ಸಚಿನ್ ತೆಂಡೂಲ್ಕರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲು ಬಿಸಿಸಿಐ ನಿರ್ಧಾರ
ಭಾರತದ ಪರ 664 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ 51 ವರ್ಷದ ತೆಂಡೂಲ್ಕರ್, ಅತಿ ಹೆಚ್ಚು ಟೆಸ್ಟ್ ಮತ್ತು ಏಕದಿನ ರನ್‌ಗಳಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. 15,921 ಟೆಸ್ಟ್ ರನ್ ಮತ್ತು ಏಕದಿನದಲ್ಲಿ18,426 ರನ್ ಗಳಿಸಿದ್ದಾರೆ.

Sachin Tendulkar

ಮುಂಬಯಿ: ಭಾರತ ತಂಡದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್(Sachin Tendulkar) ಅವರಿಗೆ ಬಿಸಿಸಿಐ(BCCI) ಜೀವಮಾನ ಶ್ರೇಷ್ಠ ಸಾಧನೆಗೆ(BCCI Lifetime Achievement Award) ನೀಡುವ ಕರ್ನಲ್ ಸಿ.ಕೆ ನಾಯ್ಡು ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಶನಿವಾರ(ಫೆ.1) ರಂದು ನಡೆಯುವ ಮಂಡಳಿಯ ವಾರ್ಷಿಕ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿರುವುದಾಗಿ ಪಿಟಿಐ ವದರಿ ಮಾಡಿದೆ.ಕಳೆದ ವರ್ಷ(2024)ರಲ್ಲಿ ಫಾರುಖ್ ಇಂಜಿನಿಯರ್ ಮತ್ತು ರವಿಶಾಸ್ತ್ರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಭಾರತದ ಪರ 664 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ 51 ವರ್ಷದ ತೆಂಡೂಲ್ಕರ್, ಅತಿ ಹೆಚ್ಚು ಟೆಸ್ಟ್ ಮತ್ತು ಏಕದಿನ ರನ್‌ಗಳಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. 15,921 ಟೆಸ್ಟ್ ರನ್ ಮತ್ತು ಏಕದಿನದಲ್ಲಿ18,426 ರನ್ ಗಳಿಸಿದ್ದಾರೆ.
17 ವರ್ಷದಲ್ಲಿ ಶತಕ
ಸಚಿನ್ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದು 17 ವರ್ಷವಿದ್ದಾಗ. 1990 ಆಗಸ್ಟ್ 14ರಂದು ಸಚಿನ್ ತೆಂಡೂಲ್ಕರ್ ಮೊದಲ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದರು. ಇಂಗ್ಲೆಂಡ್ ವಿರುದ್ಧ ಓಲ್ಡ್ ಟ್ರಾಫರ್ಡ್(Old Trafford) ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ಈ ಸಾಧನೆ ಮಾಡಿದ್ದರು. ಇದೇ ವೇಳೆ ಟೆಸ್ಟ್ ಮಾದರಿಯಲ್ಲಿ ಶತಕ ದಾಖಲಿಸಿದ ಮೂರನೇ-ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಅಂದು 189 ಎಸೆತ ಎದುರಿಸಿದ್ದ ಸಚಿನ್ ಅಜೇಯ 119 ರನ್ ಗಳಿಸಿದ್ದರು. 1989ರ ನವೆಂಬರ್ನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದ ಸಚಿನ್ ಎಂಟು ಟೆಸ್ಟ್ ಪಂದ್ಯಗಳ ಬಳಿಕ ಶತಕ ಬಾರಿಸಿದ್ದರು. ಓಲ್ಡ್ ಟ್ರಾಫರ್ಡ್ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್ನಲ್ಲಿ ಸಚಿನ್ ಈ ಶತಕದ ಆಟವಾಡಿದ್ದರು.
ಇದನ್ನೂ ಓದಿ ʻVinod Kambliಗೆ ನೆರವು ನೀಡಬೇಕುʼ: ಸಚಿನ್ ತೆಂಡೂಲ್ಕರ್‌ಗೆ ಕಪಿಲ್ ದೇವ್ ಮನವಿ!
ಭಾರತ ರತ್ನ ಪುರಸ್ಕೃತ
ಸಚಿನ್ ಅವರು 24 ವರ್ಷಗಳ ಕ್ರಿಕೆಟ್ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್, 201 ವಿಕೆಟ್, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್ ಎಲ್ಲ ಕ್ರಿಕೆಟ್ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.