ಚರ್ಚಾ ವೇದಿಕೆ
ರವೀ ಸಜಂಗದ್ದೆ
ಸ್ವಾತಂತ್ರ್ಯಾನಂತರದ ಭಾರತದಲ್ಲಿ ಹೆಚ್ಚು ಚರ್ಚೆಗೊಳಗಾದ, ಹೆಚ್ಚು ಸರಕಾರಿ ಯೋಜನೆಗಳ ಸೃಷ್ಟಿಗೆ ಕಾರಣವಾಗಿ ಕನಿಷ್ಠ ಫಲಾನುಭವ ಪಡೆದ, ನೇರ ಮತ್ತು ಪರೋಕ್ಷ ತೆರಿಗೆಯ ವಿಚಾರದಲ್ಲಿ ಹೆಚ್ಚು ಶೋಷಣೆಗೊಳಗಾದ ಗುಂಪು/ಶ್ರೇಣಿಯ ಹೆಸರು- ‘ಮಧ್ಯಮ ವರ್ಗ’. ಇದು ಎಲ್ಲಾ ಸರಕಾರ ಗಳಿಂದ ಹೆಚ್ಚು ಅವಕೃಪೆಗೊಳಗಾದ ವರ್ಗವೂ ಹೌದು! ಮಧ್ಯಮ ವರ್ಗ ದವರ ಗೋಳನ್ನು ಕೇಳುವ ವರಿಲ್ಲ. ಪರಿಸ್ಥಿತಿ ಹೀಗಿದ್ದಾಗ, ಕೇಂದ್ರ ಸರಕಾರದ ಈ ಬಾರಿಯ ಬಜೆಟ್ ಈ ವರ್ಗದ ಜನರ ಬಾಳಿ ನಲ್ಲಿ ಒಂದಿಷ್ಟು ಆಶಾಭಾವನೆ, ಸಂತಸ ಮೂಡಿಸಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾ ಮನ್ ಅವರು, “ಮಧ್ಯಮ ವರ್ಗದ ಕೌಟುಂಬಿಕ ಹಿನ್ನೆಲೆಯಿಂದ ಬಂದ ನನಗೆ ಅವರ ಕಷ್ಟಗಳ ಅರಿವಿದೆ" ಎಂದು ಕೆಲ ವರ್ಷಗಳಿಂದ ಹೇಳುತ್ತಲೇ ಬಂದಿದ್ದರಾದರೂ, ಈ ವರ್ಗಕ್ಕೆ ಹೆಚ್ಚಿನದೇ ನನ್ನೂ ಕೊಟ್ಟಿರಲಿಲ್ಲ.
ಈ ಬಾರಿ ಅಚ್ಚರಿಯೆಂಬಂತೆ, ಈ ವರ್ಗದವರು ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವ ರೀತಿ ಯಲ್ಲಿ ಬಜೆಟ್ ಮಂಡಿಸಿದ್ದಾರೆ. ಪ್ರತಿಬಾರಿಯ ಬಜೆಟ್‌ನಲ್ಲಿ ಕಹಿಫಲಕ್ಕೇ ತೃಪ್ತರಾಗುತ್ತಿದ್ದ ಈ ವರ್ಗ ಕ್ಕೆ ಈ ಬಾರಿ ‘ಸೀತಾಫಲ’.
ಈ ಬಾರಿಯ ಕೇಂದ್ರ ಬಜೆಟ್‌ನಿಂದಾಗಿ ಮಧ್ಯಮ ವರ್ಗಕ್ಕೆ ಏನೆಲ್ಲಾ ಅನುಕೂಲ ಒದಗಲಿದೆ, ಜತೆಗೆ ಕರ್ನಾಟಕಕ್ಕೆ ಏನೆಲ್ಲಾ ಸಿಗಲಿದೆ ಎಂಬುದನ್ನು ನೋಡೋಣ. ಹೊಸ ತೆರಿಗೆ ಪದ್ಧತಿಯಲ್ಲಿ ವೇತನ ದಾರರಿಗೆ ವಾರ್ಷಿಕ 12 ಲಕ್ಷ ರು.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲದಿರುವುದು ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚು ಹೈಲೈಟ್ ಆದ ವಿಚಾರ.
Standard Deduction 75000 ರು. ಒಳಗೊಂಡು ಸಂಬಳ ಪಡೆಯುವವರಿಗೆ ತೆರಿಗೆ ವಿನಾಯಿತಿ 12.75 ಲಕ್ಷ ರುಪಾಯಿಗಳು. ವೇತನವಲ್ಲದೆ ಇತರ ಆದಾಯಮೂಲ ಇರುವವರಿಗೂ ಆದಾಯ ತೆರಿಗೆ ಕಾಯಿದೆ 115ಬಿಎಸಿ (1ಎ) ಅಡಿಯಲ್ಲಿ ಈ ಮೊತ್ತವನ್ನು 12 ಲಕ್ಷಕ್ಕೆ ಏರಿಸಲಾಗಿದೆ. ಈ ಹೊಸ ತೆರಿಗೆ ದರ ಮಿತಿ ಘೋಷಣೆಯಿಂದ 12 ಲಕ್ಷ ರು. ಆದಾಯಕ್ಕೆ 80000, 18 ಲಕ್ಷ ರು. ಆದಾಯಕ್ಕೆ 70000, 25 ಲಕ್ಷ ರು. ಆದಾಯಕ್ಕೆ 1.10 ಲಕ್ಷ ರುಪಾಯಿಗಳ ತೆರಿಗೆ ಉಳಿತಾಯವಾಗಲಿದೆ.
ಹೀಗೆ ಸರಕಾರ ಕಳೆದುಕೊಳ್ಳುವ ತೆರಿಗೆ ಮೊತ್ತ ಒಂದು ಲಕ್ಷ ಕೋಟಿ ರುಪಾಯಿಗಳು! ಈ ರೀತಿಯಲ್ಲಿ ಉಳಿಕೆಯಾದ ತೆರಿಗೆ ಹಣವನ್ನು ಬ್ಯಾಂಕ್ ಠೇವಣಿ, ವಿವಿಧ ವಸ್ತು-ಸೇವೆಗಳ ಖರೀದಿಗೆ ಖರ್ಚು ಮಾಡುವ ಮೂಲಕ ಮತ್ತೊಮ್ಮೆ ಆ ಹಣ ಮಾರುಕಟ್ಟೆಗೆ ಹರಿದು ಆ ಮೂಲಕ ಪರೋಕ್ಷವಾಗಿ ಆರ್ಥಿಕವಾಗಿ ಬಲ ಕೊಡಬಹುದೆಂದು ವಿಶ್ಲೇಷಿಸಲಾಗುತ್ತಿದೆ. ಜನರಲ್ಲಿ ಖರೀದಿ ಸಾಮರ್ಥ್ಯ ಹೆಚ್ಚಾ ದಾಗ ಅದರ ಪ್ರಯೋಜನ ಆರ್ಥಿಕ ಕ್ಷೇತ್ರಕ್ಕೆ ಮತ್ತು ತನ್ಮೂಲಕ ದೇಶದ ಅಭಿವೃದ್ಧಿಗೆ ಎನ್ನುವುದು ಸರಳ ಅರ್ಥಶಾಸ್ತ್ರ. ಹಾಗೇ ಟಿಡಿಎಸ್ ವಾರ್ಷಿಕ ಮಿತಿಯನ್ನು ಹಿರಿಯ ನಾಗರಿಕರಿಗೆ 50000ದಿಂದ ಒಂದು ಲಕ್ಷಕ್ಕೆ, ಬಾಡಿಗೆ ಮೇಲಿನ ವಾರ್ಷಿಕ ಟಿಡಿಎಸ್ ಮಿತಿಯನ್ನು 2.40 ಲಕ್ಷದಿಂದ 6 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಈ ಕ್ರಮದಿಂದಲೂ ಸಣ್ಣ ತೆರಿಗೆದಾರರಿಗೆ ಅನುಕೂಲವಾಗಲಿದೆ. ಒಂದು ಸ್ವಂತ ಮನೆಗೆ ಇದ್ದ ತೆರಿಗೆ ವಿನಾಯಿತಿ ಎರಡು ಸ್ವಂತ ಮನೆಗಳಿಗೆ ವಿಸ್ತರಣೆಯಾಗಿದೆ. ನಮ್ಮ ದೇಶದಲ್ಲಿ ಜನಸಾಮಾನ್ಯರು ಪ್ರಮುಖವಾಗಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ದುಡ್ಡು ವ್ಯಯಿಸಬೇಕಾಗಿದೆ. 2014ರಿಂದ ಕೇಂದ್ರ ಸರಕಾರವು ಆರೋಗ್ಯ ಮತ್ತು ವೈದ್ಯಕೀಯ ವಿಭಾಗದಲ್ಲಿ ಹಲವಾರು ಮಹತ್ತರ ಬದಲಾವಣೆಗಳನ್ನೂ ಜನಸ್ನೇಹಿ ಯೋಜನೆಗಳನ್ನೂ ಹಂತಹಂತವಾಗಿ ಜಾರಿಗೊಳಿಸಿದೆ.
ಈ ಬಾರಿಯ ಬಜೆಟ್ ಆರೋಗ್ಯ ವಿಭಾಗದಲ್ಲಿ ಮಧ್ಯಮ ವರ್ಗಕ್ಕೆ ಮತ್ತಷ್ಟು ಪ್ರಯೋಜನ ಘೋಷಿ ಸಿದೆ. ಜೀವ ಉಳಿಸುವ 36 ವಿವಿಧ ಔಷಧಗಳ ಮೇಲಿನ ಸುಂಕವನ್ನು ಸಂಪೂರ್ಣ ಕಡಿತಗೊಳಿಸ ಲಾಗಿದೆ. ಕಳೆದ ವರ್ಷ ದೇಶದಲ್ಲಿ ಕ್ಯಾನ್ಸರ್ ರೋಗಕ್ಕೆ ಅಂದಾಜು 17 ಲಕ್ಷ ಜನ ತುತ್ತಾಗಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ಔಷಧಗಳ ಮೇಲಿನ ಸಂಪೂರ್ಣ ಸುಂಕ ವಿನಾಯಿತಿಯು, ದುಬಾರಿ ಕ್ಯಾನ್ಸರ್ ಚಿಕಿತ್ಸಾ ವೆಚ್ಚವನ್ನು ಭರಿಸುವ ಕುಟುಂಬಗಳಿಗೆ ಒಂದಷ್ಟು ನೆಮ್ಮದಿ ತರಲಿದೆ. ಕೆಲವು ಅಪರೂಪದ ಕಾಯಿಲೆಗಳ ಔಷಽಗಳೂ ಅಗ್ಗವಾಗಲಿವೆ. ಅಂದಾಜು 7 ಕೋಟಿ ಜನರು ಇಂಥ ವಿವಿಧ ಮಾರಕ ಕಾಯಿಲೆಗಳಿಂದ ಬಳಲುತ್ತಿದ್ದು ಅಷ್ಟೂ ಕುಟುಂಬಗಳಿಗೆ ಈ ಸುಂಕ ವಿನಾಯಿತಿ ಯು ಖರ್ಚಿನ ಪಾಲಿನ ದೊಡ್ಡ ಮೊತ್ತವನ್ನು ತಗ್ಗಿಸಲಿದೆ.
ಜೀವ ಉಳಿಸುವ 6 ಔಷಧಗಳ ಮೇಲಿನ ಸುಂಕವನ್ನು ಶೇ.೫ಕ್ಕೆ ಇಳಿಸಿದ್ದು ಅದು ಕೂಡ ಜನಸಾ ಮಾನ್ಯರಿಗೆ ಔಷಧಿ ಖರೀದಿಯಲ್ಲಿ ನಿರ್ಣಾಯಕ ಮೊತ್ತವನ್ನು ಉಳಿಸಲಿದೆ. ವಿವಿಧ 13 ರೋಗಗಳ ಸಹಾಯ ಯೋಜನೆಗಳ ಅಡಿ ಒದಗಿಸಲಾಗುವ ಔಷಽಗಳಿಗೂ ಸುಂಕ ವಿನಾಯಿತಿ ಘೋಷಿಸಿ ಜನರ ಔಷಧಿ ಖರ್ಚು ತಗ್ಗಿಸಲಾಗಿದೆ.
ಜನರಿಗೆ ಅನುಕೂಲವಾಗುವ ಇನ್ನೊಂದು ಯೋಜನೆಯ ಮೊದಲ ಹಂತವಾಗಿ 2025-26ರಲ್ಲಿ ದೇಶದ 200 ಜಿಸ್ಪತ್ರೆಗಳಲ್ಲಿ ‘ಡೇ ಕೇರ್ ಕ್ಯಾನ್ಸರ್ ಕೇಂದ್ರ’ಗಳು ಸ್ಥಾಪನೆಯಾಗಲಿವೆ. ಈ ಕೇಂದ್ರಗಳು ಕಿಮೊಥೆರಪಿ, ಇಮ್ಯುನೊಥೆರಪಿ ಮತ್ತು ಇತರ ಅಗತ್ಯ ಚಿಕಿತ್ಸೆಗಳನ್ನು ಕಡಿಮೆ ವೆಚ್ಚದಲ್ಲಿ ಒದಗಿಸ ಲಿವೆ.
ಇದರಿಂದಾಗಿ, ಹಳ್ಳಿಗಳಲ್ಲಿರುವ ರೋಗಿಗಳು ಚಿಕಿತ್ಸೆಗಾಗಿ ದೂರದ ನಗರಗಳಿಗೆ ಅಲೆಯುವುದು ತಪ್ಪಲಿದೆ. ಮುಂದಿನ 3 ವರ್ಷಗಳಲ್ಲಿ ದೇಶದ ಎಲ್ಲ ಜಿಸ್ಪತ್ರೆಗಳಲ್ಲಿ ಈ ಸೇವೆ ಲಭ್ಯವಾಗಲಿದೆ. ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರರ ಕೊರತೆ ನೀಗಿಸಲು ಮುಂದಿನ ವರ್ಷ 10000 ವೈದ್ಯಕೀಯ ಸೀಟು ಗಳನ್ನು ಮತ್ತು ಮುಂದಿನ 5 ವರ್ಷಗಳಲ್ಲಿ 75000 ಸೀಟುಗಳನ್ನು ದೇಶದ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚುವರಿ ಸೇರಿಸಲು ನಿರ್ಧರಿಸಲಾಗಿದೆ.
ಈ ಮೂಲಕ ವೈದ್ಯರ ಕೊರತೆ ಒಂದಷ್ಟು ಕಡಿಮೆಯಾಗಿ ಆರೋಗ್ಯ ಕ್ಷೇತ್ರದ ಆರೋಗ್ಯವೂ ಸುಧಾ ರಿಸಲಿದೆ! ಹಿಂದುಳಿದ ಜಿಲ್ಲೆಗಳಲ್ಲಿ ಕೃಷಿ ಅಭಿವೃದ್ಧಿಗಾಗಿ ಮಾಡಿದ ‘ಪಿಎಂ ಧನ ಧಾನ್ಯ ಯೋಜನೆ’ ರಾಜ್ಯದ ಒಂದಷ್ಟು ಜಿಲ್ಲೆಗಳಿಗೆ ನೆರವಾಗಲಿದೆ. ಇವಿಷ್ಟು ಕೇಂದ್ರ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಗರಿಷ್ಠ ಪ್ರಯೋಜನ ನೀಡುವ ಅಂಶಗಳು.
ಇವಿ ಬ್ಯಾಟರಿಗಳು, ಮೊಬೈಲ, ಮೈಕ್ರೋಫೋನ್, ಇಯರ್ ಫೋನ್, ಎಲಇಡಿ ಬ್ಯಾಟರಿ, ಲೀಥಿಯಂ-ಅಯಾನ್ ಬ್ಯಾಟರಿ, ಯುಎಸ್‌ಬಿ ಚಾರ್ಜರ್ ಮುಂತಾದ ಉತ್ಪನ್ನಗಳು ಒಂದಷ್ಟು ಅಗ್ಗವಾಗಿ ಜನಸಾಮಾನ್ಯರಿಗೆ ಸಿಗಲಿವೆ. ಇನ್ನು ಕರ್ನಾಟಕಕ್ಕೆ ಈ ಬಜೆಟ್‌ನಲ್ಲಿ ಸಿಕ್ಕಿದ ಪಾಲು ಮತ್ತು ವಿವರಗಳು ಇಂತಿವೆ: ವಾರಗಳ ಹಿಂದೆ ರಾಜ್ಯದ ಉಪಮುಖ್ಯಮಂತ್ರಿಯವರು ನಿರ್ಮಲಾ ಸೀತಾರಾಮನ್ ಅವರಿಗೆ ವಿವರವಾದ ಪತ್ರ ಬರೆದು, ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ವಿವಿಧ ಯೋಜನೆಗಳಿಗೆ ಆರ್ಥಿಕ ನೆರವು ನೀಡುವಂತೆ ಮತ್ತು ರಾಜ್ಯದ ತೆರಿಗೆ ಪಾಲು ಹೆಚ್ಚಿಸುವಂತೆ ವಿನಂತಿಸಿದ್ದರು.
ಆ ಪತ್ರದಲ್ಲಿ ರಾಜ್ಯದ ವಿವಿಧ ಯೋಜನೆಗಳಿಗೆ, ಬ್ರಾಂಡ್ ಬೆಂಗಳೂರಿನ ಮೂಲ ಸೌಕರ್ಯ ಅಭಿ ವೃದ್ಧಿ, ಬಿಸಿನೆಸ್ ಕಾರಿಡಾರ್ ಯೋಜನೆಗಳು ಸೇರಿದಂತೆ ಬರೋಬ್ಬರಿ 91000 ಕೋಟಿ ರು.ಗಳ ವಿಶೇಷ ನೆರವನ್ನು ಬಜೆಟ್‌ನಲ್ಲಿ ನೀಡಬೇಕೆಂದು ವಿನಂತಿಸಿದ್ದರು. ಗ್ಯಾರಂಟಿ ಯೋಜನೆಗಳು ರಾಜ್ಯದ ಬೊಕ್ಕಸದ ಹೆಚ್ಚಿನ ಪಾಲನ್ನು ಕೇಳುವುದರಿಂದ ಇತರ ಅಭಿವೃದ್ಧಿ ಕಾರ್ಯಗಳಿಗೆ ವಿತ್ತೀಯ ಕೊರತೆ ಆಗಿರುವುದು ಸತ್ಯ. ರಾಜ್ಯವು ರೂಪಿಸಿರುವ ಯಾವುದೇ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ವಿಶೇಷ ನೆರವು ಘೋಷಣೆ ಆಗಿಲ್ಲ!
ಕರ್ನಾಟಕ ರೈಲು ಯೋಜನೆಗಳಿಗೆ 7559 ಕೋಟಿ ರುಪಾಯಿ ಅನುದಾನ ನೀಡಲಾಗಿದೆ. ಕಿಸಾನ್ ಕ್ರೆಡಿಟ್ ಮಿತಿಯನ್ನು 5 ಲಕ್ಷ ರುಪಾಯಿಗೆ ಹೆಚ್ಚಿಸಿರುವುದರ ಸೌಲಭ್ಯ ಕರ್ನಾಟಕದ ರೈತರಿಗೂ ಸಿಗಲಿದೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಅಭಿವೃದ್ಧಿಗೆ ಆದ್ಯತೆ ನೀಡಿ ಒಂದಷ್ಟು ಮೊತ್ತ ಮೀಸಲಿರಿಸಲಾಗಿದೆ.
ರಾಯಚೂರಿನಲ್ಲಿ ಏಮ್ಸ ಸ್ಥಾಪನೆ, ಮೆಟ್ರೋಗೆ ಹೆಚ್ಚಿನ ಅನುದಾನ, ಬೆಳಗಾವಿಯಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫುಡ್ ಟೆಕ್ನಾಲಜಿ, ಆಂತ್ರಪ್ರಿನರ್‌ಷಿಪ್ ಆಂಡ್ ಮ್ಯಾನೇಜ್ಮೆಂಟ್ ಸ್ಥಾಪಿಸಲು ಮಾಡಿಕೊಳ್ಳಲಾಗಿದ್ದ ಮನವಿ, ಅಂಗನವಾಡಿ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ, ಮೇಕೆದಾಟು-ಮಹದಾಯಿ-ಕೃಷ್ಣಾ-ಭದ್ರಾ ನೀರಾವರಿ ಯೋಜನೆಗಳಿಗೆ ಅನುದಾನ, ಬೆಂಗಳೂರು ಮೂಲ ಸೌಕರ್ಯ ಅಭಿವೃದ್ಧಿ, ರಾಜ ಕಾಲುವೆ ನಿರ್ವಹಣೆ, ಬಿಸಿನೆಸ್ ಕಾರಿಡಾರ್ ಹೀಗೆ ಯಾವುದೇ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ಅನುದಾನ ನೀಡದಿರುವುದು ರಾಜ್ಯ ಸರಕಾರದ ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ನವೆಂಬರ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಬರೋಬ್ಬರಿ 59000 ಕೋಟಿ ರು. ಹಾಗೂ ಆಂಧ್ರಪ್ರದೇಶಕ್ಕೆ 11400 ಕೋಟಿ ರು. ಮೊತ್ತದ ವಿವಿಧ ಯೋಜನೆಗಳನ್ನು ಘೋಷಿಸಲಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದ ಎರಡು ದೊಡ್ಡ ಮಿತ್ರಪಕ್ಷಗಳು ಅಧಿಕಾರ ದಲ್ಲಿರುವ ಈ ರಾಜ್ಯಗಳಿಗೆ ತುಸು ಹೆಚ್ಚೇ ಅನುದಾನ ನೀಡಲಾಗಿದೆ.
15ನೆಯ ಹಣಕಾಸು ಆಯೋಗದ ಶಿಫಾರಸಿನಂತೆ ತೆರಿಗೆ ಪಾಲು ಮೊತ್ತವಾದ 51874 ಕೋಟಿ ರುಪಾ ಯಿ ಕರ್ನಾಟಕಕ್ಕೆ ಹಂಚಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಮೊತ್ತ ಶೇ.10ರಷ್ಟು ಹೆಚ್ಚು. ಉಳಿದ ರಾಜ್ಯಗಳ ಮೊತ್ತವೂ ಸುಮಾರು ಶೇ.10ರಷ್ಟು ಏರಿಕೆಯಾಗಿದ್ದು ಕರ್ನಾಟಕಕ್ಕೆ ಮಾತ್ರ ವಿಶೇಷವಾಗಿ ಏನೂ ಹೆಚ್ಚಿಗೆ ಸಿಕ್ಕಿದಂತೆ ಕಾಣಿಸುತ್ತಿಲ್ಲ. ಮಹಾರಾಷ್ಟ್ರದ ನಂತರ ಅತಿಹೆಚ್ಚು ಜಿಎಸ್ ಟಿ ಮೊತ್ತ ಪಾವತಿಸುವ ರಾಜ್ಯ ಕರ್ನಾಟಕ. ಹೀಗಿದ್ದೂ ತೆರಿಗೆ ಹಂಚಿಕೆ ಮೊತ್ತದಲ್ಲಿ ದೇಶದಲ್ಲಿ ಹತ್ತನೆಯ ಸ್ಥಾನ!
ಈ ಅನ್ಯಾಯವನ್ನು ಸರಿಪಡಿಸಲು ಕೇಂದ್ರವು ಒಂದಷ್ಟು ನೈಜ, ವೈeನಿಕ ಕ್ರಮಗಳನ್ನು ಕೈಗೊಳ್ಳ ಬೇಕು. ಕೇಂದ್ರದಿಂದ ರಾಜ್ಯಗಳಿಗೆ ಪ್ರಮುಖವಾಗಿ ಜನಸಂಖ್ಯೆ ಮತ್ತು ಅಭಿವೃದ್ಧಿ ಸೂಚ್ಯಂಕದ ಆಧಾರದಲ್ಲಿ ಅನುದಾನ ಹಂಚಿಕೆಯಾಗುತ್ತದೆ. ಈ ನೀತಿಯನ್ನು ಬದಲಿಸಿ, ಜಿಎಸ್‌ಟಿ ಮೊತ್ತ ಸಂಗ್ರ ಹಣೆಯ ಅನುಪಾತವೂ ಪ್ರಮುಖ ಮಾನದಂಡವಾಗಬೇಕು ಎನ್ನುವ ಕೂಗು ಈಗ ದಕ್ಷಿಣದ ರಾಜ್ಯ ಗಳಿಂದ ಕೇಳಿಬರುತ್ತಿದೆ. ಕೇರಳಕ್ಕಿಂತ ಕಡಿಮೆ ಜನಸಂಖ್ಯೆ ಇರುವಂಥ ಜಾರ್ಖಂಡ್, ಉತ್ತರಾ ಖಂಡ್‌ಗೆ ಕೇರಳಕಿಂತ ಹೆಚ್ಚಿನ ಹಣಕಾಸಿನ ನೆರವು ನೀಡಲಾಗಿದೆ. ಹೀಗಾಗಿ ಹಣಕಾಸಿನ ನೆರವಿನ ಮಾನದಂಡಗಳ ಪರಿಷ್ಕರಣೆ ಆಗಬೇಕಿದೆ.
ಜನಸಾಮಾನ್ಯರು ಒಂದಷ್ಟು ಖುಷಿಪಡುವ, ಕರ್ನಾಟಕ ರಾಜ್ಯಕ್ಕೆ ನಿರಾಸೆ ಮೂಡಿಸಿದ ಬಜೆಟ್ ಇದು. ಸವಾಲುಗಳನ್ನು ಎದುರಿಸಿ, ಸೆಣಸಾಡುತ್ತಾ ಸಾಗುವ ನಮ್ಮ ದೈನಂದಿನ ಜೀವನದಲ್ಲಿ ಈ ಬಜೆಟ್‌ನಿಂದಾಗಿ ಹೆಚ್ಚಿನ ಬದಲಾವಣೆ ಏನೂ ಇರದು. ಯಾಕೆಂದರೆ ನಮ್ಮದು ಮಧ್ಯಮ ವರ್ಗ ಸ್ವಾಮೀ!
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)