ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪಂದ್ಯದಲ್ಲಿ ಫಿಲ್ ಸಾಲ್ಟ್ (Phil Salt) ರನ್ ಔಟ್ ಆದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ಸ್ವಾರ್ಥದಿಂದಾಗಿ ಫಿಲ್ ಸಾಲ್ಟ್ ರನ್‌ಔಟ್ ಆಗಬೇಕಾಯಿತು ಎಂದು ಫ್ಯಾನ್ಸ್ ಕಿಡಿಕಾರಿದ್ದಾರೆ. ಈ ಇನಿಂಗ್ಸ್‌ನಲ್ಲಿ 17 ಎಸೆತಗಳಲ್ಲಿ ಫಿಲ್ ಸಾಲ್ಟ್ ಅವರು 37 ರನ್ ಗಳಿಸಿ ತಮ್ಮ ಇನಿಂಗ್ಸ್ ಅನ್ನು ಮುಕ್ತಾಯಗೊಳಿಸಿದರು. ಅಂತಿಮವಾಗಿ ಆರ್‌ಸಿಬಿ ಪ್ರಥಮ ಇನಿಂಗ್ಸ್‌ನಲ್ಲಿ 163 ರನ್‌ಗಳನ್ನು ಕಲೆ ಹಾಕಿತು.
ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಜೊತೆ ಇನಿಂಗ್ಸ್ ಆರಂಭಿಸಿದ್ದ ಫಿಲ್ ಸಾಲ್ಟ್ ಆರಂಭದಲ್ಲಿಯೇ ಆಕ್ರಮಣಕಾರಿ ದಾಳಿ ನಡೆಸಿದ್ದರು. ಎರಡನೇ ಓವರ್‌ನಲ್ಲಿಯೇ ಸ್ಪೋಟಕ ಬ್ಯಾಟಿಂಗ್‌ಗೆ ಕೈ ಹಾಕಿದ್ದ ಫಿಲ್ ಸಾಲ್ಟ್ ಮೂರನೇ ಓವರ್‌ನಲ್ಲಿ ಅಬ್ಬರಿಸಿದ್ದರು. ಅದರಲ್ಲಿಯೂ ಮೂರನೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್‌ಗೆ ಸ್ಪೋಟಕ ಬ್ಯಾಟಿಂಗ್ ಮೂಲಕ ಬೆವರಿಳಿಸಿದ್ದರು. ಈ ಓವರ್‌ನಲ್ಲಿ ಸಾಲ್ಟ್ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿಗಳ ಮೂಲಕ 26 ರನ್‌ಗಳನ್ನು ಬಾರಿಸಿದ್ದರು ಹಾಗೂ ವಿರಾಟ್ ಕೊಹ್ಲಿ ಒಂದು ಬೌಂಡರಿ ಸಿಡಿಸಿದ್ದರು. ಒಟ್ಟಾರೆ ಮೂರನೇ ಓವರ್‌ನಲ್ಲಿ 30 ರನ್‌ಗಳ ಬಂದಿದ್ದವು.
RCB vs DC: '6 4 4 4nb 6 1 4'-ಮಿಚೆಲ್ ಸ್ಟಾರ್ಕ್ ಓವರ್‌ಗೆ 30 ರನ್ ಚಚ್ಚಿದ ಆರ್‌ಸಿಬಿ!
ನಾಲ್ಕನೇ ಓವರ್‌ನ ಐದನೇ ಎಸೆತದಲ್ಲಿ ಅಕ್ಷರ್ ಪಟೇಲೆಗೆ ಫಿಲ್ ಸಾಲ್ಟ್ ಆಫ್ ಸೈಡ್ ಬಲವಾಗಿ ಡ್ರೈವ್ ಹೊಡೆದಿದ್ದರು. ಆದರೆ, ಚೆಂಡನ್ನು ವಿಪ್ರಾಜ್ ನಿಗಮ್ ತಡೆಯುವಲ್ಲಿ ಸಕ್ಸಸ್ ಆಗಿದ್ದರು. ಈ ವೇಳೆ ಫಿಲ್ ಸಾಲ್ಟ್ ಸಿಂಗಲ್ ಪಡೆಯಲು ಅರ್ಧ ಪಿಚ್‌ಗೆ ಓಡಿ ಬಂದಿದ್ದರು. ವಿರಾಟ್ ಕೊಹ್ಲಿ ಕೂಡ ಅರ್ಧ ಪಿಚ್ ಸನಿಹ ಬಂದಿದ್ದರು. ಆದರೆ, ಕೊನೆಯ ಹಂತದಲ್ಲಿ ವಿರಾಟ್ ಕೊಹ್ಲಿ ಹಿಂದಕ್ಕೆ ಮರಳಿದರು. ಸಾಲ್ಟ್ ಕೂಡ ಹಿಂದಕ್ಕೆ ಮರಳುವ ವೇಳೆ ಕಾಲು ಜಾರಿತು. ಇದರಿಂದಾಗಿ ಅವರು ಸರಿಯಾದ ಸಮಯದಲ್ಲಿ ಕ್ರೀಸ್‌ಗೆ ಮರಳುವಲ್ಲಿ ವಿಫಲರಾದರು. ಕೆಎಲ್ ರಾಹುಲ್ ಚೆಂಡನ್ನು ಪಡೆದು ರನ್‌ಔಟ್ ಮಾಡಿದರು. ಅಂತಿಮವಾಗಿ ಫಿಲ್ ಸಾಲ್ಟ್ 37 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ವಿರಾಟ್ ಕೊಹ್ಲಿ ವಿರುದ್ಧ ಫ್ಯಾನ್ಸ್ ಆಕ್ರೋಶ
ಫಿಲ್ ಸಾಲ್ಟ್ ರನ್ ಔಟ್ ಆದ ಬೆನ್ನಲ್ಲೆ ವಿರಾಟ್ ಕೊಹ್ಲಿ ವಿರುದ್ಧ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಸ್ವಾರ್ಥದಿಂದಾಗಿ ಫಿಲ್ ಸಾಲ್ಟ್ ರನ್‌ಔಟ್ ಆಗಬೇಕಾಯಿತು ಎಂದು ಅಭಿಮಾನಿಯೊಬ್ಬರು ಆರೋಪ ಮಾಡಿದ್ದಾರೆ. ವಿರಾಟ್ ಕೊಹ್ಲಿ ಈ ರೀತಿ ರನ್‌ಔಟ್ ಮಾಡಿರುವುದು ಇದೇ ಮೊದಲೇನಲ್ಲ ಈ ಹಿಂದೆ ಭಾರತ ತಂಡದ ಪರ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದ್ದರು ಎಂದು ಆರೋಪ ಮಾಡಿದ್ದಾರೆ. ಮತ್ತೊಂದು ಕಡೆ ವಿರಾಟ್ ಕೊಹ್ಲಿಯೇ ಸ್ವತಃ ಫಿಲ್ ಸಾಲ್ಟ್ ಅವರನ್ನು ರನ್‌ಔಟ್ ಮಾಡಿದ್ದಾರೆಂದು ಫ್ಯಾನ್ಸ್ ದೂರಿದ್ದಾರೆ.
163 ರನ್ ಕಲೆ ಹಾಕಿದ ಆರ್‌ಸಿಬಿ
ಫಿಲ್ ಸಾಲ್ಟ್ ವಿಕೆಟ್ ಒಪ್ಪಿಸಿದ ಬಳಿಕ ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೂಡ ವಿಫಲರಾದರು. ವಿರಾಟ್ ಕೊಹ್ಲಿ 22 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ದೇವದತ್ ಪಡಿಕ್ಕಲ್ ಕೇವಲ ಒಂದು ರನ್ ಗಳಿಸಿ ಔಟ್ ಆದರು. ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಿತೇಶ್ ಶರ್ಮಾ ಕ್ರಮವಾಗಿ 4 ಮತ್ತು 3 ರನ್ ಗಳಿಸಿ ಶರಣಾದರು. ನಾಯಕ ರಜತ್ ಪಾಟಿದಾರ್ 23 ಎಸೆತಗಳಲ್ಲಿ 25 ರನ್ ಗಳಿಸಿ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಕೊನೆಯಲ್ಲಿ ಕೃಣಾಲ್ ಪಾಂಡ್ಯ ನಿರ್ಣಾಯಕ 18 ರನ್ ಗಳಿಸಿದರು. ಕೊನೆಯಲ್ಲಿ ಸ್ಪೋಟಕ ಬ್ಯಾಟ್ ಮಾಡಿದ ಟಿಮ್ ಡೇವಿಡ್ 20 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿ ಆರ್‌ಸಿಬಿ ಮೊತ್ತವನ್ನು 160ರ ಗಡಿ ಟಾಟಿಸುವಲ್ಲಿ ನೆರವಾದರು. ಅಂತಿಮವಾಗಿ ಆರ್‌ಸಿಬಿ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 163 ರನ್‌ಗಳನ್ನು ಗಳಿಸಿತು.