Sharon Raj Case: ಗ್ರೀಷ್ಮಾ: ದೇವರ ನಾಡಿನ ವಿಷ ಕನ್ಯೆ! ಈಕೆ ಪ್ರಿಯತಮ ಶರೋನ್ ರಾಜ್‌ನನ್ನು ಕೊಂದಿದ್ಯಾಕೆ? ರ‍್ಯಾಂಕ್ ವಿದ್ಯಾರ್ಥಿನಿ ಹಂತಕಿ ಆಗಿದ್ದು ಹೇಗೆ?
Sharon Raj Case: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಕೇರಳದ ಶರೋನ್ ಕೊಲೆ ಕೇಸ್‌ನಲ್ಲಿ ಕೊನೆಗೂ ಕೋರ್ಟ್ ತೀರ್ಪು ಪ್ರಕಟಿಸಿದೆ. ವಿಷ ಉಣಿಸಿ ಆತನನ್ನು ಕೊಲೆ ಮಾಡಿದ ಪ್ರಿಯತಮೆ ಗ್ರೀಷ್ಮಾಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಹಾಗಾದರೆ ಏನಿದು ಪ್ರಕರಣ? ಇಲ್ಲಿದೆ ಸಮಗ್ರ ವಿವರ.
ತಿರುವನಂತಪುರಂ: ಅವರಿಬ್ಬರು ಒಂದೇ ಕಾಲೇಜಿನ ವಿದ್ಯಾರ್ಥಿಗಳಲ್ಲ. ಆದರೆ ಇವರು ಕಾಲೇಜಿಗೆ ಒಂದೇ ಬಸ್‌ನಲ್ಲಿ ಹೋಗುತ್ತಿದ್ದರು. ಹೀಗೆ ಕ್ರಮೇಣ ಈ ಅಪರಿಚಿತರು ಪರಿಚಿತರಾದರು, ಗೇಳೆಯರಾದರು. ಈ ಸ್ನೇಹ ಪ್ರೀತಿಗೆ ತಿರುಗಲು ಮತ್ತೆ ಹೆಚ್ಚು ದಿನ ಬೇಕಾಗಲಿಲ್ಲ. ಆತ ಆಕೆಯ ಮನೆಯವರಿಗೆ ತಿಳಿಯದೆ ಗುಟ್ಟಾಗಿ ಆಕೆಗೆ ತಾಳಿಯನ್ನೂ ಕಟ್ಟಿದ್ದ. ತನ್ನ ಜೀವಕ್ಕಿತ ಹೆಚ್ಚಾಗಿ ಪ್ರೀತಿಸುತ್ತಿದ್ದ ಆತನನ್ನು ಕೊನೆಗೆ ಅವಳು ಕೊಂದೇ ಬಿಟ್ಟಳು. ಪ್ರಿಯಕರನ ಮೇಲೆಯೇ ಮನುಷತ್ಯ ಇಲ್ಲದೆ ಕ್ರೂರವಾಗಿ ವರ್ತಿಸಿದ ಆಕೆಗೆ ಇದೀಗ ಕೋರ್ಟ್ ಗಲ್ಲು ಶಿಕ್ಷೆಯನ್ನೂ ಪ್ರಕಟಿಸಿದೆ. ನಾವು ಈಗ ಹೇಳ ಹೊರಟಿರುವುದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ 23 ವರ್ಷದ ಶರೋನ್ ರಾಜ್ (Sharon Raj Case) ಕೊಲೆ ಪ್ರಕರಣವನ್ನು. ಇದು ಕಷಾಯದಲ್ಲಿ ವಿಷ ಬೆರೆಸಿ ಆತನಿಗೆ ನೀಡಿದ 22 ವರ್ಷದ ಗ್ರೀಷ್ಮಾ (Greeshma) ಎನ್ನುವ ವಂಚಕಿಯ ಕಥೆಯೂ ಹೌದು. ವಿಶೇಷ ಎಂದರೆ ಈಕೆ ಪದವಿಯಲ್ಲಿ ರ‍್ಯಾಂಕ್ ವಿಜೇತೆ. ಹಾಗಾದರೆ ಇಷ್ಟು ಪ್ರತಿಭಾನ್ವಿತೆ ಹಂತಕಿಯಾಗಿದ್ದು ಹೇಗೆ? ಇಷ್ಟು ಕ್ರೂರವಾಗಿ ಕೊಲೆ ಮಾಡಲು ಹೇಗೆ ಸಾಧ್ಯವಾಯಿತು? ಇಲ್ಲಿದೆ ಇಡೀ ಪ್ರಕರಣದ ಸಂಪೂರ್ಣ ಚಿತ್ರಣ.
2022ರ ಅಕ್ಟೋಬರ್ 14. ಕೇರಳದ ತಿರುವನಂತಪುರಂ ನಿವಾಸಿ ಶರೋನ್ ರಾಜ್ ಜೀವನವನ್ನೇ ಅಪೋಶನ ತೆಗೆದುಕೊಂಡ ದಿನ ಅದು. ತನ್ನ ಪ್ರಿಯತಮೆ ಕರೆದಳೆಂದು ಕನ್ಯಾಕುಮಾರಿಯ ರಾಮವರ್ಮನ್‌ಚಿರೈಯಲ್ಲಿರುವ ಅವಳ ಮನೆಗೆ ಖುಷಿ ಖುಷಿಯಿಂದ ತೆರಳಿದವನು ಹೊರ ಬಂದಿದ್ದು ಮತ್ತೆಂದೂ ಹೊರ ಜಗತ್ತನ್ನು ನೋಡಲು ಸಾಧ್ಯವಾಗದ ಅಸ್ವಸ್ಥನಾಗಿ. ಮನೆಯೊಳಗೆ ತೆರಳಿದ್ದ ಆತನಿಗೆ ಪ್ರಿಯತಮೆ ಗ್ರೀಷ್ಮಾ ಆಯುರ್ವೇದ ಕಷಾಯದಲ್ಲಿ ವಿಷ ಬೆರೆಸಿ ನೀಡಿದ್ದಳು. ಆಕೆಯನ್ನು ನಂಬಿದ್ದ ಶರೋನ್ ಸ್ವಲ್ಪನೂ ಅನುಮಾಡ ಪಡೆದೆ ಕಹಿಯಾಗಿದ್ದರೂ ಕಷಾಯವನ್ನು ಗಟಗಟನೆ ಕುಡಿದು ಮುಗಿಸಿದ್ದ. ಮನೆಯಿಂದ ಹೊರ ಬಂದವನು ಸ್ವಲ್ಪ ಹೊತ್ತಿನಲ್ಲೇ ವಾಂತಿ ಮಾಡಲು ಆರಂಭಿಸಿದ್ದ. ಬಳಿಕ ಇದು ನಿಲ್ಲಲೇ ಇಲ್ಲ.
ಮೊದ ಮೊದಲು ಸಾಮಾನ್ಯವಾಗಿದ್ದ ವಾಂತಿ ಕ್ರಮೇಣ ನೀಲಿ ಬಣ್ಣಕ್ಕೆ ತಿರುಗಿತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಗ್ರೀಷ್ಮಾನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದುದೇ ಆತನಿಗೆ ಮುಳುವಾಗಿತ್ತು! ತನ್ನನ್ನು ಬಿಟ್ಟು ಹೋಗುತ್ತಿಲ್ಲ ಎನ್ನುವ ಕಾರಣಕ್ಕೆ ಒಂದು ಕಾಲದಲ್ಲಿ ತಾನೂ ಪ್ರೀತಿಸುತ್ತಿದ್ದ ಶರೋನ್‌ಗೆ ಆಕೆ ವಿಷ ಪ್ರಾಶನ ಮಾಡಿದ್ದಳು. ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಆಸ್ಪತ್ರೆಯ ಹಾಸಿಗೆಯಲ್ಲಿ ಸುಮಾರು 11 ದಿನ ನರಳಾಡಿದ ಶರೋನ್ ಕೊನೆಗೆ 2022ರ ಅಕ್ಟೋಬರ್ 25ರಂದು ಸಾವಿಗೆ ಶರಣಾಗಿದ್ದ, ಪ್ರೀತಿಯ ದುರಂತ ನಾಯಕನಾಗಿ. ಅಚ್ಚರಿ ಎಂದರೆ ನೋವಿನಿಂದ ನರಳುತ್ತಿದ್ದರೂ, ಇದಕ್ಕೆಲ್ಲ ಗ್ರೀಷ್ಮಾ ಕಾರಣ ಎಂದು ಗೊತ್ತಿದ್ದರೂ ಅತ ಮೊದ ಮೊದಲು ಮನೆಯವರಿಗೆ ಆಕೆಯೇ ಈ ಸ್ಥಿತಿಗೆ ಕಾರಣ ಎನ್ನುವುದನ್ನು ಬಹಿರಂಗಪಡಿಸಿರಲಿಲ್ಲ.
ಪರಿಚಯವಾಗಿದ್ದು ಹೇಗೆ?
ಶರೋನ್ ಮತ್ತು ಗ್ರೀಷ್ಮಾ ಅಕ್ಕ ಪಕ್ಕದ ಊರಿನವರು. ಶರೋನ್ ಮನೆ ಕೇರಳದ ತಿರುವನಂತಪುರಂನಲ್ಲಿದ್ದರೆ, ಗ್ರೀಷ್ಮಾಳ ಊರು ತಮಿಳುನಾಡಿನ ಕನ್ಯಾ ಕುಮಾರಿಯ ರಾಮವರ್ಮನ್‌ಚಿರೈ. ರಾಮವರ್ಮನ್‌ಚಿರೈ ಮತ್ತು ತಮಿಳುನಾಡಿನ ವೆಲ್ಲೂರಿನ ಮಧ್ಯೆ ಇರುವ ಕಾಲೇಜುಗಳಿಗೆ ತೆರಳುವ ಬಸ್ ಪ್ರಯಾಣದ ಮಧ್ಯೆ ಪರಿಚಿತರಾದವರು ಗ್ರೀಷ್ಮಾ ಮತ್ತು ಶರೋನ್. ಗ್ರೀಷ್ಮಾ ಕನ್ಯಾಕುಮಾರಿ ಜಿಲ್ಲೆಯ ಅಳಗಿಯ ಮಂಟಪ ಮುಸ್ಲಿಂ ಕಾಲೇಜಿನಲ್ಲಿ 2ನೇ ವರ್ಷದ ಎಂಎ ಇಂಗ್ಲಿಷ್ ವಿದ್ಯಾರ್ಥಿನಿ. ಶರೋನ್ ನೆಯ್ಯೂರ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ.ಎಸ್‌ಸಿ ರೆಡಿಯೋಲಜಿಯ 3ನೇ ವರ್ಷದ ವಿದ್ಯಾರ್ಥಿ.
ಪ್ರತಿದಿನ ಭೇಟಿಯಾಗುತ್ತಿದ್ದ ಇವರು ಕ್ರಮೇಣ ಹತ್ತಿರವಾಗತೊಡಗಿದರು. ಸ್ವಲ್ಪ ದಿನದಲ್ಲೇ ಇಬ್ಬರು ಪರಸ್ಪರ ಪ್ರೀತಿಸತೊಡಗಿದರು. ಬಳಿಕ ಇವರ ಪಯಣ ಬಸ್‌ನಿಂದ ಬೈಕ್‌ಗೆ ಶಿಫ್ಟ್ ಆಯ್ತು. ಪ್ರಣಯ ಪಕ್ಷಿಗಳು ಬೈಕ್‌ನಲ್ಲಿ ಓಡಾಡುತ್ತ ತಮ್ಮ ಸಂಬಂದವನ್ನು ಇನ್ನಷ್ಟು ಗಾಢವಾಗಿಸಿಕೊಂಡಿತು. ಶರೋನ್ ತನ್ನ ಮನೆಯಲ್ಲಿ ಮತ್ತು ವೆಟ್ಟಿಗಾಡು ಚರ್ಚ್‌ನಲ್ಲಿ ಹೀಗೆ ಎರಡೆರಡು ಬಾರಿ ಗ್ರೀಷ್ಮಾಗೆ ತಾಳಿ ಕಟ್ಟಿದ. ತಾಳಿ ಕಟ್ಟಿದ್ದು, ಜತೆಯಾಗಿ ಓಡಾಡಿದ್ದು, ಲಾಡ್ಜ್‌ನಲ್ಲಿ ಒಂದಾಗಿ ಕಳೆದ ರಸ ನಿಮಿಷ...ಹೀಗೆ ಪ್ರತಿಯೊಂದನ್ನೂ ಶರೋನ್ ಮೊಬೆಲ್ನಲ್ಲಿ ರೆಕಾರ್ಡ್ ಮಾಡಿಟ್ಟುಕೊಂಡ. ಪ್ರಣಣದಲ್ಲಿ ಮುಳುಗಿದ್ದ ಗ್ರೀಷ್ಮಾ ಆಗೆಲ್ಲ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಲೂ ಇಲ್ಲ. ಇಷ್ಟೆಲ್ಲ ಆಗಿದ್ದರೂ ಇವರ ಈ ಸಂಬಂದ ಗ್ರೀಷ್ಮಾ ಮನೆಯವರಿಗೆ ತಿಳಿದಿರಲೇ ಇಲ್ಲ.
ಮನೆಯವರಿಗೆ ಸಂಶಯ ಮೂಡಿದ್ದು ಹೇಗೆ?
ಪದವಿಯಲ್ಲಿ ರ‍್ಯಾಂಕ್ ಪಡೆದಿದ್ದ ಗ್ರೀಷ್ಮಾಗೆ ಕ್ರಮೇಣ ಓದಿನಲ್ಲಿ ಹಿಂದುಳಿಯತೊಡಗಿದಳು. ಆಕೆಗೆ ಗಮನ ಬೇರೆಡೆಗೆ ಹರಿಯುತ್ತಿದೆ ಎನ್ನುವುದನ್ನು ಕಂಡುಕೊಂಡ ಮನೆಯವರಿಗೆ ಲವ್ ಸ್ಟೋರಿ ಗೊತ್ತಾಯಿತು. ಜಾತಿ, ಧರ್ಮ, ಆರ್ಥಿಕ ಸ್ಥಿತಿ...ಹೀಗೆ ನಾನಾ ಕಾರಣಗಳಿಂದ ಮನೆಯವರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸುವುದರೊಂದಿಗೆ ಕಥೆ ಬಹು ಮುಖ್ಯ ತಿರುವು ಸಿಕ್ಕ ತೊಡಗಿತು.
ಮನೆಯವರ ತೀವ್ರ ವಿರೋಧಕ್ಕೆ ಬೇಸತ್ತ ಗ್ರೀಷ್ಮಾ ಕೊನೆಗೆ ಶರೋನ್ ಜತೆಗಿನ ಸಂಬಂಧ ಮುರಿದುಕೊಂಡಿರುವುದಾಗಿ ಸುಳ್ಳು ಕಥೆ ಕಟ್ಟಿದಳು. ಹೀಗಾಗಿ ಮನೆಯವರು ಆಕೆಗೆ ಬೇರೆ ಸಂಬಂಧ ಹುಡುಕತೊಡಗಿದರು. ಅದರಂತೆ 2022ರ ಫೆಬ್ರವರಿಯಲ್ಲಿ ಆಕೆಗೆ ಬೇರೊಬ್ಬ ಯುವಕನೊಂದಿಗೆ ವಿವಾಹ ನಿಶ್ಚಿತಾರ್ಥವೂ ನಡೆಯಿತು.
ಇದರಿಂದ ಶರೋನ್ ಕುಪಿತನಾದ. ಇಬ್ಬರೂ ನಾನೋಂದು ತೀರ ನೀನೊಂದು ತೀರ ಎನ್ನುವಂತಾದರು. ಇಷ್ಟೇ ಆಗಿದ್ದರೇ ಎಲ್ಲವೂ ಮುಗಿಯುತ್ತಿತ್ತು. ಆದರೆ ಈ ಪ್ರೇಮಿಗಳ ಮುನಿಸು ಕೆಲವೇ ದಿನಗಳಲ್ಲಿ ಕರಗಿತು. ಮೇ ವೇಳೆಗೆ ಇಬ್ಬರೂ ಮತ್ತೆ ಒಂದಾದರು. ಮೊದಲಿನಂತೆ ಒಟ್ಟಿಗೆ ಓಡಾಡತೊಡಗಿದರು.
ಅ. 14ರಂದು ಆಗಿದ್ದೇನು?
ಇನ್ನು ಪ್ರಕರಣದ ಕೇಂದ್ರಬಿಂದು 2022ರ ಅಕ್ಟೋಬರ್ 14. ಅಂದು ಗ್ರೀಷ್ಮಾ ಕರೆ ಮಾಡಿ ರಾಮವರ್ಮನ್‌ಚಿರೈನಲ್ಲಿರುವ ತನ್ನ ಮನೆಗೆ ಬರುವಂತೆ ಶರೋನ್‌ಗೆ ತಿಳಿಸಿದಳು. ರೆಕಾರ್ಡ್ ಪುಸ್ತಕ ಪಡೆಯುವ ನೆಪದಲ್ಲಿ ಶರೋನ್ ತನ್ನ ಗೆಳೆಯ ರಜಿನ್ ಜತೆ ಬೈಕ್‌ನಲ್ಲಿ ಆಕೆಯ ಮನೆಗೆ ತೆರಳಿದ. ಅವರ ಮನೆಗೆ ತಲುಪುತಿದ್ದಂತೆ ಗ್ರೀಷ್ಮಾ ಅಮ್ಮ ಸಿಂಧು ಹಾಗೂ ಮತ್ತೊಬ್ಬರು ಮನೆಯಿಂದ ಹೊರ ಹೋಗುತ್ತಿರುವುದು ಇಬ್ಬರೂ ಗಮನಿದರು. ರಜಿನ್‌ನನ್ನು ಹೊರಗೆ ನಿಲ್ಲಿಸಿ ಶರೋನ್ ಗ್ರೀಷ್ಮಾ ಜತೆಗೆ ಮನೆಯೊಳಗೆ ಹೋದ. ಈಗ ಮನೆಯೊಳಗೆ ಇಬ್ಬರೇ ಇದ್ದರು.
ಈ ವೇಳೆ ಇಬ್ಬರ ಮಧ್ಯೆ ಮಾತುಕತೆ ನಡೆಯಿತು. ಗ್ರೀಷ್ಮಾ ತನ್ನ ಮನೆಯಲ್ಲಿ ಎದುರಾಗುತ್ತಿರುವ ವಿರೋಧವನ್ನು ವಿವರಿಸಿ ಮತ್ತು ಬ್ರೇಕಪ್ ಮಾಡಿಕೊಳ್ಳುವ ಬಗ್ಗೆ ತಿಳಿಸಿದಳು. ಜತೆಗೆ ಶರೋನ್ ಬಳಿ ಇರುವ ತಮ್ಮ ಖಾಸಗಿ ಕ್ಷಣದ ಫೋಟೊ, ವಿಡಿಯೊ ಡಿಲೀಟ್ ಮಾಡುವಂತೆಯೂ ಸೂಚಿಸಿದಳು. ಆದರೆ ಇದಕ್ಕೆ ಶರೋನ್ ನಿರಾಕರಿಸಿದ. ಈ ಸಂಬಂದವನ್ನು ಯಾವುದೇ ಕಾರಣಕ್ಕೂ ಕಡಿದುಕೊಳ್ಳುವುದಿಲ್ಲ ಎಂದು ತಿಳಿಸಿದ.
ಈ ವಿಚಾರವನ್ನು ಅಲ್ಲಿಗೇ ನಿಲ್ಲಿಸಿದ ಗ್ರೀಷ್ಮಾ ಆತನ ಗಮನ ಬೇರೆಡೆಗೆ ತಿರುಗಿಸಿದಳು. ಹೊಟ್ಟೆ ನೋವಾದಾಗ ತಾನು ಕುಡಿಯುವ ಆಯುರ್ವೇದ ಕಷಾಯದ ಬಗ್ಗೆ ತಿಳಿಸಿದಳು. ಈ ಕಹಿ ಕಷಾಯವನ್ನು ಕುಡಿಯುವಂತೆ ಶರೋನ್ ಬಳಿ ಹಠ ಹಿಡಿದಳು. ಕೊನೆಗೆ ಆತ ಅದನ್ನು ಕುಡಿದ. ಕಷಾಯ ಕುಡಿದ ಸ್ವಲ್ಪ ಹೊತ್ತಲ್ಲೇ ಶರೋನ್‌ಗೆ ವಾಂತಿಯಾಯ್ತು. ಅದಾಗಲೇ ವಿಷ ಪ್ರಭಾವ ಬೀರತೊಡಗಿತ್ತು.
ಕಹಿಯಿಂದಾಗಿ ಹೀಗಾಗುತ್ತಿದೆ ಎಂದು ಸಮಾಧಾನಪಡಿಸಿದ ಆಕೆ ಬಳಿಕ ಮಾವಿನ ಜ್ಯೂಸ್ ನೀಡಿದಳು. ಬಳಿಕವೂ ನಿರಂತರವಾಗಿ ವಾಂತಿಯಾಗತೊಡಗಿತು. ಬಳಿಕ ಸುಸ್ತಿನಿಂದ ಮನೆಯ ಹೊರಗೆ ಬಂದ ಗೆಳೆಯಲ್ಲಿ ಏನಾಯ್ತು ಎಂದು ರಜಿನ್ ಕೇಳಿದ. ನಿಧಾನವಾಗಿ ಎಲ್ಲ ಹೇಳ್ತೇನೆ ಎಂದ ಶರೋನ್ ಬೈಕ್ ಓಡಿಸತೊಡಗಿದ. ಸ್ವಲ್ಪ ದೂರ ಬಂದಾಗ ಮತ್ತೆ ವಾಂತಿಯಾಯ್ತು. ನೀಲಿ ಬಣ್ಣ ಕಂಡು ಬೆಚ್ಚಿ ಬಿದ್ದ ರಜಿನ್ ಬಳಿ ಈಗ ಶರೋನ್ ನಿಜ ಬಾಯ್ಬಿಟ್ಟಿದ್ದ. ಕಷಾಯ ಕುಡಿದಿದ್ದರಿಂದ ಹೀಗಾಗುತ್ತಿದೆ ಎಂದ. ತೀರ ಅಸ್ವಸ್ಥನಾದ ಶರೋನ್‌ನನ್ನು ಮನೆಗೆ ಬಿಟ್ಟು ರಜಿನ್ ಹೊರಟು ಹೋಗಿದ್ದ.
ರಾತ್ರಿ ಆತನನ್ನು ಮನೆಯವರು ಪಾರಶಾಲ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಪಡೆದು ಮನೆಗೆ ಮರಳಿದ ಶರೋನ್ ಮತ್ತೊಮ್ಮೆ ಅಸ್ವಸ್ಥನಾದ. ಬಹು ಅಂಗಾಂಗ ವೈಫಲ್ಯಕ್ಕೊಳಗಾದ, ಬಾಯಲ್ಲಿ ಹುಣ್ಣು ಉಂಟಾದ ಆತನನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಕಿಡ್ನಿ ಜಖಂ ಆದ ಹಿನ್ನೆಲೆಯಲ್ಲಿ ಡಯಾಲಿಸಿಸ್ ಮಾಡುತ್ತಿದ್ದಾಗ ನರ್ಸ್ ಒಬ್ಬರು ಆ್ಯಸಿಡ್‌ನಿಂದ ಹೀಗಾಗಿದೆ ಎನ್ನುವ ಸಂಶಯ ವ್ಯಕ್ತಪಡಿಸಿದರು. 1 ಹನಿ ನೀರು ಕುಡಿಯಲೂ ಸಾಧ್ಯವಾಗದೆ, ಜೀವ ಹಿಂಡುವ ನೋವಿನಿಂದ ಒದ್ದಾಡಿ ಕೊನೆಗೆ ಶರೋನ್ 11 ದಿನಗಳ ಬಳಿಕ ಅ. 25ರಂದು ಸಾವಿಗೆ ಶರಣಾದ.
ಈ ಸುದ್ದಿಯನ್ನೂ ಓದಿ: Sharon Raj Murder Case: ಕೇರಳದ ಶರೋನ್ ರಾಜ್ ಕೊಲೆ ಪ್ರಕರಣ; ಪ್ರೇಯಸಿ ಗ್ರೀಷ್ಮಾಗೆ ಗಲ್ಲುಶಿಕ್ಷೆ!
ಬಳಿಕ ಗ್ರೀಷ್ಮಾನ ಮೇಲೆ ಶರೋನ್ ಮನೆಯವರು ದೂರು ದಾಖಲಿಸಿದರು. ತನಿಖೆ ಮೇಲೆ ಗ್ರೀಷ್ಮಾ ಕಷಾಯದಲ್ಲಿ ಕಳೆ ನಾಶಕ ಬೆರೆಸಿರುವುದು ತಿಳಿದು ಬಂತು. ಈ ಹಿಂದೆಯೂ ಆಕೆ ಜ್ಯೂಸ್‌ನಲ್ಲಿ ಪ್ಯಾರಸಿಟಮಾಲ್ ಮಾತ್ರೆ ಬೆರೆಸಿ ಜ್ಯೂಸ್ ಚಾಲೆಂಜ್ ಹೆಸರಿನಲ್ಲಿ ಶರೋನ್‌ಗೆ ಕುಡಿಸಿರುವುದು ಬೆಳಕಿಗೆ ಬಂದಿತ್ತು. ಅಲ್ಲದೆ ಅಕೆ ಪ್ಯಾರಸಿಟಮಾಲ್ ಅತಿಯಾದ ಬಳಕೆಯಿಂದ ಯಾವೆಲ್ಲ ತೊಂದರೆ ಎದುರಾಗುತ್ತದೆ ಎನ್ನುವುದನ್ನು ಗೂಗಲ್‌ನಲ್ಲಿ ಹುಡುಕಾಡಿದ್ದೂ ತಿಳಿದು ಬಂತು. ಹೀಗೆ ಪೊಲೀಸರ ತನಿಖೆ ವೇಳೆ ಗ್ರೀಷ್ಮಾ ವಿರುದ್ಧದ ಆರೋಪ ಸಾಬೀತಾಗಿದ್ದು, ಆಕೆಗೆ ಮರಣ ದಂಡನೆ ವಿಧಿಸಿ ಜ. 20ರಂದು ನೆಯ್ಯಾಂಟಿಗರ ಕೋರ್ಟ್ ತೀರ್ಪು ನೀಡಿದೆ. ಜತೆಗೆ ಈ ಕೃತ್ಯದಲ್ಲಿ ಸಹಕರಿಸಿದ ಆಕೆಯ ಮಾವ ನಿರ್ಮಲ್ ಕುಮಾರ್‌ಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣದ 2ನೇ ಆರೋಪಿ ಗ್ರೀಷ್ಮಾ ತಾಯಿ ಸಿಂಧುವನ್ನು ಖಲಾಸೆಗೊಳಿಸಲಾಗಿದೆ. ಅತೀ ಅಪರೂಪದ ಪ್ರಕರಣ ಎಂದು ಹೇಳಿರುವ ಕೋರ್ಟ್ ಈ ತೀರ್ಪು ಪ್ರಕಟಿಸಿದೆ. ಇದೀಗ ಶರೋನ್ ರಾಜ್ ಆತ್ಮ ಗ್ರೀಷ್ಮಾಗೆ ಸಿಕ್ಕ ಶಿಕ್ಷೆಯಿಂದ ಸಮಾಧಾನಪಟ್ಟುಕೊಂಡಿರಬಹುದಾ ಅಥವಾ ನೊಂದುಕೊಂಡಿರಬಹುದಾ? ಗೊತ್ತಿಲ್ಲ.