Republic Day: ಧ್ವಜಾರೋಹಣದ ವೇಳೆ ಎಡವಟ್ಟು; ಹಗ್ಗ ತುಂಡಾಗಿ ಕುಸಿದು ಬಿದ್ದ ದೇಶದ ಎರಡನೇ ಬೃಹತ್ ರಾಷ್ಟ್ರ ಧ್ವಜ, ಮತ್ತೊಂದೆಡೆ ಕಾಡುಕೋಣ ಎಂಟ್ರಿ!
ಇಂದು ದೇಶಾದ್ಯಂತ 76ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಈ ನಿಟ್ಟಿನಲ್ಲಿ ನಡೆದ ಧ್ವಜಾರೋಣದ ವೇಳೆ ಕೆಲವೆಡೆ ಎಡವಟ್ಟುಗಳು ನಡೆದಿರುವ ಘಟನೆ ವರದಿಯಾಗಿದೆ. ಹೊಸಪೇಟೆಯಲ್ಲಿ ಧ್ವಜಾರೋಹಣ ಸಂದರ್ಭದಲ್ಲಿ ಬೃಹತ್ ರಾಷ್ಟ್ರ ಧ್ವಜದ ಹಗ್ಗ ತುಂಡಾಗಿ ಕುಸಿದು ಬಿದ್ದ ಘಟನೆ ನಡೆದಿದೆ. ಮತ್ತೊಂದೆಡೆ ಬಾಗಲಕೋಟೆಯಲ್ಲಿ ಧ್ವಜಾರೋಹಣ ವೇಳೆ ಕಾಡುಕೋಣವೊಂದು ಎಂಟ್ರಿ ಕೊಟ್ಟಿದ್ದು, ಎಲ್ಲರಲ್ಲೂ ಆತಂಕ ಸೃಷ್ಟಿಸಿತ್ತು.

Republic Day

ಹೊಸಪೇಟೆ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿನ ಬೃಹತ್ ಧ್ವಜ ಸ್ತಂಭದಲ್ಲಿ ಗಣರಾಜ್ಯೋತ್ಸವ(Republic Day) ನಿಮಿತ್ತ ಧ್ವಜಾರೋಹಣ ಸಂದರ್ಭದಲ್ಲಿ ಬೃಹತ್ ರಾಷ್ಟ್ರ ಧ್ವಜದ ಹಗ್ಗ ತುಂಡಾಗಿ ಜಾರಿದ ಘಟನೆ ನಡೆದಿದೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು, ಅಧಿಕಾರಿಗಳು ಧ್ವಜವನ್ನು ಮೇಲೆತ್ತಿ ಸುರಕ್ಷಿತವಾಗಿ ದೊಡ್ಡ ತಾಡಪಾಲ್ ಅಲ್ಲಿ ಇರಿಸಿದರು. ಇಲ್ಲಿನ ಪುನೀತ್ ರಾಜ್ ಕುಮಾರ್ ಕ್ರೀಡಾಂಗಣದಲ್ಲಿರುವ ದೇಶದ ಎರಡನೇ ಬೃಹತ್ ಧ್ವಜಸ್ತಂಭಕ್ಕೆ ಏರುತ್ತಿದ್ದ ಬೃಹತ್ ಧ್ವಜ ಕುಸಿದು ಬಿದ್ದ ಘಟನೆ ಭಾನುವಾರ ಗಣರಾಜ್ಯೋತ್ಸವ ನಡೆಯುತ್ತಿದ್ದ ವೇಳೆಯೇ ನಡೆದಿದೆ.
ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಧ್ವಜ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮ್ಮದ್ ಖಾನ್ ಧ್ವಜ ಕುಸಿದು ಬಿದ್ದ ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳಲಾಗುವುದು ಎಂದು ತಿಳಿಸಿದ ಪ್ರಸಂಗ ನಡೆಯಿತು.
ಧ್ವಜಾರೋಹಣ ವೇಳೆ ಕಾಡುಕೋಣ ಎಂಟ್ರಿ
ಮತ್ತೊಂದೆಡೆ ಬಾಗಲಕೋಟೆಯಲ್ಲಿ ಧ್ವಜಾರೋಹಣ ವೇಳೆ ಕಾಡುಕೋಣವೊಂದು ಎಂಟ್ರಿ ಕೊಟ್ಟಿದೆ. ಬಾಗಲಕೋಟೆ ಬಿಟಿಡಿಎ ಸರಕಾರಿ ಶಾಲಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೆಲಕ್ಷಣ ಮಕ್ಕಳು ಹಾಗೂ ಸಿಬ್ಬಂದಿ ಭಯದಲ್ಲಿ ತತ್ತರಿಸುವಂತಾಯಿತು. ಶಾಲಾ ಮೈದಾನ ಪ್ರವೇಶಕ್ಕೂ ಮುನ್ನ ಸ್ಥಳೀಯರು ಧಾವಿಸಿ ಹೊರ ಓಡಿಸಿದರು.
ರಾಜ್ಯದಲ್ಲಿ 76 ನೇ ಗಣರಾಜ್ಯೋತ್ಸವದ (76th Republic Day) ಸಂಭ್ರಮಾಚರಣೆ ಜೋರಾಗಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar chand gehlot) ಅವರು ಧ್ವಜಾರೋಹಣ ನೆರವೇರಿಸಿದರು. ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಪೊಲೀಸ್ ತುಕಡಿಗಳಿಂದ ಗೌರವ ವಂದನೆ ಸ್ವೀಕಾರ ಮಾಡಿದರು.
ನಂತರ ಮಾತನಾಡಿ ನಾಡಿನ ಜನತೆಗೆ 76 ನೇ ಗಣರಾಜ್ಯೋತ್ಸವದ ಶುಭಾಶಯವನ್ನು ತಿಳಿಸಿದರು. ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ರಾಜ್ಯಪಾಲರು ಐದು ಗ್ಯಾರಂಟಿ ಕಲ್ಯಾಣ ಯೋಜನೆಗಳು ಯಶಸ್ವಿಯಾಗಿದ್ದು ದೇಶದ ಗಮನ ಸೆಳೆದಿವೆ ಎಂದರು. ಈ ಯೋಜನೆಗಳಿಂದ ಆರ್ಥಿಕ ಬಿಕ್ಕಟ್ಟು ಉಂಟಾದೀತು, ಅಭಿವೃದ್ಧಿ ಕುಂಠಿತವಾದೀತು ಎಂಬ ಭವಿಷ್ಯ ಸುಳ್ಳಾಗಿದೆ. ಕರ್ನಾಟಕ ರಾಜ್ಯವು ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ ಎರಡನ್ನು ನಿಭಾಯಿಸುತ್ತಾ ದೇಶದಲ್ಲೇ ಅತ್ಯುತ್ತಮ ಅಭಿವೃದ್ಧಿ ಸಾಧಿಸುತ್ತಿರುಗ ರಾಜ್ಯಗಳ ಪೈಕಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: 76th Republic Day : 76ನೇ ಗಣರಾಜ್ಯೋತ್ಸವ; ಕರ್ತವ್ಯ ಪಥದಲ್ಲಿ ಸೇನಾ ಪರೇಡ್‌ಗೆ ಕ್ಷಣಗಣನೆ
ಗೃಹಲಕ್ಷ್ಮಿ ಯೋಜನೆಯಡಿ ಆಗಸ್ಟ್ 2023ರಿಂದ ಪ್ರತಿ ಕುಟುಂಬದ ಯಜಮಾನಿಯರಿಗೆ ಮಾಸಿಕ 2000 ದರದಲ್ಲಿ ಒಟ್ಟು 35,180.20 ಕೋಟಿ ರೂ ನೆರವು ನೀಡಲಾಗಿದೆ. ಗೃಹಜ್ಯೋತಿಯಲ್ಲಿ 1.62 ಕೋಟಿ ಜನರಿಗೆ ಪ್ರಯೋಜನ ಸಿಕ್ಕಿದೆ. ಶಕ್ತಿ ಯೋಜನೆಯ ಅಡಿ 373.27 ಕೋಟಿ ಟ್ರಿಪ್ ಲಾಭ ಪಡೆಯಲಾಗಿದ್ದು,ಇದಕ್ಕೆ 9051 ಕೋಟಿ ರೂ ಹಣ ವೆಚ್ಚ ಮಾಡಲಾಗಿದೆ. ಯುವನಿಧಿ ಅಡಿ 1,24,176 ಜನ ಅರ್ಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ಅನ್ನಭಾಗ್ಯದ ಅಡಿ 4,48,12,382 ಫಲಾನುಭವಿಗಳಿಗೆ ಡಿಬಿಟಿ ಮೂಲಕ 9775.51 ಕೋಟಿ ರೂ ವರ್ಗಾವಣೆ ಮಾಡಲಾಗಿದೆ. ಈವರ್ಷ 13% ನಷ್ಟು ಹಣಕಾಸು ಬೆಳವಣಿಗೆ ಸಾಧಿಸಿದೆ ಎಂದ ರಾಜ್ಯಪಾಲರು ತಮ್ಮ ಭಾಷಣದಲ್ಲಿ ವಿವರಿಸಿದರು.