ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CM Siddaramaiah: ಕೇಂದ್ರದಿಂದ ಅನ್ಯಾಯ ವಿರೋಧಿಸಿ ದಕ್ಷಿಣದ ರಾಜ್ಯಗಳು ಹೋರಾಟಕ್ಕೆ ಸಜ್ಜು, ಸಿಎಂ ಸಿದ್ದರಾಮಯ್ಯ ಬೆಂಬಲ

ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಭೇಟಿಯಾದರು. ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಮತ್ತು ದಕ್ಷಿಣ ರಾಜ್ಯಗಳ ವಿರೋಧಿ ನಿಲುವನ್ನು ವಿರೋಧಿಸಿ ದಕ್ಷಿಣ ಭಾರತದ ರಾಜ್ಯಗಳು ನಡೆಸಲು ಮುಂದಾಗಿರುವ ಪ್ರತಿಭಟನೆಯ ನಡೆಗಳ ಕುರಿತು ಚರ್ಚಿಸಿದರು.

ಕೇಂದ್ರದ ಅನ್ಯಾಯ ವಿರೋಧಿಸಿ ಹೋರಾಟ, ಸಿಎಂ ಸಿದ್ದರಾಮಯ್ಯ ಬೆಂಬಲ

ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ತಮಿಳುನಾಡು ನಿಯೋಗ

ಹರೀಶ್‌ ಕೇರ ಹರೀಶ್‌ ಕೇರ Mar 12, 2025 12:52 PM

ಬೆಂಗಳೂರು: ದಕ್ಷಿಣ ಭಾರತದ ದೇಶಗಳ ಹಿತಾಸಕ್ತಿಯನ್ನು ಕಡೆಗಣಿಸಿ ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆಗೆ (Delimitation) ಮುಂದಾಗಿರುವ ಕೇಂದ್ರದ ಸರಕಾರದ ಕ್ರಮವನ್ನು ವಿರೋಧಿಸಿ ದಕ್ಷಿಣದ (South India) ರಾಜ್ಯಗಳು ಹೋರಾಟಕ್ಕೆ ಮುಂದಾಗಿದ್ದು, ಇದಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಈ ಬಗ್ಗೆ ತಮ್ಮನ್ನು ಭೇಟಿಯಾದ ತಮಿಳುನಾಡಿನ ನಿಯೋಗಕ್ಕೆ, ಹೋರಾಟಕ್ಕೆ ತಾವು ಬೆಂಬಲ ನೀಡಲಿದ್ದೇವೆ ಎಂದು ಸಿಎಂ ಬೆಂಬಲ ಸೂಚಿಸಿದರು.

ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಭೇಟಿಯಾದರು. ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಮತ್ತು ದಕ್ಷಿಣ ರಾಜ್ಯಗಳ ವಿರೋಧಿ ನಿಲುವನ್ನು ವಿರೋಧಿಸಿ ದಕ್ಷಿಣ ಭಾರತದ ರಾಜ್ಯಗಳು ನಡೆಸಲು ಮುಂದಾಗಿರುವ ಪ್ರತಿಭಟನೆಯ ನಡೆಗಳ ಕುರಿತು ಚರ್ಚಿಸಿದರು.

ಇದಕ್ಕೂ ಮೊದಲು, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ದೂರವಾಣಿ ಮೂಲಕ ಮುಖ್ಯಮಂತ್ರಿಗಳ ಜೊತೆ ಈ ವಿಚಾರಗಳ ಬಗ್ಗೆ ಚರ್ಚಿಸಿದರು. ತಮಿಳುನಾಡು ಸರ್ಕಾರದ ನಿಯೋಗ ಮತ್ತು ಮುಖ್ಯಮಂತ್ರಿ ಸ್ಟಾಲಿನ್ ಅವರ ಜೊತೆಗೆ ಚರ್ಚಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಕ್ಷಿಣ ರಾಜ್ಯಗಳ ಪ್ರತಿರೋಧಕ್ಕೆ ತಮ್ಮದೂ ಬೆಂಬಲ ಸೂಚಿಸಿದರು. ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾದ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ, ಸಂವಿಧಾನದ ಒಕ್ಕೂಟ ತತ್ವಕ್ಕೆ ವಿರುದ್ಧವಾದ ಕೇಂದ್ರ ಸರ್ಕಾರದ ಎಲ್ಲಾ ನಡೆಗಳನ್ನೂ ತಾವು ಮುಲಾಜಿಲ್ಲದೆ ಖಂಡಿಸುತ್ತೇವೆ. ಈ ವಿಚಾರದಲ್ಲಿ ಹೋರಾಟಕ್ಕೂ ಬೆಂಬಲ ನೀಡುತ್ತೇವೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ಕ್ಷೇತ್ರ ಮರುವಿಂಗಡಣೆಗೆ ಮುಂದಾಗಿರುವ ಹೊತ್ತಿನಲ್ಲಿ ದಕ್ಷಿಣ ಭಾರತದ ಹಿತವನ್ನು ಪರಿಗಣಿಸಿಲ್ಲ. ಜಿಡಿಪಿಗೆ ಹೆಚ್ಚಿ ಕೊಡುಗೆ, ಕುಟುಂಬ ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಸಾಕ್ಷರತೆಯ ಸಂಪೂರ್ಣ ಜಾರಿ ಮುಂತಾದ ಕ್ರಮಗಳ ಮೂಲಕ ದಕ್ಷಿಣ ರಾಜ್ಯಗಳು ಇಡೀ ದೇಶದ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿವೆ. ಆದರೆ ಈಗಿನ ಜನಸಂಖ್ಯಾಧಾರಿತವಾಗಿ ಕ್ಷೇತ್ರ ಮರುವಿಂಗಡಣೆ ಮಾಡಲು ಹೊರಟರೆ ಅದು ದಕ್ಷಿಣದ ರಾಜ್ಯಗಳಿಗೆ ಮಾರಕವಾಗಲಿದೆ. ಹೆಚ್ಚಿನ ಜನಸಂಖ್ಯೆ ಹೊಂದಿರುವ ಉತ್ತರದ ರಾಜ್ಯಗಳಿಗೆ ಹೆಚ್ಚಿನ ಕ್ಷೇತ್ರಗಳು ದೊರೆಯಲಿದ್ದು, ದಕ್ಷಿಣ ರಾಜ್ಯಗಳು ಪ್ರಾತಿನಿಧ್ಯದ ಕೊರತೆ ಅನುಭವಿಸಲಿವೆ. ಇದನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದ್ದು, ಇದರಲ್ಲಿ ಭಾಗವಹಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ಟಾಲಿನ್‌ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಈ ಕುರಿತು ಜಂಟಿ ಕ್ರಿಯಾ ಸಮಿತಿಯನ್ನು ರಚಿಸಲು ಸ್ಟಾಲಿನ್‌ ಮುಂದಾಗಿದ್ದಾರೆ. ಇದರ ಉದ್ಘಾಟನೆ ಮಾರ್ಚ್‌ 22ರಂದು ಚೆನ್ನೈಯಲ್ಲಿ ನಡೆಯಲಿದೆ. ಇದರಲ್ಲಿ ದಕ್ಷಿಣದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪೂರ್ವದ ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಉತ್ತರ ಪಂಜಾಬ್‌ ಪಾಲ್ಗೊಳ್ಳಲಿವೆ.

ಇದನ್ನೂ ಓದಿ: ನಟಿ ಶಬಾನಾ ಅಜ್ಮಿಗೆ ʼಜೀವಮಾನ ಸಾಧನೆ ಪ್ರಶಸ್ತಿʼ ನೀಡಿ ಗೌರವಿಸಿದ ಸಿಎಂ ಸಿದ್ದರಾಮಯ್ಯ