ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs DC: '6 4 4 4nb 6 1 4'-ಮಿಚೆಲ್‌ ಸ್ಟಾರ್ಕ್‌ ಓವರ್‌ಗೆ 30 ರನ್‌ ಚಚ್ಚಿದ ಆರ್‌ಸಿಬಿ!

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಏಪ್ರಿಲ್‌ 10 ರಂದು ನಡೆದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 24ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವೇಗಿ ಮಿಚೆಲ್‌ ಸ್ಟಾರ್ಕ್‌ ಅವರ ಏಕೈಕ ಓವರ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆರಂಭಿಕರಾದ ಫಿಲ್‌ ಸಾಲ್ಟ್‌ ಹಾಗೂ ವಿರಾಟ್‌ ಕೊಹ್ಲಿ ಬರೋಬ್ಬರಿ 30 ರನ್‌ ಸಿಡಿಸಿದ್ದಾರೆ.

ಮಿಚೆಲ್‌ ಸ್ಟಾರ್ಕ್‌ಗೆ 30 ರನ್‌ ಚಚ್ಚಿದ ಫಿಲ್‌ ಸಾಲ್ಟ್‌, ವಿರಾಟ್‌ ಕೊಹ್ಲಿ!

ಮೂರನೇ ಓವರ್‌ನಲ್ಲಿ ಮಿಚೆಲ್‌ ಸ್ಟಾರ್ಕ್‌ಗೆ 30 ರನ್‌ ಸಿಡಿಸಿದ ಆರ್‌ಸಿಬಿ.

Profile Ramesh Kote Apr 10, 2025 9:27 PM

ಬೆಂಗಳೂರು: ಆಸ್ಟ್ರೇಲಿಯಾ ತಂಡದ ಹಿರಿಯ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ( Mitchell Starc) ವಿಶ್ವದ ಅತ್ಯಂತ ಶ್ರೇಷ್ಠ ವೇಗದ ಬೌಲರ್‌ಗಳನ್ನು ಒಬ್ಬರು. ಇವರ ಬೌಲಿಂಗ್‌ನಲ್ಲಿ ಸಿಕ್ಸರ್‌ ಹಾಗೂ ಬೌಂಡರಿಗಳನ್ನು ಸಿಡಿಸುವುದು ಕಷ್ಟ ಸಾಧ್ಯ. ಆದರೆ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ವಿರುದ್ದದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 24ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವೇಗಿ ಮಿಚೆಲ್‌ ಸ್ಟಾರ್ಕ್‌ ಒಂದೇ ಓವರ್‌ನಲ್ಲಿ 30 ರನ್‌ಗಳನ್ನು ನೀಡಿದ್ದಾರೆ. ಆರ್‌ಸಿಬಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಫಿಲ್‌ ಸಾಲ್ಟ್‌ ಹಾಗೂ ವಿರಾಟ್‌ ಕೊಹ್ಲಿ ಪಂದ್ಯದ ಮೂರನೇ ಓವರ್‌ನಲ್ಲಿ ಸಿಕ್ಸರ್‌ ಹಾಗೂ ಬೌಂಡರಿಗಳ ಮೂಲಕ ಮಿಚೆಲ್‌ ಸ್ಟಾರ್ಕ್‌ ಅವರ ವಿಶ್ವಾಸವನ್ನು ಕುಗ್ಗಿಸಿದರು.

ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಆರ್‌ಸಿಬಿ ಪರ ಇನಿಂಗ್ಸ್‌ ಆರಂಭಿಸಿದ್ದ ವಿರಾಟ್‌ ಕೊಹ್ಲಿ ಹಾಗೂ ಫಿಲ್‌ ಸಾಲ್ಟ್‌ ಸ್ಪೋಟಕ ಬ್ಯಾಟ್‌ ಮಾಡಿದರು. ಅದರಲ್ಲಿಯೂ ವಿಶೇಷವಾಗಿ ಫಿಲ್‌ ಸಾಲ್ಟ್‌ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಮೊದಲನೇ ಓವರ್‌ನಲ್ಲಿ ಸ್ಟಾರ್ಕ್‌ಗೆ 7 ರನ್‌ ಗಳಿಸಿದ್ದ ಆರ್‌ಸಿಬಿ, ಎರಡನೇ ಓವರ್‌ನಲ್ಲಿ ಡೆಲ್ಲಿ ನಾಯಕ ಅಕ್ಷರ್‌ ಪಟೇಲ್‌ಗೆ ಬರೋಬ್ಬರಿ 16 ರನ್‌ಗಳನ್ನು ಬಾರಿಸಿದ್ದರು. ಈ ಓವರ್‌ನಲ್ಲಿ ವಿರಾಟ್‌ ಕೊಹ್ಲಿ ಒಂದು ಬೌಂಡರಿ ಬಾರಿಸಿದ್ದರೆ, ಫಿಲ್‌ ಸಾಲ್ಟ್‌ ಒಂದು ಸಿಕ್ಸರ್‌ ಹಾಗೂ ಒಂದು ಬೌಂಡರಿ ಸಿಡಿಸಿದ್ದರು.

RCB vs DC: ʻಅವರು ಕೇವಲ ಮೂವರನ್ನು ಅವಲಂಬಿಸಿದ್ದಾರೆʼ: ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಿತೇಶ್‌ ಶರ್ಮಾ ವಾರ್ನಿಂಗ್‌!

ನಂತರ ಮೂರನೇ ಓವರ್‌ ಬೌಲ್‌ ಮಾಡಲು ಬಂದಿದ್ದ ಮಿಚೆಲ್‌ ಸ್ಟಾರ್ಕ್‌ಗೆ ಫಿಲ್‌ ಸಾಲ್ಟ್‌ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಬೆವರಿಳಿಸಿದ್ದರು. ಮೊದಲನೇ ಎಸೆತದಲ್ಲಿ ಸಿಕ್ಸರ್‌ ಬಾರಿಸಿದ್ದ ಫಿಲ್‌ ಸಾಲ್ಟ್‌, ನಂತರ ಎರಡು ಮತ್ತು ಮೂರನೇ ಎಸೆತದಲ್ಲಿ ಬೌಡರಿಗಳನ್ನು ಸಿಡಿಸಿದ್ದರು. ನಾಲ್ಕನೇ ಎಸೆತದಲ್ಲಿಯೂ ಅವರು ಬೌಂಡರಿ ಬಾರಿಸಿದ್ದರು ಹಾಗೂ ಇದು ನೋ ಬಾಲ್‌ ಆಗಿತ್ತು. ನಂತರ ಫ್ರಿಹಿಟ್‌ ಎಸೆತದಲ್ಲಿ ಎಡ್ಜ್‌ ಆಗಿ ಸಿಕ್ಸರ್‌ ಆಗಿತ್ತು. ಐದನೇ ಎಸೆತದಲ್ಲಿ ಫಿಲ್‌ ಸಾಲ್ಟ್‌ ಸಿಂಗಲ್‌ ತೆಗೆದುಕೊಂಡಿದ್ದರು. ಕೊನೆಯ ಎಸೆತದಲ್ಲಿ ವಿರಾಟ್‌ ಕೊಹ್ಲಿ ಫೋರ್‌ ಬಾರಿಸಿದ್ದರು. ಆ ಮೂಲಕ ಮೂರನೇ ಓವರ್‌ನಲ್ಲಿ ಆರ್‌ಸಿಬಿ ಕ್ರಮವಾಗಿ '6 4 4 4nb 6 1 4 ರನ್‌ಗಳನ್ನು ಬಾರಿಸಿತ್ತು. ಆ ಮೂಲಕ ಮೂರು ಓವರ್‌ಗಳ ಅಂತ್ಯಕ್ಕೆ ಆರ್‌ಸಿಬಿ 53 ರನ್‌ಗಳನ್ನು ಕಲೆ ಹಾಕಿತ್ತು.



17 ಎಸೆತಗಳಲ್ಲಿ 37 ರನ್‌ ಸಿಡಿಸಿ ಔಟ್‌ ಆದ ಫಿಲ್‌ ಸಾಲ್ಟ್‌

ವಿರಾಟ್‌ ಕೊಹ್ಲಿ ಜೊತೆ ಓಪನಿಂಗ್‌ ಬಂದಿದ್ದ ಫಿಲ್‌ ಸಾಲ್ಟ್‌ ಬ್ಯಾಟಿಂಗ್‌ನಲ್ಲಿ ವಿಭಿನ್ನವಾಗಿ ಕಂಡರು. ಸ್ಪೋಟಕ ಬ್ಯಾಟ್‌ ಮಾಡಿದ ಫಿಲ್‌ ಸಾಲ್ಟ್‌ ಮೂರು ಸಿಕ್ಸರ್‌ ಹಾಗೂ ನಾಲ್ಕು ಬೌಂಡರಿಗಳೊಂದಿಗೆ 37 ನನ್‌ ಸಿಡಿಸಿದರು. ಅವರು 217.65ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಸಿಡಿಸಿದ್ದು ಎಲ್ಲರ ಗಮನ ಸೆಳೆದಿದ್ದಾರೆ. ಆದರೆ, ನಾಲ್ಕನೇ ಓವರ್‌ನಲ್ಲಿ ಅನಗತ್ಯವಾಗಿ ರನ್‌ ಔಟ್‌ ಆಗುವ ಮೂಲಕ ಅವರು ಫಿಲ್ಟ್‌ ಪೆವಿಲಿಯನ್‌ಗೆ ಮರಳಿದರು.

ಮಧ್ಯಮ ಕ್ರಮಾಂಕದ ವೈಫಲ್ಯ

ಫಿಲ್‌ ಸಾಲ್ಟ್‌ ವಿಕೆಟ್‌ ಒಪ್ಪಸಿದ ಬಳಿಕ ಪಂದ್ಯದ ದಿಕ್ಕು ಸಂಪೂರ್ಣ ಬದಲಾಯಿತು. 22 ರನ್‌ ಗಳಿಸಿ ವಿರಾಟ್‌ ಕೊಹ್ಲಿ ಕೂಡ ವಿಕೆಟ್‌ ಒಪ್ಪಿಸಿದರು. ದೇವದತ ಪಡಿಕ್ಕಲ್‌ ಒಂದು ರನ್‌ಗೆ ಔಟ್‌ ಆದರು. ರಜತ್‌ ಪಾಟಿದಾರ್‌ 25 ರನ್‌ ಗಳಿಸಿ ಔಟ್‌ ಆದರು. ಲಿಯಾಮ್‌ ಲಿವಿಂಗ್‌ಸ್ಟೋನ್‌ 4 ಮತ್ತು ಜಿತೇಶ್‌ ಶರ್ಮಾ ಕೇವಲ ಮೂರು ರನ್‌ ಗಳಿಸಿ ಔಟ್‌ ಆದರು. ಕೃಣಾಲ್‌ ಪಾಂಡ್ಯ 18 ರನ್‌ ಗಳಿಸಿ ಔಟ್‌ ಆದರು. ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದ ಟಿಮ್‌ ಡೇವಿಡ್‌ ಕೇವಲ 20 ಎಸೆತಗಳಲ್ಲಿ ಬರೋಬ್ಬರಿ ನಾಲ್ಕು ಸಿಕ್ಸರ್‌ ಹಾಗೂ ಎರಡು ಬೌಂಡರಿಗಳೊಂದಿಗೆ ಅಜೇಯ 37 ರನ್‌ಗಳನ್ನು ಸಿಡಿಸಿದ್ದರು.