#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Sharon Raj Murder Case: ಕೇರಳದ ಶರೋನ್‌ ರಾಜ್‌ ಕೊಲೆ ಪ್ರಕರಣ; ಪ್ರೇಯಸಿ ಗ್ರೀಷ್ಮಾಗೆ ಗಲ್ಲುಶಿಕ್ಷೆ!

ಶರೋನ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆತನ ಗೆಳತಿ ಎಸ್.ಎಸ್. ಗ್ರೀಷ್ಮಾಗೆ ನೆಯ್ಯಟ್ಟಿಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ. ಬ್ರೇಕಪ್‌ಗೆ ಒಪ್ಪದ ಕಾರಣಕ್ಕೆ ತನ್ನ ಗೆಳೆಯನಿಗೆ ವಿಷವುಣಿಸಿ ಕೊಂದ ಆರೋಪವನ್ನು ಗ್ರೀಷ್ಮಾ ಎದುರಿಸುತ್ತಿದ್ದಳು.

ಪ್ರಿಯಕರನಿಗೆ ಆಯುರ್ವೇದ ಔಷಧಿಯಲ್ಲಿ ವಿಷ ಬೆರೆಸಿ ಕೊಂದ ಪಾತಕಿಗೆ ಗಲ್ಲುಶಿಕ್ಷೆ-ಕೇರಳದ ಶರೋನ್‌ ರಾಜ್‌ ಕೊಲೆ ಕೇಸ್‌ನಲ್ಲಿ ಮಹತ್ವದ ತೀರ್ಪು

Sharon Raj Murder Case

Profile Deekshith Nair Jan 20, 2025 1:26 PM

ತಿರುವನಂತಪುರಂ: ಶರೋನ್ ರಾಜ್ ಕೊಲೆ ಪ್ರಕರಣಕ್ಕೆ (Sharon Raj Murder Case) ಸಂಬಂಧಿಸಿ ಆತನ ಗೆಳತಿ ಎಸ್.ಎಸ್. ಗ್ರೀಷ್ಮಾಗೆ ನೆಯ್ಯಟ್ಟಿಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ.

ಗ್ರೀಷ್ಮಾ ತನ್ನ ಗೆಳೆಯ ಶರೋನ್ ರಾಜ್(23)ನನ್ನು ವಿಷವುಣಿಸಿ(ಕೀಟನಾಶಕ) ಕೊಲೆ ಮಾಡಿದ್ದಳು. ಪ್ರಕರಣದ ಮೂರನೇ ಆರೋಪಿ ಗ್ರೀಷ್ಮಾ ಚಿಕ್ಕಪ್ಪ ನಿರ್ಮಲಕುಮಾರನ್ ನಾಯರ್ ಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ ಪ್ರಕರಣದಲ್ಲಿ 2ನೇ ಆರೋಪಿ ಎಂದು ಹೇಳಲಾದ ಗ್ರೀಷ್ಮಾ ತಾಯಿ ಸಿಂಧುವನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ.

ಏನಿದು ಪ್ರಕರಣ?

ಕೇರಳದ ತಿರುವನಂತಪುರದಲ್ಲಿ 2022 ಅಕ್ಟೋಬರ್ 14 ರಂದು ರೇಡಿಯೋಲಜಿ ವಿದ್ಯಾರ್ಥಿ ಶರೋನ್ ರಾಜ್ ಬಹು ಅಂಗಾಂಗ ವೈಫಲ್ಯದಿಂದಾಗಿ ಮೃತಪಟ್ಟಿದ್ದ. ಆದರೆ ಆತನ ಕುಟುಂಬಸ್ಥರು ಇದು ಸಹಜ ಸಾವಲ್ಲ ಕೊಲೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಹೀಗೆ ವಿಚಾರಣೆ ಕೈಗೆತ್ತಿಕೊಂಡಿದ್ದ ಪೊಲೀಸರು ಆತನ ಪ್ರೇಯಸಿ ಗ್ರೀಷ್ಮಾಳನ್ನೂ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಭಯಾನಕ ಸಂಗತಿಯೊಂದು ಬಯಲಾಗಿತ್ತು. ವಿಚಾರಣೆ ವೇಳೆ ವಿಷವುಣಿಸಿ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಳು.

ಶರೋನ್ ರಾಜ್ ಜೊತೆಗಿನ ಸಂಬಂಧದಿಂದ ದೂರವಾಗಿ ಗ್ರೀಷ್ಮಾ 2022 ಮಾರ್ಚ್ 4ರಂದು ಯೋಧನೊಬ್ಬನ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಬಳಿಕ ಕೆಲವೇ ತಿಂಗಳ ಅಂತರದಲ್ಲಿ ಗ್ರೀಷ್ಮಾ ಮತ್ತು ಶರೋನ್ ಮತ್ತೆ ಹತ್ತಿರವಾಗಿದ್ದಾರೆ. ನಂತರ ಇವರಿಬ್ಬರು ಯಾರಿಗೂ ತಿಳಿಯದಂತೆ ಮದುವೆ ಆಗಿದ್ದಾರೆ. ಯೋಧನ ಜತೆ ತನ್ನ ಮದುವೆ ದಿನ ಸಮೀಪಿಸುತ್ತಿದ್ದಂತೆ ಗ್ರೀಷ್ಮಾ, ಶರೋನ್‌ ರಾಜ್‌ನಿಂದ ದೂರವಾಗಲು ಬಯಸಿದ್ದಾಳೆ. ಸಾಕಷ್ಟು ಬಾರಿ ಮನವೊಲಿಸುವ ಪ್ರಯತ್ನ ಮಾಡಿದ್ದರೂ, ಶರೋನ್ ಮಾತ್ರ ಇದಕ್ಕೆ ಒಪ್ಪಿರಲಿಲ್ಲ. ಕೊನೆಗೆ ಅವನನ್ನು ಮುಗಿಸಲು ಮಾಸ್ಟರ್‌ ಪ್ಲ್ಯಾನ್‌ ಅನ್ನೇ ಮಾಡಿಕೊಂಡಿದ್ದಳು.

ಅಕ್ಟೋಬರ್ 14ರಂದು ಶರೋನ್ ರಾಜ್‌ನನ್ನು ತನ್ನ ಮನೆಗೆ ಕರೆಸಿಕೊಂಡ ಗ್ರೀಷ್ಮಾ, ಆಯುರ್ವೇದ ಔಷಧಿಯಲ್ಲಿ ವಿಷ ಬೆರೆಸಿ ಕುಡಿಸಿದ್ದಳು. ಬಳಿಕ ಅಸ್ವಸ್ಥಗೊಂಡ ಶರೋನ್ ರಾಜ್, ತನ್ನ ಸ್ನೇಹಿತನೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದ.



ಕೋರ್ಟ್‌ ತೀರ್ಪಿನಲ್ಲೇನಿದೆ?

ಗ್ರೀಷ್ಮಾ ತನ್ನ ಗೆಳೆಯ ಶರೋನ್ ಗೆ ನಂಬಿಕೆಗೆ ದ್ರೋಹ ಮಾಡಿದ್ದಾಳೆ. ಜೀವನದ ಕೊನೆಯ ಅವಧಿಯಲ್ಲೂ ಶರೋನ್ ಗ್ರೀಷ್ಮಾಳನ್ನು ಪ್ರೀತಿಸುತ್ತಲೇ ಇದ್ದರು ಮತ್ತು ಅವಳಿಗೆ ಶಿಕ್ಷೆಯಾಗಬಾರದು ಎಂದು ಆಶಿಸಿದ್ದರು ಎಂದು ನ್ಯಾಯಾಲಯವು ತನ್ನ 586 ಪುಟಗಳ ತೀರ್ಪಿನಲ್ಲಿ ವಿವರವಾಗಿ ತಿಳಿಸಿದೆ. ಗ್ರೀಷ್ಮಾ ಶರೋನ್ ರನ್ನು ಕೊಲೆ ಮಾಡಿ ಕ್ರೌರ್ಯ ಮೆರೆದಿದ್ದಾಳೆ ಎಂಬ ಪ್ರಾಸಿಕ್ಯೂಷನ್ ವಾದವನ್ನು ನ್ಯಾಯಾಲಯವು ಎತ್ತಿಹಿಡಿದಿದೆ.



ಗ್ರೀಷ್ಮಾ ನೀಡಿದ್ದ ಕೀಟನಾಶಕಯುಕ್ತ ಆಯುರ್ವೇದ ಕಷಾಯ ಕುಡಿದ ಕಾರಣ ಅಂಗಾಂಗ ವೈಫಲ್ಯದಿಂದ ಶರೋನ್ ರಾಜ್ ಮೃತಪಟ್ಟಿದ್ದಾರೆ. ಗ್ರೀಷ್ಮಾ ಉದ್ದೇಶಪೂರ್ವಕವಾಗಿಯೇ ಕೊಲೆ ಮಾಡಿದ್ದಾಳೆ ಎಂದು ನ್ಯಾಯಾಲಯವು ತೀರ್ಪಿನ ವೇಳೆ ಹೇಳಿದೆ.

ಈ ಸುದ್ದಿಯನ್ನೂ ಓದಿ:Cylinder Blast: ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್‌ಗಳ ಸ್ಫೋಟ!

ಗ್ರೀಷ್ಮಾ ವಿರುದ್ಧ 48 ಸಾಂದರ್ಭಿಕ ಸಾಕ್ಷ್ಯಗಳನ್ನು ನ್ಯಾಯಾಲಯ ಉಲ್ಲೇಖಿಸಿದ್ದು ಆರೋಪಿಗೆ ಗರಿಷ್ಠ ಶಿಕ್ಷೆ ವಿಧಿಸಲು ಯಾವುದೇ ಅಡೆತಡೆಗಳಿಲ್ಲ ಎಂದು ಹೇಳಿದೆ. ಗ್ರೀಷ್ಮಾಳ ಆತ್ಮಹತ್ಯೆ ಯತ್ನವು ತನಿಖೆಯನ್ನು ಬೇರೆಡೆಗೆ ತಿರುಗಿಸುವ ತಂತ್ರವಾಗಿತ್ತು. ಅವಳು ಹಂತ ಹಂತವಾಗಿ ಕೊಲೆಯನ್ನು ಯೋಜಿಸಿದ್ದಳು. ಗ್ರೀಷ್ಮಾ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾಳೆ ಎಂದು ನ್ಯಾಯಾಲಯ ಹೇಳಿದೆ.

ಶರೋನ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೊದಲ ಆರೋಪಿ ಎಸ್.ಎಸ್. ಗ್ರೀಷ್ಮಾ(24) ಮತ್ತು ಮೂರನೇ ಆರೋಪಿ ನಿರ್ಮಲಕುಮಾರನ್ ನಾಯರ್ ಅವರನ್ನು ನ್ಯಾಯಾಲಯ ಶುಕ್ರವಾರ(ಜ.17) ತಪ್ಪಿತಸ್ಥರೆಂದು ಘೋಷಿಸಿತ್ತು.