ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Naveen Shankar: ಕಾಡುವ ಕಥೆಯೊಂದಿಗೆ ಬಂದ ನವೀನ್ ಶಂಕರ್; 'ನೋಡಿದವರು ಏನಂತಾರೆ' ಸಿನಿಮಾದ ಟ್ರೈಲರ್‌ ಔಟ್‌

Naveen Shankar: 2018ರಲ್ಲಿ ತೆರೆಕಂಡ ʼಗುಳ್ಟುʼ ಚಿತ್ರದ ಮೂಲಕಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟ ನವೀನ್‌ ಶಂಕರ್‌ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅಳೆದೂ ತೂಗಿ ಪಾತ್ರವನ್ನು ಆಯ್ಕೆ ಮಾಡುವ ಅವರ ಮುಂದಿನ ಚಿತ್ರ 'ನೋಡಿದವರು ಏನಂತಾರೆ'. ಈ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದೆ.

'ಗುಳ್ಟು' ನವೀನ್ ಶಂಕರ್ ಅಭಿನಯದ 'ನೋಡಿದವರು ಏನಂತಾರೆ' ಚಿತ್ರ ಜ. 31ರಂದು ರಿಲೀಸ್‌

'ನೋಡಿದವರು ಏನಂತಾರೆ' ಚಿತ್ರದ ಟ್ರೈಲರ್‌ ರಿಲೀಸ್‌ ಕಾರ್ಯಕ್ರಮ ನಡೆಯಿತು.

Profile Ramesh B Jan 19, 2025 2:59 PM

ಬೆಂಗಳೂರು: ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ ನವೀನ್‌ ಶಂಕರ್ (Naveen Shankar) ಕಥೆಗಳ ಆಯ್ಕೆಗಳೇ ವಿಭಿನ್ನ. ಪ್ರತಿ ಸಿನಿಮಾದಲ್ಲಿಯೂ ತಾವು ಎಂತಹ ನಟ ಎನ್ನುವುದನ್ನು ಸಾಬೀತುಪಡಿಸಿಕೊಂಡು ಬರುತ್ತಿರುವ ನವೀನ್ ಈಗ ಕಾಡುವ ಕಥೆಯೊಂದಿಗೆ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಕುಲದೀಪ್ ಕಾರಿಯಪ್ಪ ಸಾರಥ್ಯದ ʼನೋಡಿದವರು ಏನಂತಾರೆʼ (Nodidavaru Enanthare) ಸಿನಿಮಾದಲ್ಲಿ ನವೀನ್ ಅಕ್ಷರಶಃ ಜೀವಿಸಿದ್ದಾರೆ. ಅದಕ್ಕೆ ಬಿಡುಗಡೆಯಾಗಿರುವ ಟ್ರೈಲರ್‌ ಉದಾಹರಣೆ. ಬಹುಮುಖ ಪ್ರತಿಭೆ ಸಾಧುಕೋಕಿಲಾ, ಹಿರಿಯ ಪತ್ರಕರ್ತರಾದ ಜೋಗಿ ʼನೋಡಿದವರು ಏನಂತಾರೆʼ ಟ್ರೈಲರ್‌ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಟ್ರೈಲರ್‌ ಅನಾವರಣ ಮಾಡಿದೆ.

ಇದೇ ವೇಳೆ ಸಾಧುಕೋಕಿಲಾ ಮಾತನಾಡಿ, "ಟ್ರೈಲರ್‌ ನೋಡಿ ಎಮೋಷನಲ್ ಆದೆ. ತಾಯಿಗಿಂತ ಪ್ರಪಂಚದಲ್ಲಿ ದೊಡ್ಡದು ಏನಿಲ್ಲ. ಮ್ಯೂಸಿಕ್ ಡೈರೆಕ್ಟರ್ ಅದ್ಭುತ ಕೆಲಸ ಮಾಡಿದ್ದಾರೆ. ಇದು ಕ್ರಿಯೇಟಿವ್ ಜಾನರ್ ಸಿನಿಮಾ. ಇಂತಹ ಸಿನಿಮಾಗಳಿಗೆ ಪ್ರೋತ್ಸಾಹ ದೊರೆಯಬೇಕು. ಈ ಚಿತ್ರದಲ್ಲಿ ನನ್ನಿಂದ ಹಾಡಿಸಿದ್ದಾರೆ. ಇಡೀ ತಂಡದ ಮೇಲೆ ನಿಮ್ಮ ಪ್ರೋತ್ಸಾಹ ಇರಲಿ" ಎಂದು ತಿಳಿಸಿದರು.



ಹಿರಿಯ ಪತ್ರಕರ್ತ ಜೋಗಿ ಮಾತನಾಡಿ, "ನೋಡಿದವರು ಏನಂತಾರೆʼ ಅನ್ನೋ ಡೈಲಾಗ್ ಕೇಳಿ ಬೆಳೆದವರು ನಾವು. ನೋಡಿದವರು ಏನಂತಾರೆ ಎಂಬುದು ಭಾರತದ ಮಿಡಲ್ ಕ್ಲಾಸ್ ಅನ್ನು ಒಂದು ಚೌಕಟ್ಟಿನಲ್ಲಿರಿಸಿರುವ ಫೇಸ್. ನಾವು ನಮಗೋಸ್ಕರ ಬದುಕುತ್ತಿದ್ದೇವೋ? ಇಲ್ಲ ಇನ್ಯಾರಿಗೋಸ್ಕರ ಬದುಕುತ್ತಿದ್ದೇವೋ? ಅನ್ನುವಂತೆ ಮಾಡುತ್ತದೆ. ಕಳೆದ ಕೆಲ ವರ್ಷಗಳಿಂದ ಇದೆಲ್ಲವೂ ಬದಲಾಗಿದೆ. ಯಾರು ಏನಾದರೂ ಹೇಳಲಿ. ನನ್ನ ಲೈಫ್ ನನ್ನದು. ನಾನು ಬದುಕುತ್ತೇನೆ ಎಂದು ಹೇಳಿಕೊಟ್ಟಿದ್ದು ಟೆಕ್ನಾಲಜಿ. ಈ ರೀತಿ ಕಥೆಗಳನ್ನು ನೋಡಿದಾಗ ನನ್ನ ಮನಸಿನಲ್ಲಿ ಒಂದು ಕಥೆ ಹುಟ್ಟುತ್ತದೆ. ಈ ಕಥೆಯಲ್ಲಿ ಹಳ್ಳಿ, ಬಾಲ್ಯ, ಸಿಟಿ ಜೀವನವಿದೆ. ಟ್ರೈಲರ್‌ ಕೊನೆ ಶಾರ್ಟ್ ನೋಡಿದಾಗ ನವೀನ್ ಅವರು ಎಷ್ಟು ಕಷ್ಟಪಟ್ಟಿರಬಹುದು ಎನಿಸಿತು" ಎಂದು ಹೇಳಿದರು.

ನಿರ್ದೇಶಕ ಕುಲದೀಪ್ ಕಾರಿಯಪ್ಪ ಮಾತನಾಡಿ, ʼʼಈ ಕಥೆ ಸಿನಿಮಾವಾಗಲೂ ಕಾರಣರಾದವರು ನನ್ನ ಸ್ನೇಹಿತ ನಾಗೇಶ್. ನಾನು ಕೇಳಿದ್ದಕ್ಕೆ ನನಗೋಸ್ಕರ, ಈ ಚಿತ್ರಕ್ಕೆ ತಂದೆ ಸ್ಥಾನದಲ್ಲಿ ನಿಂತು ದಡ ಮುಟ್ಟಿಸಿರುವುದು ನಾಗೇಶ್. ನಾನು ಬರೆಯಬೇಕಾದರೆ ಪಾತ್ರ ಹೀಗೆ ಬರಬೇಕು, ಹಾಗೇ ಬರಬೇಕು ಎಂಬ ಅಂದಾಜು ಇರುತ್ತದೆ. ಅದಕ್ಕೆ ಕಲಾವಿದರು ಜೀವ ತುಂಬಿದ್ದಾರೆ. ಎಲ್ಲರಿಂದ ಈ ಸಿನಿಮಾವಾಗಿದೆ" ಎಂದು ಹೇಳಿದರು.

ನಟ ನವೀನ್ ಶಂಕರ್ ಮಾತನಾಡಿ, ʼʼಹೊಂದಿಸಿ ಬರೆಯಿರಿʼ ಸಿನಿಮಾಕ್ಕೂ ಮೊದಲು ಹೇಳಿದ ಕಥೆ ʼನೋಡಿದವರು ಏನಂತಾರೆʼ. ಕುಲುದೀಪ್ ಹೇಳಿದ ಕಥೆ ಬಹಳ ಕಾಡಿತ್ತು. ಹಣ ಸಂಪಾದನೆಗಿಂತ ಜನಕ್ಕೆ ಈ ಚಿತ್ರ ಇಷ್ಟ ಆಗಬೇಕು ಎಂದು ನಿರ್ಮಾಪಕರು ಹೇಳುತ್ತಾರೆ. ಅಪೂರ್ವ ಜತೆ ನಟಿಸಿದ್ದು ಖುಷಿ ಇದೆ. ಅಶ್ವಿನ್ ಸರ್ ಸಿನಿಮಾಟೋಗ್ರಾಫಿ ಸುಂದರವಾಗಿದೆ. ನಮ್ಮ ಕನಸು, ಗುರಿ ಬಗ್ಗೆ ಸಿನಿಮಾ ಮಾತನಾಡುತ್ತದೆ. ಈ ಚಿತ್ರ ಒಂದು ಕಿರು ಕಾದಂಬರಿ ಓದಿದ ಅನುಭವ ಕೊಡುತ್ತದೆ. ಪ್ರತಿ ಸಿನಿಮಾದಲ್ಲಿಯೂ ನನ್ನ ಬೆನ್ನುತಟ್ಟಿದ್ದೀರ. ಈ ಚಿತ್ರಕ್ಕೆ ನಿಮ್ಮ ಬೆಂಬಲ ಇರಲಿದೆ" ಎಂದರು.

ಈ ಸುದ್ದಿಯನ್ನೂ ಓದಿ: Bandekavi Movie: ಪುನರ್ಜನ್ಮದ ಕಥೆ ಹೇಳಲು ʼಬಂಡೆಕವಿʼ ಆಗಮನ; ಫೆಬ್ರವರಿಯಿಂದ ಚಿತ್ರೀಕರಣ ಆರಂಭ

ಭಾವನಾತ್ಮಕ ಚೌಕಟ್ಟಿನಲ್ಲಿ ಸಾಗುವ ʼನೋಡಿದವರು ಏನಂತಾರೆʼ ಸಿನಿಮಾದಲ್ಲಿ ನವೀಶ್ ಶಂಕರ್ ಸಿದ್ದಾರ್ಥ್ ದೇವಯ್ಯನಾಗಿ ನಟಿಸಿದ್ದು, ಅಪೂರ್ವ ಭಾರದ್ವಾಜ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ನಾಗೇಶ್ ಗೋಪಾಲ್ ನಿರ್ಮಾಣದ ಈ ಚಿತ್ರಕ್ಕೆ ಮಯೂರೇಶ್ ಸಂಗೀತ ಒದಗಿಸಿದ್ದು, ಅಶ್ವಿನ್ ಕ್ಯಾಮೆರಾ ಹಿಡಿದ್ದಾರೆ. ಕುಲದೀಪ್ ಕಾರಿಯಪ್ಪ ಅವರೇ ಕಥೆ ಚಿತ್ರಕಥೆ ಬರೆದಿದ್ದಾರೆ. ಕುಲದೀಪ್ ಕಾರಿಯಪ್ಪ ಅವರ ಜತೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್ ಮತ್ತು ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ. ಖ್ಯಾತ ಲೇಖಕ ಹಾಗೂ ಸಾಹಿತಿ ಜಯಂತ್ ಕಾಯ್ಕಿಣಿ 2 ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಒಂದು ಹಾಡಿಗೆ ಲೈಲಾ ಪದ ಪೊಣಿಸಿದ್ದಾರೆ. ಸಾಧು ಕೋಕಿಲ, ಅನನ್ಯಾ ಭಟ್ ಮತ್ತು ಕೀರ್ತನ್ ಹೊಳ್ಳ ಹಾಗೂ ಅಮೇರಿಕಾದ ಗಾಯಕ ಜೋರ್ಡನ್ ರಾಬರ್ಟ್ ಕಿರ್ಕ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಪ್ರೀತಿ, ಸ್ನೇಹ, ತ್ಯಾಗ, ಸೆಂಟಿಮೆಂಟ್, ಎಮೋಷನ್ ಒಳಗೊಂಡಿರುವ 'ನೋಡಿದವರು ಏನಂತಾರೆ' ಸಿನಿಮಾ ಜ. 31ರಂದು ಬಿಡುಗಡೆಯಾಗಲಿದೆ.