Thalapathy Vijay: ʻಜನ ನಾಯಗನ್ʼ ಎಫೆಕ್ಟ್! ಒಟಿಟಿಯಲ್ಲಿ 2 ವರ್ಷದ ಬಳಿಕ ಬಾಲಯ್ಯ ನಟನೆಯ ʻಭಗವಂತ್ ಕೇಸರಿʼ ಟ್ರೆಂಡಿಂಗ್; ಕಾರಣವೇನು?
Bhagavanth Kesari Remake: ವಿಜಯ್ ಅವರ 'ಜನ ನಾಯಗನ್' ಚಿತ್ರವು ನಂದಮೂರಿ ಬಾಲಕೃಷ್ಣ ಅಭಿನಯದ 'ಭಗವಂತ್ ಕೇಸರಿ'ಯ ರಿಮೇಕ್ ಎಂಬುದು ಟ್ರೇಲರ್ ಮೂಲಕ ಸಾಬೀತಾಗಿದೆ. ಇದರಿಂದಾಗಿ ಅನೇಕ ಪ್ರೇಕ್ಷಕರು ಮೂಲ ಸಿನಿಮಾವನ್ನು ನೋಡಲು ಅಮೇಜಾನ್ ಪ್ರೈಮ್ ಮತ್ತು ಜಿಯೋ ಹಾಟ್ ಸ್ಟಾರ್‌ಗೆ ಮುಗಿಬೀಳುತ್ತಿದ್ದಾರೆ.
-
ತಮಿಳು ನಟ ವಿಜಯ್ ಅಭಿನಯದ ʻಜನ ನಾಯಗನ್ʼ ಸಿನಿಮಾ ತೆರೆಗೆ ಬರುವುದಕ್ಕೆ ಇನ್ನೇನು ಕೆಲವು ದಿನಗಳು ಬಾಕಿ ಇವೆ. ಇದು ವಿಜಯ್ ಅವರ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸದ್ಯ ಚಿತ್ರತಂಡ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಈ ಸಿನಿಮಾವನ್ನು ತೆರೆಗೆ ತರುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದೆ. ಆದರೆ ಈ ನಡುವೆ ತೆಲುಗಿನ ʻಭಗವಂತ್ ಕೇಸರಿʼ ಸಿನಿಮಾ ಟ್ರೆಂಡಿಂಗ್‌ನಲ್ಲಿರುವುದು ಅಚ್ಚರಿ!
ʻಭಗವಂತ್ ಕೇಸರಿʼ ಈಗ ಫುಲ್ ಟ್ರೆಂಡಿಂಗ್
ಎಲ್ಲರಿಗೂ ಗೊತ್ತಿರುವಂತೆ ಜನ ನಾಯಗನ್ ಸಿನಿಮಾವು ತೆಲುಗಿನ ಭಗವಂತ್ ಕೇಸರಿ ಚಿತ್ರದ ಭಾಗಶಃ ರಿಮೇಕ್ ಎನ್ನಲಾಗಿದೆ. ಈಚೆಗೆ ರಿಲೀಸ್ ಆಗಿರುವ ಜನ ನಾಯಗನ್ ಟ್ರೇಲರ್ ಇದಕ್ಕೆ ಇನ್ನಷ್ಟು ಸಾಕ್ಷಿ ಒದಗಿಸಿದೆ. ಈ ಮಧ್ಯೆ ಭಗವಂತ್ ಕೇಸರಿ ಸಿನಿಮಾವು ದಿಢೀರನೇ ಟ್ರೆಂಡಿಂಗ್ ಆಗಿದೆ. ಹೌದು, ಭಗವಂತ್ ಕೇಸರಿ ಸಿನಿಮಾದ ಹಕ್ಕುಗಳನ್ನು ಅಮೇಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿತ್ತು. ಇದೀಗ ಎರಡೂವರೆ ವರ್ಷಗಳ ಬಳಿಕ ಅಮೇಜಾನ್ ಪ್ರೈಮ್‌ನಲ್ಲಿ ಭಗವಂತ್ ಕೇಸರಿ ಪುನಃ ಟ್ರೆಂಡ್ ಆಗುತ್ತಿದೆ.
ಅತ್ತ ಭಗವಂತ್ ಕೇಸರಿ ಸಿನಿಮಾದ ಹಿಂದಿ ವರ್ಷನ್ ಹಕ್ಕುಗಳನ್ನು ಜಿಯೋ ಹಾಟ್ ಸ್ಟಾರ್ ಪಡೆದುಕೊಂಡಿತ್ತು. ಅವರು ಕೂಡ ತಮ್ಮ ಸಿನಿಮಾವನ್ನು ನೋಡಿ ಎಂದು ಪ್ರಚಾರ ಆರಂಭಿಸಿದ್ದಾರೆ. ಅಲ್ಲಿಯೂ ಭಗವಂತ್ ಕೇಸರಿ ಟ್ರೆಂಡ್ ಆದರೆ ಅಚ್ಚರಿ ಇಲ್ಲ. ಇದೆಲ್ಲದಕ್ಕೂ ಮೂಲ ಕಾರಣ, ಜನ ನಾಯಗನ್ ಅನ್ನೋದು ಇಂಟರೆಸ್ಟಿಂಗ್ ವಿಚಾರ.
ಜೆಮಿನಿ ಎಐ ಸೀನ್ ಹಾಕಿದ್ರಾ ಜನ ನಾಯಗನ್ ಟೀಮ್?
ಈ ಮಧ್ಯೆ ಜನ ನಾಯಗನ್ ಸಿನಿಮಾದ ಟ್ರೇಲರ್ ಕೆಲ ವಿಚಾರಗಳಿಗೆ ಟ್ರೋಲ್ ಆಗುತ್ತಿದೆ. ಭಗವಂತ್ ಕೇಸರಿ ಸಿನಿಮಾದ ಸೀನ್‌ಗಳನ್ನು ಹೋಲುವಂತಹ ಹಲವು ದೃಶ್ಯಗಳು ಜನ ನಾಯಗನ್ ಸಿನಿಮಾದ ಟ್ರೇಲರ್‌ನಲ್ಲಿವೆ. ರಿಮೇಕ್ ಮಾಡಿದ್ದು ಕೊನೇ ಪಕ್ಷ ಆ ಕುತೂಹಲವನ್ನು ಟ್ರೇಲರ್‌ನಲ್ಲಾದರೂ ಕಾಪಾಡಿಕೊಳ್ಳಬಹುದಿತ್ತಲ್ಲವೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಮತ್ತೊಂದು ಕಡೆ ಟ್ರೇಲರ್‌ನ ಒಂದು ದೃಶ್ಯವನ್ನು ಎಐ ಬಳಸಿ ಮಾಡಲಾಗಿದೆ. ಆ ಸೀನ್ ಮೇಲೆ ಜೆಮಿನಿ ಎಐನ ವಾಟರ್ ಮಾರ್ಕ್ ಕೂಡ ಇದೆ. ಕೊನೇ ಪಕ್ಷ ಆ ವಾಟರ್ ಮಾರ್ಕ್ ಅನ್ನು ಅಳಿಸಬಹುದಿತ್ತಲ್ಲವೇ ಎಂದು ದಳಪತಿ ಫ್ಯಾನ್ಸ್ ಬೇಸರಗೊಂಡಿದ್ದಾರೆ.
ದಳಪತಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಮಮಿತಾ ಬೈಜು, ಪ್ರಕಾಶ್ ರಾಜ್, ಬಾಬಿ ಡಿಯೋಲ್, ಪ್ರಿಯಾಮಣಿ ಮುಂತಾದವರು ನಟಿಸಿರುವ ಈ ಸಿನಿಮಾವನ್ನು ಎಚ್. ವಿನೋದ್ ನಿರ್ದೇಶಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾಕ್ಕೆ ಹಣ ಹಾಕಿದೆ.