Kiran Upadhyay Column: ಶಿರಸಿಯ ಸಿರಿ: ಯುಗಾದಿಯ ಶೋಭಾಯಾತ್ರೆ
ಹಬ್ಬವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ, ಹಬ್ಬವೆಂದರೆ ಸಂಭ್ರಮ, ಸಡಗರ. ಆದರೆ ಒಪ್ಪಬೇಕಾದ ಮಾತೆಂದರೆ, ಈಗ ಹಬ್ಬಗಳು ಮುಂಚಿನಂತಿಲ್ಲ, ದಿನದಿಂದ ದಿನಕ್ಕೆ ಆಚರಣೆಗಳು ಮೊಟಕುಗೊಳ್ಳುತ್ತಿವೆ, ಸಡಗರ ಕ್ಷೀಣಿಸುತ್ತಿದೆ. ಇದಕ್ಕೆ ಅಪವಾದ ಎಂಬಂತೆ ದೇಶದ ಕೆಲವು ಕಡೆಗಳಲ್ಲಿ ಕೆಲವು ಹಬ್ಬಗಳನ್ನು ವಿಭಿನ್ನವಾಗಿ ಆಚರಿಸುವುದೂ ಇದೆ.


ವಿದೇಶವಾಸಿ
dhyapaa@gmail.com
ಹಳೆಯದು ಕಳೆಯಿತು, ಹೊಸ ವರ್ಷ ಶುರುವಾಯಿತು. ಬಹುತೇಕ ಜನರಿಗೆ ಯುಗಾದಿ ಎಂದರೆ ಹೊಸ ವರ್ಷಕ್ಕೆ ನಾಂದಿ. ಮನೆಯಲ್ಲಿ ಪೂಜೆ, ಬೇವು-ಬೆಲ್ಲ ಸೇವನೆ, ವಿತರಣೆ. ಅದರೊಂದಿಗೆ, ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ’ ಹಾಡು. ಯುಗಾದಿಯನ್ನು ಊರ ಉತ್ಸವದಂತೆ, ನಾಡಹಬ್ಬದಂತೆ ಸಂಭ್ರಮಿಸಿ ಆಚರಿಸುವ, ಇಡೀ ಪಟ್ಟಣವನ್ನೇ ಮದುವಣ ಗಿತ್ತಿ ಯಂತೆ ಶೃಂಗಾರಗೊಳಿಸುವ ಕುರಿತು ಕೇಳಿದ್ದೀರಾ? ಊರಿನ ಜನರೆಲ್ಲ ಒಟ್ಟಾಗಿ ಕಲೆತು, ಒಂದಷ್ಟು ಶ್ರವಣ, ಒಂದಷ್ಟು ಮನನ, ನಂತರ ಊರಿನ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸುವ ವಿಷಯ ತಿಳಿದಿದ್ದೀರಾ? ಇಂಥ ವಿಷಯ ವನ್ನು ಓದಿದರೆ, ಕೇಳಿದರೆ ಅದರ ಅಗಾಧತೆಯ ಅರಿವಾಗುವುದಿಲ್ಲ.
ಅದೇನಿದ್ದರೂ ಕಣ್ಣಿನಿಂದ ಕಾಣಬೇಕಾದದ್ದು, ಸ್ವತಃ ಭಾಗವಹಿಸಬೇ ಕಾದದ್ದು, ತನ್ಮೂಲಕ ಅನುಭವಿಸಿ ಆನಂದಿಸಬೇಕಾದದ್ದು. ಭಾರತೀಯ ಹಬ್ಬಗಳೇ ವಿಶೇಷ. ಅದರಲ್ಲೂ, ಹಿಂದೂ ಧರ್ಮದಲ್ಲಿ ಇರುವಷ್ಟು ಹಬ್ಬಗಳು ಇನ್ನೆಲ್ಲೂ ಇರಲಿಕ್ಕಿಲ್ಲ. ಪ್ರತಿ ಹಬ್ಬಕ್ಕೂ ಅದರದ್ದೇ ಆದ ವಿಶೇಷತೆಯಿದೆ, ಘನತೆಯಿದೆ, ರೀತಿ-ರಿವಾಜಿದೆ, ಆಚರಣೆಯ ವಿಧಾನವಿದೆ.
ಅದೆಲ್ಲವೂ ಹೌದಾದರೂ, ಹಬ್ಬವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ, ಹಬ್ಬವೆಂದರೆ ಸಂಭ್ರಮ, ಸಡಗರ. ಆದರೆ ಒಪ್ಪಬೇಕಾದ ಮಾತೆಂದರೆ, ಈಗ ಹಬ್ಬಗಳು ಮುಂಚಿನಂತಿಲ್ಲ, ದಿನದಿಂದ ದಿನಕ್ಕೆ ಆಚರಣೆಗಳು ಮೊಟಕುಗೊಳ್ಳುತ್ತಿವೆ, ಸಡಗರ ಕ್ಷೀಣಿಸುತ್ತಿದೆ. ಇದಕ್ಕೆ ಅಪವಾದ ಎಂಬಂತೆ ದೇಶದ ಕೆಲವು ಕಡೆಗಳಲ್ಲಿ ಕೆಲವು ಹಬ್ಬಗಳನ್ನು ವಿಭಿನ್ನವಾಗಿ ಆಚರಿಸುವುದೂ ಇದೆ.
ಇದನ್ನೂ ಓದಿ: Kiran Upadhyay Column: ಗಗನದಲ್ಲಿ ಸಖಿ; ಬದುಕಿನಲ್ಲಿ ಅಸುಖಿ
ಇಂಥ ಸುಂದರ ಅಪವಾದ ಹೊತ್ತ ಊರುಗಳಲ್ಲಿ ಶಿರಸಿ ಪಟ್ಟಣವೂ ಒಂದು. ಕಳೆದ 27 ವರ್ಷಗಳಿಂದ ‘ಯುಗಾದಿ ಎಂದರೆ ಶಿರಸಿ’ ಎನ್ನುವಂತಾಗಿದೆ. ನಿಜ, ಶಿರಸಿಯಲ್ಲಿ ಯುಗಾದಿ ಹಬ್ಬ ನಡೆಯುವ ಹಾಗೆ ರಾಜ್ಯದ, ದೇಶದ, ಅಲ್ಲ ವಿಶ್ವದ ಇನ್ಯಾವುದೇ ಭಾಗದಲ್ಲಿಯೂ ನಡೆಯಲಿಕ್ಕಿಲ್ಲ. ಅಸಲಿಗೆ ಯುಗಾದಿ ಎಂದರೆ ಹಿಂದೂ ವರ್ಷದ ಆರಂಭದ ದಿನ. ಆದರೆ ಶಿರಸಿಯಲ್ಲಿ ಇದು ವರ್ಷದ ಆರಂಭದ ದಿನದೊಂದಿಗೆ ಹಬ್ಬದ ದಿನವೂ ಹೌದು, ಉತ್ಸವದ ದಿನವೂ ಹೌದು,
ಯಾತ್ರೆಯ ದಿನವೂ ಹೌದು! ಹಾ, ಹಾ... ಯಾತ್ರೆಯೆಂದರೆ ತೀರ್ಥ ಯಾತ್ರೆಯಲ್ಲ, ಇದು ಶಿರಸಿಯ ಸಿರಿ- ಶೋಭಾಯಾತ್ರೆ! ಹೀಗೆ ಹೇಳುವುದಕ್ಕೆ ಕಾರಣವಿದೆ. ಶಿರಸಿಯಲ್ಲಿ ಯುಗಾದಿ ಕೇವಲ ಹೆಸರಿಗೆ ಮಾತ್ರ ಯುಗಾದಿಯಲ್ಲ. ಇಲ್ಲಿ ಸ್ವಲ್ಪ ಭಿನ್ನ. ಯುಗಾದಿಗೆ 3-4 ದಿನ ಮುಂಚಿತವಾಗಿಯೇ ಇಡೀ ಊರೇ ಶೃಂಗಾರಗೊಳ್ಳುತ್ತದೆ. ಗಲ್ಲಿ, ಬೀದಿ, ವೃತ್ತಗಳ ಮೇಲೆ ಕೇಸರಿ ಪತಾಕೆ ಎಲ್ಲರನ್ನೂ ಸ್ವಾಗತಿಸಲು ಸಿದ್ಧವಾಗಿರುತ್ತದೆ.
ಹಬ್ಬದ ದಿನ ಬಹುತೇಕ ಮನೆಗಳ ಮುಂದೆ ರಂಗೋಲಿ ಹರಡಿಕೊಂಡಿರುತ್ತದೆ. ಬಹುತೇಕ ಹಿಂದೂ ಮನೆಗಳ ಮುಂದೆ ಅಥವಾ ಮನೆಯ ಮೇಲೆ ಕೇಸರಿಯ ಭಗವಾ ಧ್ವಜ ಹಾರಾಡು ತ್ತಿರುತ್ತದೆ. ಯುಗಾದಿಯ ದಿನ ಊರಿನ ಜನರು ಬೆಳಗ್ಗೆ ಮನೆಯಲ್ಲಿ ಪೂಜೆ ಪುನಸ್ಕಾರ ಗಳನ್ನು ನೆರವೇರಿಸಿದರೆ, ಸಾಯಂಕಾಲವಾಗುತ್ತಿದ್ದಂತೆ, ವಿಕಾಸ ಆಶ್ರಮದ ಮೈದಾನದಲ್ಲಿ ಒಟ್ಟುಗೂಡುತ್ತಾರೆ.
ಅಲ್ಲಿ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀಗಳ ಆಶೀರ್ವಚನವಿರುತ್ತದೆ. ಅವರ ಜತೆಗೆ ಬಣ್ಣದ ಮಠದ ಸ್ವಾಮೀಜಿ, ಸೋಂದಾ ಜೈನ ಮಠದ ಸ್ವಾಮೀಜಿ, ಹೀಗೆ ಅಕ್ಕ-ಪಕ್ಕದ ಬೇರೆ ಬೇರೆ ಮಠದ ಸ್ವಾಮೀಜಿಗಳು ಒಂದು ವೇದಿಕೆಯಲ್ಲಿ ಸೇರಿ, ದೀಪ ಬೆಳಗಿ, ಕಾರ್ಯಕ್ರಮ ವನ್ನು ಉದ್ಘಾಟಿಸುತ್ತಾರೆ.
ಆಶೀರ್ವಚನ, ಸಂದೇಶ ನೀಡುತ್ತಾರೆ. ನಂತರ ಶೋಭಾಯಾತ್ರೆಗೆ ಚಾಲನೆ ನೀಡುತ್ತಾರೆ. ಸಾಯಂಕಾಲ ಸುಮಾರು 6 ಗಂಟೆಗೆ ಆರಂಭವಾಗುವ ಈ ಶೋಭಾಯಾತ್ರೆ, ಸತತ 5-6 ತಾಸು ರಿನ ಪ್ರಮುಖ ರಸ್ತೆಗಳಲ್ಲಿ, ಗಲ್ಲಿಗಳಲ್ಲಿ ಸುತ್ತಾಡಿ ಶಿರಸಿಯ ಸುಪ್ರಸಿದ್ಧ ಮಾರಿಕಾಂಬಾ ದೇವಾಲಯದಲ್ಲಿ ಕೊನೆಗೊಳ್ಳುತ್ತದೆ. ಶೋಭಾಯಾತ್ರೆಯಲ್ಲಿ ಸಾವಿರ ಸಾವಿರ ಜನರು ಪಾಲ್ಗೊಳ್ಳುತ್ತಾರೆ. ಈ ಶೋಭಾಯಾತ್ರೆಯ ವಿಶೇಷವೆಂದರೆ, ಶಿರಸಿಯ ಸುತ್ತಮುತ್ತಲಿನ ವಿವಿಧ ಕಲಾತಂಡಗಳು, ಸಂಘ ಸಂಸ್ಥೆಗಳಿಂದ ಹಿಡಿದು, ಮಹಿಳಾ ಮಂಡಳಿ, ಶಿಶುವಿಹಾರ ಕೇಂದ್ರ, ಯುವಕ ಮಂಡಳಿಯವರೆಗಿನ ಹಲವರು ಇದರ ಭಾಗವಾಗುತ್ತಾರೆ.
ಸಂಸ್ಥೆ, ಮಂಡಳಿಯ ವತಿಯಿಂದ ಅಥವಾ ಒಂದು ಗಲ್ಲಿಯ ಜನ ಸೇರಿ ಚಲಿಸುವ ಬಂಡಿಯ ಮೇಲೆ ಸ್ತಬ್ಧಚಿತ್ರವನ್ನು ನಿರ್ಮಿಸಿರುತ್ತಾರೆ. ಕೆಲವು ಬಂಡಿಗಳ ಮೇಲೆ ಸ್ತಬ್ಧಚಿತ್ರದ ಹೊರ ತಾಗಿ, ನೃತ್ಯ, ಮಾತುಗಳು, ಹಿನ್ನೆಲೆ ಸಂಗೀತ, ಅದಕ್ಕೆ ತಕ್ಕ ಅಭಿನಯ, ಇತ್ಯಾದಿಗಳು ನಡೆಯುತ್ತಿರುತ್ತವೆ. ಇವೆಲ್ಲವೂ ಪುರಾಣ, ಇತಿಹಾಸ ಅಥವಾ ಸಾಮಾಜಿಕ ಕಳಕಳಿಯನ್ನು ಬಿತ್ತರಿಸುವ ಚಿತ್ರಗಳು, ಅಭಿನಯಗಳು, ಸಂದೇಶಗಳೂ ಆಗಿರುತ್ತವೆ. ವಿಶೇಷವೆಂದರೆ ಇದರಲ್ಲಿ ಮಹಿಳೆಯರು, ಬಾಲಕಿಯರು, ಚಿಕ್ಕ ಮಕ್ಕಳು ಕೂಡ ಭಾಗವಹಿಸುತ್ತಾರೆ.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಚಂಡೆ ವಾದನ, ಭಜನೆ, ಕೋಲಾಟ, ಹೂವಿನ ಕೋಲು ಇತ್ಯಾದಿ ಕರ್ನಾಟಕದ ಕಲೆಯನ್ನು ಬಿತ್ತರಿಸುವ ಸ್ಥಳೀಯ ಮತ್ತು ಸುತ್ತಮುತ್ತಲಿನ ಪ್ರದೇಶದ ತಂಡಗಳು ಭಾಗವಹಿಸುತ್ತವೆ. ಆರಂಭದ ವರ್ಷಗಳಲ್ಲಿ ಒಂದು ಕಲಾಪ್ರಕಾರದ ಒಂದೊಂದು ತಂಡ ಮೆರವಣಿಗೆಯಲ್ಲಿ ಭಾಗವಹಿಸುತ್ತಿತ್ತು. ಈಗ ಇವುಗಳ ಸಂಖ್ಯೆ ಹೆಚ್ಚಿ, 4-5 ಡೊಳ್ಳು ಕುಣಿತದ ತಂಡಗಳು, ಅನೇಕ ಭಜನಾ ತಂಡಗಳು ಭಾಗವಹಿಸುತ್ತವೆ.
ಬಹುತೇಕ ಎಲ್ಲರೂ ಸ್ವಯಂಪ್ರೇರಿತರಾಗಿಯೇ ಬರುತ್ತಾರೆ. ಹೆಚ್ಚಿನವರಿಗೆ ಸಂದಾಯ ವಾಗುವುದು ಆಹ್ವಾನಪತ್ರ ಮಾತ್ರವೇ ವಿನಾ ಸಂಭಾವನೆಯಲ್ಲ. ಇವರೆಲ್ಲ ತಮ್ಮ ಖುಷಿ ಗಾಗಿ, ಊರಿನ ಜನರನ್ನು ಖುಷಿಪಡಿಸುವುದಕ್ಕಾಗಿ ಬಂದು, ಯಾತ್ರೆ (ಮೆರವಣಿಗೆ)ಯಲ್ಲಿ ಪಾಲ್ಗೊಂಡು, ಪ್ರದರ್ಶನ ನೀಡಿ ಹೋಗುವವರು. ಆರಂಭದ ವರ್ಷಗಳಲ್ಲಿ ಹತ್ತರಿಂದ ಇಪ್ಪತ್ತು ಸ್ತಬ್ಧಚಿತ್ರಗಳ ಬಂಡಿಗಳು ಇರುತ್ತಿದ್ದವು.
ವರ್ಷದಿಂದ ವರ್ಷಕ್ಕೆ ಇದರ ಸಂಖ್ಯೆಯೂ ಹೆಚ್ಚುತ್ತಿದೆ. ಈ ವರ್ಷ ಐವತ್ತಕ್ಕೂ ಹೆಚ್ಚು ಬಂಡಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಇದರ ಜತೆಗೆ, ಕರಡಿಯ ವೇಷ ಹಾಕಿ ದವರು, ಹುಲಿವೇಷ ತೊಟ್ಟವರು, ಕಥಕ್ಕಳಿಯ ಪೋಷಾಕು ಉಟ್ಟವರು, ಭಾರತೀಯತೆಗೆ ಸಂಬಂಧಿಸಿದ ಉಡುಗೆ ಧರಿಸಿದ ಜನರೂ ಯಾತ್ರೆಯೊಂದಿಗೆ ಪಾಲ್ಗೊಳ್ಳುತ್ತಾರೆ.
ನಿಮಗೆ ಆಶ್ಚರ್ಯ ಎನಿಸಬಹುದು, ನಂಬಿಕೆ ಬರದೇ ಇರಬಹುದು, ಸಾಯಂಕಾಲದಿಂದ ಮಧ್ಯರಾತ್ರಿ ಕಳೆಯುವವರೆಗೆ ನಡೆಯುವ ಈ ಶೋಭಾಯಾತ್ರೆಯಲ್ಲಿ ಪೊಲೀಸರಿಗೆ ಹೆಚ್ಚಿನ ಕೆಲಸವೇನೂ ಇರುವುದಿಲ್ಲ. ಏಕೆಂದರೆ ಇಲ್ಲಿ ಸರ ಹರಿಯುವವರು, ಜೇಬು ಕತ್ತರಿಸುವವರು ಅಥವಾ ಹೆಣ್ಣು ಮಕ್ಕಳನ್ನು ಚುಡಾಯಿಸುವವರು ಇರುವುದಿಲ್ಲ. ಸಾವಿರಾರು ಸಂಖ್ಯೆಯಲ್ಲಿ ರುವ ಮಹಿಳೆಯರು, ಪುರುಷರು, ಯುವಕ ಯುವತಿಯರು, ಒಬ್ಬರನ್ನೊಬ್ಬರು ಸಹೋದರಿ- ಸಹೋದರರಂತೆ, ಬಂಧುಗಳಂತೆ ಕಾಣುತ್ತಾರೆ.
ಶಿರಸಿಯ ಶಾಸಕರು, ಉತ್ತರ ಕನ್ನಡ ಜಿಲ್ಲೆಯ ಸಂಸದರು, ಇತರ ಪ್ರಮುಖ ರಾಜಕೀಯ ಧುರೀಣರೂ ಈ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ವಿಶೇಷವೆಂದರೆ, ಅವರು ಸಭಾ ಕಾರ್ಯಕ್ರಮದಲ್ಲಿ, ವೇದಿಕೆಯಲ್ಲಿ ಇರದೇ ಜನರೊಂದಿಗೆ ಸಾಮಾನ್ಯರಾಗಿ ಹೆಜ್ಜೆ ಹಾಕು ತ್ತಾರೆ.
ಅವರ ಅಕ್ಕಪಕ್ಕದಲ್ಲೂ ಪೊಲೀಸರಾಗಲಿ, ಅಂಗರಕ್ಷಕರಾಗಲಿ ಕಾಣುವುದಿಲ್ಲ. ಈ ಯಾತ್ರೆ ಯಲ್ಲಿ ಪಕ್ಷ ಭೇದವಿಲ್ಲ, ಲಿಂಗ ಭೇದವಿಲ್ಲ, ಇತ್ತೀಚೆಗಂತೂ ಧರ್ಮ ಭೇದವೂ ಇಲ್ಲ. ಏಕೆಂ ದರೆ ಅನ್ಯಧರ್ಮೀಯರು ಕೂಡ ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಕೈಲಾದ ದ್ದನ್ನು ಮಾಡುತ್ತಾ ಸಹಕರಿಸುತ್ತಿದ್ದಾರೆ.
ಈ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಸ್ತ್ರೀಯರು ಬಹುತೇಕ ಸೀರೆ, ಲಂಗ-ದಾವಣಿ, ಚೂಡಿದಾರ್ ಇತ್ಯಾದಿ ಭಾರತೀಯ ಉಡುಪುಗಳಲ್ಲಿದ್ದರೆ, ಪುರುಷರು ಬಿಳಿ ಅಂಗಿ ತೊಟ್ಟು, ಹೆಗಲಿಗೆ ಕೇಸರಿ ಶಾಲು ಹಾಕಿರುತ್ತಾರೆ. ಹಣೆಗೆ ಕೇಸರಿ ತಿಲಕವಿಟ್ಟುಕೊಂಡು, ಕೈಯಲ್ಲಿ ಭಗವಾ ಧ್ವಜವನ್ನು ಹಿಡಿದು ಉದ್ಘೋಷಗಳೊಂದಿಗೆ ನಡೆಯುತ್ತಿರುತ್ತಾರೆ.
ಮೆರವಣಿಗೆಯ ನಡುವೆ ಅಲ್ಲಲ್ಲಿ ದೊಡ್ಡ ಭಗವಾ ಧ್ವಜ ಸುಮಾರು ಹದಿನೈದರಿಂದ ಇಪ್ಪತ್ತು ಅಡಿ ಎತ್ತರದಲ್ಲಿ ವೃತ್ತಾಕಾರವಾಗಿ ಹಾರಾಡುತ್ತಿರುತ್ತದೆ. ಈ ವರ್ಷ ಶೋಭಾ ಯಾತ್ರೆಯಲ್ಲಿ ದೇವಿಯ ಪಲ್ಲಕ್ಕಿಗೆ ಚಾಲನೆ ಸಿಕ್ಕಿದೆ. ಶೋಭಾಯಾತ್ರೆಯಲ್ಲಿ ಎಲ್ಲಕ್ಕಿಂತ ಮುಂದೆ ಪುರುಷರು ಭಗವಾ ಧ್ವಜ ಹಿಡಿದು ನಡೆಯುತ್ತಾರೆ. ನಂತರ ಪಲ್ಲಕ್ಕಿ, ಅದರ ನಂತರ ಇತರ ಬಂಡಿಗಳು ನಡುವೆ ಬೇವು ಬೆಲ್ಲ ಹಂಚುವವರು,
ಕಲಾತಂಡ ಹೀಗೆ ಮೆರವಣಿಗೆ ಸಾಗುತ್ತದೆ. ಆರಂಭದಿಂದ ಮಾರಿಕಾಂಬಾ ದೇವಾಲಯ ತಲುಪುವವರೆಗೆ 6-7 ಪ್ರಮುಖ ವೃತ್ತಗಳು ಸಿಗುತ್ತವೆ. ಅಲ್ಲಿ ಕಲಾತಂಡಗಳು ತಮ್ಮ ಪ್ರದರ್ಶನವನ್ನು ಜನರಿಗೆ ತೋರ್ಪಡಿಸುತ್ತವೆ. ಶೋಭಾಯಾತ್ರೆ ನಡೆಯುವ ಮಾರ್ಗದಲ್ಲಿ ಅಲ್ಲಲ್ಲಿ ತಂಪು ಪಾನೀಯದ, ತಿಂಡಿ-ತಿನಿಸಿನ ಅಂಗಡಿಗಳು ಮಧ್ಯರಾತ್ರಿಯವರೆಗೂ ತೆರೆದಿ ರುತ್ತವೆ. ಕೆಲವು ಸಂಘ-ಸಂಸ್ಥೆಗಳು ಯಾತ್ರೆಯಲ್ಲಿ ಪಾಲ್ಗೊಂಡವರಿಗಾಗಿ ಇದನ್ನು ಉಚಿತ ವಾಗಿಯೂ ವಿತರಿಸುತ್ತವೆ.
ಇಂಥ ಉತ್ಸವಗಳು ನಡೆಯುವಾಗ ಯಾವುದಾದರೂ ಒಂದು ಸಮಿತಿ ಎಂದು ಇರಬೇಕಲ್ಲ? ಅದಕ್ಕೆ ಒಬ್ಬ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸಂಚಾಲಕ ಇತ್ಯಾದಿ ಇರಲೇಬೇಕು, ಇಲ್ಲಿಯೂ ಇರುತ್ತದೆ. ಯುಗಾದಿ ಸಮಿತಿಯವರು ಸಭೆ ನಡೆಸಿ ಆ ವರ್ಷದ ಯೋಜನೆ ಯನ್ನು ಜನರ ಮುಂದಿಡುತ್ತಾರೆ.
ಮನೆಗಳಿಗೆ, ಅಂಗಡಿಗಳಿಗೆ ಭೇಟಿಕೊಡುತ್ತಾರೆ. ಬಾವುಟ ವಿತರಿಸುತ್ತಾರೆ. ಈ ವರ್ಷವಂತೂ ಮನೆ-ಮನೆಗೆ ಹೋಗಿ, ಅಕ್ಷತೆ ನೀಡಿ, ಮನೆಯಿಂದ ಒಬ್ಬರಾದರೂ ಬರಬೇಕು ಎಂದು ಆಹ್ವಾನ ನೀಡಿದ್ದಾರೆ. ಹಾಗೆಯೇ ಮನೆಯವರು, ಅಂಗಡಿಯವರು ಧನಸಹಾಯ ಮಾಡಿ ದರೆ, ಪಡೆದುಕೊಂಡು ಬರುತ್ತಾರೆ (ಇಲ್ಲಿ ವಸೂಲಿಗೆ ಇಳಿಯುವುದು ಅಥವಾ ಒತ್ತಾಯ ಪೂರ್ವಕವಾಗಿ ಯಾರನ್ನಾದರೂ ಕಾಡಿಸಿ, ಪೀಡಿಸಿ ಹಣ ಪಡೆಯುವ ಪದ್ಧತಿ ಇಲ್ಲ).
ಹಾಗೆ ಒಟ್ಟಾದ ಹಣವನ್ನು ಪತಾಕೆ ಹಾಕುವುದಕ್ಕೆ, ಬ್ಯಾನರ್ ಮತ್ತು ಕರಪತ್ರಗಳನ್ನು ಮುದ್ರಿಸುವುದಕ್ಕೆ, ಕಾರ್ಯಕ್ರಮದ ನಿರ್ವಹಣೆಗೆ ಇತ್ಯಾದಿ ಖರ್ಚು ವೆಚ್ಚಗಳಿಗೆ ವಿನಿಯೋ ಗಿಸುತ್ತಾರೆ. ಬಹುತೇಕ ಪತಾಕೆ, ಬ್ಯಾನರ್ ಗಳನ್ನು ಕಾರ್ಯಕರ್ತರೇ ಕಟ್ಟುತ್ತಾರೆ. ವರ್ತಕರು, ವ್ಯಾಪಾರಸ್ಥರು ಸ್ಪಂದಿಸಿ ಉದಾರ ಹೃದಯಿಗಳಾಗಿ ಧನಸಹಾಯಕ್ಕೆ ಮುಂದಾಗುತ್ತಾರೆ.
ವಿಶೇಷವೆಂದರೆ ಕಳೆದ 27 ವರ್ಷಗಳಿಂದ ನಡೆದು ಬರುತ್ತಿರುವ ಈ ಉತ್ಸವದಲ್ಲಿ ‘ಯಾರೋ ಲೂಟಿ ಹೊಡೆದರಂತೆ’, ‘ಹಣ ನುಂಗಿದರಂತೆ’, ‘ಸ್ವಂತಕ್ಕಾಗಿ ಬಳಸಿಕೊಂಡರಂತೆ’ ಇತ್ಯಾದಿ ಯಾವುದೇ ಆಪಾದನೆಗಳು ಕೇಳಿಬಂದದ್ದಿಲ್ಲ. ಶಿರಸಿಯ ಹೋಳಿಹಬ್ಬ ಎಂದರೆ ಇಂದಿಗೂ ವಿಶೇಷವೇ. ಇಲ್ಲಿ ನಡೆಯುವ ಬೇಡರ ವೇಷ ಮತ್ತೆಲ್ಲೂ ನಡೆಯುವುದಿಲ್ಲ.
ಈಗ ಅದರ ಜತೆಗೆ ಶೋಭಾಯಾತ್ರೆಯೂ ಸೇರಿಕೊಂಡು ಶಿರಸಿಯನ್ನು ಸಾಂಸ್ಕೃತಿಕ ಕೇಂದ್ರ ವನ್ನಾಗಿಸುತ್ತಿದೆ. 27 ವರ್ಷಗಳ ಹಿಂದೆ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಪೂಜ್ಯ ಶ್ರೀಗಳು ಶೋಭಾಯಾತ್ರೆಯ ಪರಿಕಲ್ಪನೆಯನ್ನು ಆಲೋಚಿಸಿ, ಅದಕ್ಕೆ ಚಾಲನೆ ನೀಡಿದರು. ಅಲ್ಲಿಂದ ಇಲ್ಲಿಯವರೆಗೆ ಈ ಉತ್ಸವದಲ್ಲಿ ರಾಜಕೀಯ ಮೇಲಾಟ, ಜಾತಿ ಧರ್ಮಗಳ ಕೀಳಾಟ, ಚಿತ್ರತಾರೆಯರ ಹೇಸಾಟ, ಪಾನಮತ್ತರ ತೂರಾಟ, ಕರ್ಕಶ ಡಿಜೆ ಶಬ್ದದ ಅಬ್ಬರ ದಾಟ, ಹುಚ್ಚು ಕುಣಿದಾಟ, ಯಾವುದೂ ಒಳಗೆ ಹೊಕ್ಕಿಲ್ಲ.
ಆದ್ದರಿಂದಲೇ ಮಧ್ಯರಾತ್ರಿಯೂ ಮಹಿಳೆಯರು, ಮಕ್ಕಳು ಇದರಲ್ಲಿ ನಿರ್ಭಿಡೆಯಿಂದ ಭಾಗವಹಿಸುತ್ತಾರೆ. ಮನೆಯವರೂ ತಮ್ಮ ಹೆಂಡಿರು ಮಕ್ಕಳನ್ನು ನಿರ್ಭಯರಾಗಿ ಕಳಿಸಿ ಕೊಡುತ್ತಾರೆ. ಈಗ ನೀವೇ ಹೇಳಿ, ಶಿರಸಿಯಲ್ಲಿ ಯುಗಾದಿ ಕೇವಲ ಮನೆಯ ಹಬ್ಬವಾಗಿರದೆ, ನಾಡಿನ ಹಬ್ಬವಾಗಿ ಮಾರ್ಪಟ್ಟಿದೆ ಎಂದರೆ ಅತಿಶಯೋಕ್ತಿಯೇನೂ ಆಗಲಿಲ್ಲ ಅಲ್ಲವೇ? ಇನ್ನೂ ಒಂದು ಸಂತಸದ ಸುದ್ದಿ ಎಂದರೆ, ಈ ಮಾದರಿಯಲ್ಲಿಯೇ ಈಗ ಅಕ್ಕಪಕ್ಕದ ತಾಲೂಕುಗಳಾದ ಸಿದ್ದಾಪುರ, ಯಪುರದಲ್ಲಿಯೂ ಯುಗಾದಿ ಉತ್ಸವದ ಶೋಭಾಯಾತ್ರೆ ನಡೆಯುತ್ತಿದೆ. ಇದು ರಾಜ್ಯದಾದ್ಯಂತ, ದೇಶದಾದ್ಯಂತ ಪಸರಿಸಲಿ. ಮುಂದೊಂದು ದಿನ ಶಿರಸಿಯಿಂದ ಹೊರಟ ಶೋಭಾಯಾತ್ರೆ ಬೆಂಗಳೂರು ಮಾರ್ಗವಾಗಿ ದೆಹಲಿಯನ್ನು ತಲುಪಲಿ.