ಲಖನೌ : ಉತ್ತರ ಪ್ರದೇಶದ (Uttar Pradesh) ಬಾಗ್‌ಪತ್‌ನಲ್ಲಿ ಮಹಾದುರಂತವೊಂದು ನಡೆದಿದ್ದು, ಜೈನ ನಿರ್ವಾಣ ಉತ್ಸವದಲ್ಲಿ ವೇದಿಕೆ ಕುಸಿದು 5 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹತ್ತಾರು ಮಂದಿ (UP Horror) ಗಾಯಗೊಂಡಿದ್ದಾರೆ. ಜೈನ ಧರ್ಮದ ಮೊದಲ ತೀರ್ಥಂಕರರಾದ ಭಗವಾನ್ ಆದಿನಾಥ್ ಅವರ ನಿರ್ವಾಣ ಲಡ್ಡೂ ಪರ್ವ್ ಕಾರ್ಯಕ್ರಮದಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದ್ದ ವೇದಿಕೆ ಕುಸಿದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಲಡ್ಡೂ ಸಮಾರಂಭದ ವೇಳೆ ಬಿದಿರು ಮತ್ತು ಮರದಿಂದ ನಿರ್ಮಿಸಲಾಗಿದ್ದ ತಾತ್ಕಾಲಿಕ ವೇದಿಕೆ ಕುಸಿದು ಬಿದ್ದಿದೆ. ನಂತರ ಕಾಲ್ತುಳಿತ ಉಂಟಾಗಿದೆ. ಕಾಲ್ತುಳಿತ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಾಗ್‌ಪತ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಸ್ಮಿತಾ ಲಾಲ್ , " ಈ ಕಾರ್ಯಕ್ರಮವನ್ನು ಸುಮಾರು 30 ವರ್ಷಗಳಿಂದ ನಡೆಸಲಾಗುತ್ತಿದೆ. ಆದರೆ ಈ ಬಾರಿ ಈ ರೀತಿ ಆಗಿದೆ. ಘಟನೆಯಲ್ಲಿ ಕನಿಷ್ಠ 40 ಜನರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 20 ಜನರನ್ನು ಈಗಾಗಲೇ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : Pushpa 2 Stampede: ಪುಷ್ಪಾ2 ಕಾಲ್ತುಳಿತ; ಫೇಕ್ ವಿಡಿಯೊ ಶೇರ್ ಮಾಡಿದ್ರೆ ಹುಷಾರ್! ಪೊಲೀಸರಿಂದ ಖಡಕ್ ವಾರ್ನಿಂಗ್
ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಪೊಲೀಸರು ಗಾಯಾಳುಗಳನ್ನು ಆಸ್ಪತ್ರಗೆ ರವಾನಿಸುತ್ತಿದ್ದಾರೆ.