ಶಿರಸಿ : ಶಿರಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಮಾಧ್ಯಮ ಶ್ರೀ ಪ್ರಶಸ್ತಿಗೆ ವಿಶ್ವವಾಣಿ ಹಾಗೂ ದೂರದರ್ಶನ ವರದಿಗಾರ್ತಿ ವಿನುತಾ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ. ಇಲ್ಲಿನ ಪತ್ರಿಕಾ ಭವನದಲ್ಲಿ ತಾಲೂಕಾ ಅಧ್ಯಕ್ಷ ಸಂದೇಶ ಭಟ್ ಬೆಳಖಂಡ ನೇತೃತ್ವದಲ್ಲಿ ನಡೆದ ಕಾರ್ಯಕಾರಣಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
2006ರಿಂದ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ವಿನುತಾ ಹೆಗಡೆಯವರು ಯಲ್ಲಾಪುರ ತಾಲೂಕಿನ ಹಿಂದುಳಿದ ಗ್ರಾಮ ಭಾಗಿನಕಟ್ಟಾದಲ್ಲಿ 1979ರಂದು ಜನಿಸಿದವರು. ಇವರು ಹೈಸ್ಕೂಲು ವಿದ್ಯಾಭ್ಯಾಸವನ್ನು 14 ಕಿಲೋಮೀಟರ್ ದೂರ ನಡೆದು ಪೂರೈಸಿದ್ದಾರೆ. ಮದುವೆ ನಂತರದಲ್ಲಿ ಧಾರವಾಡ ಜೆ ಎಸ್ ಎಸ್ ನಲ್ಲಿ ಬಿ.ಎ. ಹಾಗೂ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ ಪಡೆದಿದ್ದಾರೆ.
ಇದನ್ನೂ ಓದಿ: Sirsi news: ತಹಶೀಲ್ದಾರ್ ಹುದ್ದೆ ಖಾಲಿ ಇದ್ದರೂ ಜನಪ್ರತಿನಿಧಿಗಳು ಗಮನ ವಹಿಸುತ್ತಿಲ್ಲ
ಹೊಸದಿಗಂತ, ಜನ ಮಾಧ್ಯಮ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಾ ಕಡಲವಾಣಿ ವರದಿಗಾರಿಕೆ, ಸಂಪಾದಕೀಯ ಎರಡನ್ನೂ ನಿರ್ವಹಿಸಿ 2008-09ರಲ್ಲಿ ಧ್ಯೇಯನಿಷ್ಠ ಪತ್ರಕರ್ತರಲ್ಲಿ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದು, ಕೈಗಾ ಅಣುವಿದ್ಯುತ್ ಸ್ಥಾವರದಿಂದ ಸೂಸುವ ವಿಕಿರಣ ದಿಂದಾಗುವ ಕ್ಯಾನ್ಸರ್ ಕುರಿತ ಇವರ ಸರಣಿ ಲೇಖನ ದೇಶವ್ಯಾಪಿ ಸಂಚಲನ ಮೂಡಿಸಿತ್ತು.
ನಂತರ ಹುಬ್ಬಳ್ಳಿ ಧಾರವಾಡದಲ್ಲಿ ಹೊಸದಿಗಂತ ಪತ್ರಿಕೆಯ ವರದಿಗಾರರಾಗಿ ಸೈ ಎನಿಸಿಕೊಂಡ ಇವರು 2014 ರಿಂದ ಕನ್ನಡಪ್ರಭ ಉಪ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರ ವಿಶ್ವವಾಣಿ ದಿನಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕಿಯಾಗಿ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.
ಕಳೆದ ಆರು ಏಳು ವರ್ಷಗಳಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ವರದಿಗಾರ್ತಿಯಾಗಿ ವಿಶ್ವವಾಣಿ ದಿನಪತ್ರಿಕೆಯ ಡಿಸ್ಟ್ರಿಕ್ಟ್ ಕರೆಸ್ಪಾಂಡೆಂಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಎರಡು ವರ್ಷಗಳ ಕಾಲ ಲೋಕಧ್ವನಿ ಸುದ್ದಿ ಸಂಪಾದಕಿಯಾಗಿ, ವಿಶ್ವವಾಣಿಯ ಸ್ಥಾನಿಕ ಸಂಪಾದಕಿ ಯಾಗಿ ಕಾರ್ಯನಿರ್ವಹಿಸಿದ್ದಾರೆ.
ಸಾಕಷ್ಟು ಸನ್ಮಾನ, ಪುರಸ್ಕಾರಗಳು ಇವರಿಗೆ ಲಭ್ಯವಾಗಿದೆ. ಲೋಕಧ್ವನಿಯಲ್ಲಿ ಕಂಡಿದ್ದು ಕಾಡಿದ್ದು ಅಂಕಣವನ್ನು ಬರೆಯುತ್ತಿದ್ದಾರೆ. ಇವರ ಮಗಳು ದೆಹಲಿಯಲ್ಲೇ ಉನ್ನತ ವ್ಯಾಸಂಗ ಮಾಡು ತ್ತಿದ್ದಾಳೆ. ಹಳ್ಳಿಯಿಂದ ದೆಹಲಿಯವರೆಗೆ ವರದಿಗಾರಿಕೆ ನೀಡಿದ ಹೆಮ್ಮೆ ವಿನುತಾ ಹೆಗಡೆ ಯವರದ್ದಾಗಿದೆ.
ಇನ್ನು ದೃಶ್ಯ ಮಾದ್ಯಮ ಹಾಗೂ ಪ್ರಿಂಟ್ ಮಾದ್ಯಮದಲ್ಲಿ ಎರಡರಲ್ಲೂ ಕಾರ್ಯನಿರ್ವಹಿಸುವ ಇವರು ಬರೆದ ಕಥೆ ಕವನಗಳು ಸಾಕಷ್ಟು ಪತ್ರಿಕೆ ಹಾಗೂ ಆಕಾಶವಾಣಿಗಳಲ್ಲೂ ಪ್ರಸಾರವಾಗಿದೆ. ಇವರನ್ನು ಮುಂಬರುವ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವಿಸಲಾಗುತ್ತದೆ ಎಂದು ತಾಲೂಕಾ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.