ಮುಂಬೈ ಜ.16, 2025: ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಅವರ ಮೇಲೆ ಚಾಕು ಇರಿತವಾಗಿದ್ದು, ನಟ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೈಫ್‌ಗೆ ಆರು ಬಾರಿ ಚಾಕು ಇರಿಯಾಗಿದ್ದು, ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬುಧವಾರ ಮಧ್ಯರಾತ್ರಿ ಸುಮಾರು 2.30 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಬಾಂದ್ರಾದಲ್ಲಿರುವ ನಟನ ಮನೆಗೆ ದರೋಡೆಗೆಂದು ಕಳ್ಳರು ನುಗ್ಗಿದ್ದಾಗ ಘಟನೆ ಸಂಭವಿಸಿದೆ. ಸದ್ಯ ಮುಂಬೈನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಮಧ್ಯರಾತ್ರಿ ಸುಮಾರು 2.30ರ ಸುಮಾರಿಗೆ ಮನೆಗೆ ನುಗ್ಗಿದ ದರೋಡೆಕೋರರು, ದರೋಡೆ ಮಾಡಲು ಯತ್ನಿಸಿದ್ದಾರೆ. ಆದರೆ ಸೈಫ್ ಅದನ್ನು ತಡೆಯಲು ಪ್ರಯತ್ನಸಿದ್ದರಿಂದ ಅವರ ಮೇಲೆ ದಾಳಿ ಮಾಡಲಾಗಿದೆ. ಘಟನೆಯಲ್ಲಿ ಸೈಫ್‌ಗೆ ಗಾಯವಾಗಿದೆ. ಕರೀನಾ ಹಾಗೂ ಮಕ್ಕಳು ಸುರಕ್ಷಿತವಾಗಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಮುಂಬೈ ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿದೆ. ಸುತ್ತ ಮುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಮನೆಯ ಹೊರಗೆ ಸ್ನೀಪರ್ ನಾಯಿಗಳನ್ನು ಕರೆತರಲಾಗಿದ್ದು, ಇಂಚಿಂಚೂ ಪರಿಶೀಲನೆ ನಡೆಸಲಾಗುತ್ತಿದೆ.
ಸದ್ಯದ ಮಾಹಿತಿಯ ಪ್ರಕಾರ ಮೂವರು ದರೋಡೆಕೋರರಿದ್ದು, ಒಬ್ಬ ಮನೆಯೊಳಗೆ ನುಗ್ಗಿರುವ ಶಂಕೆಯಿದೆ. ಈ ನಡುವೆ ಪೊಲೀಸರು ಶಾಕಿಂಗ್ ಮಾಹಿತಿಯನ್ನು ಹೊರಹಾಕಿದ್ದು, ಈ ಕೃತ್ಯಕ್ಕೆ ಮನೆಯ ಸಹಾಯಕರೊಬ್ಬರ ಸಹಕಾರವಿರಬಹುದು ಎಂದು ಶಂಕಿಸಿದ್ದಾರೆ.
ರಾಜಕೀಯ ಕೆಸರಾಟ
ಈ ನಡುವೆ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ, ಮುಂಬೈನ ಕಾನೂನು ಮತ್ತು ಸುವ್ಯವಸ್ಥೆ ಕುರಿತು ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ. ಮುಂಬೈನಲ್ಲಿ ಮತ್ತೊಂದು ಇಂತಹ ಘಟನೆಯಾಗುತ್ತಿರುವುದು ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಬಾಬಾ ಸಿದ್ಧಕಿ ಹತ್ಯೆಯ ಬಗ್ಗೆ ಹೇಳಿದರು.
ನಟಿ ಪೂಜಾ ಭಟ್ ಕೂಡ ಘಟನೆಯನ್ನು ಖಂಡಿಸಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅವರ ನಿಯೋಗಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಮತ್ತು ಸಚಿವ ಆಶಿಶ್ ಶೆಲಾರ್ ಅವರನ್ನು ಟ್ಯಾಗ್ ಮಾಡಿ ವಿಷಯದ ಬಗ್ಗೆ ಗಮನ ಸೆಳೆದರು.