ಮುಂಬೈ: ಮುಂಬಯಿಗೆ ತೆರಳುತ್ತಿದ್ದ ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಗೆ ದಿಗಿಲುಗೊಂಡ ಪ್ರಯಾಣಿಕರು ಜೀವ ಭಯದಿಂದ ಚಲಿಸುವ ರೈಲಿನಿಂದ ಜಿಗಿದಿದ್ದಾರೆ.(Pushpak Express Fire) ಅದೇ ವೇಳೆ ಪಕ್ಕದ ಹಳಿಯಲ್ಲಿ ಬರುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಘಟನೆ ವಿವರ
ಮಹಾರಾಷ್ಟ್ರದ ಜಲಗಾಂವ್‌ನ ಪರಂದಾ ರೈಲು ನಿಲ್ದಾಣದ ಬಳಿ ಈ ಭೀಕರ ರೈಲು ಅಪಘಾತವೊಂದು ಸಂಭವಿಸಿದೆ. ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿಯ ವದಂತಿ ಹರಡಿದ ನಂತರ, ಪ್ರಯಾಣಿಕರು ಭಯದಿಂದ ಚಲಿಸುವ ರೈಲಿನಿಂದ ಜಿಗಿದಿದ್ದಾರೆ. ಅದೇ ಸಮಯದಲ್ಲಿ ಕೆಲವು ಪ್ರಯಾಣಿಕರು ಮುಂಬರುವ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಅಪಘಾತದಲ್ಲಿ 20ಕ್ಕೂ ಅಧಿಕ ಜನರು ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ. ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಯಾಣಿಕರು ಜಿಗಿಯಲು ಆರಂಭಿಸಿದ್ದಾರೆ. ಈ ವೇಳೆ ಪಕ್ಕದಲ್ಲೇ ಬರುತ್ತಿದ್ದ ಮತ್ತೊಂದು ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನಡಿ ಬಿದ್ದಿದ್ದಾರೆ. ಕೆಲವು ಪ್ರಯಾಣಿಕರು ಈ ಎಕ್ಸ್‌ಪ್ರೆಸ್ ರೈಲಿನ ಅಡಿಯಲ್ಲಿ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾರೆ.
ಈ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಿದೆ.
ಈ ಸುದ್ದಿಯನ್ನೂ ಓದಿ:Ski Resort Fire: ಟರ್ಕಿಯ ಸ್ಕೀ ರೆಸಾರ್ಟ್‌ನಲ್ಲಿ ಬೆಂಕಿ ದುರಂತ; 66 ಸಾವು, 51 ಜನರಿಗೆ ಗಂಭೀರ ಗಾಯ
ರೈಲ್ವೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಪಚೋರಾ ರೈಲು ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ. ಪುಷ್ಪಕ್ ಎಕ್ಸ್ ಪ್ರೆಸ್ ನಿಲುಗಡೆಯಾಗುತ್ತಿದ್ದಂತೆ, ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ವದಂತಿ ಹರಡಲಾಗಿದೆ. ಇದರಿಂದ ಭಯಗೊಂಡ ಕೆಲವರು ಆಗಲೇ ಜಿಗಿಯ ತೊಡಗಿದ್ದಾರೆ. ಬೆಂಗಳೂರು ಎಕ್ಸ್ ಪ್ರೆಸ್ ಮುಂದೆಯಿಂದ ಬರುತ್ತಿತ್ತು, ಜನ ಜಿಗಿಯುತ್ತಿದ್ದಂತೆ ಕೆಲವರು ಈ ಬೆಂಗಳೂರು ಎಕ್ಸ್ ಪ್ರೆಸ್ ಅಡಿಗೆ ಬಿದ್ದಿದ್ದಾರೆ. ಇಂದು(ಜ.22) ಸಂಜೆ 4:20ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ 8 ಆಂಬ್ಯುಲೆನ್ಸ್‌ಗಳನ್ನು ರವಾನಿಸಲಾಗಿದೆ. ಅಲ್ಲದೆ, ಗಾಯಾಳುಗಳನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
(ಹೆಚ್ಚಿನ ವಿವರವನ್ನು ನಿರೀಕ್ಷಿಸಿ)