ಮುಂಬೈ: ಬಾಲಿವುಡ್‌ನ ಖ್ಯಾತ ನಟ ಸೈಫ್ ಆಲಿ ಖಾನ್(Saif Ali Khan) ಅವರನ್ನು ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದಿದ್ದ. ಆ ಪ್ರಕರಣ ದೇಶದಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. ಚಾಕುವಿನಿಂದ ಇರಿದ ಆರೋಪಿಯ ಬಂಧನವೂ ಆಗಿದೆ. ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಸೈಫ್ ಕಳೆದ ನಾಲ್ಕೈದು ದಿನಗಳಿಂದ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಎರಡು ಸರ್ಜರಿಗಳಾಗಿದ್ದು,ಆರೋಗ್ಯದಲ್ಲಿ ಚೇತರಿಕೆ ಕಂಡ ಕಾರಣ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಚಾಕುವಿನ ಇರಿತದಿಂದಾಗಿ ಗಾಯಗೊಂಡಿದ್ದ ಸೈಫ್ ಆಲಿ ಖಾನ್ ಅವರಿಗೆ ನರ ಶಸ್ತ್ರಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಸೂಕ್ತ ಚಿಕಿತ್ಸೆಯ ನಂತರ ಸೈಫ್ ಆಲಿ ಖಾನ್ ಸುರಕ್ಷಿತವಾಗಿ ಡಿಸ್ಚಾರ್ಜ್ ಆಗಿದ್ದು, ತಮ್ಮ ಮನೆ ತಲುಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಾಳಿಯ ವಿವರ
ನಟ ಸೈಫ್ ಆಲಿ ಖಾನ್ ಮೇಲೆ ಮೊಹಮ್ಮದ್ ಶರೀಫುಲ್ ಇಸ್ಲಾಂ ಶಹಜಾದ್ ಎಂಬ ವ್ಯಕ್ತಿ ದಾಳಿ ನಡೆಸಿದ್ದನು. ಸೈಫ್ ವಾಸವಿದ್ದ ಬಾಂದ್ರಾ ನಿವಾಸಕ್ಕೆ ಏಕಾಏಕಿ ನುಗ್ಗಿದ್ದ ದುಷ್ಕರ್ಮಿ ಆರು ಬಾರಿ ಚಾಕುವಿನಿಂದ ಇರಿದಿದ್ದನು. ಅವನನ್ನು ಭಾರತದಲ್ಲಿ ವಾಸಿಸುತ್ತಿರುವ ಬಾಂಗ್ಲಾದೇಶದ ಪ್ರಜೆ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಭಾನುವಾರ(ಜ.19) ಬಾಂದ್ರಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಆಟೋ ಚಾಲಕನಿಗೆ ನಗದು ಬಹುಮಾನ
ಚಾಕು ಇರಿತಕ್ಕೊಳಗಾಗಿದ್ದ ಸೈಫ್ ಆಲಿ ಖಾನ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಭಜನ್ ಸಿಂಗ್ ರಾಣಾ ಅವರಿಗೆ ಸಂಸ್ಥೆಯೊಂದು ನಗದು ಬಹುಮಾನ ನೀಡಿ ಸನ್ಮಾನಿಸಿದೆ. ರಾಣಾ ಯಾವುದೇ ಆಟೋ ಶುಲ್ಕ ಪಡೆಯದೆ ಸೈಫ್‌ರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಈ ಸುದ್ದಿಯನ್ನೂ ಓದಿ:Cylinder Blast: ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್‌ಗಳ ಸ್ಫೋಟ!
ಆಟೋ ಚಾಲಕ ಭಜನ್ ಸಿಂಗ್ ರಾಣಾ ಮೂಲತಃ ಉತ್ತರಾಖಂಡದವರಾಗಿದ್ದು, ಕಳೆದ ಹಲವು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದಾರೆ. ಸೈಫ್ ಅಲಿ ಖಾನ್ ಪ್ರಕರಣದ ನಂತರ ಭಜನ್ ಸಿಂಗ್ ರಾಣಾ ಹೆಸರು ಮುನ್ನಲೆಗೆ ಬಂದಿದೆ. ಇದೀಗ ಖಾಸಗಿ ಸಂಸ್ಥೆಯೊಂದು ಭಜನ್ ಸಿಂಗ್ ರಾಣಾ ಅವರನ್ನು ಸನ್ಮಾನಿಸಿ 11 ಸಾವಿರ ರೂಪಾಯಿ ಚೆಕ್ ವಿತರಿಸಿ ಗೌರವಿಸಿದೆ. ಸೈಫ್ ಅಲಿ ಖಾನ್ ಕುಟುಂಬ ಸಹ ಭಜನ್ ಸಿಂಗ್ ರಾಣಾ ಅವರನ್ನು ಗೌರವಿಸಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿವೆ.