಲಿ ರಾಮ ಅನುಭವಿಸಿದ ಸೀತೆಯ ವಿರಹದ ನೋವು ಕಾಳಿದಾಸನ ಪ್ರಸಿದ್ಧವಾದ ಮೇಘದೂತಕ್ಕೆ ಸ್ಪೂರ್ತಿಯಾಗಿದೆ. ಸುಗ್ರೀವ ತನ್ನ ಮಾತನ್ನು ಮರೆತಿದ್ದಾನೆಯೋ ಎನ್ನುವ ಸಂಶಯ ರಮನಲ್ಲಿ ಉದ್ಭವವಾಯಿತು. ಲಕ್ಷ್ಮಣನನ್ನು ಕರೆದು ತಕ್ಷಣವೇ ಕಿಷ್ಕಿಂಧೆಗೆ ಹೋಗಿ “ಮೂರ್ಖಂ ಗ್ರಾಮ್ಯಸುಖೇ ಸಕ್ತಂ ಸುಗ್ರೀವಂ ವಚನಾನ್ಮಮ- ಗ್ರಾಮ್ಯಸುಖದಲ್ಲಿಯೇ ಮೈಮರೆತಿರುವ ಮೂರ್ಖನಾದ ಸುಗ್ರೀವನಿಗೆ ಆತನ ಮಾತುಗಳನ್ನು ನೆನಪಿಸು, ತಪ್ಪಿದರೆ ಆತನೂ ವಾಲಿಗೆ ಆದ ಪರಿಣಾಮವನ್ನೇ ಅನುಸರಿಸಬೇಕಾಗಬಹುದು ಎಂದು ಎಚ್ಚರಿಸು” ಎನ್ನುತ್ತಾನೆ.
ಆವೇಶದಲ್ಲಿ ಹೇಳಿದರೂ, ಲಕ್ಷ್ಮಣನಿಗೆ ಸಂಯಮ ಮೀರದಂತೆ ರಾಮ ಸಲಹೆಯನ್ನೂ ನೀಡುತ್ತಾನೆ. ಲಕ್ಷ್ಮಣ ಕ್ರೋಧಭರಿತನಾಗಿ ಕಿಷ್ಕಿಂಧೆಯ ಅಂತಃಪುರದ ಬಾಗಿಲಬಳಿಯೇ ಬಂದು ರೋಷಾವೇಷದಿಂದ ಧನುಷ್ಟಂಕಾರ ಮಾಡಿದ ಮಾತ್ರದಿಂದಲೇ ಸುಗ್ರೀವನ ಕಾಮಪಿತ್ಥವು ಜರ್ರನೆ ಇಳಿದುಹೋಯಿತು. ಆಸಂದರ್ಭದಲ್ಲಿ ಸುಗ್ರೀವನಿಗೆ ನೆನಪಾದದ್ದು ಲಕ್ಷ್ಮಣನನ್ನು ಸಮಾಧಾನ ಮಾಡುವವರುಯಾರಾದರೂ ಇದ್ದಿದ್ದರೆ ಅದು ತಾರೆ ಮಾತ್ರ. ಆಕೆಯನ್ನು ಬಿಟ್ಟರೆ ಬೇರೆ ಯಾರಿಂದಲೂ ಇದು ಸಾಧ್ಯವಿಲ್ಲ ಎನಿಸಿತು. ಮದ್ಯಪಾನದಿಂದ ತೂರಾಡುತ್ತಿದ್ದವ ಅದು ಹೇಗೋ ಸಾವರಿಸಿ ತಾರೆಯ ಬಳಿ “ಲಕ್ಷ್ಮಣನ ಬಳಿ ಹೋಗಿ ಸಾಂತ್ವನದ ಮಾತುಗಳಿಂದ ಆತನನ್ನು ಪ್ರಸನ್ನಗೊಳಿಸು, ಏಕೆಂದರೆ ಮಹಾತ್ಮರಾದವರು ಸ್ತ್ರೀಯರ ವಿಷಯದಲ್ಲಿ ಯಾವತ್ತಿಗೂ ಕೋಪಮಾಡಿಕೊಳ್ಳುವುದಿಲ್ಲ” ಎನ್ನುತ್ತಾನೆ. ತಾರೆಯೂ ಸಹ ಮದ್ಯಪಾನದ ಅಮಲಿನದ್ದವಳೇ. ಆಕೆಯ ಡಾಬು, ಚಿನ್ನದ ಹಗ್ಗ ಸಡಿಲವಾಗಿರುತ್ತದೆ. ಮಧುಪಾನ ಮಾಡಿದರೂ ಆಕೆಯ ಬುದ್ಧಿ ಸ್ಥಿಮಿತದಲ್ಲಿ ಇದೆ. ಸಂದರ್ಭಕ್ಕೆ ಸರಿಯಾಗಿ ಯಾವರೀತಿ ಮಾತುಗಳನ್ನಾಡಬೇಕೆನ್ನುವುದು ಆಕೆಗೆ ತಿಳಿದಿದೆ. ಜಾರುತ್ತಿರುವ ಸೀರೆಯನ್ನು ಸರಿಪಡಿಸಿಕೊಳ್ಳದೇ ತೊಡರುತ್ತಿರುವ ಹೆಜ್ಜೆಯನ್ನು ಇಡುತ್ತಾ ಬಂದವಳೇ ಲಜ್ಜೆಯನ್ನು ತೊರೆದು ಲಕ್ಷ್ಮಣನ ಮುಖವನ್ನೇ ದಿಟ್ಟಿಸಿ ನೋಡುತ್ತಾಳೆ.
ಲಕ್ಷ್ಮಣ ಯಾವತ್ತಿಗೂ ಸ್ಥಿಮಿತವನ್ನು ಕಳೆದುಕೊಳ್ಳದ ವ್ಯಕ್ತಿ, ತಾರೆ ಮದ್ಯಪಾನ ಮಾಡಿಯೂ ಮತಿಯನು ನೆಟ್ಟಗೆ ಇಟ್ಟುಕೊಂಡವಳು ಎನ್ನುವುದನ್ನು ಇಲ್ಲಿ ವಾಲ್ಮೀಕಿ ಸೂಚಿಸುತ್ತಾನೆ. ಆಕೆಯಲ್ಲಿನ ಚತುರಮತಿತ್ವ ಇಲ್ಲಿ ಪ್ರಕಟವಾಗುತ್ತಿದೆ. ವಾಲಿಯೇ ಆಕೆಯ ಕುರಿತು ಹೇಳಿದ “ಸಾಮಾನ್ಯರಿಂದ ತಿಳಿಯಲು ಅಸಾಧ್ಯವಾದ ಸೂಕ್ಷ್ಮವಾದ ವಿಷಯಗಳನ್ನು ನಿರ್ಣಯಿಸಿ ಹೇಳುವುದರಲ್ಲಿಯೂ, ಮುಂದೆ ಬರಬಹುದಾದ ಕಷ್ಟನಿಷ್ಠುರಗಳನ್ನು ಊಹಿಸಿ ತಿಳಿಸುವುದರಲ್ಲಿ ಬಹಳ ಚತುರೆಯು” ಎನ್ನುವ ಹೊಗಳಿಕೆಗೆ ಆಧಾರ ಇಲ್ಲಿದೆ. ಆಕೆ ವಿನಯದಿಂದಲೇ ಲಕ್ಷ್ಮಣನನ್ನು ನೆಟ್ಟನೋಟದಿಂದ ದಿಟ್ಟಿಸಿ “ನಿನ್ನ ಕೋಪಕ್ಕೆ ಕಾರಣವೇನು, ನಿನ್ನ ಆಜ್ಞೆಯನ್ನು ಸುಗ್ರೀವ ನಡೆಸದಿದ್ದರೆ ತಾನೇ ಕೋಪಗೊಳ್ಳಬೇಕು, ಕೋಪಗೊಂಡ ನೀನು ಅಗ್ನಿಯಂತೆ ಆರ್ಭಟಿಸುತ್ತಿದ್ದರೆ ವಾನರನಾದ ಸುಗ್ರೀವನಿಗೆ ನಿನ್ನಲ್ಲಿ ಮಾತನಾಡಲು ಹೇಗೆ ಧೈರ್ಯ ಬಂದೀತು” ಎನ್ನುವ ಮಾತಿನ ಮೂಲಕವಾಗಿ ಕೋಪಿಸಿಕೊಳ್ಳಬೇಡ, ಶಾಂತವಾಗಿ ಆಲಿಸು ಎನ್ನುತ್ತಾಳೆ.
ಕಟ್ಟುನಿಟ್ಟಿನ ಅರಣ್ಯವಾಸದ ವ್ರತದಲ್ಲಿರುವ ಲಕ್ಷ್ಮಣನಿಗೆ ವಾನರರ ಸುರಾಪಾನ ಸುರತಕೇಳಿ ಸಹಿಸಲಾಗುತ್ತಿಲ್ಲ. ಕೊಟ್ಟ ನಾಲ್ಕು ತಿಂಗಳ ಗಡುವು ಮುಗಿಯುತ್ತಾ ಬಂದಿದೆ ಎನ್ನುವ ವಿಷಯದಲ್ಲಿ ಅಸಹನೆ ಇದೆ. ಇದಕ್ಕೆ ಕಾರಣ ಸುಗ್ರೀವನ ಭೋಗ ಮತ್ತು ಸುರಾಪಾನ, ಇದರಿಂದಲೇ ಧರ್ಮಲೋಪವಾಗಿದೆ, ಸೀತಾನ್ವೇಷಣೆಗೆ ಯಾವಾಗ ತೊಡುಗುವಿರಿ ಎನ್ನುವ ಮಾತುಗಳನ್ನು ಕೋಪವನ್ನು ನಿಗ್ರಹಿಸಿಕೊಂಡು ಕೇಳುತ್ತಾನೆ. ಒಂದುವೇಳೆ ಸುಗ್ರೀವನೇ ಎದುರು ಬಂದಿದ್ದರೆ ಆತನ ಪ್ರತಿಕ್ರಿಯೆ ಹೇಗಿರುತ್ತಿತ್ತೋ!
ಈಗ ತಾರೆ ಕೊಡುವ ಉತ್ತರ ಲಕ್ಷ್ಮಣನನ್ನೂ ನಿರುತ್ತರವಾಗಿಸುವಂತಹದ್ದು ಅದೂ ಓರ್ವ ಸ್ತ್ರೀ ಕಾಮದ ವಿಷಯದಲ್ಲಿ ಮುಕ್ತವಾಗಿ ಮಾತಾಡುವಾಗ ಅಯೋಧ್ಯೆಯಲ್ಲಿ ಬಿಟ್ಟು ಬಂದ ಊರ್ಮಿಳೆಯ ನೆನಪು ಲಕ್ಷ್ಮಣನಿಗಾಗಿರಬೇಕು. “ಕಾಮದ ವಿಚಾರದಲ್ಲಿ ನಿನಗೇನು ತಿಳಿದಿದೆ ’ನ ಕಾಮತಂತ್ರೇ ತವ ಬುದ್ಧಿರಸ್ತಿ’, ಹೆಂಡತಿಯನ್ನು ಬಿಟ್ಟು ಅರಣ್ಯಕ್ಕೆ ಬಂದಿರುವ ನಿನಗೆ ಅದರ ಮಹತ್ವ ತಿಳಿದಿಲ್ಲ. ಕಾಮವೆನ್ನುವುದು ತಲೆಯನ್ನು ಹೊಕ್ಕಿದಾಗ ಮನುಷ್ಯನಿಗೆ ಕಾಲ-ದೇಶಗಳ ಪರಿವೆಯಿರುವುದಿಲ್ಲ. ಅಷ್ಟಿದ್ದರೂ ಸುಗ್ರೀವ ಸೀತಾನ್ವೇಷಣೆಗಾಗಿ ಪ್ರಪಂಚದಲ್ಲಿರುವ ವಾನರರನ್ನೆಲ್ಲಾ ಇಲ್ಲಿಗೆ ಬಂದು ಸೇರುವಂತೆ ಆಜ್ಞೆ ಮಾಡಿದ್ದಾನೆ. ಈಗಾಗಲೇ ಅವರು ಬರುತ್ತಿದ್ದಾರೆ” ಹೀಗೆ ಹೇಳುವಾಗ ಲಕ್ಷ್ಮಣನಿಗೆ ಮಾತು ಕಟ್ಟಿಹೋಗುತ್ತದೆ. ಬೀದಿ ರಂಪಾಟ ಮಾಡಿ ಸುಗ್ರೀವನ ಘನತೆಯನ್ನು ಹಾಳಾಗದಂತೆ ತಾರೆ ಚತುರತೆಯಿಂದ ಲಕ್ಷ್ಮಣನನ್ನು “ಹೊರಗಡೆ ಬೇಡ, ಅಂತಃಪುರದೊಳಕ್ಕೆ ಬಾ ಮಾತನಾಡೋಣ ಎಂದು ಉಪಾಯವಾಗಿ ಆತನ ಕ್ರೋಧವನ್ನು ತಣಿಸಿ ಅಂತಃಪುರದೊಳಕ್ಕೆ ಕರೆಯುತ್ತಾಳೆ. ಹಾಗೆ ಹೇಳುವಾಗಲೂ “ಅಚ್ಛಲಂ ಮಿತ್ರ ಭಾವೇನ ಸತಾಂ ದಾರಾವಲೋಕನಮ್- ಇತರರ ಭಾರ್ಯೆರನ್ನು ಮಿತ್ರಭಾವದಿಂದ ಕಾಣುವುದು ಸತ್ಪುರಷರಿಗೆ ದೋಷವಲ್ಲ” ಎನ್ನುವ ಜಾಣತನದ ಮಾತುಗಳಿಂದ ಪ್ರಜೆಗಳ ಎದುರು ಸುಗ್ರೀವನಿಗೆ ಎದುರಾಗಬಹುದಾದ ಮುಜುಗರವನ್ನು ತಪ್ಪಿಸುತ್ತಾಳೆ.
ಮರುಮಾತಾಡದೇ ಆತ ಒಳಗಡೆ ಬರುತ್ತಾನೆ. ಅಲ್ಲಿ ತಾರೆ ರುಮೆಯರ ಮರೆಯಲ್ಲಿ ಅಡಗಿದ್ದ ಸುಗ್ರೀವನನ್ನು ಕಂಡು ರೋಷದಿಂದ ನಿಂದಿಸುತ್ತಾನೆ. ಆಗ ತಾರೆ ಲಕ್ಷ್ಮಣನನ್ನು ಮೆತ್ತಗಾಗಿಸುವುದು ಕಾಮದ ಕುರಿತಾದ ಮಾತುಗಳಿಂದಲೇ. “ಕಾಮ ಯಾರನ್ನೂ ಬಿಡದು, ನೀನು ಹೀಗೆ ಕೋಪವಶನಾಗಿರುವುದನ್ನು ನೋಡಿದರೆ ನಮ್ಮಂತೆ ನಿನಗೆ ರತಿಕ್ರೀಡೆಗಳೇ ಮೊದಲಾದ ಕಾಮತಂತ್ರಗಳಲ್ಲಿ ಪರಿಶ್ರಮವಿಲ್ಲವೆಂದೇ ಎಣಿಸಬೇಕಾಗಿದೆ. ರಾಮ ಪ್ರಸಾದದ ಕಾರಣದಿಂದಲೇ ಈತ ಶಾಶ್ವತವಾದ ಕಪಿರಾಜ್ಯವನ್ನೂ, ರುಮೆಯನ್ನೂ ಜೊತೆಗೆ ನನ್ನನ್ನೂ ಅನುಭವಿಸುವಂತಾಗಿದೆ. ಮಹಾತ್ಮರಾದ ವಿಶ್ವಾಮಿತ್ರರಂಥವರನ್ನೇ ಕಾಮಬಿಡಲಿಲ್ಲ. ಆತ ಕಾಲದ ಪರಿವೆಯಿಲ್ಲದೇ ಮೇನಕೆಯೊಡನೆ ಹತ್ತು ವರ್ಷಗಳನ್ನು ಒಂದು ಹಗಲಿನಂತೆ ಕಳೆದನು. ಸುಗ್ರೀವ ಅನೇಕ ವರ್ಷಗಳ ಕಾಲ ರತಿಸುಖದಿಂದ ವಂಚಿತನಾಗಿದ್ದನು. ಈಗ ರಾಮನ ಕೃಪೆಯಿಂದ ಅದು ಆತನಿಗೆ ದೊರೆತಿದೆ. ಅದನ್ನು ಮರೆತಿಲ್ಲ” ರಾಮನ ಹೆಸರನ್ನು ಮತ್ತೆ ಮತ್ತೆ ಸ್ಮರಿಸುತ್ತಾಳೆ. ಲಕ್ಷ್ಮಣ ರಾಮನ ವಿರಹದ ದುಃಖವನ್ನು ಸೀತಾಪಹರಣದ ನಂತರದ ದಿನಗಳಿಂದ ಗಮನಿಸುತ್ತಾ ಬಂದಿದ್ದಾನೆ. ಈಗ ಮೆತ್ತಗಾಗಿದ್ದಾನೆ.
ಅದನ್ನು ಮನಗಂಡ ತಾರೆ ನಿಧಾನವಾಗಿ ರಾಜನೀತಿಗನುಗುಣವಾದ ಕೂಟನೀತಿಯನ್ನು ತಿಳಿಸುತ್ತಾಳೆ. ರಾಮನ ಕೆಲಸಕ್ಕಾಗಿ ಸುಗ್ರೀವ ರುಮೆಯನ್ನೂ, ತನ್ನನ್ನೂ ಅಂಗದನನ್ನೂ ಜೊತೆಗೆ ಕಪಿರಾಜ್ಯವನ್ನೂ ತ್ಯಜಿಸಲು ಸಿದ್ದನಿದ್ದಾನೆ. ರೋಹಿಣಿಯು ಚಂದ್ರನನ್ನು ಸೇರುವಂತೆ ಮಹಾಬಲಶಾಲಿಯಾದ ರಾವಣನನ್ನು ಸಂಹರಿಸಿ ಸೀತೆಯನ್ನು ರಾಮನೊಡನೆ ಸೇರಿಸುತ್ತಾನೆ. ಸೀತಾನ್ವೇಷಣೆ ಮತ್ತು ರಾವಣನ ಸಂಹಾರ, ಸುಗ್ರೀವನಿಲ್ಲದಿದ್ದರೆ ಅಸಾಧ್ಯ, ಲಂಕೆಯಲ್ಲೊಂದೇ ಮೂವತ್ತಾರು ಸಾವಿರ ಕೋಟಿ (ಅಪಾರ ಸಂಖ್ಯೆಯಲ್ಲಿ) ರಾಕ್ಷಸರಿದ್ದಾರೆ, ಇನ್ನು ಬೇರೆ ಕಡೆ ಲಕ್ಷಕೋಟಿಗಳಷ್ಟಿದ್ದಾರೆ. ಅವಲ್ಲರೂ ಕಾಮರೂಪಿಗಳು. ಕ್ರೂರಕರ್ಮಿಯಾದ ರಾವಣನನ್ನು ಸಂಹರಿಸದೇ ಸೀತೆಯನ್ನು ತರಲು ಸಾಧ್ಯವಿಲ್ಲ. ರಾವಣನ ಬಲ ಪರಾಕ್ರಮದ ವಿಚಾರವಾಗಿ ವಾಲಿಯಿಂದ ತಾನು ತಿಳಿದುಕೊಂಡಿದ್ದೇನೆ. ಅಷ್ಟೊಂದು ಸಂಖ್ಯೆಯ ರಾಕ್ಷಸರನ್ನು ಎದುರಿಸಲು ಅಪಾರ ಸಂಖ್ಯೆಯ ವಾನರಸೈನಿಕರ ನೆರವು ಬೇಕಾಗಿದೆ. ಅವರು ಬಂದು ಸೇರಿದ ಕೂಡಲೇ ರಾಮಕಾರ್ಯಕ್ಕೆ ಅಣಿಯಾಗುವೆವು ಎನ್ನುತ್ತಾಳೆ. ಭಯದಿಂದ ಬಿಳಿಚಿ ನಡುಗುತ್ತಿದ್ದ ಸುಗ್ರೀವನನ್ನೂ ಕೋಪದಿಂದ ಕೆಂಪಾಗಿರುವ ಲಕ್ಷ್ಮಣನನ್ನೂ ಏಕಕಾಲದಲ್ಲಿ ತಾರೆ ತನ್ನ ಸಂಯಮದ ಮಾತಿನಿಂದ ಸಮಾಧಾನ ಮಾಡಿ ಮುಂದಿನ ಕಾರ್ಯಕ್ಕೆ ವೇದಿಕೆಯನ್ನು ಅನುವು ಮಾಡಿಕೊಡುತ್ತಾಳೆ. ಯಾವಾಗ ಲಕ್ಷ್ಮಣನಿಗೆ ಸುಗ್ರೀವ ವಾನರರನ್ನು ಸೇರಿಸುತ್ತಿದ್ದಾನೆ ಎನ್ನುವ ಅರಿವಾಯಿತೋ ಆಗ ತಾರೆ ತನ್ನ ಕೆಲಸವಾಯ್ತೆಂದು ಸುಮ್ಮನಾಗುತ್ತಾಳೆ. ಪ್ರಬುದ್ಧ ಸಚಿವರ ಲಕ್ಷಣವೇ ವೇದಿಕೆಯನ್ನು ಸಿದ್ಧಗೊಳಿಸಿ ನಂತರ ಸಂಬಂಧಿಸಿದವರನ್ನು ಒಟ್ಟುಸೇರಿಸುವುದು.. ತಾರೆ ಆ ಕೆಲಸವನ್ನು ಎಚ್ಚರಿಕೆಯಿಂದ ಮಾಡಿದ್ದಾಳೆ.
ತಾರೆಯದು ರಾಮಾಯಣದಲ್ಲಿ ಬರುವ ಚಿಕ್ಕ ಪಾತ್ರ. ವಾನರಲೋಕವೆನ್ನುವ ರಾಮಾಯಣದ ಭಾಗದಲ್ಲಿ ತಾರೆ ಮುಕ್ತ ಮತ್ತು ನಿರ್ಭೀತ ಸ್ವಭಾವವನ್ನು ಪ್ರತಿನಿಧಿಸುತ್ತಾಳೆ. ಸಂದರ್ಭೋಚಿತವಾಗಿ ಮಾತುಗಳನ್ನು ಆಡುವ ತಾರೆಯನ್ನು ಅಯೋಧ್ಯೆಯನ್ನು ಆಳಿದ ಪುರುಕುತ್ಸಾನಿ (ಋ. ನಾಲ್ಕನೆ ಮಂಡಳದಲ್ಲಿ ವಿವರವಾಗಿವೆ) ಎನ್ನುವ ರಾಣಿಯ ನೆನಪು ತರುತ್ತಾಳೆ.
ದಿಟ್ಟ ಮತ್ತು ನಿರ್ಭೀತ ಹೆಣ್ಣು ತಾರೆ. ಸಾಮ್ರಾಜ್ಞಿ ಮತ್ತು ಆಪ್ತಸಚಿವೆ ಎರಡೂ ಪಾತ್ರಗಳಲ್ಲಿ ಆಕೆಯನ್ನು ಗಮನಿಸಬಹುದಾಗಿದೆ.
ಇದನ್ನೂ ಓದಿ: Narayana Yaji Column: ರಾಮಾಯಣದ ಸ್ತ್ರೀ ಚೇತನ: ಚತುರಮತಿ ತಾರೆ