ಮೆಲ್ಬರ್ನ್: ಆಸ್ಟ್ರೇಲಿಯಾ ಓಪನ್(Australian Open) ಟೆನಿಸ್ ಟೂರ್ನಿಯಲ್ಲಿ ಇಂದು ಮಹತ್ವದ ಪಂದ್ಯವೊಂದು ನಡೆಯಲಿದೆ. 10 ಬಾರಿ ಚಾಂಪಿಯನ್, ಸರ್ಬಿಯಾದ ಜೋಕೋವಿಕ್ ಹಾಗೂ ಅವರ ಪ್ರಮುಖ ಎದುರಾಳಿ ಕಾರ್ಲೋಸ್ ಅಲ್ಕರಾಜ್ ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.
37 ವರ್ಷದ ಜೋಕೋ ಹಾಗೂ 21ರ ಆಲ್ಕರಜ್ ಈ ವರೆಗೂ 7 ಬಾರಿ ಪರಸ್ಪರ ಮುಖಾಮುಖಿಯಾಗಿದ್ದಾರೆ. ಈ ಪೈಕಿ ಜೋಕೋ 4ರಲ್ಲಿ ಗೆದ್ದಿದ್ದರೆ, ಉಳಿದ 3 ಪಂದ್ಯಗಳಲ್ಲಿ ಅಲ್ಕಾರಾಜ್ ಗೆದ್ದಿದ್ದಾರೆ. 2 ಗೆಲುವು ವಿಂಬಲ್ಡನ್ ಟೂರ್ನಿ ಫೈನಲ್‌ನಲ್ಲಿ ಅಲ್ಕರಾಜ್‌ಗೆ ಒಲಿದಿತ್ತು. ಇಂದಿನ ಪಂದ್ಯದಲ್ಲಿ ಯಾರೇ ಗೆದ್ದರೂ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿಕೊಳ್ಳಲಿದ್ದಾರೆ. ಅಲ್ಕರಾಜ್ ಇದುವರೆಗೂ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದಿಲ್ಲ.
ಗಾಫ್‌ಗೆ ಸೋಲು
4ನೇ ಶ್ರೇಯಾಂಕದ ಕೊಕೊ ಗಾಫ್ ಅವರು ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 11ನೇ ಶ್ರೇಯಾಂಕದ ಪೌಲಾ ಬಡೋಸಾ ವಿರುದ್ಧ 5-7, 4-6 ನೇರ ಸೆಟ್ ಅಂತರದಿಂದ ಸೋತು ಅಭಿಯಾನ ಮುಗಿಸಿದರು.
ಸೋಮವಾರ ನಡೆದಿದ್ದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ 5 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ ಐಗಾ ಸ್ವಿಯಾಟೆಕ್ ಮಹಿಳಾ ಸಿಂಗಲ್ಸ್‌ನಲ್ಲಿ ಜರ್ಮನಿಯ ಎವಾ ಲಿಸ್ ವಿರುದ್ಧ 6-0, 6-1 ಸೆಟ್‌ಗಳ ಸುಲಭ ಗೆಲುವು ದಾಖಲಿಸಿ ಕ್ವಾರ್ಟರ್ ಪ್ರವೇಶಿಸಿದರು.
ದಿನದ ಮತ್ತೊಂದು ಪಂದ್ಯದಲ್ಲಿ ಅಮೆರಿಕದ 8ನೇ ಶ್ರೇಯಾಂಕಿತ ಎಮ್ಮಾ ನವರೊ, 28ನೇ ಶ್ರೇಯಾಂಕಿತ ಉಕ್ರೇನ್‌ನ ಎಲೆನಾ ಸ್ವಿಟೋಲಿನಾ ಕೂಡಾ ಅಂತಿಮ 8ರ ಘಟ್ಟ ಪ್ರವೇಶಿಸಿದರು.ಆದರೆ 2022ರ ವಿಂಬಲ್ಡನ್ ಚಾಂಪಿಯನ್, ಕಜಕಸ್ತಾನದ 6ನೇ ಶ್ರೇಯಾಂಕಿತೆ ಎಲೆನಾ ರಬೈಕೆನಾ 4ನೇ ಸುತ್ತಿನಲ್ಲೇ ಅಭಿಯಾನ ಕೊನೆಗೊಳಿಸಿದರು.