SL vs AUS: ಏಷ್ಯಾ ನೆಲದಲ್ಲಿ ಟೆಸ್ಟ್ ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಅಲೆಕ್ಸ್ ಕೇರಿ!
Alex Carey hits Century against Sri lanka: ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಅಲೆಕ್ಸ್ ಕೇರಿ ಅವರು ಶತಕವನ್ನು ಸಿಡಿಸಿದ್ದಾರೆ. ಆ ಮೂಲ ಏಷ್ಯಾ ನೆಲದಲ್ಲಿ ಶತಕ ಸಿಡಿಸಿದ ಆಸ್ಟ್ರೇಲಿಯಾದ ಎರಡನೇ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ಅವರು ಬರೆದಿದ್ದಾರೆ.
ಗಾಲೆ (ಶ್ರೀಲಂಕಾ): ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಅಲೆಕ್ಸ್ ಕೇರಿ ಅವರು ಶ್ರೀಲಂಕಾ ವಿರುದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ಏಷ್ಯಾ ನೆಲದಲ್ಲಿ ಟೆಸ್ಟ್ ಶತಕ ಸಿಡಿಸಿದ ಆಸ್ಟ್ರೇಲಿಯಾದ ಎರಡನೇ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ಅಲೆಕ್ಸ್ ಕೇರಿ ಬರೆದಿದ್ದಾರೆ. ಅದ್ಭುತ ಬ್ಯಾಟ್ ಮಾಡಿದ ಅಲೆಕ್ಸ್ ಕೇರಿ 118 ಎಸೆತಗಳಲ್ಲಿ ಮೂರಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕಿದ್ದಾರೆ. ಇದರೊಂದಿಗೆ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ. ಆಡಮ್ ಗಿಲ್‌ಕ್ರಿಸ್ಟ್ ಅವರು ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಒಟ್ಟು 4 ಶತಕಗಳನ್ನು ಸಿಡಿಸಿದ್ದಾರೆ.
2022ರ ಡಿಸೆಂಬರ್‌ನಲ್ಲಿ ಮೊದಲ ಶತಕ ಸಿಡಿಸಿದ್ದ ಬಳಿಕ ಅಲೆಕ್ಸ್ ಕೇರಿ ಅವರು ಎರಡನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದ್ದಾರೆ. ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ 25ನೇ ಓವರ್‌ಗಳಲ್ಲಿ 91 ರನ್‌ಗಳಿಂದ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಸಂದರ್ಭದಲ್ಲಿ ಅಲೆಕ್ಸ್ ಕೇರಿ ಕ್ರೀಸ್‌ಗೆ ತೆರಳಿದ್ದರು. ಟ್ರಾವಿಸ್ ಹೆಡ್, ಉಸ್ಮಾನ್ ಖವಾಜ ಮತ್ತು ಮಾರ್ನಸ್ ಲಾಬುಶೇನ್ ವಿಕೆಟ್ ಒಪ್ಪಿಸಿದ ಬಳಿಕ ಆಸ್ಟ್ರೇಲಿಯಾ ತಂಡದ ಮೇಲೆ ಒತ್ತಡ ಹೆಚ್ಚಾಗಿತ್ತು. ಈ ವೇಳೆ ಜವಾಬ್ದಾರಿಯುತ ಬ್ಯಾಟ್ ಮಾಡಿದ ಸ್ಟೀವನ್ ಸ್ಮಿತ್ ಹಾಗೂ ಅಲೆಕ್ಸ್ ಕೇರಿ ತಲಾ ಶತಕಗಳನ್ನು ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
SL vs AUS: 35ನೇ ಟೆಸ್ಟ್ ಶತಕ ಸಿಡಿಸಿದ ಸುನೀಲ್ ಗವಾಸ್ಕರ್ ದಾಖಲೆ ಮುರಿದ ಸ್ಟೀವನ್ ಸ್ಮಿತ್!
ಅಂದ ಹಾಗೆ ಅಲೆಕ್ಸ್ ಕೇರಿ ಕ್ರೀಸ್‌ಗೆ ಬಂದಾಗ ಶ್ರೀಲಂಕಾ ಸ್ಪಿನ್ನರ್‌ಗಳು ಒತ್ತಡವನ್ನು ಹೇರಿದ್ದರು. ಧನಂಜಯ್ ಡಿ ಸಿಲ್ವಾ ಮತ್ತು ರಮೇಶ್ ಮೆಂಡಿಸ್‌ಗೆ ಬೌಂಡರಿಗಳನ್ನು ಹೊಡೆಯುವ ಮೂಲಕ ಕೇರಿ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದರು. ಅಲ್ಲದೆ, ರಮೇಶ್ ಮೆಂಡಿಸ್‌ಗೆ ಸಿಕ್ಸರ್ ಬಾರಿಸುವ ಮೂಲಕ ಆಸ್ಟ್ರೇಲಿಯಾ ಮೇಲಿದ್ದ ಒತ್ತಡವನ್ನು ಅಲೆಕ್ಸ್ ಕೇರಿ ಕಡಿಮೆ ಮಾಡಿದರು. ಸ್ಟೀವನ್ ಸ್ಮಿತ್ ಅವರು 69 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದ್ದರು. ತದ ನಂತರ ಅವರು ರನ್ ವೇಗವನ್ನು ಹೆಚ್ಚಿಸಿದ್ದರು. ಕೇರಿ ಮತ್ತು ಸ್ಮಿತ್ ಮುರಿಯದ ನಾಲ್ಕನೇ ವಿಕೆಟ್‌ಗೆ 150 ರನ್‌ಗಳನ್ನು ಕಲೆ ಹಾಕಿದ್ದರು. ಸ್ಮಿತ್ ತಮ್ಮ ಟೆಸ್ಟ್ ವೃತ್ತಿ ಜೀವನದ 36ನೇ ಶತಕವನ್ನು ಪೂರ್ಣಗೊಳಿಸಿದ್ದರು.
ALEX CAREY TEST CENTURY 💯
— 7Cricket (@7Cricket) February 7, 2025
The second of his career and his first away from home, in a superb innings!#SLvAUS pic.twitter.com/4g1RaDodZk
ಅಜೇಯ 139 ರನ್ ಗಳಿಸಿರುವ ಕೇರಿ
ಮೊದಲಿಗೆ ಸ್ಮಿತ್ ಶತಕವನ್ನು ಪೂರ್ಣಗೊಳಿಸಿದ ಬಳಿಕ ಅಲೆಕ್ಸ್ ಕೇರಿ ಕೂಡ ಮೂರಂಕಿ ವೈಯಕ್ತಿಕ ಮೊತ್ತವನ್ನು ದಾಟಿದರು. ಅವರು ಪ್ರಭತ್ ಜಯಸೂರ್ಯ ಎಸೆತದಲ್ಲಿ ಸ್ವೀಪ್ ಮೂಲಕ ಬೌಂಡರಿ ಬಾರಿಸಿ ಶತಕವನ್ನು ಪೂರ್ಣಗೊಳಿಸಿದರು. ಒಂದು ಹಂತದಲ್ಲಿ ಅಲೆಕ್ಸ್ ಕೇರಿ ರನ್‌ಔಟ್ ಆಗುವ ಸಾಧ್ಯತೆ ಇತ್ತು. ಆದರೆ, ಇದರಿಂದ ಪಾರಾಗಿದ್ದ ಅವರು, ನಂತರ ರನ್ ಹೊಳೆಯನ್ನು ಹರಿಸಿದರು. ಇದೀಗ ಅವರು 156 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 13 ಬೌಂಡರಿಗಳೊಂದಿಗೆ ಅಜೇಯ 139 ರನ್‌ಗಳನ್ನು ಗಳಿಸಿದ್ದಾರೆ. ಇನ್ನು ಇವರಿಗೆ ಮತ್ತೊಂದು ತುದಿಯಲ್ಲಿ ಬ್ಯಾಟ್ ಮಾಡುತ್ತಿರುವ ಸ್ಟೀವನ್ ಸ್ಮಿತ್, 239 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 120 ರನ್‌ಗಳನ್ನು ಗಳಿಸಿದ್ದಾರೆ.
330 ರನ್‌ಗಳನ್ನು ಕಲೆ ಹಾಕಿದ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 80 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 330 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ 73 ರನ್‌ಗಳ ಮುನ್ನಡೆಯನ್ನು ಪಡೆದಿದೆ. ಇದಕ್ಕೂ ಮುನ್ನ ಶ್ರೀಲಂಕಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 97.4 ಓವರ್‌ಗಳಿಗೆ 257 ರನ್‌ಗಳನ್ನು ಕಲೆ ಹಾಕಿ ಔಟ್ ಆಗಿತ್ತು. ಕುಸಾಲ್ ಮೆಂಡಿಸ್ ಅಜೇಯ 85 ರನ್‌ಗಳನ್ನು ಗಳಿಸಿದ್ದರೆ, ದಿನೇಶ್ ಚಾಂಡಿಮಾಲ್ 74 ರನಗಳನ್ನು ಗಳಿಸಿದ್ದರು.