ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India-Pak Tensions Live Updates: ಆಪರೇಷನ್‌ ಸಿಂದೂರ' ದೇಶದ ಹೆಣ್ಣು ಮಕ್ಕಳಿಗೆ ಸಮರ್ಪಣೆ

Operation Sindoor: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಇದೀಗ ಕೊಂಚ ಮಟ್ಟಿಗೆ ಕಡಿಮೆ ಆಗಿದೆ. ಗಡಿಯಲ್ಲಿ ಕಳೆದ ರಾತ್ರಿಯಿಂದ ಶಾಂತಿ ಸುವ್ಯವಸ್ಥೆ ನಿಧಾನವಾಗಿ ಮರಳುತ್ತಿದೆ. ಉಭಯ ರಾಷ್ಟ್ರಗಳು ಇದೀಗ ಮತ್ತೆ ಕದನ ವಿರಾಮದತ್ತ ಮುಖ ಮಾಡಿದೆ. ಈ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

ಆಪರೇಷನ್‌ ಸಿಂದೂರ' ದೇಶದ ಹೆಣ್ಣು ಮಕ್ಕಳಿಗೆ ಸಮರ್ಪಣೆ

Rakshita Karkera Rakshita Karkera May 12, 2025 1:24 PM

ನವದೆಹಲಿ: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಗೆ 'ಆಪರೇಷನ್‌ ಸಿಂದೂರ'ದ ಮೂಲಕ ಭಾರತ ಪ್ರತೀಕಾರ ತೀರಿಸಿಕೊಂಡ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಭಾಷಣ ಆರಂಭಿಸಿದ್ದಾರೆ. ಕದನ ವಿರಾಮದ ಬಗ್ಗೆ ಮಹತ್ವದ ಮಾಹಿತಿ ಹಾಗೂ ಮುಂದೆ ಪಾಕ್‌ ದಾಳಿ ನಡೆಸಿದರೆ ತೆಗೆದುಕೊಳ್ಳುವ ಕಠಿಣ ಕ್ರಮಗಳ ಕುರಿತು ದೇಶದ ಜನತೆಗೆ ಮೋದಿ ಸಂಪೂರ್ಣ ಮಾಹಿತಿ ನೀಡುವ ಸಾಧ್ಯತೆ ಇದೆ.

ಏ. 22ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಪಾಕಿಸ್ತಾನ ನೆಲೆಯ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ 26 ಜನ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತವು ‘ಆಪರೇಷನ್ ಸಿಂದೂರ‘ವನ್ನು ಮೇ 7ರಿಂದ ಆರಂಭಿಸಿ, ಉಗ್ರರ ನೆಲೆಯನ್ನು ಧ್ವಂಸಗೊಳಿಸಿತ್ತು. ಶನಿವಾರ(ಮೇ 10) ಸಂಜೆ ಕದನ ವಿರಾಮ ಘೋಷಣೆ ಮಾಡಲಾಗಿತ್ತು. ಸದ್ಯ ಗಡಿಯುದ್ದಕ್ಕೂ ಮಿಲಿಟರಿ ನಿಯೋಜನೆ ಯಥಾ ಸ್ಥಿತಿಯಲ್ಲಿದ್ದರೂ ಸೋಮವಾರ ದೈನಂದಿನ ಜೀವನ ಸಹಜ ಸ್ಥಿತಿಗೆ ಮರಳಿದೆ. ವಿಮಾನ ಸೇವೆ ಪುನಾರಾರಂಭಗೊಂಡಿದೆ.

Live Ended
May 12, 2025, 8:43 p.m.

ಕದನ ವಿರಾಮ ತಾತ್ಕಾಲಿಕ ಎಂದ ಮೋದಿ

ಪಾಕಿಸ್ತಾನ ಭವಿಷ್ಯದಲ್ಲಿ ಏನು ಮಾಡುತ್ತದೆ ಎಂಬುದರ ಆಧಾರದ ಮೇಲೆ ನಾವು ಪಾಕಿಸ್ತಾನದ ವಿರುದ್ಧದ ನಮ್ಮ ದಾಳಿಗಳನ್ನು ಸದ್ಯ ಮುಂದೂಡಿದ್ದೇವೆ. ಕದನ ವಿರಾಮ ತಾತ್ಕಾಲಿಕ. ಆದರೆ ಮತ್ತೆ ಪಾಕ್‌ ಗಡಿಯಲ್ಲಿ ತಂಟೆಗೆ ಬಂದರೆ ದಾಳಿಯ ಮೂಲಕವೇ ಉತ್ತರ ನೀಡಲು ನಮ್ಮ ಸೇನೆ ಸಿದ್ಧವಾಗಿದೆ. ಬಹಾವಲ್ಪುರ್ ಮತ್ತು ಮುರಿಡ್ಕೆಯಂತಹ ಭಯೋತ್ಪಾದಕ ಕೇಂದ್ರಗಳು ಬಹಳ ಹಿಂದಿನಿಂದಲೂ ಜಾಗತಿಕ ಭಯೋತ್ಪಾದನೆಯ ತಾಣಗಳಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಪಂಚದಾದ್ಯಂತದ ಅನೇಕ ಪ್ರಮುಖ ಭಯೋತ್ಪಾದಕ ದಾಳಿಗಳು ಈ ಸ್ಥಳಗಳಿಂದಲೇ ನಡೆದಿವೆ ಎಂದು ಗುರುತಿಸಲಾಗಿದೆ ಎಂದು ಪಾಕ್‌ಗೆ ಮೋದಿ ಹೇಳಿದರು

May 12, 2025, 8:39 p.m.

ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ

ಕಾಶ್ಮೀರದ ಪಹಲ್ಗಾಂನಲ್ಲಿ 26 ಅಮಾಯಕ ಪ್ರವಾಸಿಗರನ್ನು ಬಲಿಪಡೆದ ಉಗ್ರದಾಳಿಯ ಮರುದಿನವೇ, ಉಗ್ರಪೋಷಕ ಪಾಕಿಸ್ತಾನದ ವಿರುದ್ಧ ಪ್ರತೀಕಾರವಾಗಿ ಮೊದಲ ದಿನವೇ ಭಾರತ, ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಿತ್ತು. ಇದೀಗ ಈ ಬಗ್ಗೆ ಮೋದಿ ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎನ್ನುವ ಮೂಲಕ ಮತ್ತೊಮ್ಮೆ ಪಾಕ್‌ಗೆ ಈ ಒಪ್ಪಂದಂತೆ ನೀರು ಬಿಡಬೇಕಾದರೆ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.

May 12, 2025, 8:39 p.m.

ಭಾರತದ ದಾಳಿಗೆ ಪತರಗುಟ್ಟಿದ ಪಾಕ್

ಭಯೋತ್ಪಾದಕ ಸಂಘಟನೆಯು ಮತ್ತೊಮ್ಮೆ ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರ ಘನತೆ ಮತ್ತು ಹೆಮ್ಮೆಗೆ ಹಾನಿ ಮಾಡಲು ಯತ್ನಿಸಿದರೆ ಪರಿಣಾಮ ಏನಾಗುತ್ತದೆ ಎನ್ನುವುದನ್ನು ಪಾಕಿಸ್ಥಾನ ಈಗ ಅರ್ಥಮಾಡಿಕೊಂಡಿದೆ. ನಮ್ಮ ಸೇನಾ ಪಡೆಗಳು ಭಯೋತ್ಪಾದಕರ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿ ಉಗ್ರ ಸಂಘಟನೆಗಳ ಭೌತಿಕ ಮೂಲಸೌಕರ್ಯವನ್ನು ನಾಶಪಡಿಸಿದ್ದಲ್ಲದೆ, ಅವುಗಳ ನೈತಿಕ ಸ್ಥೈರ್ಯಕ್ಕೂ ದೊಡ್ಡ ಹೊಡೆತ ನೀಡಿದ್ದಾರೆ ಎಂದು ಮೋದಿ ಹೇಳಿದರು.

May 12, 2025, 8:33 p.m.

ಯುದ್ಧದ ಯುಗವಲ್ಲ, ಆದರೆ ಭಯೋತ್ಪಾದನೆ ಸಹಿಸಲ್ಲ ಎಂದ ಮೋದಿ

ಇದು ಯುದ್ಧದ ಯುಗವಲ್ಲ ಆದರೆ ಪಾಕಿಸ್ತಾನದ ಭಯೋತ್ಪಾದನೆಯನ್ನು ಎಂದೂ ಸಹಿಸಲ್ಲ. ಇನ್ನು ಪಾಕ್ ಜತೆ ಮಾತುಕತೆ ಏನಿದ್ದರೂ ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ. ರಕ್ತ ಮತ್ತು ನೀರು ಜತೆಯಾಗಿ ಹರಿಯಲ್ಲ ಎಂದು ಪಾಕ್‌ಗೆ ಎಚ್ಚರಿಕೆ ನೀಡಿದರು. ಭಾರತದ ಮೇಲೆ ಅಣ್ವಸ್ತ್ರ ದಾಳಿ ಮಾಡುವ ಪಾಕ್‌ನ ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ಮೋದಿ ಹೇಳಿದರು.

May 12, 2025, 8:23 p.m.

ಪಾಕಿಸ್ತಾನ ಉಳಿಯಬೇಕಿದ್ದರೆ ಭಯೋತ್ಪಾದನೆ ನಿಲ್ಲಸಬೇಕು ಮೋದಿ ಎಚ್ಚರಿಕೆ

ಕಳೆದ ಹಲವಾರು ದಶಕಗಳಿಂದ ಪಾಕಿಸ್ಥಾನ ಭಯೋತ್ಪಾದನೆ, ಉಗ್ರವಾದವನ್ನು ಪೋಷಿಸುತ್ತ ಬಂದಿದ್ದು, ತನ್ನ ನೆರೆಯ ರಾಷ್ಟ್ರಗಳ ವಿರುದ್ಧ ಉಗ್ರರನ್ನು ಛೂ ಬಿಡುವ ಕಾರ್ಯವನ್ನು ಮಾಡುತ್ತ ಬಂದಿದೆ. ಆದರೆ ಇನ್ನು ಮುಂದೆ ಪಾಕ್‌ ಶಾಂತಿ ಪಾಲಿಸದೇ ಹೋದರೆ ಪಾಕ್‌ಗೆ ಉಳಿಗಾಲವಿಲ್ಲ ಎಂದು ಮೋದಿ ನೇರ ಎಚ್ಚರಿಕೆ ನೀಡಿದ್ದಾರೆ.

May 12, 2025, 8:19 p.m.

ಪಾಕಿಸ್ತಾನ ಗಡಿಯಲ್ಲಿ ಯದ್ಧಕ್ಕೆ ಸಿದ್ಧವಾಗಿತ್ತು

ಸದ್ಯಕ್ಕೆ ನಾವು ಆಪರೇಷನ್‌ ಸಿಂದೂರ ಕಾರ್ಯಚರಣೆ ನಿಲ್ಲಿಸಿದ್ದರೂ, ಗಡಿಯಲ್ಲಿ ನಮ್ಮ ಮೂರು ಸೇನೆ ನಿರಂತರ ಅಲರ್ಟ್‌ ಆಗಿದೆ ಎಂದು ಮೋದಿ ಹೇಳಿದ್ದಾರೆ. ಆಪರೇಷನ್‌ ಸಿಂದೂರ್‌ ಎಂಬುದು ಕೇವಲ ಹೆಸರಲ್ಲ ಇದು ಕೋಟ್ಯಂತರ ಜನರ ಭಾವನೆಗಳ ಪ್ರತಿಬಿಂಬ ಮತ್ತು ನ್ಯಾಯಕ್ಕಾಗಿ ಮಾಡಿದ ಪ್ರತಿಜ್ಞೆ. ಭಯೋತ್ಪಾದಕರನ್ನು ನಿರ್ನಾಮ ಮಾಡಲು ನಾವು ಪಡೆಗಳಿಗೆ ಸ್ವತಂತ್ರವಾಗಿ ಅವಕಾಶ ನೀಡಿದ್ದೆವು. ಭಾರತದ ದಾಳಿಗೆ ಪಾಕ್‌ ಪತರಗುಟ್ಟಿ ಹೋಗಿದೆ. ಪಾಕಿಸ್ತಾನ ಗಡಿಯಲ್ಲಿ ಯದ್ಧಕ್ಕೆ ಸಿದ್ಧವಾಗಿತ್ತು.

May 12, 2025, 8:11 p.m.

'ಆಪರೇಷನ್‌ ಸಿಂದೂರ' ದೇಶದ ಹೆಣ್ಣು ಮಕ್ಕಳಿಗೆ ಸಮರ್ಪಣೆ

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಗೆ 'ಆಪರೇಷನ್‌ ಸಿಂದೂರ'ದ ಬಗ್ಗೆ ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹೆಣ್ಣು ಮಕ್ಕಳ ಸಿಂದೂರ ಅಳಿಸಿದ ಉಗ್ರರಿಗೆ ತಕ್ಕ ಶಿಕ್ಷೆಯಾಗಿದೆ. ಆಪರೇಷನ್‌ ಸಿಂದೂರ' ದೇಶದ ಹೆಣ್ಣುಮಕ್ಕಳಿಗೆ ಸಮರ್ಪಣೆ. ಭಾರತದ ಒಂದೇ ಏಟಿಗೆ ಪಾಕಿಸ್ತಾನ ಉಗ್ರ ನೆಲೆಗಳು ಧ್ವಂಸಗೊಂಡಿದೆ. ಭಾರತದ ಸೇನಾ ಸಾಮರ್ಥ್ಯ ಜಗತ್ತಿಗೆ ತಿಳಿದಿದೆ ಎಂದರು.

May 12, 2025, 8:02 p.m.

ದೇಶವನ್ನುದ್ದೇಶಿಸಿ ಭಾಷಣ ಆರಂಭಿಸಿದ ಮೋದಿ

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಗೆ 'ಆಪರೇಷನ್‌ ಸಿಂದೂರ'ದ ಮೂಲಕ ಭಾರತ ಪ್ರತೀಕಾರ ತೀರಿಸಿಕೊಂಡ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಭಾಷಣ ಆರಂಭಿಸಿದ್ದಾರೆ. ಕದನ ವಿರಾಮದ ಬಗ್ಗೆ ಮಹತ್ವದ ಮಾಹಿತಿ ಹಾಗೂ ಮುಂದೆ ಪಾಕ್‌ ದಾಳಿ ನಡೆಸಿದರೆ ತೆಗೆದುಕೊಳ್ಳುವ ಕಠಿಣ ಕ್ರಮಗಳ ಕುರಿತು ದೇಶದ ಜನತೆಗೆ ಮೋದಿ ಸಂಪೂರ್ಣ ಮಾಹಿತಿ ನೀಡುವ ಸಾಧ್ಯತೆ ಇದೆ.

May 12, 2025, 6 p.m.

ರಜೌರಿಯ ನಾಗರಿಕ ಪ್ರದೇಶದಲ್ಲಿ ಜೀವಂತ ಶೆಲ್‌ ಪತ್ತೆ

ಭಾರತ ಹಾಗೂ ಪಾಕಿಸ್ತಾನ ನಡುವೆ ಇರುವ ಸಂಘರ್ಷಕ್ಕೆ ಇದೀಗ ತೆರೆ ಬಿದ್ದಿದೆ. ಕದನ ವಿರಾಮ ಏರ್ಪಟ್ಟ ನಂತರವೂ ಪಾಕಿಸ್ತಾನ ತನ್ನ ಕುತಂತ್ರಿ ಬುದ್ಧಿಯನ್ನು ಮತ್ತೆ ತೋರಿಸಿದೆ. ಕದನ ವಿರಾಮದ ನಂತರ ಪಾಕಿಸ್ತಾನ ಮತ್ತೆ ಶೆಲ್‌ ದಾಳಿಯನ್ನು ಮುಂದುವರಿಸಿತ್ತು. ಇದೀಗ ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ನಾಗರಿಕ ಪ್ರದೇಶಗಳಲ್ಲಿ ಸ್ಫೋಟಗೊಳ್ಳದ ಬಹು ಶೆಲ್‌ಗಳು ಕಂಡುಬಂದಿವೆ.

May 12, 2025, 4:22 p.m.

ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಆಪರೇಷನ್‌ ಸಿಂದೂರ್‌ ಬಳಿಕ ಇದು ಅವರ ಮೊದಲ ಭಾಷಣವಾಗಿದೆ.

May 12, 2025, 2:53 p.m.

ರಾಜಸ್ಥಾನದಲ್ಲಿ ಸ್ಫೋಟಕ ಪತ್ತೆ

ಸಜೀವ ಸ್ಫೋಟಕ ಸಾಧನ ರಾಜಸ್ತಾನದಲ್ಲಿ ಪತ್ತೆಯಾಗಿದ್ದು, ಭದ್ರತಾ ಸಿಬ್ಬಂದಿ ನಿಷ್ಕ್ರಿಯಗೊಳಿಸಿದ್ದಾರೆ. ಸ್ಫೋಟಕವನ್ನು ಪಾಕಿಸ್ತಾನ ಹಾರಿಸಿದೆ ಎಂದು ವರದಿಯಾಗಿದೆ.

May 12, 2025, 2:48 p.m.

ಭೂಸೇನೆ, ವಾಯುಪಡೆ, ನೌಕಾಪಡೆಯ ಜಂಟೀ ಸುದ್ದಿಗೋಷ್ಠಿ

ಏರ್ ಮಾರ್ಷಲ್ ಎ.ಕೆ. ಭಾರ್ತಿ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ, ಭಾರತೀಯ ಸಶಸ್ತ್ರ ಪಡೆಗಳು ಹೊಡೆದುರುಳಿಸಿದ ಪಾಕಿಸ್ತಾನದ ಮಾನವರಹಿತ ವೈಮಾನಿಕ ವ್ಯವಸ್ಥೆಗಳ ಚಿತ್ರಗಳನ್ನು ಹಂಚಿಕೊಂಡರು.

May 12, 2025, 2:47 p.m.

ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಹತ್ವದ ಸಭೆ

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಆಪರೇಷನ್‌ ಸಿಂದೂರ್‌ ಬಗ್ಗೆ ಮಹತ್ವದಚರ್ಚೆ ನಡೆಸಲಾಗುತ್ತಿದೆ.

May 12, 2025, 1:35 p.m.

ಸಂಜೆ 5 ಗಂಟೆಗೆ ಭಾರತ-ಪಾಕ್‌ DGMOಗಳ ಸಭೆ ಮುಂದೂಡಿಕೆ

ಇಂದು ಸಂಜೆ ಭಾರತ-ಪಾಕ್‌ DGMOಗಳ ನಡುವೆ ಇಂದು ಸಂಜೆ 5ಗಂಟೆಗೆ ಮಹತ್ವದ ಮಾತುಕತೆ ನಡೆಸುವ ಸಾಧ್ಯತೆ ಇದೆ. ಇದಾದ ಬಳಿಕ ಭಾರತದ DGMO ನೇತೃತ್ವದಲ್ಲೂ ಸುದ್ದಿಗೋಷ್ಠಿ ನಡೆಸಿ ಮಹತ್ವದ ವಿಚಾರಗಳನ್ನು ಹಂಚಿಕೊಳ್ಳಲಿದೆ. ಆರಂಭದಲ್ಲಿ ಇಂದು ಮಧ್ಯಾಹ್ನ 12ಕ್ಕೆ ಸಭೆ ನಿಗದಿ ಆಗಿತ್ತು. ಕಾರಣಾಂತರಗಳಿಂದ ಅದನ್ನು ಮುಂದೂಡಲಾಯಿತು

May 12, 2025, 1:29 p.m.

ಪ್ರಧಾನಿ, ಅಜಿತ್ ದೋವಲ್ ಮತ್ತು ವಾಯುಪಡೆ ಮುಖ್ಯಸ್ಥರ ನಡುವಿನ ಸಭೆ ಅಂತ್ಯ

ಪ್ರಧಾನಿ ಮೋದಿ, ವಾಯುಪಡೆ ಮುಖ್ಯಸ್ಥ ಎಪಿ ಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಡುವಿನ ಸಭೆ ಮುಕ್ತಾಯಗೊಂಡಿದೆ. ಸಭೆ ಸುಮಾರು 30 ನಿಮಿಷಗಳ ಕಾಲ ನಡೆಯಿತು. ಇದು ಪ್ರಧಾನಿ ಮೋದಿ ಅವರು ಉನ್ನತ ರಕ್ಷಣಾ ಅಧಿಕಾರಿಗಳೊಂದಿಗೆ ನಡೆಸಿದ ಎರಡನೇ ಪ್ರಮುಖ ಸಭೆಯಾಗಿದೆ.

May 12, 2025, 1:28 p.m.

ಮೇ.15 ವರೆಗೆ ಬಂದ್‌ ಆಗಿದ್ದ 32 ಏರ್‌ಪೋರ್ಟ್‌ಗಳು ರೀ ಓಪನ್‌

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ(India-Pakistan Tensions) ಬೆನ್ನಲ್ಲೇ ದೇಶದ ಪ್ರಮುಖ 32ವಿಮಾನ ನಿಲ್ದಾಣಗಳನ್ನು ಬಂದ್‌ (32 Airports)ಮಾಡಲಾಗಿತ್ತು. ಇದೀಗ ಉಭಯ ರಾಷ್ಟ್ರಗಳು ಮತ್ತೆ ಕದನ ವಿರಾಮದತ್ತ ಮುಖ ಮಾಡಿದ್ದು, ಶಾಂತಿ ಸುವ್ಯವಸ್ಥೆ ನಿಧಾನವಾಗಿ ಮರಳುತ್ತಿದೆ. ಹೀಗಾಗಿ ಕಾರ್ಯಾಚರಣೆ ಸ್ಥಗಿತಗೊಂಡಿದ್ದ 32ವಿಮಾನ ನಿಲ್ದಾಣಗಳನ್ನು ಮತ್ತೆ ತೆರೆಯಲಾಗಿದೆ. ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ನಾಗರಿಕ ವಿಮಾನಯಾನ ಪುನರಾರಂಭಗೊಂಡಿದೆ.

May 12, 2025, 1:27 p.m.

ಮಿಲಿಟರಿ ಮುಖ್ಯಸ್ಥರ ಜೊತೆ ಪ್ರಧಾನಿ ಮೋದಿ ಸಭೆ

ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಪ್ರಮುಖ ಭದ್ರತಾ ಸಭೆ ನಡೆದ ನಂತರ ಭಾರತ ಮತ್ತು ಪಾಕಿಸ್ತಾನದ ಉನ್ನತ ಮಿಲಿಟರಿ ಅಧಿಕಾರಿಗಳು ಕದನ ವಿರಾಮದ ಕುರಿತು ಮಾತುಕತೆ ನಡೆಸಿದರು. ಪ್ರಧಾನಿಯವರ ಮನೆಯಲ್ಲಿ ನಡೆದ ಸಭೆಯಲ್ಲಿ ಮೂರು ಸೇನಾ ಮುಖ್ಯಸ್ಥರು, ವಿದೇಶಾಂಗ ಸಚಿವ ಎಸ್ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಸ್ಥಿತರಿದ್ದರು.

May 12, 2025, 1:27 p.m.

ಅಜಿತ್ ದೋವಲ್ ಜೊತೆ ಪ್ರಧಾನಿ ಮೋದಿ ಪ್ರತ್ಯೇಕ ಸಭೆ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಪ್ರಮುಖ ಭದ್ರತಾ ಸಭೆ ನಡೆಸಿದ ಸ್ವಲ್ಪ ಸಮಯದ ನಂತರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಾಯುಪಡೆಯ ಮುಖ್ಯಸ್ಥ ಎಪಿ ಸಿಂಗ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಮೂರೂ ಸೇನಾ ಮುಖ್ಯಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.

May 12, 2025, 1:24 p.m.

ಸಹಜ ಸ್ಥಿತಿಯತ್ತ ಕಣಿವೆ ರಾಜ್ಯ

ಕಳೆದೊಂದು ವಾರದಿಂದ ನಡೆಯುತ್ತಿದ್ದ ಗುಂಡಿನ ದಾಳಿ, ಡ್ರೋನ್‌ ಅಟ್ಯಾಕ್‌ ಮತ್ತು ಕ್ಷಿಪಣಿ ದಾಳಿಗಳು ನಿಂತಿದ್ದು, ಶ್ರೀನಗರ ಮತ್ತು ಕಾಶ್ಮೀರ ಕಣಿವೆಯ ಇತರ ಭಾಗಗಳಲ್ಲಿ ಇಂದು ಬೆಳಿಗ್ಗೆ ಪರಿಸ್ಥಿತಿ ಸಾಮಾನ್ಯವಾಗಿದ್ದಂತೆ ಕಾಣುತ್ತಿದೆ.