Narayana Yaji Column: ರಾಮಾಯಣದ ಸ್ತ್ರೀ ಚೇತನ: ಚತುರಮತಿ ತಾರೆ
Narayana Yaji Column: ರಾಮಾಯಣದ ಪ್ರತಿಯೊಂದು ಸ್ತ್ರೀ ಪಾತ್ರಗಳಿಗೂ ಅದರದೆ ಆದ ವ್ಯಕ್ತಿತ್ವ ಮತ್ತು ಘನತೆಯಿದೆ. ಕವಿ ವಾಲ್ಮೀಕಿಯ ಕಾವ್ಯಕಾಷ್ಟದಿಂದ ಕಡೆಯಲ್ಪಟ್ಟ ಅವು ವಿವೇಕವನ್ನು ಪ್ರದರ್ಶಿಸುತ್ತವೆ. ಈ ಎಲ್ಲ ಪಾತ್ರಗಳ ನಡುವೆ ವಿಶಿಷ್ಟವಾದ ವ್ಯಕ್ತಿತ್ವ, ಚತುರಮತಿಯಾದ ಪಾತ್ರವೊಂದು ಹೆಚ್ಚಿನ ಪ್ರಚಾರವನ್ನು ಪಡೆದಿಲ್ಲ. ಅವಳೇ ವಾನರ ಭಯಂಕರನಾದ ವಾಲಿಯ ಮಡದಿ ತಾರೆ.


- ನಾರಾಯಣ ಯಾಜಿ
ಸುಷೇಣದುಹಿತಾ ಚೇಯಮರ್ಥಸೂಕ್ಷ್ಮವಿಮನಿಶ್ಚಯೇ ৷
ಔತ್ಪಾತಿಕೇ ಚ ವಿವಿಧೇ ಸರ್ವತಃ ಪರಿನಿಷ್ಠಿತಾ ৷৷ ಕಿ. ಕಾಂ. 22.13৷৷
ಸುಷೇಣನ ಮಗಳಾದ ತಾರೆಯು ಸಾಮಾನ್ಯರಿಂದ ತಿಳಿಯಲು ಅಸಾಧ್ಯವಾದ ಸೂಕ್ಷ್ಮವಾದ ವಿಷಯಗಳನ್ನು ನಿರ್ಣಯಿಸಿ ಹೇಳುವುದರಲ್ಲಿಯೂ, ಮುಂದೆ ಬರಬಹುದಾದ ಕಷ್ಟನಿಷ್ಠುರಗಳನ್ನು ಊಹಿಸಿ ತಿಳಿಸುವುದರಲ್ಲಿ ಬಹಳ ಚತುರೆಯು. ಬರಬಹುದಾದ ಉತ್ಪಾತಗಳ ಫಲಾಫಲವನ್ನು ತಿಳಿದು ಹೇಳುವಲ್ಲಿ ಸರ್ವತೋ ಮುಖವಾದ ವಿಶೇಷವಾದ ತಿಳುವಳಿಕೆಯನ್ನು ಹೊಂದಿದ್ದಾಳೆ.
ರಾಮಾಯಣದ ಪ್ರತಿಯೊಂದು ಸ್ತ್ರೀ ಪಾತ್ರಗಳಿಗೂ ಅದರದೆ ಆದ ವ್ಯಕ್ತಿತ್ವ ಮತ್ತು ಘನತೆಯಿದೆ. ಕವಿ ವಾಲ್ಮೀಕಿಯ ಕಾವ್ಯಕಾಷ್ಟದಿಂದ ಕಡೆಯಲ್ಪಟ್ಟ ಅವು ವಿವೇಕವನ್ನು ಪ್ರದರ್ಶಿಸುತ್ತವೆ. ಮರ್ಯಾದೆಯನ್ನು ಮೀರಿ ವ್ಯವಹರಿಸುದಿಲ್ಲ. ತ್ಯಾಗಮಯಿ ಕೌಸಲ್ಯೆ, ಗಂಭೀರ ಮತ್ತು ಸೌಮ್ಯಸ್ವಭಾವದ ಸುಮಿತ್ರೆ, ಹಟಸ್ವಭಾವದವಳಾದ ಕೈಕೇಯಿ, ಸಹನೆಯೇ ಮೂರ್ತಿವೆತ್ತ ಸೀತೆ, ಆರ್ಧೃತೆಯೇ ಮೂರ್ತಿವೆತ್ತ ಮಂಡೋದರಿ, ಸಾಧ್ವಿ ಅಹಲ್ಯೆ, ಮಮತೆಯ ಅನಸೂಯ ಹೀಗೆ ಒಂದೊಂದು ಪಾತ್ರವನ್ನೂ ವರ್ಣಿಸಬಹುದಾಗಿದೆ. ಈ ಎಲ್ಲ ಪಾತ್ರಗಳ ನಡುವೆ ವಿಶಿಷ್ಟವಾದ ವ್ಯಕ್ತಿತ್ವ ಮತ್ತು ಗೂಢಚಾರಿಕೆಯ ಪ್ರಮುಖಳಾಗಿ ನಗರದ ಆಗುಹೋಗುಗಳನ್ನು ಸದಾಕಾಲವೂ ಜಾಗರೂಕತೆಯಿಂದ ಪರೀಕ್ಷಿಸಿ ಅಗತ್ಯಬಿದ್ದರೆ ರಾಜನಿಗೆ ವಿವೇಕವನ್ನು ಹೇಳುವ, ರಾಜನಿಗೆ ಅಪಾಯವಾಗುವ ಸಾಧ್ಯತೆಯಿದ್ದರೆ ಅದನ್ನೂ ದೂರಿಕರಿಸುವ ಚತುರಮತಿಯಾದ ಪಾತ್ರವೊಂದು ಹೆಚ್ಚಿನ ಪ್ರಚಾರವನ್ನು ಪಡೆದಿಲ್ಲ. ಅವಳೇ ವಾನರ ಭಯಂಕರನಾದ ವಾಲಿಯ ಮಡದಿ “ತಾರೆ”. ರಾಮಾಯಣದ ಕಿಷ್ಕಿಂಧಾ ಕಾಂಡದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ತಾರೆಯ ಪ್ರವೇಶ ರಾಮಾಯಣದಲ್ಲಿ ಆಗುವುದು ವಾಲಿ ಸುಗ್ರೀವರ ಎರಡನೆ ಕಾಳಗಕ್ಕೂ ಸ್ವಲ್ಪ ಮುನ್ನ.
ವಾಲಿ ವಧೆಗೆ ರಾಮ ಸುಗ್ರೀವನೊಡನೆ ಎರಡನೆ ಸಾರಿ ಬರುವುದು ರಾತ್ರಿಕಾಲದಲ್ಲಿ. ಆ ಕುರಿತು ವಿವರವನ್ನು ಈ ಮೊದಲು ಮಾಡಿದ್ದೇನೆ. ಸುಗ್ರೀವನಿಗೆ ವಾಲಿ ಬದುಕಲೇ ಬಾರದೆನ್ನುವದಿದೆ. ಆತ ರಾಮನಲ್ಲಿ ಆಗ್ರಹಪೂರ್ವಕವಾಗಿ “ಪ್ರತಿಜ್ಞಾ ಯಾ ತ್ವಯಾ ವೀರ! ಕೃತಾ ವಾಲಿವಧೇ ಪುರಾ- ವಾಲಿಯನ್ನು ಸಂಹರಿಸುವೆನೆನ್ನುವ ನಿನ್ನ ಪ್ರತಿಜ್ಞಾವಚನದಂತೆ ನಡೆದುಕೋ” ಎಂದು ಆಗ್ರಹಪೂರ್ವಕವಾಗಿ ಒತ್ತಾಯಿಸಿದ್ದಾನೆ. ಸಪ್ತಜನ ಆಶ್ರಮದ ಹಾದಿಯಲ್ಲಿ ಬರುವಾಗ ಅಲ್ಲೆಲ್ಲ ವಾನರರು ಮರದ ಮೇಲೆ, ಕಲ್ಲಿನ ಬಂಡೆಯ ಹಿಂದೆ ಬಲೆಯೋಪಾದಿಯಲ್ಲಿ ಅಡಗಿಕುಳಿತಿರುವುದನ್ನು ಗಮನಿಸುತ್ತಾನೆ. ಅದೇನೂ ಸಹಜ ವಿದ್ಯಮಾನವಲ್ಲ.
ಹರಿವಾಗುರಯಾ ವ್ಯಾಪ್ತಾಂ ತಪ್ತಕಾಞ್ಚನತೋರಣಾಮ್৷
ಪ್ರಾಪ್ತಾಃ ಸ್ಮ ಧ್ವಜಯನ್ತ್ರಾಢ್ಯಾಂ ಕಿಷ್ಕಿನ್ಧಾಂ ವಾಲಿನಃ ಪುರೀಮ್ ৷৷ ಕಿ. ಕಾಂ 14- 5৷৷
ನಾವೀಗ ಕಿಷ್ಕಿಂಧಾಪಟ್ಟಣಕ್ಕೆ ಬಂದಿದ್ದೇವೆ. ಈ ಪಟ್ಟಣವು ವಾನರರೂಪವಾದ ಬಲೆಯಿಂದ ವ್ಯಾಪ್ತವಾಗಿದೆ. ಇದರ ಪುರದ್ವಾರಗಳೆಲ್ಲವೂ ಸುವರ್ಣಮಯವಾಗಿರುವುವು. ಧ್ವಜಗಳಿಂದ ಅಲಂಕರಿಸಲ್ಪಟ್ಟ ಅದನ್ನು ಯಂತ್ರಗಳ ಸಹಾಯದಿಂದ ತೆರೆಯಬಹುದಾಗಿದೆ.
ಕೋಟೆಯ ಬಾಗಿಲು ಸುವರ್ಣಮಯವಾಗಿತ್ತು. ಭದ್ರವೂ ಆದ ಅದನ್ನು ಯಂತ್ರಗಳ ಸಹಾಯದಿಂದ ತೆರೆದುಹಾಕಿ ಮಾಡುತ್ತಿದ್ದರು. ಕಿಷ್ಕಿಂಧೆ ಯಾವುದೇ ನಾಗರಿಕ ಸಮಾಜದ ರಾಜ್ಯದ ದುರ್ಗಕ್ಕಿಂತ ಕಡಿಮೆಯೇನೂ ಇರಲಿಲ್ಲ. ಅರಣ್ಯದ ತುಂಬೆಲ್ಲ ಮರಗಳ ಮೇಲೆ, ಕಲ್ಲು ಬಂಡೆಯ ಸಂಧಿಯಲ್ಲಿ ಯಾರಾದರೂ ಆಗಂತುಕರು ಬಂದರೆ ಅವರನ್ನು ಗಮನಿಸಲು ಗೂಢಾಚಾರಿಕೆ ಮಾಡಲಾಗುತ್ತಿತ್ತು. ಈ ವ್ಯವಸ್ಥೆ ಹೇಗಿತ್ತೆಂದರೆ “ಹರಿವಾಗುರಯಾ” ವಾನರರೂಪವಾದ ಬಲೆಯಂತೆ ಹರಡಿಕೊಂಡಿದ್ದರಂತೆ. ಒಂದು ಪ್ರಬಲವಾದ ಸಾಮ್ರಾಜ್ಯದಲ್ಲಿ ಪ್ರಮುಖವಾದ ಸ್ಥಾನವೆಂದರೆ ಗೂಢಾಚಾರರ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ನಿಭಾಯಿಸುವ ಅಮಾತ್ಯರು. ಅವರು ರಾಜನಿಗೆ ನಂಬಿಗಸ್ಥರಾಗಿರಬೇಕು. ವಿವೇಚನಾ ಸಾಮರ್ಥ್ಯವನ್ನು ಹೊಂದಿರುವುದಷ್ಟೇ ಅಲ್ಲ, ಕಾಲಾಕಾಲಗಳ ಔಚಿತ್ಯವನ್ನು ಗಮನಿಸದೆ ತಕ್ಷಣ ರಾಜನಿಗೆ ಎಚ್ಚರಿಕೆಯನ್ನು ಕೊಡುವಂತವರಾಗಿರಬೇಕು. ಇಂತಹ ಮಹತ್ವದ ಹುದ್ಧೆಯನ್ನು ಕಿಷ್ಕಿಂಧಾ ಸಾಮ್ರಾಜ್ಯದಲ್ಲಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದು ಬೇರೆ ಯಾರೂ ಅಲ್ಲ; ವಾಲಿಯ ಪ್ರಿಯಪತ್ನಿಯಾದ ’ತಾರೆ’ ಆಗಿದ್ದಳು. ಇದೊಂದೇ ಕಾಂಡದಲ್ಲಿ ಆಕೆಯ ಪ್ರವೇಶವಾದರೂ, ತಾರೆ ತೋರುವ ವಿವೇಚನೆಯಿಂದ, ಆಡುವ ಮಾತುಳಿಂದ ಆಕೆಯ ವ್ಯಕ್ತಿತ್ವ ಸ್ಪಷ್ಟವಾಗಿ ಗೋಚರವಾಗುತ್ತದೆ. ಹಾಗೆ ನೋಡಿದರೆ ಕೈಕೇಯಿ, ಸುಮಿತ್ರೆ, ಕೌಸಲ್ಯೆಯರ ಪ್ರವೇಶವೂ ಕೆಲವು ಸನ್ನಿವೇಶಗಳನ್ನು ಬಿಟ್ಟರೆ ಮತ್ತೆ ಇಲ್ಲ. ತಾರೆಯ ಚತುರಮತಿತ್ವದ ಕುರಿತು ರಾಮಬಾಣದಿಂದ ಘಾತಿಗೊಳಾಗಾಗಿ ಬಿದ್ದಸಂದರ್ಭದಲ್ಲಿ ವಾಲಿಯೇ ಸುಗ್ರೀವನನ್ನು ಉದ್ಢೇಶಿಸಿ ಎಲ್ಲರಿಗೂ ಕೇಳುವಂತೆ ಹೇಳುವುದು ಹೀಗೆ:
ಯದೇಷಾ ಸಾಧ್ವಿತಿ ಬ್ರೂಯಾತ್ಕಾರ್ಯಂ ತನ್ಮುಕ್ತಸಂಶಯಮ್
ನ ಹಿ ತಾರಾಮತಂ ಕಿಞ್ಚಿದನ್ಯಥಾ ಪರಿವರ್ತತೇ ৷৷ ಕಿ.ಕಾಂ.22.14৷৷
ಇವಳು ಯಾವ ಕಾರ್ಯವನ್ನು ಯುಕ್ತ, ಸಾಧು, ಕ್ರಿಯತಾಂ- ಒಳ್ಳೆಯದು; ಮಾಡಬಹುದು ಎನ್ನುವಳೋ ಆ ಕಾರ್ಯವನ್ನು ಹಿಂದುಮುಂದೆ ನೋಡದೇ ಮಾಡಬಹುದು. ತಾರೆಯು ಯೋಚಿಸಿ ನಿರ್ಧಾರ ಪೂರ್ವಕವಾಗಿ ಹೇಳುವ ವಿಷಯವು ಯಾವ ರೀತಿಯಲ್ಲಿಯೂ ಸ್ವಲ್ಪವಾದರೂ ವೆತ್ಯಾಸವಾಗುವುದೇ ಇಲ್ಲ.
ತಾರೆ ವಾಲಿಯ ಮಡದಿ ಮಾತ್ರವಲ್ಲ ಸಂದರ್ಭೋಚಿತವಾಗಿ ಸಲಹೆ ಕೊಡುವ ಮಂತ್ರಿಯೂ, ಆಪ್ತಮಿತ್ರಳೂ ಆಗಿದ್ದಳು. ರಾವಣನನ್ನೇ ಎದುರಿಸಿದ ವಾಲಿಯ ಬಲದ ಕುರಿತು ಆಕೆಗೆ ಅಪಾರವಾದ ವಿಶ್ವಾಸವಿತ್ತು. ಈ ಹಿಂದೆ ಮಾಯಾವಿ ಕಿಷ್ಕಿಂಧೆಗೆ ರಾತ್ರಿಯ ಕಾಲದಲ್ಲಿ ಬಂದು ಯುದ್ಧಕ್ಕೆ ಆಹ್ವಾನಿಸಿದಾಗಲೂ ತಾರೆ ರಾತ್ರಿಕಾಲದಲ್ಲಿ ಯುದ್ಧಕ್ಕೆ ಹೋಗುವುದು ಉಚಿತವಲ್ಲ ಎಂದೇ ಸಲಹೆ ನೀಡಿದ್ದಳು. ಅದರ ನಂತರ ಆದ ಅನಾಹುತ, ಪರಿಣಾಮದಿಂದಾಗಿ ವಾಲಿಸುಗ್ರೀವರ ವೈರ ಎಲ್ಲವೂ ಆಕೆಯ ಅರಿವಿಗೆ ಬಂದಿತ್ತು. ಸುಗ್ರೀವನ ಚಲನವಲನಗಳನ್ನು ಆಕೆ ತನ್ನನಂಬಿಗಸ್ಥ ಭಟರಿಂದ (ವಾನರರಿಂದ) ಗಮನಿಸುತ್ತಿದ್ದಳು. ಯಾವಾಗ ಸುಗ್ರೀವ ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದನೋ, ತಕ್ಷಣವೇ “ಸನ್ಧ್ಯಾಕನಕಪ್ರಭಃ- ಸಾಯಂಕಾಲದ ಬಿಸಿಲಿನಂತೆ ಕಾಂತಿಯಿಂದ ಕೂಡಿದ (ಸಂಜೆಗೆಂಪಿನ ಮೈಬಣ್ಣದ) ವಾಲಿ ಪದಾಘಾತದಿಂದ ಭೂಮಿಯನ್ನೇ ಭೇದಿಸುವಂತೆ ವೇಗದಿಂದ ಕಾಲಿಡುತ್ತ ಯುದ್ಧಕ್ಕೆ ಹೊರಟುನಿಂತನು. ಕೋಪದಿಂದ ಅವಡುಗಚ್ಚಿದ ವಾಲಿಯ ಕಣ್ಣುಗಳು ಆಗ ಧಗಧಗಿಸುವ ಬೆಂಕಿಯಂತೆ ಕಾಣುತ್ತಿದ್ದವು. ಭಯಂಕರನಾದ ವಾಲಿಯನ್ನು ತಡೆಯುವವರು ಯಾರೂ ಇರಲಿಲ್ಲ. ಆಗ ಮುಂದೆ ಬಂದು ಆತನನ್ನು ತನ್ನ ತೋಳಿನಿಂದ ಬಳಸಿಕೊಂಡು ತಾರೆ ವಾಲಿಗೆ ಹೇಳುವ ಹಿತನುಡಿ ಬೆದರಿದ ಹೆಣ್ಣೋರ್ವಳು ಮಾಡುವ ಆರ್ತನಾದವಲ್ಲ. ಬೆದರಿಕೆಯೂ ಅಲ್ಲ, ಈ ಯುದ್ಧದ ಪರಿಣಾಮವನ್ನು ಅನುಲಕ್ಷಿಸಿಯೇ ಆಕೆ ಕೊಡುವ ಮುನ್ನೆಚ್ಚರಿಕೆಗಳು.
ಅವಳು ವಾಲಿಯಲ್ಲಿ ಹೇಳುವದು “ಯುದ್ಧಕ್ಕೆ ಹೋಗಬೇಡ ಎನ್ನುವುದಿಲ್ಲ, ಸ್ವಲ್ಪಹೊತ್ತಿನ ಮೊದಲು ಸುಗ್ರೀವ ಯುದ್ಧಕ್ಕೆ ಆಹ್ವಾನಿಸಿದಾಗ ಆಕೆ ತಡೆದಿರಲಿಲ್ಲ. ತಡೆಯುವ ಕಾರಣ ಅಂಗದ ಅರಣ್ಯಕ್ಕೆ ಹೊಗಿದ್ದಾಗ ಗೂಢಚಾರರು ಆತನಿಗೆ ಹೇಳಿದ ಮಾತನ್ನು ನೆನಪಿಸಬೇಕಾಗಿದೆ. ಅಂಗದ ನೇರವಾಗಿ ತಾನೇ ಅರಣ್ಯದಲಿ ತಿರುಗಾಡಲಿಲ್ಲ. ಕಿಷ್ಕಿಂಧೆಯ ಸಾಮ್ರಾಜ್ಯದ ಗೂಢಚಾರರು ಋಷ್ಯಮೂಕದಲ್ಲಿರುವ ಸುಗ್ರೀವನ ಚಟುವಟಿಕೆಗಳನ್ನು ಗಮನಿಸುತ್ತಿದ್ದರು. ಅಂಗದನೇ ಹೋಗಿದ್ದರೆ ಸುಗ್ರೀವ ಸುಲಭದಲ್ಲಿ ಗುರುತು ಹಿಡಿಯುತ್ತಿದ್ದ. ಗೂಢಚಾರರು ನೇರವಾಗಿ ರಾಜ್ಯದ ಪ್ರಮುಖರನ್ನು ಭೆಟ್ಟಿಯಾಗುವ ಹಾಗಿಲ್ಲ. ಅವರು ವಾಲಿಗೆ ಅಷ್ಟೇ ನಂಬಿಗಸ್ಥನಾದ ಅಂಗದನ ಹತ್ತಿರ ಸುಗ್ರೀವನಿದ್ದಲ್ಲಿ ರಾಮ ಲಕ್ಷ್ಮಣರ ಆಗಮನ ಮತ್ತು ಸುಗ್ರೀವನೊಡನೆ ರಾಮನ ಅಗ್ನಿಸಾಕ್ಷಿಯಾಗಿ ನಡೆದ ತುಲ್ಯಾರಿ ಮಿತ್ರತ್ವ, ವಾಲಿಯನ್ನು ಕೊಲ್ಲುವೆನೆನ್ನುವ ರಾಮನ ಪ್ರತಿಜ್ಞೆ ಎಲ್ಲವನ್ನೂ ವಿವರವಾಗಿ ಹೇಳಿದ್ದಾರೆ. ಅದನ್ನೇ ಅಂಗದ ತನ್ನ ತಾರೆಯಲ್ಲಿ ವಿವರವಾಗಿ ಹೇಳಿದ್ದಾನೆ.
ಮೇಲಿನ ಶ್ಲೋಕದಲ್ಲಿ ವಿವರಿಸಿರುವಂತೆ ತಾರೆಯು “ಸಾಮಾನ್ಯರಿಂದ ತಿಳಿಯಲು ಅಸಾಧ್ಯವಾದ ಸೂಕ್ಷ್ಮವಾದ ವಿಷಯಗಳನ್ನು ನಿರ್ಣಯಿಸಿ ಹೇಳುವುದರಲ್ಲಿಯೂ, ಮುಂದೆ ಬರಬಹುದಾದ ಕಷ್ಟನಿಷ್ಠುರಗಳನ್ನು ಊಹಿಸಿ ತಿಳಿಸುವುದರಲ್ಲಿ ಬಹಳ ಚತುರೆಯು”. ಅವಳಿಗೆ ರಾಮ ಯಾರು ಎಷ್ಟು ದೊಡ್ಡ ಪರಾಕ್ರಮಿ ಎನ್ನುವುದು ಆಕ್ಷಣವೇ ಅರ್ಥವಾಗಿದೆ. ಕೇವಲ ಹೆಂಡತಿಯಾಗಿ ತನ್ನ ಗಂಡನನ್ನು ಯುದ್ಧಕ್ಕೆ ಹೋಗಬೇಡವೆಂದು ತಡೆಯುತ್ತಿಲ್ಲ. ರಾಮ ದೇವರ ಅವತಾರ ಎಂದು ಎಲ್ಲಿಯೂ ಅವಳೂ ಹೇಳಿಲ್ಲ. ಆತನ ಮಹತ್ಕಾರ್ಯಗಳಾದ ಖರ-ದೂಷಣರ ವಧೆ, ಮತ್ತಿತರ ವಿವರಗಳನ್ನು ಕಲೆಹಾಕಿದ್ದಾಳೆ. ಆ ಕಾರಣದಿಂದ ವಾಲಿಗೆ ರಾತ್ರಿಕಾಲದಲ್ಲಿ ಯುದ್ಧಕ್ಕೆ ಹೋಗುವುದುಬೇಡವೆಂದು ತಡೆಯುತ್ತಾಳೆ. ರಾಜನೀತಿಯಲ್ಲಿ ಅಮಾತ್ಯನಾದವ ರಾಜನಿಗೆ ವಸ್ತುನಿಷ್ಠವಾದ ಸಲಹೆಗಳನ್ನು ಕೊಡುತ್ತಿರಬೇಕು. ಬಲಿಷ್ಠನಾದ ಶತ್ರು ಎದುರಾದಾಗ ಸಂದರ್ಭೋಚಿತವಾಗಿ ಆತನಲ್ಲಿಸಂಧಿಯೋ, ಮಿತ್ರತ್ವವೋ ಮಾಡಿಕೊಂಡು ಸಾಗಬೇಕು. ರಾಮನ ಪರಾಕ್ರಮವನ್ನು ಸಂಪೂರ್ಣವಾಗಿ ತಾರೆ ಅರ್ಥ ಮಾಡಿಕೊಂಡಿದ್ದಾಳೆ. ವಾಲಿಯ ಗಮನಕ್ಕೆ ಇದ್ಯಾವ ವಿಷಯವೂ ಬಂದಿಲ್ಲ. ರಾತ್ರಿಕಾಲದಲ್ಲಿ ಶತ್ರುಗಳ ಆಗಮವನ್ನು ಗಮನಿಸಿದ ಅವಳಿಗೆ ಅಪಾಯದ ಮುನ್ಸೂಚನೆ ಸಿಕ್ಕಿತು. ಅದಕ್ಕೆ ಆಕೆ ವಾಲಿಯನ್ನು ತಡೆಯುತ್ತಾ ಹೇಳುವ ಮುಖ್ಯವಾದ ಮಾತು “ರಾಮ ಪ್ರಳಯಕಾಲದ ಅಗ್ನಿಯಂತೆ ತನ್ನ ಬಾಣದಿಂದ ಶತ್ರುಗಳನ್ನು ದಹಿಸಿಬಿಡುವನು” ಎನ್ನುವುದು.
ರಾಮನ ಸದ್ಗುಣಗಳ ವಿಷಯದಲ್ಲಿ ಆಕೆ ಹೇಳುವ ಮಹತ್ತರವಾದ ವಿಷಯದಲ್ಲಿ “ನಿವಾಸವೃಕ್ಷಃ ಸಾಧೂನಾಮಾಪನ್ನಾನಾಂ ಪರಾ ಗತಿಃ”-ಸಾಧುಗಳ ವಿಷಯದಲ್ಲಿ ಆಶ್ರಯ ವೃಕ್ಷದಂತಿರುವನು” ಎನ್ನುವ ಮಾತು ಅರ್ಥಪೂರ್ಣ. ರಾಮನನ್ನು ಇಲ್ಲಿ ನೆರಳನ್ನು ಮತ್ತು ಫಲವನ್ನು ಕೊಡುವ ವೃಕ್ಷಕ್ಕೆ ಹೋಲಿಸಿದ್ದಾಳೆ. ವಾಲಿ ರಾಮನೊಡನೆ ಮೂದಲಿಸುವಾಗ ಸುಗ್ರೀವನಲ್ಲಿ ಹೋಗುವುದಕ್ಕಿಂತ ತನ್ನಲ್ಲಿ ಬಂದಿದ್ದರೆ ತನ್ನ ಬಾಲವನ್ನು ಕಳುಹಿಸಿ ಸೀತೆಯನ್ನು ರಾವಣನಿಂದ ಬಿಡಿಸಿ ತಂದುಕೊಡುತ್ತಿದ್ದೆ ಎಂದಿದ್ದ. ಅದಕ್ಕೆ ಉತ್ತರವನ್ನು ತಾರೆ ಮೊದಲೇ ಇಲ್ಲಿ ನೀಡಿದ್ದಾಳೆ. ವೃಕ್ಷವು ತನ್ನ ನೆರಳನ್ನಪೇಕ್ಷಿಸಿ ಬಂದವರಿಗೆ ಮಾತ್ರವೇ ಆಶ್ರಯ ಕೊಟ್ಟು ಫಲಪುಷ್ಪಾದಿಗಳನ್ನು ನೀಡಿ ಸಲಹುವಂತೆ ರಾಮನು ತನ್ನಲ್ಲಿ ಆಶ್ರಯಿಸಿ ಬಂದವರಿಗೆ ಸರ್ವ ವಿಧದಲ್ಲಿಯೂ ನೆರವನ್ನು ನೀಡಿ ಅನುಗ್ರಹಿಸುತ್ತಾನೆ. ಭೂಮಿಯಲ್ಲಿ ಖನಿಜವಿದೆ ಎನ್ನುವ ಮಾತ್ರಕ್ಕೆ ಸಿಗುವುದಿಲ್ಲ; ಅಗೆದವರಿಗೆ ಮಾತ್ರ (ಹತ್ತಿರ ಹೋಗಿ) ಸಿಗುತ್ತದೆ. ಸದ್ಗುಣಗಳ ಗಣಿ ರಾಮ, ಶಸ್ತ್ರಜ್ಞಾನ, ಆಧ್ಯಾತ್ಮಜ್ಞಾಗಳೆರಡರಲ್ಲಿಯೂ ಸಂಪನ್ನನಾದವ. ಪರೋಕ್ಷವಾಗಿ ಆಕೆ ತನ್ನ ಗಂಡನಿಗೆ ಸೂಚಿಸುವುದು ಇವ್ಯಾವವೂ ನಿನ್ನಲ್ಲಿಲ್ಲ, ವೃಕ್ಷಸಾಮ್ಯವಿರುವ ರಾಮ ಸಕಲರಿಗೂ ಆಶ್ರಯದಾತನು. “ಆಪನ್ನಾನಾಂಪರಾಗತಿಃ” ಆಶಿತರಲ್ಲಿಯೂ ಆರ್ತರಾದವರಿಗೆ ಸಂಪೂರ್ಣಾವಲಂಬನ ಕೊಡುವನು. ಜಗತ್ತಿನಲ್ಲಿ ಸಹೋದರರಿಗಿಂತಲೂ ಹತ್ತಿರದ ಬಂಧುಗಳಿಲ್ಲ. ಸುಗ್ರೀವನನ್ನು ಕರೆದು ಯುವರಾಜಾಭಿಷೇಕ ಮಾಡು. ವೈರ ಬೇಡ, ಹಾಗೇನಾದರೂ ಆದರೆ ಕೋಸಲರಾಜಪುತ್ರನೊಡನೆ ಯುದ್ಧಕ್ಕೆ ನಿಂತರೆ ನೀನು ಗೆಲ್ಲಲಾರೆ” ಎನ್ನುವ ದೀರ್ಘ ಸಲಹೆಯನ್ನು ನೀಡುತ್ತಾಳೆ.
ರಾಜನೀತಿಯಲ್ಲಿ ಉಲ್ಲೇಖಿಸಿರುವ ಬೇಧನೀತಿಯನ್ನು ಅನುಸರಿಸಿದ್ದಾಳೆ. ಕೊನೆಯ ಅಸ್ತ್ರವಾಗಿ ವಾಲಿಗೆ ಪ್ರಿಯಳಾದಂತಹ ತನಗೆ ಆತ ಏನಾದರೂ ಒಳ್ಳೆಯದನ್ನು ಮಾಡಬೇಕೆನಿಸಿದರೆ, ವಾಲಿಗೆ ಹಿತಕರಳು ಎಂದು ತಿಳಿದುಕೊಂಡಿದ್ದರೆ ರಾಮನೊಡನೆ ವೈರಬೇಡ ಎನ್ನುವ ಖಡಾ ಖಂಡಿತಮಾತುಗಳನ್ನು ಆಡುತ್ತಾಳೆ. ತಾರೆಯ ಮಾತುಗಳು ವಾಲಿಯ ಮೇಲೆ ಸ್ವಲ್ಪಮಟ್ಟಿಗೆ ಪ್ರಭಾವಬೀರುತ್ತದೆ. ಸುಗ್ರೀವನನ್ನು ಮುಗಿಸಿಯೇ ಬಿಡುವೆ ಎಂದು ನಿಶ್ಚಯಮಾಡಿದವ “ಸುಗ್ರೀವನ ಪ್ರಾಣತೆಗೆಯುವುದಿಲ್ಲ, ಎರಡುತಟ್ಟಿ ಓಡಿಸಿಬಿಡುವೆ” ಎಂದಿದ್ದಾನೆ. “ಧರ್ಮಜ್ಞನಾದ ರಾಮ ಪಾಪಕಾರ್ಯ ಯಾಕೆ ಮಾಡುವನು, ಅಣ್ಣತಮ್ಮಂದಿರ ಜಗಳದಲ್ಲಿ ಆತ ಯಾಕೆ ಪ್ರವೇಶಿಸುತ್ತಾನೆ” ಎನ್ನುತ್ತಾನೆ. ತಾರೆಯ ಹಿತೋಪದೇಶ ಕಠೋರವಾದ ತನ್ನನ್ನು ಮೃದುವಾಗಿಸಿದೆ ಎನ್ನುತ್ತಾನೆ.
ಎಪ್ಪತ್ತುಸಾವಿರ ಆನೆಗಳ ಬಲವುಳ್ಳ ವಾಲಿಯನ್ನು ತಾರೆ ಮನಸಾರೆ ಪ್ರೀತಿಸುತ್ತಿದ್ದಳು. ರಾಮಬಾಣದಿಂದ ವಾಲಿ ಮರಣಾವಸ್ತೆಯಲ್ಲಿ ಇದ್ದಾನೆ ಎನ್ನುವುದನ್ನು ತಿಳಿದ ತಾರೆ ಅಲ್ಲಿಗೆ ಧಾವಿಸಿ ರೋದನ ಮಾಡುವುದು ತಾರಾ ವಿಲಾಪವೆಂದೇ ಹೆಸರಾಗಿದೆ. ಭಯದಿಂದ ಭೀತರಾದ ವಾನರರು ತಾರೆಗೆ ಓಡಿ ಅಡಗಿಕೋ, ಅಂಗದನನ್ನು ರಕ್ಷಿಸಿಕೋ, ಇಲ್ಲವಾದರೆ ರಾಮನ ನೆರವಿನಿಂದ ಸುಗ್ರೀವ ಅಂಗದನನ್ನು ಕೊಲ್ಲಬಹುದು ಎಂದಾಗ, ಪತಿಯೇ ಇಲ್ಲದಿದ್ದ ಮೇಲೆ ಮಗನಲ್ಲ, ಯಾರಿದ್ದರೇನು ಎಂದು ಪ್ರಶ್ನೆ ಮಾಡಿ ದಿಟ್ಟತನದಿಂದ ರಾಮ ಲಕ್ಷಣ ಸುಗ್ರೀವರನ್ನು ಕಡೆಗಣಿಸಿ ವಾಲಿ ಬಿದ್ದಲ್ಲಿಗೆ ಹೋಗಿ ಅತನ ತಲೆಯನ್ನು ತನ್ನ ತೊಡೆಯಮೇಲಿರಿಸಿಕೊಂಡು ರೋಧಿಸುತ್ತಾ ಹೇಳುವ ಮಾತು ಗಮನಾರ್ಹ: “ಶೂರಯಾ ನ ಪ್ರದಾತವ್ಯಾ ಕನ್ಯಾ ಖಲು ವಿಪಶ್ಚಿತಾ” ವಿದ್ವಾಂಸನಾದವನು ಶೂರನಿಗೆ ಮಗಳನ್ನು ಕೊಟ್ಟು ಮದುವೆಮಾಡಬಾರದು, ಶೂರನಾದವ ಸದಾಕಾಲವೂ ಹೋರಾಟದಲ್ಲಿಯೇ ಇರುವುದರಿಂದ ಮರಣ ಯಾವಾಗಬೇಕಾದರೂ ಬರಬಹುದು”. ಕೆಲವೊಂದು ಪುರಾಣಗಳಲ್ಲಿ ತಾರೆ ಸಮುದ್ರಮಥನದಲ್ಲಿ ವಾಲಿಗೆ ದೊರಕಿದವಳು ಎನ್ನುವುದನ್ನು ಈ ಶ್ಲೋಕ ಸ್ಪಷ್ಟವಾಗಿ ಅಲ್ಲಗೆಳೆಯುತ್ತದೆ. ಆಕೆ ಸುಷೇಣನ ಮಗಳು ಎನ್ನುವುದೇ ಸೂಕ್ತ. ಸುಗ್ರೀವನನ್ನು ಧರ್ಮಭ್ರಷ್ಟ ಎಂದು ಜರಿಯುತ್ತಾಳೆ. ರಾಮನಲ್ಲಿ ತನ್ನನ್ನೂ ಮಗನನ್ನೂ ಸಾಯಿಸಿಬಿಡು ಎಂದು ದಿಟ್ಟತನದಿಂದ ಕೇಳುತ್ತಾಳೆ.
ತಾರೆಯ ಚುಚ್ಚುಮಾತುಗಳನ್ನು ಕೇಳಿದ ಸುಗ್ರೀವ ತಾನು ತನ್ನ ಅಣ್ಣನನ್ನು ಕೊಲ್ಲಿಸಬಾರದಿತ್ತು ಎಂದು ಪಶ್ಚಾತ್ತಾಪ ಪಡುತ್ತಾನೆ. ರಾಮನ ಹತ್ತಿರ ತಾನೂ ಸಹ ಪ್ರಾಯೋಪವೇಶ ಮಾಡಿಕೊಳ್ಳುವೆ ಎಂದು ಅಳುತ್ತಾನೆ. ಹನುಮಂತ ತಾರೆಯನ್ನು ಶಾಸ್ತ್ರಗಳ ಆಧಾರದಿಂದಲೂ, ಲೌಕಿಕವಾಗಿಯೂ ಸಮಾಧಾನ ಮಾಡುತ್ತಾನೆ. “ನಿನ್ನ ಅಧೀನದಲ್ಲಿದ್ದುಕೊಂಡು ಅಂಗದನೇ ರಾಜ್ಯವನ್ನು ಆಳಲಿ” ಎನ್ನುತ್ತಾನೆ. ತಾರೆ “ನೂರು ಅಂಗದರಿದ್ದರೂ ಪತಿಯ ಆಲಿಂಗನದ ಸುಖ ದೊರಕುವುದಿಲ್ಲ” ಅಂಗದನ ಯೋಗಕ್ಷೇಮವನ್ನು ಸುಗ್ರೀವನೇ ನೋಡಿಕೊಳ್ಳಬೇಕೆನ್ನುವುದು ಧರ್ಮಶಾಸ್ತ್ರದಲ್ಲಿದೆ. ತಾನು ಪ್ರಾಯೋಪವೇಶ ಮಾಡುತ್ತೇನೆನ್ನುತ್ತಾಳೆ. ಅದನ್ನು ನೋಡಿ ರಾಮನ ಕಣ್ಣೂ ಒದ್ದೆಯಾಯಿತು. ಕುವೆಂಪು ಅವರ ’ರಾಮಾಯಣ ದರ್ಶನಂ’ದಲ್ಲಿ ವಾಲಿಯನ್ನು ಕೊಂದದ್ದಕ್ಕಾಗಿ ರಾಮ ಪಶ್ಚಾತ್ತಾಪ ಪಡುತ್ತಾನೆ. ಅದಕ್ಕೆ ಆಧಾರ ಇಲ್ಲಿದೆ. ವಾಲಿಯ ಸಂದೇಹಕ್ಕೆ ಸೂಕ್ತ ಉತ್ತರವನ್ನು ಕೊಟ್ಟ ರಾಮನಿಗೆ ತಾರೆಯ ಪ್ರಶ್ನೆಗಳಿಗೆ ಇದಕ್ಕೆ ಕಾರಣಳಾದವಳು ತಾರೆ. ಇಷ್ಟೆಲ್ಲಾ ಆಗುವಾಗ ಗತಪ್ರಾಣನಾಗಿದ್ದ ವಾಲಿಗೆ ಸ್ವಲ್ಪ ಎಚ್ಚರವಾಗುತ್ತದೆ. ಆತ ಸುಗ್ರೀವನನ್ನು ಕರೆದು ಸಮಾಧಾನ ಮಾಡುತ್ತಾನೆ. ತನ್ನ ತಪ್ಪಿನ ಕಾರಣದಿಂದಲೇ ತನಗೀ ಗತಿ ಬಂತು, ಈಗ ಆಗಿದ್ದು ಸರಿಯಾಗಿದೆ ಎನ್ನುತ್ತಾನೆ. ಅಂಗದನ ಮತ್ತು ತಾರೆಯನ್ನು ಸುಗ್ರೀವನ ಆಶ್ರಯಕ್ಕೆ ಒಪ್ಪಿಸಿ ಆಕೆಯ ಗುಣ ವಿಶೇಷಗಳನ್ನು ಪ್ರಾರಂಭಲ್ಲಿ ಬಂದ ಶ್ಲೋಕದಲ್ಲಿದ್ದಂತೆ ತಿಳಿಸಿ ಅವಳನ್ನು ಆತನ ವಶಕ್ಕೆ ಕೊಡುತ್ತಾನೆ.
ತಾರೆಯೂ ವಿಲಾಪದಲ್ಲಿ ಬಾರಿ ಬಾರಿ ವಾಲಿ ತಾನು ಮಾಡಿದ ಪಾಪಕರ್ಮಗಳಿಂದಲೇ ಈ ಅವಸ್ಥೆಗೆ ಗುರಿಯಾಗಬೇಕಾಯಿತು ಎನ್ನುತ್ತಾಳೆ. ಆಕೆಯ ಆಕ್ಷೇಪವಿರುವುದು ವಾಲಿ ಸುಗ್ರೀವರ ದ್ವಂದ್ವಯುದ್ಧದಲ್ಲಿ ರಾಮ ಪ್ರವೇಶಮಾಡಿದುದರ ಕುರಿತು. ತನ್ನನ್ನೂ ಸಂಹರಿಸಿಬಿಡು ಎಂದು ರಾಮನಲ್ಲಿ ಗೋಳಿಡುತ್ತಾಳೆ. ಸೀತೆಯಿಂದ ವಿರಹಿತನಾದ ರಾಮನಿಗೆ ದಾಂಪತ್ಯದ ಮಹತ್ವ ತಿಳಿದಿದೆ. “ಇಷ್ಟು ರಮಣೀಯವಾದ ಬೆಟ್ಟದ ತಪ್ಪಲಲ್ಲಿರುವಾಗಲೂ ವಿದೇಹದಕನ್ಯೆಯಾದ ಸೀತೆಯಿಂದ ವಿರಹಿತನಾದ ನೀನು ಹೇಗೆ ಸಂತೋಷವನ್ನು ಅನುಭವಿಸಲಾಗದೇ ಇದ್ದಿಯೋ ಹಾಗೇ ಸ್ವರ್ಗದಲ್ಲಿದ್ದರೂ ವಾಲಿ ತನ್ನನ್ನು ಬಿಟ್ಟು ಸಂತೋಷದಿಂದ ಇರಲಾರ. ವಿರಹದ ನೋವು ನಿನಗೆ ಚನ್ನಾಗಿ ತಿಳಿದಿದೆ. ವಾಲಿಯ ಆತ್ಮವೇ ಆದ ತನ್ನನ್ನು ಸ್ತ್ರೀ ಎಂದು ನೋಡದೇ ಸಂಹರಿಸಿಬಿಡು” ಎಂದು ಪರೋಕ್ಷವಾಗಿ ಚುಚ್ಚುತ್ತಾಳೆ. ವಾಲಿಯೊಡನೆ ತನ್ನ ಕಾರ್ಯವನ್ನು ಸಮರ್ಥಿಸಿಕೊಂಡ ರಾಮ ಇಲ್ಲಿ ಯಾವ ಸಮರ್ಥನೆಯನ್ನೂ ಮಾಡಿಕೊಳ್ಳುವುದಿಲ್ಲ. ಇವೆಲ್ಲದಕ್ಕೂ ವಿಧಿಯೇ ಕಾರಣ “ಕಾಲಚೋದಿತವೇ ವಾಲಿ ವಧೆಗೆ ಕಾರಣ” ಎನ್ನುವುದಷ್ಟೇ ಆತನ ಉತ್ತರ.
ಇದನ್ನೂ ಓದಿ: Narayana Yaji Column: ವಾಲಿವಧೆಗೊಂದು ಕಾಲಚೋದಿತ ಕಾರಣ: ರಾಜ ಶಾಸ್ತ್ರಾಧೀನ, ಶಾಸ್ತ್ರ ಧರ್ಮಾಧೀನ ಎಂದು ಸಾರಿದ ಪುರುಷೋತ್ತಮ
ನ ಕಾಲಃ ಕಾಲಮತ್ಯೇತಿ ನ ಕಾಲಃ ಪರಿಹೀಯತೇ ৷
ಸ್ವಭಾವಂ ಚ ಸಮಾಸಾಧ್ಯ ನ ಕಶ್ಚಿದತಿವರ್ತತೆ ৷৷ ಕಿ. ಕಾಂ. 25.6 ৷৷
ಕಾಲಸ್ವರೂಪನಾದ ಭಗವಂತನು ಮಾಡಿರುವ ಜನನ-ಮರಣರೂಪವಾದ ಕಾಲದ ವ್ಯವಸ್ಥೆಯನ್ನು ಮೀರಿ ನಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ.
ರಾಮನ ಬಾಯಿಂದಲೇ ಜೀವಾತ್ಮ ಮತ್ತು ಪರಮಾತ್ಮರ ಗೂಢವನ್ನುಕೇಳಿದ ತಾರೆ ಮೌನ ತಾಳುತ್ತಾಳೆ. ವಾಲಿ ಸುಗ್ರೀವನಲ್ಲಿ ತಾರೆಯನ್ನು ಮತ್ತು ಅಂಗದನನ್ನು ನಿನ್ನ ರಕ್ಷಣೆಗೆ ತಗೆದುಕೊ ಎಂದ ಮಾತು ಈಕೆಗೂ ಅರ್ಥವಾಗಿದೆ. ವಾಲಿಯ ತಪ್ಪಿನಿಂದಲೇ ಅವನತಿಯಾಗಿರುವುದು ಎನ್ನುವುದು ತಿಳಿದಕಾರಣ ಆಕೆ ಮುಂದೆ ಮಾತನ್ನು ಬೆಳೆಸುವುದಿಲ್ಲ. ಸುಗ್ರೀವ ಮತ್ತು ಅಂಗದರ ಪಟ್ಟಾಭಿಷೇಕ ಮತ್ತು ತನ್ನ ಕರ್ತವ್ಯವನ್ನು ಕುಲಾಚಾರದಂತೆ ನಿರ್ವಹಿಸಲು ಮಾನಸಿಕವಾಗಿ ಆಕೆ ಸಿದ್ಧಳಾಗಿದ್ದಾಳೆ.
ಅತ್ಯಂತ ಚಿಕ್ಕಭಾಗ ವಾಲಿ ಮತ್ತು ತಾರೆಯದ್ದು. ಆದರೆ ಅತ್ಯಂತ ಪರಿಣಾಮಕಾರಿಯಾದ ಭಾವ. ಮೊದಲು ಓರ್ವ ಆಪ್ತಮಿತ್ರಭಾವದಿಂದ ವಾಲಿಯಲ್ಲಿ ಆತನ ತಪ್ಪುಗಳನ್ನು ಹೇಳುತ್ತಾ ರುಮೆಯನ್ನು ಸುಗ್ರೀವನಿಗೆ ಒಪ್ಪಿಸಿ ರಾಮನೊಡನೆ ಮೈತ್ರಿ ಮಾಡಿಕೋ ಎನ್ನುವುದನ್ನು ಹೇಳಿದ್ದಾಳೆ. ಕಿಷ್ಕಿಂಧೆಯ ಅಮಾತ್ಯಳಾಗಿ ಪುರದ ರಕ್ಷಣೆ, ತನ್ನ ಮಗನ ಭವಿಷ್ಯ ಈ ಎರಡನ್ನೂ ಮನಸ್ಸಿನಲ್ಲಿಯೇ ಅಳೆದು ತೂಗಿ ನೋಡಿದ್ದಾಳೆ. ಪತ್ನಿಯಾಗಿ ವಾಲಿಯನ್ನು ಪ್ರೀತಿಸುವ ತನ್ನ ಕರ್ತವ್ಯವನ್ನು ನಿಭಾಯಿಸುವ ಪಾತ್ರ ಮೊದಲ ಭಾಗದಲ್ಲಿ ಪರಿಣಾಮಕಾರಿಯಾಗಿ ರಾಮಾಯಣದಲ್ಲಿ ಮೂಡಿಬಂದಿದೆ.
ತಾರೆ ಓರ್ವ ಸಮರ್ಥ ಅಮಾತ್ಯಳಾಗಿ ಸುಗ್ರೀವನಲ್ಲಿ ತನ್ನ ಕರ್ತವ್ಯ ಪ್ರಜ್ಞೆಯನ್ನೂ ಲಕ್ಷ್ಮಣನಲ್ಲಿ ಸಮಾಧಾನವನ್ನೂ ತಂದ ಕುರಿತು ಮುಂದಿನ ಸಂಚಿಕೆಯಲ್ಲಿ ಗಮನಿಸೋಣ.