Pahalgam Terror Attack: ಬೆಂಗಳೂರು ತಲುಪಿದ ಪಹಲ್‌ಗಾಂ ದಾಳಿ ಮೃತರ ಶರೀರಗಳು, ಸಿಎಂರಿಂದಲೂ ಅಂತಿಮ ದರ್ಶನ
ಹಾವೇರಿ ಮೂಲದ ಭರತ್ ಭೂಷಣ್ ಮೃತದೇಹ ಬೆಂಗಳೂರಿನಲ್ಲಿರುವ ಮತ್ತಿಕೆರೆ ನಿವಾಸ ತಲುಪಿದೆ. ಮತ್ತಿಕೆರೆಯ ಸುಂದರನಗರದಲ್ಲಿ ಭರತ್ ಅಂತಿಮ ದರ್ಶನವನ್ನು ಸಂಬಂಧಿಕರು ಪಡೆಯುತ್ತಿದ್ದಾರೆ. ಆ್ಯಂಬುಲೆನ್ಸ್ ಮೂಲಕ ಎಸ್ಕಾರ್ಟ್ ಭದ್ರತೆಯಲ್ಲಿ ಮಂಜುನಾಥ್ ಮೃತದೇಹ ಶಿವಮೊಗ್ಗದತ್ತ ಸಾಗಿದ್ದು, ಮಧ್ಯಾಹ್ನ ಅಲ್ಲಿಗೆ ತಲುಪಲಿದೆ.

ಭರತ್ ಭೂಷಣ ಫಾರ್ಥಿವ ಶರೀರ

ಬೆಂಗಳೂರು : ಜಮ್ಮು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ (Pahalgam terror Attack) ಮೃತಪಟ್ಟ ಬೆಂಗಳೂರು (Bengaluru) ಹಾಗೂ ಶಿವಮೊಗ್ಗದ (Shivamogga) ನಿವಾಸಿಗಳ ಪಾರ್ಥಿವ ಶರೀರಗಳು (mortal remains) ಇಂದು ಮುಂಜಾನೆ ಬೆಂಗಳೂರು ತಲುಪಿವೆ. ಶಿವಮೊಗ್ಗ ಉದ್ಯಮಿ ಮಂಜುನಾಥ್ ರಾವ್ ಮತ್ತು ಹಾವೇರಿ ಮೂಲದ ಬೆಂಗಳೂರು ನಿವಾಸಿ ಭರತ್ ಭೂಷಣ್ ಪಾರ್ಥಿವ ಶರೀರ ಬೆಳಗಿನ ಜಾವ ಬೆಂಗಳೂರು ತಲುಪಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ದೆಹಲಿಯಿಂದ ಇಬ್ಬರು ಕನ್ನಡಿಗರ ಮೃತದೇಹಗಳು ಬೆಂಗಳೂರು ಏರ್ಪೋರ್ಟ್ ತಲುಪಿದವು.
ಮಂಜುನಾಥ್ ಸಂಬಂಧಿಕರು ಶಿವಮೊಗ್ಗದಿಂದ ಬೆಂಗಳೂರಿಗೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲೇ ಎಲ್ಲಾ ಪ್ರಕ್ರಿಯೆ ಮುಗಿಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಬಳಿಕ ಆ್ಯಂಬುಲೆನ್ಸ್ ಮೂಲಕ ಎಸ್ಕಾರ್ಟ್ ಭದ್ರತೆಯಲ್ಲಿ ಮಂಜುನಾಥ್ ಮೃತದೇಹ ಶಿವಮೊಗ್ಗದತ್ತ ಸಾಗಿದೆ. ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಬೆಂಗಳೂರು, ತುಮಕೂರು, ಚಿತ್ರದುರ್ಗ, ಚನ್ನಗಿರಿ ಮೂಲಕ ಶಿವಮೊಗ್ಗಕ್ಕೆ ಮಂಜುನಾಥ್ ಮೃತದೇಹ ತಲುಪಲಿದೆ.
ವಿಜಯನಗರ ಗುತ್ಯಪ್ಪ ಕಾಲೋನಿಯಲ್ಲಿರುವ ಮಂಜುನಾಥ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಿಂದೂ ಕಾರ್ಯಕರ್ತರು ಬೈಕ್ ರ್ಯಾಲಿಗೆ ಮುಂದಾಗಿದ್ದಾರೆ. ತುಂಗಾ ನದಿ ತಟದಲ್ಲಿರುವ ರೋಟರಿ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಮಂಜುನಾಥ್ ಅಂತ್ಯಕ್ರಿಯೆ ನೆರವೇರಲಿದೆ. ಇನ್ನು ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚುವ ನಿರ್ಧಾರ ಮಾಡಿದ್ದಾರೆ.
ಹಾವೇರಿ ಮೂಲದ ಭರತ್ ಭೂಷಣ್ ಮೃತದೇಹ ಈಗಾಗಲೇ ಬೆಂಗಳೂರಿನಲ್ಲಿರುವ ಮತ್ತಿಕೆರೆ ನಿವಾಸ ತಲುಪಿದೆ. ಭರತ್ ಮೃತದೇಹದ ಮುಂದೆ ತಂದೆ, ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಮತ್ತಿಕೆರೆಯ ಸುಂದರನಗರದಲ್ಲಿ ಭರತ್ ಅಂತಿಮ ದರ್ಶನವನ್ನು ಸಂಬಂಧಿಕರು ಪಡೆಯುತ್ತಿದ್ದಾರೆ. ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ. ಅದಕ್ಕೂ ಮುನ್ನ ಮನೆ ಬಳಿ ಬ್ಯಾರಿಕೇಡ್ ಹಾಕಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಚಿವರು, ಗಣ್ಯರು ಅಂತಿಮ ದರ್ಶನಕ್ಕೆ ಆಗಮಿಸಲಿದ್ದಾರೆ. ಇಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಅವರು ಭರತ್ ಭೂಷಣ್ ಅವರ ಅಂತಿಮ ದರ್ಶನ ಪಡೆಯಲಿದ್ದು, ಭರತ್ ನಿವಾಸದ ಸುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಭಯೋತ್ಪಾದಕರ ದಾಳಿಯಿಂದ ಜೀವ ಕಳೆದುಕೊಂಡ ಕನ್ನಡಿಗರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.
ಇದನ್ನೂ ಓದಿ: Pahalgam Terror Attack: ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ವಿಶೇಷ ವಿಮಾನ: ಪ್ರಲ್ಹಾದ್ ಜೋಶಿ