Shiv Rajkumar: ʼಮೃತ್ಯುಂಜಯʼ ಶಿವಣ್ಣ ಭರ್ಜರಿ ವೆಲ್‌ಕಮ್‌ಗೆ ಅಭಿಮಾನಿಗಳು ಸಜ್ಜು
ಒಂದು ತಿಂಗಳ ಬಳಿಕ ಶಿವಣ್ಣ ಬೆಂಗಳೂರಿಗೆ ಹಿಂತಿರುಗುತ್ತಿದ್ದಾರೆ. ಹೀಗಾಗಿ ಶಿವಣ್ಣನಿಗೆ ಅದ್ಧೂರಿ ಸ್ವಾಗತ ಕೋರುವುದಕ್ಕೆ ಅಭಿಮಾನಿ ಬಳಗ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಬೆಂಗಳೂರು: ಅಮೆರಿಕಾದಲ್ಲಿ (USA) ಚಿಕಿತ್ಸೆ ಪಡೆದುಕೊಂಡು ಕ್ಯಾನ್ಸರ್‌ಮುಕ್ತರಾಗಿ ಭಾರತಕ್ಕೆ ಮರಳುತ್ತಿರುವ ಹ್ಯಾಟ್ರಿಕ್ ಸ್ಟಾರ್ ಶಿವರಾಜ್‌ಕುಮಾರ್ (Shiv Rajkumar) ಅವರನ್ನು ಭರ್ಜರಿಯಾಗಿ ಸ್ವಾಗತಿಸಲು ಅವರ ಅಭಿಮಾನಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ʼಮೃತ್ಯುಂಜಯʼನಾಗಿ ಬೆಂಗಳೂರಿಗೆ (Bengaluru) ಮರಳುತ್ತಿರುವ ಶಿವಣ್ಣ ಅವರನ್ನು ಬರಮಾಡಿಕೊಳ್ಳಲು ಅವರ ಪ್ರೇಕ್ಷಕರು ಕೂಡ ಕಾತರದಿಂದ ಕಾಯುತ್ತಿದ್ದಾರೆ.
ಮುತ್ತು ನಿವಾಸದಲ್ಲಿ ಶಿವಣ್ಣನಿಗೆ ಅದ್ದೂರಿ ಸ್ವಾಗತಕ್ಕೆ ಶಿವಸೇನಾ ಫ್ಯಾನ್ಸ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜನವರಿ 26ರಂದು ಶಿವಣ್ಣ ಭಾರತಕ್ಕೆ ಮರಳಲಿದ್ದಾರೆ ಎಂದು ಗೊತ್ತಾಗಿದೆ. ಸದ್ಯಕ್ಕೆ ಅಮೆರಿಕಾದಲ್ಲಿರುವ ಶಿವರಾಜ್‌ಕುಮಾರ್ ಅಲ್ಲಿರುವ ಕನ್ನಡಿಗರನ್ನು ಮೀಟ್ ಮಾಡುತ್ತ ಆಕ್ಟಿವ್ ಆಗಿದ್ದಾರೆ. ಕನಿಷ್ಠ ಒಂದು ತಿಂಗಳ ವಿಶ್ರಾಂತಿಗೆ ವೈದ್ಯರು ಅವರಿಗೆ ಸಲಹೆ ನೀಡಿದ್ದರು.
ಶಿವಣ್ಣನಿಗೆ ನಡೆಯುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ ಅಂತ ಶಿವಣ್ಣನ ಫ್ಯಾನ್ಸ್ ಹರಕೆ ಹೊತ್ತು ಪೂಜೆ ಸಲ್ಲಿಸಿದ್ದರು. ಇದಾಗಿ ಒಂದು ತಿಂಗಳ ಬಳಿಕ ಶಿವಣ್ಣ ಬೆಂಗಳೂರಿಗೆ ಹಿಂತಿರುಗಲಿದ್ದಾರೆ. ಹೀಗಾಗಿ ಶಿವಣ್ಣನಿಗೆ ಅದ್ಧೂರಿ ಸ್ವಾಗತ ಕೋರುವುದಕ್ಕೆ ಅಭಿಮಾನಿ ಬಳಗ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅಖಿಲ ಕರ್ನಾಟಕ ಡಾ.ಶಿವರಾಜ್‌ಕುಮಾರ್ ಸೇನಾ ಸಮಿತಿ ಹಾಗೂ ಗಂಡುಗಲಿ ಡಾ.ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘ ಜಂಟಿಯಾಗಿ ಸೇರಿ ಶಿವಣ್ಣನಿಗೆ ಸ್ವಾಗತ ಮಾಡಲು ಸಿದ್ಧತೆ ನಡೆಸಿದ್ದಾರೆ.
ಜನವರಿ 26ರಂದು ಮುತ್ತು ನಿವಾಸದಲ್ಲಿ ಶಿವಣ್ಣನಿಗೆ ಗ್ರ್ಯಾಂಡ್ ವೆಲ್ಕಮ್ ನೀಡಲು ಶಿವಸೇನಾ ಅಭಿಮಾನಿಗಳಿಗೆ ಕರೆ ನೀಡಲಾಗಿದೆ. ಅಂದು ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಹಾಗೂ ಶಿವಣ್ಣ ಕೈಯಿಂದ ಕೇಕ್ ಕಟಿಂಗ್ ಇರಲಾಗುತ್ತದೆ ಎನ್ನಲಾಗಿದೆ. ಜನವರಿ 26ರ ಬೆಳಗ್ಗೆ 9 ಗಂಟೆಗೆ ಶ್ರೀ ಮುತ್ತು ನಿವಾಸದಲ್ಲಿ ಅಭಿಮಾನಿಗಳ ಸಂಭ್ರಮ ಶುರುವಾಗಲಿದೆ.
"ನಮ್ಮ ಪ್ರೀತಿಯ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರು ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ತಮ್ಮ ತಾಯ್ನಾಡಿಗೆ ಅದ್ದೂರಿಯಾಗಿ ಹಿಂದಿರುಗಲು ಸಿದ್ಧರಾಗಿದ್ದಾರೆ. ಅಮೆರಿಕದ ಮಿಯಾಮಿ ಕ್ಯಾನ್ಸರ್ ಹಾಸ್ಪಿಟಲ್‌ನಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ನಂತರ, ಡಾ. ಶಿವರಾಜ್ ಕುಮಾರ್ ಈಗ ಉತ್ತಮವಾಗಿ ಗುಣಮುಖರಾಗಿದ್ದಾರೆ ಮತ್ತು ಕ್ಯಾನ್ಸರ್ ಮುಕ್ತರಾಗಿದ್ದಾರೆ. ಡಾ. ಶಿವರಾಜ್ ಕುಮಾರ್ ಅವರನ್ನು ತಮ್ಮ ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಲು ಉತ್ಸಾಹದಿಂದ ಕಾಯುತ್ತಿದ್ದಾರೆ.
ಜನವರಿ 26ರಂದು ಏರ್‌ಪೋರ್ಟ್‌ನ ಟೋಲ್ ಬಳಿ ಬೆಳಿಗ್ಗೆ 9 ಗಂಟೆಗೆ ಹಾಗೂ ಶ್ರೀ ಮುತ್ತು ನಿವಾಸದಲ್ಲಿ ಬೆಳಿಗ್ಗೆ 10 ಗಂಟೆಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತದ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ. ಈ ಮಹತ್ವದ ಸಂದರ್ಭದಲ್ಲಿ ಭಾಗವಹಿಸಲು ಹಾಗೂ ನಮ್ಮ ದೊರೆ ಮೇಲಿನ ನಿರಂತರ ಪ್ರೀತಿ ಮತ್ತು ಬೆಂಬಲವನ್ನು ತೋರಿಸಲು ಎಲ್ಲಾ ಅಭಿಮಾನಿಗಳು ಮತ್ತು ಸನ್ಮಾನ್ಯರನ್ನು ಆಹ್ವಾನಿಸುತ್ತೇವೆ. ಡಾ. ಶಿವರಾಜ್ ಕುಮಾರ್ ಅವರ ಈ ಜೀವನದ ಮುಂದಿನ ಅಧ್ಯಾಯದ ಭಾಗವಾಗಿ ಅವರಿಗೆ ಇನ್ನಷ್ಟು ಅಭಿಮಾನದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತ 2025ರ ಹೊಸ ವರ್ಷವನ್ನು ಕರುನಾಡ ಚಕ್ರವರ್ತಿಯ ಜೊತೆಗೂಡಿ ಆಚರಿಸೋಣ" ಎಂದು ಶಿವಸೇನಾ ಅಭಿಮಾನಿಗಳ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.