Dhruva Sarja: ಹರೀಶ್ ರಾಯ್ ಚಿಕಿತ್ಸೆಗೆ ನಟ ಧ್ರುವ ಸರ್ಜಾ ಸಹಾಯ ಹಸ್ತ; 11 ಲಕ್ಷ ರೂಪಾಯಿ ನೀಡಿದ ಆ್ಯಕ್ಷನ್ ಪ್ರಿನ್ಸ್
‘ಕೆಜಿಎಫ್ ಚಾಚಾ’ ಎಂದೇ ಜನಪ್ರಿಯರಾದ ಹರೀಶ್ ರಾಯ್ ಅವರಿಗೆ ಗಂಭೀರ ಆರೋಗ್ಯ ಸಮಸ್ಯೆ ಕಾಡುತ್ತಿದ್ದು, ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ಅವರು ಅಭಿಮಾನಿಗಳಲ್ಲಿ ಕೋರಿದ್ದಾರೆ. ಅವರಿಗೆ ಕ್ಯಾನ್ಸರ್ ಕಾಣಿಸಿಕೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಸ್ಪತ್ರೆಯ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ.

ಹರೀಶ್ ರಾಯ್ - ಧ್ರುವ ಸರ್ಜಾ -

ಬೆಂಗಳೂರು: ಮೂರು ವರ್ಷಗಳ ಹಿಂದೆಯೇ ಕನ್ನಡ ಚಿತ್ರರಂಗದ ಖ್ಯಾತ ನಟ ಹರೀಶ್ ರಾಯ್ (Actor Harish Roy) ತಮ್ಮ ಅನಾರೋಗ್ಯದ ಬಗ್ಗೆ ಮಾಧ್ಯಮಗಳ ಎದುರು ಬಂದು ನೋವು ತೋಡಿಕೊಂಡಿದ್ದರು. ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಇರುವ ವಿಚಾರ ಗೊತ್ತಾಗಿದ್ದೇ ತಡ, ಇಂಡಸ್ಟ್ರಿಯ ಸಾಕಷ್ಟು ಮಂದಿ ಅವರ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದ್ದರು. ರಾಕಿಂಗ್ ಸ್ಟಾರ್ ಯಶ್ ಮತ್ತು ಶಿವಣ್ಣ ಅವರ ಬೆಂಬಲ ನೀಡಿದ್ದರು.
ಆದರೀಗ ಮತ್ತೆ ಕೆಜಿಎಫ್ (KGF) ಚಾಚಾನ ಆರೋಗ್ಯ ಹದಗೆಟ್ಟಿದ್ದು, ಕ್ಯಾನ್ಸರ್(Cancer) ಹೊಟ್ಟೆಗೆ ಸ್ಪ್ರೆಡ್ ಆಗಿ, ಹೊಟ್ಟೆಯಲ್ಲಿ ನೀರು ತುಂಬಿಕೊಂಡಿದೆ. ಹರೀಶ್ ರಾಯ್ ಸ್ಥಿತಿ ನೋಡಿ ಅನೇಕರು ಕಣ್ಣೀರು ಇಟ್ಟಿದ್ದು, ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.
ಇದೀಗ ಚಂದನವನದ ನಟರು ನೆರವಿಗೆ ಹರೀಶ್ ರಾಯ್ ಸಹಾಯಕ್ಕೆ ನಿಂತಿದ್ದು, ʼಕೆಜಿಎಫ್ʼ ಸಿನಿಮಾದ ಮೂಲಕ ಮತ್ತೆ ಲೈಮ್‌ಲೈಟ್‌ಗೆ ಬಂದ ಹರೀಶ್ ರಾಯ್ ಅವರ ಚಿಕಿತ್ಸೆಗೆ ಸ್ಯಾಂಡಲ್‌ವುಡ್‌ನ ಸಾಕಷ್ಟು ಸ್ನೇಹಿತರು ಸ್ಪಂದಿಸುತ್ತಿದ್ದಾರೆ.
ಹೌದು, ‘ಕೆಜಿಎಫ್ ಚಾಚಾ’ ಎಂದೇ ಜನಪ್ರಿಯರಾದ ಹರೀಶ್ ರಾಯ್ ಅವರನ್ನು ಗಂಭೀರ ಆರೋಗ್ಯ ಸಮಸ್ಯೆ ಕಾಡುತ್ತಿದ್ದು, ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ಅವರು ಸಿನಿ ಅಭಿಮಾನಿಗಳಲ್ಲಿ ಕೋರಿದ್ದಾರೆ. ಅವರಿಗೆ ಕ್ಯಾನ್ಸರ್ ಕಾಣಿಸಿಕೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅವರು ಸಹಾಯಕ್ಕಾಗಿ ಅಂಗಲಾಚಿ ವಿಡಿಯೊ ಮಾಡಿದ್ದು, ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಈ ವಿಡಿಯೊ ವೈರಲ್ ಆಗಿದ್ದು, ಇದನ್ನು ಕಂಡ ತಕ್ಷಣ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಸ್ಪತ್ರೆಯ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ. ಜತೆಗೆ ʼʼನಿಮ್ಮ ಜತೆ ನಾವೆಲ್ಲ ಇದ್ದೇವೆ, ಕಣ್ಣೀರು ಹಾಕದಿರಿʼ’ ಎಂದು ಧೈರ್ಯ ತುಂಬಿದ್ದಾರೆ.
ಹರೀಶ್ ರಾಯ್ ಅನಾರೋಗ್ಯ ಕಾರಣದಿಂದ ನಟನೆಯಿಂದ ತುಸು ಕಾಲದಿಂದ ದೂರವೇ ಉಳಿದಿದ್ದು, ಹೀಗಾಗಿ ಅವರಿಗೆ ಆಸ್ಪತ್ರೆ ಖರ್ಚು ನೋಡಿಕೊಳ್ಳುವಷ್ಟು ಹಣ ಇಲ್ಲದಂತೆ ಆಗಿದೆ. ‘ʼನನ್ನನ್ನು ಉಳಿಸಿ’ʼ ಎಂದು ಅವರು ಫಿಲ್ಮ್ ಚೇಂಬರ್, ನಿರ್ಮಾಪಕರು, ನಿರ್ದೇಶಕರು, ಸಹ ಕಲಾವಿದರಿಗೆ ವಿಡಿಯೋ ಮೂಲಕ ಸಹಾಯ ಕೇಳಿದ್ದಾರೆ.
ಈ ಸುದ್ದಿಯನ್ನು ಓದಿ: Viral News: ಪ್ರೇಯಸಿಯ ಫೋನ್ ಬ್ಯುಸಿ ಬಂದಿದ್ದಕ್ಕೆ ಗ್ರಾಮದ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ ಪಾಗಲ್ ಪ್ರೇಮಿ!
ಧ್ರುವ ಸರ್ಜಾ ಕೂಡ ಹರೀಶ್ ಅವರ ಕಷ್ಟಕ್ಕೆ ಸ್ಪಂದಿಸಿದ್ದು, ಅವರ ಚಿಕಿತ್ಸೆಗೆ 11 ಲಕ್ಷ ರೂ. ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ʼಅದ್ದೂರಿʼ ಹುಡುಗನ ಪರೋಪಕಾರವನ್ನು ಕೊಂಡಾಡಿ ವಿಡಿಯೊ ಹಂಚಿಕೊಂಡಿರುವ ನಟಿ ಹಾಗೂ ಅಮ್ಮನ ಮಡಿಲು ಟ್ರಸ್ಟ್ ವ್ಯವಸ್ಥಾಪಕಿ ಶಶಿಕಲಾ, 'ʼನಮ್ಮ ಕಲಾವಿದ ಹರೀಶ್ ರಾಯ್ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವುದು ಎಲ್ಲರಿಗೂ ತಿಳಿದಿದೆ. ಈ ಹಿನ್ನಲೆಯಲ್ಲಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿಕೊಂಡು ಬರಲು ನಾವು ಹೋಗಿದ್ದೆವು. ಆಗ ಹರೀಶ್ ಆಸ್ಪತ್ರೆಗೆ ಹೋಗಿದ್ದರು. ಅದೇ ಸಮಯದಲ್ಲಿ ನಟ ಧ್ರುವ ಸರ್ಜಾ ಚೆಕ್ ಕಳುಹಿಸಿಕೊಟ್ಟಿದ್ದರುʼ' ಎಂದು ಹೇಳಿದ್ದಾರೆ.
ʼʼ11 ಲಕ್ಷ ರೂ. ಚೆಕ್ ಅನ್ನು ಧ್ರುವ ಸರ್ಜಾ ಕಳುಹಿಸಿ ಕೊಟ್ಟಿದ್ದು , ಅದನ್ನ ಕಂಡು ನನಗೆ ಶಾಕ್ ಜತೆಗೆ ಖುಷಿ ಆಯ್ತು. ನಮ್ಮ ಕಲಾವಿದರು ಎಂದು ಹೆಮ್ಮೆ ಅನಿಸಿತು. ಅವರ ಜತೆ ನಾನು ಕೂಡ ಕೆಲಸ ಮಾಡಿದ್ದೇನೆ. ಒಂದು ಹೇಳೋಕೆ ಇಷ್ಟ ಪಡುತ್ತೇನೆ- ತಂದೆ-ತಾಯಿ ಮೃತಪಟ್ಟರೆ ಅಂತಿಮ ಕಾರ್ಯ ಮಾಡಲು ಬಾರದೇ ಇರುವಂತ ಕಾಲ ಇದು. ಅಣ್ಣ ಸತ್ತರೆ ತಮ್ಮ ಬರಲ್ಲ, ತಮ್ಮ ಸತ್ತರೆ ಅಣ್ಣ ಬರಲ್ಲ ಅಂತಹ ಪ್ರಪಂಚ ಇದು. ಯಾಕಂದರೆ, ನನ್ನ ಆಶ್ರಮದಲ್ಲೇ ನಾನು ದಿನ ಬೆಳಗಾದರೆ ಇದನ್ನ ನೋಡುತ್ತಿರುತ್ತೇನೆ” ಎಂದು ಶಶಿಕಲಾ ಹೇಳಿದ್ದಾರೆ.
ʼʼಧ್ರುವ ಅವರ ಕುಟುಂಬಸ್ಥರು, ಹೆತ್ತವರು ಮಾಡಿದ ಒಳ್ಳೆ ಕೆಲಸಗಳೇ ಅವರನ್ನು ಇಂದು ಕಾಯುತ್ತಿದೆ. ಧ್ರುವ ಸರ್ಜಾ ಮಾಡುತ್ತಿರುವ ಈ ಒಳ್ಳೆ ಕೆಲಸ ಮುಂದೆ ಅವರ ಕುಟುಂಬ ಮತ್ತು ಮಕ್ಕಳನ್ನ ಕಾಯಲಿದೆ. ಈಗ ಎಲ್ಲಿಯೇ ಕಷ್ಟ ಆದರೂ ಆ ಜಾಗಕ್ಕೆ ಹೋಗಿ ಧ್ರುವ ಸಹಾಯ ಮಾಡುತ್ತಿದ್ದಾರೆ. ಆದರೆ ಅವರು ಒಂದು ಕೈಯಲ್ಲಿ ಮಾಡಿದ ಸಹಾಯ ಇನ್ನೊಂದು ಕೈಗೆ ಗೊತ್ತಾಗದಂತೆ ಮಾಡುತ್ತಿದ್ದಾರೆ. ನಮ್ಮ ಧ್ರುವ ಅವರು ನಿಜಕ್ಕೂ ನಮ್ಮ ಹೆಮ್ಮೆʼ' ಎಂದಿದ್ದಾರೆ.
ಇನ್ನು ʼಓಂʼ, ʼಸಮರʼ, ʼಬೆಂಗಳೂರು ಅಂಡರ್ ವರ್ಲ್ಡ್ʼ, ʼಜೋಡಿಹಕ್ಕಿʼ, ʼರಾಜ್ ಬಹದ್ದೂರ್ʼ, ʼಸಂಜು ವೆಡ್ಸ್ ಗೀತಾʼ, ʼಸ್ವಯಂವರʼ, ʼನಲ್ಲʼ, ʼಕೆಜಿಎಫ್ ಚಾಪ್ಟರ್ 1ʼ ಹಾಗೂ ʼಕೆಜಿಎಫ್ ಚಾಪ್ಟರ್ 2ʼ ಸೇರಿದಂತೆ ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿರುವ ಹರೀಶ್ ರಾಯ್ ಅವರ ಚಿಕಿತ್ಸೆಗೆ ಸ್ಪಂದಿಸಿದ ಧ್ರುವ ಸರ್ಜಾ, ಅವರಿಗೆ ಫೋನ್ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಅಗತ್ಯ ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆ.