Actor Vishal: ಅನಾರೋಗ್ಯದ ಹಿನ್ನೆಲೆ ತುಳುನಾಡಿನ ದೈವದ ಮೊರೆ ಹೋದ ತಮಿಳು ನಟ ವಿಶಾಲ್
Actor Vishal: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನ ಹರಿಪಾದೆಯ ಧರ್ಮದೈವ ಜಾರಂದಾಯ ದೈವಸ್ಥಾನಕ್ಕೆ ನಟ ವಿಶಾಲ್ ಅವರು ಮಂಗಳವಾರ ರಾತ್ರಿ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ವರ್ಷ ಜನವರಿ ಮೊದಲ ವಾರದಲ್ಲಿ ಚೆನ್ನೈನಲ್ಲಿ ನಡೆದಿದ್ದ ಮದಗಜರಾಜ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ವಿಶಾಲ್ ತೀವ್ರ ಅನಾರೋಗ್ಯಕ್ಕೀಡಾಗಿದಂತೆ ಕಂಡಿದ್ದರು. ಇದರ ಬೆನ್ನಲ್ಲೇ ಅವರು ಉತ್ತಮ ಆರೋಗ್ಯಕ್ಕಾಗಿ ತುಳುನಾಡಿನ ದೈವದ ಮೊರೆ ಹೋಗಿದ್ದಾರೆ.
![ಅನಾರೋಗ್ಯದ ಹಿನ್ನೆಲೆ ತುಳುನಾಡಿನ ದೈವದ ಮೊರೆ ಹೋದ ನಟ ವಿಶಾಲ್](https://cdn-vishwavani-prod.hindverse.com/media/original_images/Vishal.jpg)
![Profile](https://vishwavani.news/static/img/user.png)
ಮಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ತಮಿಳಿನ ಖ್ಯಾತ ನಟ ವಿಶಾಲ್ ತುಳುನಾಡಿನ ದೈವದ ಮೊರೆ ಹೋಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ತಮಿಳಿನ ʼಮದಗಜರಾಜʼ ಸಿನಿಮಾ ಪ್ರಚಾರದ ವೇಳೆ ವಿಶಾಲ್ (Actor Vishal) ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಮೈಕ್ ಹಿಡಿದು ಮಾತನಾಡುವ ವೇಳೆ ಮೈ ಕೈ ನಡುಗಿದ್ದರಿಂದ ಅವರ ಅಭಿಮಾನಿಗಳು ಆತಂಕಗೊಂಡಿದ್ದರು. ಬಳಿಕ ಅವರು ತೀವ್ರ ವೈರಲ್ ಫೀವರ್‌ನಿಂದ ಬಳಲುತ್ತಿರುವುದಾಗಿ ವೈದ್ಯರು ತಿಳಿಸಿದ್ದರು. ಆದರೆ, ಇದೀಗ ಅನಾರೋಗ್ಯದ ನಿವಾರಣೆಗಾಗಿ ತುಳುನಾಡಿನ ದೈವಸ್ಥಾನಕ್ಕೆ ನಟ ಆಗಮಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನ ಹರಿಪಾದೆಯ ಧರ್ಮದೈವ ಜಾರಂದಾಯ ದೈವಸ್ಥಾನಕ್ಕೆ ಅವರು ಮಂಗಳವಾರ ರಾತ್ರಿ ಭೇಟಿ ನೀಡಿ, ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ, ಆರೋಗ್ಯ ಸಮಸ್ಯೆ ಬಗ್ಗೆ ಜಾರಂದಾಯ ದೈವದ ಬಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ನಟ ವಿಶಾಲ್ ಅವರ ಸಮಸ್ಯೆ ಆಲಿಸಿದ ಜಾರಂದಾಯ ದೈವ, ಕಣ್ಣೀರು ಹಾಕಬೇಡ ನಾನಿದ್ದೇನೆ ಎಂದು ಅಭಯ ನೀಡಿದೆ. ಇದಾದ ಮೇಲೆ, ಸಂಪೂರ್ಣ ಗುಣಮುಖವಾಗಿ ಬಂದು ಶ್ರೀ ಕ್ಷೇತ್ರದಲ್ಲಿ ತುಲಾಭಾರ ಸೇವೆ ಕೊಡಲು ಅರ್ಚಕರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಹರಿಪಾದೆ ಜಾರಂದಾಯ ವಾರ್ಷಿಕ ನೇಮದ ಹಿನ್ನೆಲೆ ಸುಮಾರು ಮೂರು ಗಂಟೆಗಳ ಕಾಲ ವಿಶಾಲ್ ಅವರು ಭಕ್ತಿಯಿಂದ ಜಾರಂದಾಯ ನೇಮವನ್ನು ವೀಕ್ಷಿಸಿದ್ದಾರೆ.
ಇದೇ ವರ್ಷ ಜನವರಿ ಮೊದಲ ವಾರದಲ್ಲಿ ಚೆನ್ನೈನಲ್ಲಿ ನಡೆದಿದ್ದ ಮದಗಜರಾಜ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ವಿಶಾಲ್ ತೀವ್ರ ಅನಾರೋಗ್ಯಕ್ಕೀಡಾಗಿದಂತೆ ಕಂಡಿದ್ದರು. ಕಟ್ಟುಮಸ್ತಾಗಿದ್ದ ಅವರ ದೇಹ ತುಂಬಾ ಸೊರಗಿದಂತೆ ಕಾಣುತ್ತಿತ್ತು. ಕೈಗಳು ನಡುಗುತ್ತಿದ್ದವು. ಅವರ ಮಾತುಗಳು ತೊದಲುತ್ತಿದ್ದವು. ಆಗಲೇ ಜನರಲ್ಲಿ ವಿಶಾಲ್ ಅವರಿಗೇನಾಗಿದೆಯೋ ಎಂಬ ಆತಂಕ ಕಾಡಲಾರಂಭಿಸಿತ್ತು.
ಕಾರ್ಯಕ್ರಮಕ್ಕೆ ಬರುವಾಗಲೇ ವಿಶಾಲ್ ಅವರು ಸಹಾಯಕ ಸಿಬ್ಬಂದಿಯ ಕೈಹಿಡಿದುಕೊಂಡು ಸಭಾಂಗಣಕ್ಕೆ ಬಂದಿದ್ದರು. ಈ ಬಗ್ಗೆ ವೈದ್ಯರು ಸ್ಪ,ಷ್ಟನೆ ನೀಡಿ, ವಿಶಾಲ್ ಅವರಿಗೆ ವೈರಲ್ ಫೀವರ್ ಇದೆ. ಅದರ ನಡುವೆಯೂ ಅವರು ಕಾರ್ಯಕ್ರಮಕ್ಕೆ ಬಂದಿದ್ದರಿಂದ ಅವರಿಗೆ ಕಾರ್ಯಕ್ರಮದಲ್ಲಿ ಮಾತನಾಡಲು ಆಗಿರಲಿಲ್ಲ ಎಂದು ಹೇಳಿದ್ದರು. ಅವರ ಪರಿಸ್ಥಿತಿಯನ್ನು ನೋಡಿದ ಅಭಿಮಾನಿಗಳು ವಿಶಾಲ್ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು. ಇದಾದ ಬಳಿಕ ಎಲ್ಲೂ ಕಾಣಿಸಿಕೊಂಡಿರದ ವಿಶಾಲ್ ಅವರು ದಕ್ಷಿಣ ಕನ್ನಡ ದೈವಸ್ಥಾನಕ್ಕೆ ಭೇಟಿ ನೀಡಿ, ಆರೋಗ್ಯಕ್ಕಾಗಿ ಪ್ರಾರ್ಥಿಸಿ, ಹರಕೆ ಹೊತ್ತಿದ್ದಾರೆ.
![Vishal (1)](https://cdn-vishwavani-prod.hindverse.com/media/images/Vishal_1.width-800.jpg)
ಈ ಸುದ್ದಿಯನ್ನೂ ಓದಿ | Vidyapathi Movie: ಮಲೈಕಾ ಬರ್ತ್‌ಡೇಗೆ 'ವಿದ್ಯಾಪತಿ' ಫಸ್ಟ್ ಝಲಕ್ ರಿಲೀಸ್; ನಾಗಭೂಷಣ್‌ಗೆ ಸೂಪರ್ ಸ್ಟಾರ್ ವಿದ್ಯಾ ಜೋಡಿ
2013ರಲ್ಲಿ ಚಿತ್ರೀಕರಣ ಮುಗಿದಿದ್ದ ಮದಗಜರಾಜ ಚಿತ್ರವು ಸುದೀರ್ಘ 12 ವರ್ಷಗಳ ನಂತರ ಜ.12ರಂದು ಬಿಡುಗಡೆಯಾಗಿತ್ತು. ಆದರೂ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ. 15 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗಿದ್ದ ಚಿತ್ರ ಬರೋಬ್ಬರಿ 56 ಕೋಟಿ ಕಲೆಕ್ಷನ್ ಮಾಡಿದೆ. ನಟ ವಿಶಾಲ್, ಸಂತಾನಂ, ವರಲಕ್ಷ್ಮಿ, ಸತೀಶ್, ನಿತಿನ್ ಸತ್ಯ, ಸೋನುಸೂದ್, ಅಂಜಲಿ, ದಿವಂಗತ ನಟರಾದ ಮಣಿವಣ್ಣನ್, ಮನೋಬಾಲಾ, ಮೈಲಸ್ವಾಮಿ, ಚಿಟ್ಟಿಬಾಬು ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.