ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ಗಗನದಲ್ಲಿ ಸಖಿ; ಬದುಕಿನಲ್ಲಿ ಅಸುಖಿ

ನಾನು ಹೇಳುತ್ತಿರುವುದು ದೂರದ ಪ್ರಯಾಣದ ಬಗ್ಗೆ ಮಾತ್ರ. ಸಣ್ಣ ಅವಧಿಯ ವಿಮಾನಯಾನ ವನ್ನು ಆರಾಮಾಗಿ ಕಳೆದುಬಿಡಬಹುದು. ಅದಕ್ಕಿಂತ ಹೆಚ್ಚಾದರೆ ಮಾತ್ರ ತೊಂದರೆ. ಕೆಲವು ವಿಮಾನ ನಿಲ್ದಾಣ ಗಳಂತೂ ಸಮಯ ಕಳೆಯಲು ಅದ್ಭುತ ತಾಣ. ಅಲ್ಲಿ ಮೂರು-ನಾಲ್ಕು ಗಂಟೆ ಕಳೆದು ಹೋಗಿದ್ದು ಗೊತ್ತೇ ಆಗುವುದಿಲ್ಲ.

ಗಗನದಲ್ಲಿ ಸಖಿ; ಬದುಕಿನಲ್ಲಿ ಅಸುಖಿ

ಅಂಕಣಕಾರ ಕಿರಣ್‌ ಉಪಾಧ್ಯಾಯ

ವಿದೇಶವಾಸಿ

dhyapaa@gmail.com

ಇತ್ತೀಚಿಗೆ ಕಾರ್ಯನಿಮಿತ್ತ ಹಾಂಗ್‌ಕಾಂಗ್ ಗೆ ಹೋಗಿದ್ದೆ. ಕೊನೇ ಘಳಿಗೆಯಲ್ಲಿ ನಿರ್ಣಯಿ ಸಿದ್ದರಿಂದ ಟಿಕೆಟ್ ದರವೂ ವಿಮಾನದಷ್ಟೇ ಎತ್ತರಕ್ಕೆ ಹಾರುತ್ತಿತ್ತು. ಸ್ವಲ್ಪ ಕಡಿಮೆ ದರದಲ್ಲಿ ಟಿಕೆಟ್ ಬೇಕು ಎಂದರೆ ಹೆಚ್ಚುಪರ್ಯಟನೆ ಮಾಡಿಕೊಂಡು ಹೋಗಬೇಕಾಗಿತ್ತು. ಹೋಗು ವಾಗ ಹೇಗೋ ಹದಿನೈದು ಗಂಟೆಯಲ್ಲಿ ಹೋಗಿ ತಲುಪಿದೆ. ಬರುವಾಗ ಮಾತ್ರ ಅವಸ್ಥೆ ಹರಡಿಹೋಗಿತ್ತು. ಹಾಂಗ್‌ಕಾಂಗ್‌ನಿಂದ ಸಿಂಗಾಪುರ, ಕತಾರ್ ಮಾರ್ಗವಾಗಿ ಬಹ್ರೈನ್‌ಗೆ ಬಂದು ತಲುಪುವಾಗ ಮೂವತ್ತು ಗಂಟೆ ಪ್ರಯಾಣಕ್ಕೆ ಮೂವತ್ತು ನಿಮಿಷ ಮಾತ್ರ ಬಾಕಿ ಇತ್ತು. ಲಾಂಜ್ ಒಳಗೆ ಸ್ನಾನ, ಊಟತಿಂಡಿ ಮಾಡುವ ವ್ಯವಸ್ಥೆ ಇದ್ದಿದರಿಂದ ಪ್ರಯಾಣದ ದಣಿವಿನ ಅರಿವಾಗಲಿಲ್ಲ.

ಆದರೂ ಪ್ರತಿ ಬಾರಿ ವಿಮಾನದ ಬದಲಿಸುವಾಗಲು ಭದ್ರತಾ ತಪಾಸಣೆಗೆ ಒಳಪಡಬೇಕಾ ಗಿತ್ತು. ಬೆಲ್ಟು, ಬೂಟು, ಜ್ಯಾಕೆಟ್ಟು, ಪ್ಯಾಕೆಟ್ಟು ಎಲ್ಲವನ್ನು ಬಿಚ್ಚುವುದು, ಪುನಃ ಅದನ್ನು ತೊಟ್ಟುಕೊಳ್ಳುವುದು ಒಂದು ರೀತಿಯ ಹಿಂಸೆಯಾದರೆ, ವಿಮಾನದ ಒಳಗೆ ಕುಳಿತು ತಾಸು ಗಟ್ಟಲೆ ಪ್ರಯಾಣಿಸುವದು ಇನ್ನೊಂದು ರೀತಿಯ ತ್ರಾಸು. ವಿಮಾನ ಪ್ರಯಾಣದಲ್ಲಿ ಯಾರಾ ದರೂ ಜತೆಗಿದ್ದರೆ ಸ್ವಲ್ಪವಾದರೂ ಸಮಯ ಕಳೆಯಬಹುದು. ಒಬ್ಬಂಟಿ ಪ್ರಯಾಣಿಸುವು ದಾದರೆ, ಅದರಲ್ಲೂ ವಿಮಾನದಲ್ಲಿ ನಿದ್ರೆ ಬರದವರಾದರಂತೂ ಕಥೆ ಗೋವಿಂದ!

ಇದನ್ನೂ ಓದಿ: Kiran Upadhyay Column: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ: ಬಲ ಸುಮ್ಮನೆ ಬರಲಿಲ್ಲ !

ಹಾಗಂತ ಎಲ್ಲ ಪ್ರಯಾಣವೂ ಹಿಂಸೆ ಎಂದು ಹೇಳುವಂತಿಲ್ಲ. ನಾನು ಹೇಳುತ್ತಿರುವುದು ದೂರದ ಪ್ರಯಾಣದ ಬಗ್ಗೆ ಮಾತ್ರ. ಸಣ್ಣ ಅವಧಿಯ ವಿಮಾನಯಾನವನ್ನು ಆರಾಮಾಗಿ ಕಳೆದುಬಿಡಬಹುದು. ಅದಕ್ಕಿಂತ ಹೆಚ್ಚಾದರೆ ಮಾತ್ರ ತೊಂದರೆ. ಕೆಲವು ವಿಮಾನ ನಿಲ್ದಾಣ ಗಳಂತೂ ಸಮಯ ಕಳೆಯಲು ಅದ್ಭುತ ತಾಣ. ಅಲ್ಲಿ ಮೂರು-ನಾಲ್ಕು ಗಂಟೆ ಕಳೆದು ಹೋಗಿದ್ದು ಗೊತ್ತೇ ಆಗುವುದಿಲ್ಲ.

ಒಂದು ಮೂಲೆಯಲ್ಲಿ ಕುಳಿತು, ಹೋಗಿ ಬರುವ ಜನರನ್ನು ನೋಡಿದರೂ ಸಾಕು, ಈ ಜಗತ್ತು ಎಷ್ಟು ವಿಚಿತ್ರವಾಗಿದೆ, ವರ್ಣರಂಜಿತವಾಗಿದೆ, ವೇದನೆಯಿಂದ ಕೂಡಿದೆ, ಎಲ್ಲದ ರದ್ದೂ ಒಂದು ಝಲಕ್ ಅಲ್ಲಿ ಸಿಗುತ್ತದೆ. ಕೆಲವೊಮ್ಮೆ ವಿಮಾನದ ಒಳಗೂ ವಿಚಿತ್ರ, ವಿಶೇಷ ಜನರು ನಮ್ಮ ಕಣ್ಣಿಗೆ ಬೀಳುತ್ತಾರೆ.

ವಿಮಾನದ ಒಳಗೆ ನಡೆಯುವ ಕೆಲವು ಘಟನೆಗಳು ಪ್ರಯಾಣದ ಕಷ್ಟವನ್ನು ಕಡಿಮೆ ಮಾಡುವುದರೊಂದಿಗೆ ದೂರವನ್ನು ಮುಟಕುಗೊಳಿಸುತ್ತದೆ. ಹಾಗೆಯೇ ಬೇಡದವರು ಸಿಕ್ಕರೆ ಸಣ್ಣ ಪ್ರಯಾಣವೂ ಪ್ರಯಾಸzಗಿರುತ್ತದೆ. ಇದು ನಮ್ಮ-ನಿಮ್ಮ ಕಥೆಯಾದರೆ, ಗಗನಸಖಿ ಯರ ಪಾಡೇನು? ಹಾಂಗ್ ಕಾಂಗ್ ನಿಂದ ಸಿಂಗಾಪುರಕ್ಕೆ ಬರುತ್ತಿರುವಾಗ ವಿಮಾನ ಆಕಾಶಕ್ಕೆ ಹಾರಿ ಒಂದು ತಾಸು ಆಗಿತ್ತು.

ಇದ್ದಕ್ಕಿದ್ದಂತೆ ಒಬ್ಬ ಮಹಿಳೆ ತೀರಾ ವೇದನೆಯಿಂದ ನರಳುತ್ತಿದ್ದಂತೆ ಕಂಡು ಬಂತು. ಕೂಡ ಲೇ ಇಬ್ಬರು ಗಗನಸಖಿಯರು ಅವಳ ಬಳಿ ಧಾವಿಸಿದರು. ಆ ಮಹಿಳೆಯನ್ನು ವಿಮಾನದ ಹಿಂಭಾಗಕ್ಕೆ ಕರೆದುಕೊಂಡು ಹೋದರು. ಮಹಿಳೆಯ ವೇದನೆ ನೊಡಿದವರೆಲ್ಲ ಬಹುಶಃ ಆಕೆ ಗರ್ಭವತಿ ಇರಬಹುದು ಅಂದುಕೊಂಡರು. ಆದರೆ, ಹೊಟ್ಟೆಯ ಕಡೆ ನೋಡಿದರೆ ಹಾಗೆ ಕಾಣುತ್ತಿರಲಿಲ್ಲ.

ಇರಲಿ, ಅದಾಗಿ ಒಂದು ತಾಸಿನ ನಂತರ ಮಹಿಳೆ ತಿರುಗಿ ಬಂದು ತನ್ನ ಸ್ಥಾನದಲ್ಲಿ ಕುಳಿತು ಕೊಂಡಳು. ನಾನು ಕುತೂಹಲಕ್ಕಾಗಿ ಗಗನಸಖಿಯಲ್ಲಿ ಏನಾಗಿತ್ತು ಎಂದು ಕೇಳಿದಾಗ, ’ಮಹಿಳೆಯರ ಋತುಚಕ್ರದ ಸಮಯದಲ್ಲಿ ಕೆಲವೊಮ್ಮೆ ಹೀಗೆ ಆಗುವುದಿದೆ. ಸ್ನಾಯುಗಳು ಸೆಟೆದುಕೊಂಡು ತುಂಬಾ ನೋವು ಕಾಣಿಸಿಕೊಳ್ಳುತ್ತದೆ, ರಕ್ತಸ್ರಾವ ಹೆಚ್ಚುತ್ತದೆ....’ ಇತ್ಯಾದಿ ವಿವರಣೆ ನೀಡಿದಳು.

‘ಇಷ್ಟು ಬೇಗ ಗುಣವಾಗಲು ಏನು ಮಾಡಿದಿರಿ?’ ಎಂದೆ. ’ಏನಿಲ್ಲ, ಹಿಂದೆ ಇರುವ ಜಾಗದಲ್ಲಿ ಕೆಳಗೆ ಮಲಗಿಸಿದೆವು, ನೋವು ನಿವಾರಕ ಮಾತ್ರೆ ನೀಡಿದೆವು, ಕೆಲವೊಮ್ಮೆ ಕುಳಿತು ಕೊಂಡಾ ಗ ನೋವು ಹೆಚ್ಚಾಗುತ್ತದೆ, ಮಲಗಿದರೆ ಕಡಿಮೆಯಾಗುತ್ತದೆ, ಈ ಮಹಿಳೆಗೆ ಆದದ್ದು ಅದೇ, ನಾವು ಮಾಡಿದ್ದು ಅಷ್ಟೇ...’ ಎಂದಳು. ’ನಿಮಗೆ ಈ ರೀತಿಯ ಮಾಹಿತಿ ಮತ್ತು ತರಬೇತಿ ಯನ್ನು ನೀಡಿರುತ್ತಾರೆಯೇ?’ ಎಂದು ಕೇಳಿದಾಗ, ’ಹೌದು, ಇದು ನಮ್ಮ ಕೆಲಸದ ಒಂದು ಭಾಗ’ ಎಂದು ತನ್ನ ಆಸನದತ್ತ ನಡೆದಳು.

ಇಂಥ ತುರ್ತು ಪರಿಸ್ಥಿತಿಯನ್ನು ಎದುರಿಸುವುದು ಗಗನಸಖಿಯರಿಗೆ ಹೊಸತೇನೂ ಅಲ್ಲ. ಅವರ ಜೀವನದಲ್ಲಿ ಇಂತಹ ಸಾಕಷ್ಟು ಘಟನೆಗಳನ್ನು ಎದುರಿಸಿರುತ್ತಾರೆ. ಇಂತಹ ಸಂದರ್ಭಗಳನ್ನು ನಿಭಾಯಿಸಲು ಅವರಿಗೆ ತರಬೇತಿ ನೀಡಿರುತ್ತಾರೆ. ಪ್ರತಿ ವಿಮಾನದಲ್ಲೂ ವೈದ್ಯರನ್ನೂ, ದಾದಿಯರನ್ನೂ ಕರೆದುಕೊಂಡು ಹೋಗಲು ಅಸಾಧ್ಯವಾದದ್ದರಿಂದ, ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಕೃತಕ ಉಸಿರಾಟ, ಪ್ರಥಮ ಚಿಕಿತ್ಸೆ ನೀಡುವುದಕ್ಕೆ ಅವರು ಸಜ್ಜಾಗಿರುತ್ತಾರೆ.

ತೀರಾ ಅಂತಹ ಪರಿಸ್ಥಿತಿ ಬಂದರೆ ಹೆರಿಗೆಗೆ ಸಹಾಯ ಮಾಡಲೂ ಸಹ ಅವರಿಗೆ ತರಬೇತಿ ನೀಡಿರುತ್ತಾರೆ. ಸಾಮಾನ್ಯವಾಗಿ ಯಾವುದೇ ವೈದ್ಯಕೀಯ ಸಲಹೆ ಅಥವಾ ಸಹಕಾರದ
ಅವಶ್ಯಕತೆಯಿದ್ದರೆ, ವಿಮಾನದಲ್ಲಿ ಯಾರಾದರೂ ವೈದ್ಯರು ಇದ್ದಾರೆಯೇ ಎಂದು ಕೇಳಲಾ ಗುತ್ತದೆ.

ಒಂದು ವೇಳೆ ವೃತ್ತಿಪರ ವೈದ್ಯರು ಇಲ್ಲದಿದ್ದರೆ, ವಿಮಾನದ ಸಿಬ್ಬಂದಿಗಳೇ ಆ ಕೆಲಸವನ್ನು ಮಾಡುತ್ತಾರೆ. ವೈದ್ಯರಷ್ಟು ನಾಜೂಕಾಗಿ ಅವರಿಂದ ಚಿಕಿತ್ಸೆ ನೀಡಲು ಆಗದಿರಬಹುದು, ಆದರೆ ಮೂವತ್ತು ಸಾವಿರ ಅಡಿ ಎತ್ತರದಲ್ಲಿ ಸಾಮಾನ್ಯ ರೋಗಕ್ಕೆ ಪ್ರಥಮ ಚಿಕಿತ್ಸೆ ಅಥವಾ ತುರ್ತು ಚಿಕಿತ್ಸೆ ನೀಡುವ ತರಬೇತಿಯನ್ನಂತೂ ಅವರು ಪಡೆದಿರುತ್ತಾರೆ.

ಇದಿಷ್ಟನ್ನೂ ಹೇಳುವಾಗ, ಸಖಿ ಕೆಳಗಡೆ ಮಂಡಿಯೂರಿ ಕುಳಿತುಕೊಂಡೇ ಹೇಳಿದ್ದಳು. ನಿಜ, ಗಗನಸಖಿಯರು ನಿಂತು ಮಾತನಾಡಬಹುದು ಅಥವಾ ಕೆಳಗೆ ಕುಳಿತು ಮಾತನಾಡ ಬಹುದು, ಆದರೆ ನಮ್ಮ ಪಕ್ಕದ ಆಸನವಾಗಲಿ ಅಥವಾ ಇನ್ಯಾವುದೇ ಆಸನವಾಗಲಿ ಖಾಲಿ ಇದ್ದರೂ ಅಲ್ಲಿ ಕುಳಿತುಕೊಳ್ಳುವ ಹಾಗಿಲ್ಲ. ಅವರಿಗೆ ಎಂದು ನಿಗದಿಪಡಿಸಿದ ಆಸನ ದಲ್ಲಿಯೇ ಕುಳಿತುಕೊಳ್ಳಬೇಕು.

ನೋಡುಗರ ಕಣ್ಣಿಗೆ ಗಗನಸಖಿಯರ ಕೆಲಸ ತುಂಬಾ ಸರಳವಾದದ್ದು, ಸುಖಕರವಾದದ್ದು, ಸಂತೋಷದಾಯಕವಾದದ್ದು. ಆದರೆ ನಿಜ ಸ್ಥಿತಿ ಹಾಗಿಲ್ಲ. ಅವರು ತಮ್ಮ ಕೆಲಸದ ಬಗ್ಗೆ ತೀರಾ ಬೇಜಾರುಪಟ್ಟುಕೊಳ್ಳದಿರಬಹುದು. ಆದರೆ ತೀರ ಸುಖಿಗಳೇನೂ ಆಗಿರುವುದಿಲ್ಲ. ಅವರು ಮಾಡುವ ಕೆಲಸ, ಅವರಿಗೆ ಬರುವ ಸಂಬಳ, ಅವರು ಪಡುವ ಶ್ರಮ, ಅವರಿಗೆ ಸಿಗುವ ಭತ್ಯೆ, ಅವರಿಗೆ ಸಿಗುವ ಅನಾರೋಗ್ಯ ಇವನ್ನೆಲ್ಲ ಹೊಂದಿಸಿ ನೋಡಿದಾಗ ಯಾರಿಗಾ ದರೂ ಇದು ಅರ್ಥವಾಗುತ್ತದೆ.

ಸುಮ್ಮನೆ ಹೇಳುವುದಾದರೆ, ಕೆಲಸಕ್ಕೆ ಸೇರುವಾಗ ಇವರ ಸಂಬಳ 25 ರಿಂದ ಐವತ್ತು ಸಾವಿರದವರೆಗೆ ಇರುತ್ತದೆ. ಕ್ರಮೇಣ ಅನುಭವದ ಆಧಾರದ ಮೇಲೆ ಒಂದು ಲಕ್ಷದವರೆಗೂ ತಲುಪುವ ಸಾಧ್ಯತೆ ಇರುತ್ತದೆ. ಅಂತಾರಾಷ್ಟ್ರೀಯ ವಿಮಾನಗಳಲ್ಲಿ, ಒಳ್ಳೆಯ ಸಂಸ್ಥೆಯಲ್ಲಿ ಕೆಲಸ ಸಿಕ್ಕರೆ, ಒಂದೂವರೆಯಿಂದ ಮೂರು ಲಕ್ಷದವರೆಗೂ ಸಂಬಳ ಇರುತ್ತದೆ. ಅದರಲ್ಲಿ ಮನೆ, ವಾಹನ, ತಿರುಗಾಟ, ಊಟೋಪಚಾರ, ಇತರೆ ಭತ್ಯೆ ಎಲ್ಲವೂ ಸೇರಿರುತ್ತದೆ. ಆದರೆ ಈ ಸಂಬಳ ಪಡೆಯಲು ಅವರು ಚಾಲಕರ, ಪ್ರಯಾಣಿಕರ ಕಡೆಗೆ ಸದಾ ಗಮನಹರಿಸುವುದರ ಜತೆಗೆ, ಊಟ ಬಡಿಸಬೇಕು, ತಟ್ಟೆ ಎತ್ತಬೇಕು, ಅದನ್ನೆಲ್ಲ ನೀಟಾಗಿ ಜೋಡಿಸಿ ಇಡಬೇಕು, ಗಂಟೆಗೆ ಒಮ್ಮೆಯಾದರೂ ಕಕ್ಕಸು ತೊಳೆಯಬೇಕು.

ಪ್ರಯಾಣಿಕರು ಕರೆದಾಗಲೆಲ್ಲ ಅವರ ಬಳಿ ಓಡಬೇಕು, ಕೇಳಿದಾಗೆಲ್ಲ ನೀರು, ಕಂಬಳಿ, ಚಹಾ-ಕಾಫಿ ಇತ್ಯಾದಿಗಳನ್ನು ಸರಬರಾಜು ಮಾಡಬೇಕು. ತುರ್ತು ಪರಿಸ್ಥಿತಿಯಲ್ಲಿ, ಅವ ಘಡ ಸಂಭವಿಸಿದಲ್ಲಿ, ಪ್ರಯಾಣಿಕರೆಲ್ಲ ಹೊರಗೆ ಹೋದ ನಂತರ, ಕೊನೆಯಲ್ಲಿ ಇವರು ವಿಮಾನ ಬಿಟ್ಟು ಹೊರಗೆ ಬರಬೇಕು.

ಒಂದೇ, ಎರಡೇ? ಸಖಿಯರಾಗಲಿ, ಸಖರಾಗಲಿ, ವಿಮಾನದ ಕರ್ಮಚಾರಿಗಳು ಸದಾ ಜಾಗೃ ತಾವಸ್ಥೆಯಲ್ಲಿಯೇ ಇರಬೇಕು. ವೈದ್ಯರಂತೆಯೇ ಇವರೂ ಕೂಡ ತತ್ಕಾಲದಲ್ಲಿ ಕೆಲಸಕ್ಕೆ ಹಾಜರಾಗುವಂತೆ ಸಿದ್ದರಿರಬೇಕಾಗುತ್ತದೆ. ಕೆಲವೊಮ್ಮೆ ಎರಡು ಗಂಟೆಯ ಮುಂಚಿತವಾಗಿ ಕೆಲಸಕ್ಕೆ ಕರೆದರೂ ಹೊರಡಬೇಕಾಗುತ್ತದೆ. ಅವರ ಸಂಬಳ ತಿಂಗಳಿಗೆ ಇಂತಿಷ್ಟು ಎಂದು ಹೇಳಿದರೂ, ಅದು ಇತರರಂತೆ ಮೂವತ್ತು ದಿನ ಅಥವಾ ವಾರದಲ್ಲಿ ಐದೋ ಆರೋ ದಿನ ಅಥವಾ ದಿನಕ್ಕೆ ಎಂಟು ತಾಸು ಕೆಲಸ, ಈ ರೀತಿಯ ಸಾಮಾನ್ಯ ಲೆಕ್ಕಾಚಾರವಲ್ಲ.

ಅವರಿಗೆ ತಿಂಗಳ ಕೊನೆಗೆ ಒಂದಿಷ್ಟು ಸಂಬಳ ಕೈಗೆ ಸಿಗುತ್ತದೆ ಎಂದು ಹೇಳಬಹುದಾದರೂ ಅದು ಕಡಾಕಡಿ ಸಂಖ್ಯೆಯಲ್ಲ. ಅವರಿಗೆ ಸಂಬಳ ಸಿಗುವುದು ಅವರು ಎಷ್ಟು ಗಂಟೆ ಕೆಲಸ ಮಾಡಿzರೆ ಎನ್ನುವ ಲೆಕ್ಕದಲ್ಲಿ. ಪ್ರಯಾಣಿಕರೆಲ್ಲ ವಿಮಾನದೊಳಗೆ ಕುಳಿತು ವಿಮಾನ ಹಾರುವುದಕ್ಕೂ ಮೊದಲು ಬಾಗಿಲು ಹಾಕಿಕೊಂಡಾಗ ಅವರ ಕೆಲಸದ ಅವಧಿ ಆರಂಭ ವಾಗುತ್ತದೆ.

ವಿಮಾನ ಭೂಮಿಯನ್ನು ಸ್ಪರ್ಶಿಸಿ, ನಿಲ್ದಾಣದಲ್ಲಿ ನಿಂತು ಬಾಗಿಲು ತೆಗೆದರೆ ಇವರ ಕೆಲಸದ ಅವಧಿ ಮುಗಿಯುತ್ತದೆ. ಕೆಲವೊಮ್ಮೆ ಒಂದು ಗಂಟೆ ವಿಮಾನ ಆಕಾಶದಲ್ಲಿ ಹಾರಿದರೆ, ಮೊದಲು ಒಂದುವರೆಯಿಂದ ಎರಡು ಗಂಟೆ ಇವರು ನಿಂತ ವಿಮಾನದಲ್ಲಿ ಕೆಲಸ ಮಾಡು ತ್ತಾರೆ, ನಂತರವೂ ಅರ್ಧ-ಒಂದು ಗಂಟೆ ವಿಮಾನದಲ್ಲಿ ಇರಬೇಕಾಗುತ್ತದೆ. ಆದರೆ ಇದ್ಯಾ ವುದೂ ಲೆಕ್ಕಕ್ಕೆ ಬರುವುದಿಲ್ಲ.

ಲೆಕ್ಕಕ್ಕೆ ಬರುವುದು ಒಂದು ಗಂಟೆ ವಿಮಾನ ಹಾರಿದ ಅವಧಿ ಮಾತ್ರ. ಇತ್ತೀಚೆಗೆ ಕೆಲವು ಸಂಸ್ಥೆಗಳು ವಿಮಾನ ಭೂಮಿಯ ಮೇಲೆ ನಿಂತ ಅವಧಿಯನ್ನೂ ಪರಿಗಣಿಸಿ ಸ್ವಲ್ಪ ಮಟ್ಟಿನ ಹಣವನ್ನು ಪರಿಗಣಿಸುತ್ತಿವೆ. ಸುಮಾರು ಮೂರು ದಶಕದ ಹಿಂದೆ ನಾನು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಕೆಲವು ದೃಶ್ಯಗಳು ಮಾಮೂಲಾಗಿದ್ದವು.

ವಿಮಾನದಲ್ಲಿ ಸೀಟ್ ಬೆಲ್ಟ್ ಹಾಕಿಕೊಳ್ಳಲು ಹೇಳಿದಾಗ ಬರದವರಂತೆ ನಟಿಸಿ ಗಗನ‌ ಸಖಿಯ ರನ್ನು ಹತ್ತಿರ ಕರೆಯುವುದು, ಆಗಾಗ ನೀರು, ಟೀ-ಕಾಫಿ ಅಥವಾ ಮದ್ಯ ಸರಬರಾಜು ಮಾಡು ಞವಂತೆ ಕೇಳುವುದು, ಆ ನೆಪದದರೂ ಸ್ವಲ್ಪ ಮೈ-ಕೈ ಮುಟ್ಟುವುದು, ಇತ್ಯಾದಿ, ಇತ್ಯಾದಿ. ತಿಳಿದೂ ತಿಳಿಯದವರಂತೆ ವರ್ತಿಸುವ ಸಾಕ್ಷ್ಟು ಜನರನ್ನು ನಾನು ಕಂಡಿದ್ದೇನೆ.

ಅದು ಇತ್ತೀಚಿಗೆ ತೀರಾ ಕಡಿಮೆಯಾಗಿದೆ ಎಂದರೆ ತಪ್ಪಲ್ಲ. ಇತ್ತೀಚೆಗೆ ಬಹಳಷ್ಟು ವಿಮಾನ ದಲ್ಲಿ ಮದ್ಯದ ಸರಬರಾಜು ಕೂಡ ಕಡಿಮೆಯಾಗಿದೆ ಎನ್ನುವುದು ಇನ್ನೊಂದು ವಿಚಾರ. ಅಷ್ಟಕ್ಕೂ ಈ ಗಗನಸಖಿಯರ ಮೂಲ ಕೆಲಸ ಪ್ರಯಾಣಿಕರಿಗೆ ಚಾಕರಿ ಮಾಡಿಕೊಂಡಿರು ವುದು ಅಲ್ಲವೇ ಅಲ್ಲ. ಇವರನ್ನು ಮೊದಲು ನೇಮಿಸಿದ್ದು ಅಥವಾ ಇಂದಿಗೂ ಅವರು ಪ್ರಮುಖವಾಗಿ ಮಾಡಬೇಕಾದದ್ದು, ವಿಮಾನದ ಚಾಲಕ ಮತ್ತು ಸಹಚಾಲಕರ (ಪೈಲಟ್ ಮತ್ತು ಕೋ-ಪೈಲಟ್) ಕಣ್ಣು, ಬಾಯಿ, ಕಿವಿಯಾಗಿ, ಅವರ ಸಂದೇಶವನ್ನು ಪ್ರಯಾಣಿಕರಿಗೆ ರವಾನಿಸುವುದು. ‌

ಅದು ಇವರ ಪ್ರಮುಖ ಕರ್ತವ್ಯ. ಮೊದಮೊದಲು ನನಗೆ ‘ಈ ಗಗನಸಖಿಯರು ಆಗಾಗ ಕಾಕ್ ಪಿಟ್‌ಗೆ ಏಕೆ ಹೋಗಿ ಬರುತ್ತಿರುತ್ತಾರೆ?’ ಎಂದು ಅನ್ನಿಸುತ್ತಿತ್ತು. ಆಮೇಲೆ ನನಗೆ ಅರ್ಥ ವಾದದ್ದೇನೆಂದರೆ, ಅದು ಅವರ ಕೆಲಸದ ಒಂದು ಭಾಗ. ಪ್ರತಿ ಗಂಟೆಗೆ ಒಮ್ಮೆಯಾದರೂ ಅವರು ಚಾಲಕ ಮತ್ತು ಸಹಚಾಲಕರನ್ನು ಮಾತನಾಡಿಸಿ, ಅಲ್ಲಿ ಏನಾದರೂ ಸಂದೇಶ ವಿದ್ದರೆ ರವಾನಿಸಿ, ಅವರಿಗೆ ತಿನಿಸು, ಪಾನೀಯದ ಅವಶ್ಯಕತೆ ಇದ್ದರೆ ಪೂರೈಸಬೇಕಾದದ್ದು ಅವರ ಕೆಲಸದ ಒಂದು ಭಾಗ. ಅದು ಪ್ರಮುಖಭಾಗವೂ ಆಗಿತ್ತು.

ಆದರೆ ಅದಕ್ಕೆ ಒಬ್ಬರೋ-ಇಬ್ಬರೋ ಸಾಕಾಗುತ್ತಿದ್ದರು. ನಂತರದ ದಿನಗಳಲ್ಲಿ ಪ್ರಯಾಣಿಕರ ಕಡೆಗೂ ಲಕ್ಷ್ಯವಹಿಸಬೇಕು, ಪ್ರಯಾಣಿಕರು ಅತಿಥಿಗಳು, ಅತಿಥಿಗಳೆಂದ ಮೇಲೆ ಸತ್ಕಾರ ವನ್ನೂ ಮಾಡಬೇಕು, ಅವರ ಬಗ್ಗೆ ಕಾಳಜಿಯೂ ಇರಬೇಕು ಎಂಬ ವಿಚಾರಗಳೆಲ್ಲ ಜೀವ ಪಡೆದುಕೊಂಡವು. ಅಷ್ಟಕ್ಕೂ ’ಗಗನಸಖಿ’ ಎಂಬ ಪದ ಹುಟ್ಟಿಕೊಂಡದ್ದು 1930 ರಲ್ಲಿ. ಅದಕ್ಕೂ ಮೊದಲು ಈ ಕೆಲಸವನ್ನು ಗಂಡಸರೇ ಮಾಡುತ್ತಿದ್ದರು.

ಈಗಲೂ ಕೆಲವು ವಿಮಾನದಲ್ಲಿ ಒಂದು-ಎರಡು ಸಹಾಯಕರನ್ನು ಕಾಣಬಹುದು. ಈ ಕೆಲಸಕ್ಕೆ ಈಗ ಲಿಂಗಭೇದ ಇಲ್ಲ. 1930 ರಲ್ಲಿ ಮೊತ್ತಮೊದಲ ಬಾರಿಗೆ ’ಎಲೆನ್ ಚರ್ಚ್’ ಹೆಸರಿನ ಮಹಿಳೆ ಗಗನಸಖಿಯಾಗಿ ಯುನೈಟೆಡ್ ಏರ್‌ಲೈನ್ಸ್ ವಿಮಾನದ ಒಳಗೆ ಕಾಲಿಟ್ಟಿ ದ್ದಳು. 25 ವರ್ಷ ವಯಸ್ಸಿನ ಎಲೆನ್ ವೃತ್ತಿಯಲ್ಲಿ ದಾದಿಯಾಗಿದ್ದಳು. ನಂತರ ಎಲ್ಲ ಸಂಸ್ಥೆ ಗಳೂ ನಿಧಾನವಾಗಿ ಮಹಿಳೆಯರನ್ನು ಈ ಕಾರ್ಯಕ್ಕೆ ಆಯೋಜಿಸಿ ಕೊಳ್ಳಲು ತೊಡಗಿದವು. ಅದರಲ್ಲಿ ಬಹುತೇಕ ದಾದಿಯರನ್ನೇ ಆರಿಸಿಕೊಳ್ಳಲಾಗುತ್ತಿತ್ತು. 1935ರ ವೇಳೆಗೆ ಈ ಕೆಲಸಕ್ಕೆ ಭಾರಿ ಬೇಡಿಕೆ ಬಂದಿತ್ತು.

ಆ ಕಾಲದ ಒಂದು ಹುzಗೆ ಐವತ್ತು ಜನರಂತೆ ಅರ್ಜಿ ಹಾಕುತ್ತಿದ್ದರು. ಆ ಕಾಲದಲ್ಲಿ, ಗಗನ ಸಖಿಯರ ಕೆಲಸಕ್ಕೆ ಎಲ್ಲರನ್ನೂ ಸೇರಿಸಿಕೊಳ್ಳುತ್ತಿರಲಿಲ್ಲ. ಗಗನಸಖಿಯರಾಗಲು ಬಯಸು ವವರು ನೋಡಲು ಸುಂದರವಾಗಿರಬೇಕು, ಐದರಿಂದ ಐದೂವರೆ ಅಡಿ ಎತ್ತರವಿರಬೇಕು, ಅವರ ತೂಕ 55 ರಿಂದ 60 ಕಿಲೋ ಒಳಗೆ ಇರಬೇಕು ಇತ್ಯಾದಿ ನಿಯಮಗಳಿದ್ದವು.

ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬಳೇ ಇರಬೇಕು ಎಂಬ ನಿಯಮವಿತ್ತು. ಮದುವೆಯಾಗದೇ ಇರುವ ವರಿಗೆ ಪ್ರಾಶಸ್ತ್ಯ. ವಿಧವೆ ಅಥವಾ ವಿಚ್ಛೇದಿತ ಮಹಿಳೆಯಾದರೂ ಅಡ್ಡಿಯಿಲ್ಲ, ಮಕ್ಕಳು ಇರಬಾರದು ಎಂದಿತ್ತು. ಅದರ ಜತೆಗೆ, ಮೂರು ತಿಂಗಳಿಗೆ ಒಮ್ಮೆ, ವರ್ಷದಲ್ಲಿ ನಾಲ್ಕು ಬಾರಿ ವೈದ್ಯಕೀಯ ತಪಾಸಣೆಗೆ ಒಳಪಡಬೇಕಾಗಿತ್ತು. ಈಗ ಆ ನಿಯಮಗಳೆಲ್ಲವೂ ಬಹುತೇಕ ಸಡಿಲಗೊಂಡಿವೆ.

ಆದರೆ, 2018ರಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಸಾಮಾನ್ಯ ಜನರಿಗಿಂತ ಗಗನಸಖಿ ಯರಲ್ಲಿ ಕ್ಯಾನ್ಸರ್ ರೋಗ ಹೆಚ್ಚಾಗಿ ಕಂಡುಬರುತ್ತದೆಯಂತೆ. ಅವರ ಶ್ವಾಸಕೋಶ ಉಳಿದವರಿಗಿಂತ ಬೇಗ ಕೃಶವಾಗುತ್ತದೆ, ಅವರಿಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳು ತ್ತದೆ,

ನಿದ್ರಾಹೀನತೆ, ಚರ್ಮದ ರೋಗಗಳು ಕಾಣಿಸಿಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ, ಸಂತಾ ನೋತ್ಪತ್ತಿಯಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ ಎಂದೆಲ್ಲ ಸಮೀಕ್ಷೆಯ ವರದಿ ಹೇಳುತ್ತದೆ. ಇದಕ್ಕೆಲ್ಲ ಕಾರಣ ಅವರು ಇತರರಿಗಿಂತ ಹೆಚ್ಚು ವಿಮಾನದಲ್ಲಿ ಹಾರಾಡುವುದು ಕಾರಣ ಎಂಬ ವರದಿ ನೀಡಿದೆ.

ಇನ್ನೂ ಒಂದು ವರದಿಯ ಪ್ರಕಾರ ಶೇ.65ರಷ್ಟು ಗಗನಸಖಿಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರಂತೆ. ಅದರಲ್ಲಿ ಸಹಕರ್ಮಿಗಳೂ ಪ್ರಯಾಣಿಕರೂ ಸೇರಿರುತ್ತಾರೆ ಎಂದು ವರದಿ ಹೇಳುತ್ತದೆ. ಈಗ ಸಖಿಯರ ಸುಖದುಃಖದ ಲೆಕ್ಕಾಚಾರ ನೀವೇ ಮಾಡಿ. ನಿಜವಾ ಗಿಯೂ ಅವರು ಉಳಿದವರಿಗಿಂತ ಸುಖಿಗಳೇ? ನಿರ್ಣಯ ನಿಮಗೇ ಬಿಟ್ಟದ್ದು.