Saif Ali Khan: ಕದಿಯುವ ಉದ್ದೇಶವಾಗಿತ್ತೇ ಹೊರತು ದಾಳಿ ಮಾಡುವುದಾಗಿರಲಿಲ್ಲ; ಸೈಫ್‌ಗೆ ಇರಿದಿದ್ದ ಆರೋಪಿಯಿಂದ ಹೇಳಿಕೆ
ಆರೋಪಿ ವಿಚಾರಣೆಯಲ್ಲಿ, ತನ್ನ ಮುಖ್ಯ ಉದ್ದೇಶ ಹಣ ಕದಿಯುವುದೇ ಹೊರತು ನಟ ಅಥವಾ ಯಾರಿಗಾದರೂ ಹಾನಿ ಮಾಡುವುದು ಆಗಿರಲಿಲ್ಲ, ಡಿ.15ರಂದು ಕೆಲಸ ಕಳೆದುಕೊಂಡು ಆರ್ಥಿಕ ಸಮಸ್ಯೆ ಎದುರಿಸಿ ಕಳ್ಳತನಕ್ಕೆ ಮುಂದಾಗಿದ್ದಾಗಿ ತಿಳಿಸಿದ್ದಾನೆ.

Saif ali Khan

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಅವರ ಮೇಲೆ ದಾಳಿ ನಡೆಸಿದ್ದ ಬಾಂಗ್ಲಾದೇಶ ಮೂಲದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆತನ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯನ್ನು ಮೊಹಮ್ಮದ್ ಷರೀಫ್ ಉಲ್ ಇಸ್ಲಾಂ ಶೆಹಜಾದ್ ಎಂದು ಗುರುತಿಸಲಾಗಿದ್ದು, ಆತ ಜ. 16 ರ ಮಧ್ಯರಾತ್ರಿ ನಟನ ಮನೆಗೆ ನುಗ್ಗಿದ್ದ. ನಂತರ ಖಾನ್ ಅವರಿಗೆ ಚಾಕುವಿನಿಂದ ಆರು ಬಾರಿ ಇರಿದಿದ್ದ. ಸದ್ಯ ಬಾಂದ್ರಾ ಪೊಲೀಸರು ಗುರುವಾರ ನಟನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಐದು ದಿನಗಳ ಬಂಧನ ಪೂರ್ಣಗೊಂಡ ನಂತರ ಶುಕ್ರವಾರ ಪೊಲೀಸರು ಬಾಂದ್ರಾದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು ಹಾಗೂ ಹೆಚ್ಚಿನ ವಿಚಾರಣೆಗಾಗಿ ಬಂಧನದ ಅವಧಿಯನ್ನು ವಿಸ್ತರಣೆ ಮಾಡುವಂತೆ ಕೋರಿದ್ದರು. ಇದೀಗ ನ್ಯಾಯಾಲಯ 7 ದಿನಗಳ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಜ. 29 ರ ವರೆಗೂ ವಿಚಾರಣೆ ನಡೆಯಲಿದೆ.
ಪ್ರಕರಣದ ನಂತರ ಆರೋಪಿ ಹಲವು ಕಡೆ ತೆರಳಿದ್ದು, ಅಲ್ಲಿಯೂ ಪರಿಶೀಲನೆ ನಡೆಸಲಾಗಿದೆ. ಸದ್ಯ ಆರೋಪಿ ತಾನೇ ಚೂರಿ ಇರಿದಿದ್ದು ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆತ ತನ್ನ ಮುಖ್ಯ ಉದ್ದೇಶ ಹಣ ಕದಿಯುವುದೇ ಹೊರತು ನಟ ಅಥವಾ ಯಾರಿಗಾದರೂ ಹಾನಿ ಮಾಡುವುದು ಆಗಿರಲಿಲ್ಲ. ಡಿ.15ರಂದು ಕೆಲಸ ಕಳೆದುಕೊಂಡು ಆರ್ಥಿಕ ಸಮಸ್ಯೆ ಎದುರಿಸಿ ಕಳ್ಳತನಕ್ಕೆ ಮುಂದಾಗಿದ್ದಾಗಿ ತಿಳಿಸಿದ್ದಾನೆ. ತನ್ನನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡುವಂತೆ ಆರೋಪಿ ಪೊಲೀಸರಿಗೆ ಮನವಿ ಮಾಡಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಈ ಸುದ್ದಿಯನ್ನೂ ಓದಿ : Saif Ali Khan: ಸೈಫ್ ಅಲಿ ಖಾನ್ ಮೇಲೆ ಚಾಕು ದಾಳಿ ನಡೆದೇ ಇಲ್ವಾ? ಇದು ಬರೀ ಆಕ್ಟಿಂಗಾ?
ಆರೋಪಿ ಘಟನೆಯ ನಂತರ, ಬಾಂದ್ರಾ ರೈಲು ನಿಲ್ದಾಣದಲ್ಲಿ ಚರ್ಚ್‌ಗೇಟ್ ರೈಲು ಹತ್ತಿ, ವರ್ಲಿಯಲ್ಲಿ ಇಳಿದಿದ್ದಾನೆ. ನಂತರ ವರ್ಲಿಯ ಕೋಳಿವಾಡದಲ್ಲಿರುವ ಸಲೂನ್ ಅಂಗಡಿಗೆ ಭೇಟಿ ನೀಡಿ ಕೂದಲು ಕತ್ತರಿಸಿದ್ದಾನೆ. ಆತ ಘಟನೆಯ ನಂತರ ತನ್ನ ಬ್ಯಾಗ್ ಅನ್ನು ನಿರ್ಜನ ಪ್ರದೇಶದಲ್ಲಿ ಎಸೆದಿದ್ದ. ಅದನ್ನೂ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬ್ಯಾಗ್‌ನಲ್ಲಿ ಸ್ಕ್ರೂಡ್ರೈವರ್, ಸುತ್ತಿಗೆ, ಹ್ಯಾಕ್ಸಾ ಬ್ಲೇಡ್, ಮುರಿದ ಚಾಕು ತುಂಡು ಸೇರಿದಂತೆ ವಿವಿಧ ಪರಿಕರಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.