ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Nadig Column: ʼಹಿಮʼದ ಮಡಿಲು ಈಗ ಅಗ್ನಿʼಕುಂಡʼ

ನೇಪಾಳದಲ್ಲಿ ಈಗಿರುವ ಪ್ರಜಾಪ್ರಭುತ್ವ ತೊಲಗಿ ರಾಜಪ್ರಭುತ್ವ ಮರಳಬೇಕು, ದೇಶವನ್ನು ಮೊದ ಲಿನಂತೆ ಹಿಂದೂ ರಾಷ್ಟ್ರವೆಂದು ಘೋಷಿಸಬೇಕು ಎಂದು ಆಗ್ರಹಿಸಿ ನೇಪಾಳಿಗರು ಪ್ರತಿಭಟನೆಗೆ ಮುಂದಾ ಗಿದ್ದಾರೆ. ಆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಸಾವು-ನೋವುಗಳೂ ಸಂಭವಿಸಿವೆ. ಈ ಕುರಿತಾದ ಪಕ್ಷಿ ನೋಟ ಇಲ್ಲಿದೆ.

ʼಹಿಮʼದ ಮಡಿಲು ಈಗ ಅಗ್ನಿʼಕುಂಡʼ

ನೆರೆ ರಾಷ್ಟ್ರ ನೇಪಾಳದಲ್ಲಿ ಶಾಂತಿ ಕದಡಿದೆ. ರಾಜಕೀಯ ವ್ಯವಸ್ಥೆಯಲ್ಲಿ ತಲೆದೋರಿರುವ ಅಸ್ಥಿರತೆ, ರಾಜಕಾರಣಿಗಳ ಹುಸಿ ಆಶ್ವಾಸನೆಗಳಿಂದ ಅಸಮಾಧಾನಗೊಂಡಿರುವ ನೇಪಾಳಿಗರು ಪ್ರತಿಭಟನೆಗೆ ಇಳಿಯುವುದರೊಂದಿಗೆ ಅಲ್ಲಿ ಬದಲಾವಣೆಯ ಗಾಳಿ ಬೀಸುವ ಲಕ್ಷಣಗಳು ಗೋಚರಿಸುತ್ತಿವೆ. ತೀವ್ರಗೊಂಡ ಜನಾಕ್ರೋಶ: ರಾಜಕಾರಣಿಗಳ ಭ್ರಷ್ಟಾಚಾರದಿಂದ ರೋಸಿ ಹೋಗಿರುವ ನೇಪಾಳಿ ಗರು ‘ದೇಶದಲ್ಲಿ ಮತ್ತೆ ಮೊದಲಿನಿಂತೆ ರಾಜಪ್ರಭುತ್ವ ಬರಲಿ, ತನ್ಮೂಲಕ ದೇಶ ಉಳಿಯಲಿ’ ಎಂಬ ಆಶಯದೊಂದಿಗೆ ವ್ಯವಸ್ಥೆಯ ಬದಲಾವಣೆಗೆ ಆಗ್ರಹಿಸುತ್ತಿದ್ದಾರೆ. ಜತೆಗೆ, ರಾಷ್ಟ್ರಕ್ಕೆ ಲಗತ್ತಿಸಲಾಗಿ ರುವ ‘ಜಾತ್ಯತೀತ’ ಎಂಬ ಹಣೆಪಟ್ಟಿಯನ್ನು ಕಿತ್ತೊಗೆದು ಮೊದಲಿನಂತೆ ‘ಹಿಂದೂರಾಷ್ಟ್ರ’ ಎಂದು ಕರೆಯು ವಂತಾಗಬೇಕು ಎಂಬ ಒತ್ತಾಯವೂ ಇದರೊಂದಿಗೆ ಸೇರಿಕೊಂಡಿದೆ. ‘ಮಾಜಿ ರಾಜ’ ಜ್ಞಾನೇಂದ್ರ ಶಾ ಅವರ ಬೆಂಬಲಿಗರು ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಶುರು ಹಚ್ಚಿಕೊಂಡ ಪ್ರತಿಭಟನೆಯು ಮಾರ್ಚ್ 28ರಂದು ತಾರಕಕ್ಕೇರಿ ಹಿಂಸಾಚಾರದ ಸ್ತರವನ್ನು ತಲುಪಿತು. ಓರ್ವ ಪತ್ರಕರ್ತ ಸೇರಿದಂತೆ ಇಬ್ಬರು ಸ್ಥಳದಲ್ಲೇ ಅಸುನೀಗುವುದಕ್ಕೆ ಹಾಗೂ ನೂರಾರು ಜನರು ಗಾಯಗೊಳ್ಳುವುದಕ್ಕೆ ಅದು ಕಾರಣವಾಯಿತು.

ಪ್ರತಿಭಟನೆಗೆ ಕಾರಣವೇನು?

ಹಾಗೆ ನೋಡಿದರೆ, ನೇಪಾಳದಲ್ಲಿ 240 ವರ್ಷಗಳಿಂದ ಚಾಲ್ತಿಯಲ್ಲಿದ್ದುದು ರಾಜಪ್ರಭುತ್ವ. ಬದಲಾದ ಕಾಲಘಟ್ಟದ ಅನಿವಾರ್ಯತೆ ಹಾಗೂ ನಿರೀಕ್ಷೆಗೆ ಅನುಸಾರವಾಗಿ 2008ರಲ್ಲಿ ರಾಜಪ್ರಭುತ್ವ ಕೊನೆ ಗೊಂಡು ಪ್ರಜಾಪ್ರಭುತ್ವದ ಪರ್ವಕಾಲ ಬಂತು. ಆಗಿನ ರಾಜ ಜ್ಞಾನೇಂದ್ರರು ಎಲ್ಲ ರಾಜಾಧಿಕಾರ ಗಳನ್ನೂ ಸಂಸತ್ತಿಗೆ ಹಸ್ತಾಂತರಿಸಿದರು. ವಿಷಾದನೀಯ ಸಂಗತಿಯೆಂದರೆ, ಪ್ರಜಾಪ್ರಭುತ್ವ ಅಲ್ಲಿ ಗಿಟ್ಟಲಿಲ್ಲ. ಅಂದರೆ, ಪ್ರಜಾಪ್ರಭುತ್ವ ಜಾರಿಗೆ ಬಂದ 17 ವರ್ಷಗಳಲ್ಲಿ ಬರೋಬ್ಬರಿ 11 ಸರಕಾರಗಳು ಬಂದುಹೋಗುವಂತಾಯಿತು. ಇದಕ್ಕೆ ಕಾರಣ, ರಾಜಕೀಯ ನಾಯಕರಿಗೆ ದೇಶದ ಹಿತಾಸಕ್ತಿಗಿಂತ ಸ್ವಹಿತಾಸಕ್ತಿಯೇ ಆದ್ಯತೆಯ ವಿಷಯವಾಗಿದ್ದು.

ತಮಾಷೆಯೆಂದರೆ, ನೇಪಾಳದಲ್ಲಿನ ಯಾವುದೇ ಚುನಾಯಿತ ಸರಕಾರ ಪೂರ್ಣಾವಧಿಯ ಅಧಿಕಾರ ನಡೆಸಿಲ್ಲ. ಮತ್ತೆ ಮತ್ತೆ ನಡೆಯುವ ಚುನಾವಣೆಗಳು, ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಯಂಥ ಆಯಕಟ್ಟಿನ ಸ್ಥಾನಗಳಲ್ಲಿ ಆಗುತ್ತಲೇ ಹೋದ ಬದಲಾವಣೆ ಮುಂತಾದ ಕಾರಣದಿಂದಾಗಿ ನೇಪಾಳ ದಲ್ಲಿ ಆಳುಗ ವ್ಯವಸ್ಥೆಗೆ ಗ್ರಹಣ ಹಿಡಿದಂತಾಯಿತು. ಇಂಥ ರಾಜಕೀಯ ಅಸ್ಥಿರತೆಯ ಕಾರಣದಿಂದ ಯುವಜನರಿಗೆ ದಕ್ಕಬೇಕಾದ ಉದ್ಯೋಗಾವಕಾಶಗಳು ಸೇರಿದಂತೆ ಜನರ ವೈವಿಧ್ಯಮಯ ಅಗತ್ಯ ಗಳಿಗೆ ಸಂಚಕಾರ ಒದಗತೊಡಗಿತು. ಯುವಕರು ಹೊಟ್ಟೆ ಪಾಡಿಗಾಗಿ ಪರದೇಶಗಳತ್ತ ಮುಖ ಮಾಡ ಬೇಕಾಯಿತು. ಈ ಎಲ್ಲ ನಕಾರಾತ್ಮಕ ಬೆಳವಣಿಗೆಗಳೇ ಜನರು ಸಹನೆ ಕಳೆದುಕೊಳ್ಳಲು ಮೂಲವಾ ಯಿತು.

ಇದನ್ನೂ ಓದಿ: Yagati Raghu Naadig Column: ಸುದ್ದಿವಾಹಿನಿಯಲ್ಲಿ ಒಂದು ಸುತ್ತು

ಬದಲಾವಣೆಯ ಪರ್ವಕಾಲ

ಫೆಬ್ರವರಿ 19 ನೇಪಾಳದ ಗಣತಂತ್ರ ದಿನ. ಅಂದು, ಮಾಜಿ ರಾಜ ಜ್ಞಾನೇಂದ್ರ ಅವರು ಜನಬೆಂಬಲ ಕೋರಿ ಕರೆನೀಡಿದ್ದು ಪ್ರತಿಭಟನಾಕಾರರಿಗೆ ಒಂದರ್ಥದಲ್ಲಿ ಪರೋಕ್ಷ ಸೂಚನೆಯಾಗಿತ್ತು ಎನ್ನಲಾ ಗುತ್ತದೆ. “ದೇಶವನ್ನು ರಕ್ಷಿಸುವ ಮತ್ತು ರಾಷ್ಟ್ರೀಯ ಏಕತೆಯನ್ನು ಮರುಸ್ಥಾಪಿಸುವ ಹೊಣೆಯನ್ನು ನಾವೀಗ ಹೊರಬೇಕಾಗಿ ಬಂದಿದೆ" ಎಂಬ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿ ಬೀದಿಗಿಳಿದ ಪ್ರತಿಭಟನಾಕಾರರು ಆಳುಗ ವಲಯಕ್ಕೆ ಚುರುಕು ಮುಟ್ಟಿಸಿದ್ದರ ಜತೆಗೆ, ತಮ್ಮ ಬೇಡಿಕೆಗಳ ಈಡೇರಿ ಕೆಗೆ ಗಡುವು ನೀಡಿದ್ದಾರೆ; ಅವನ್ನು ಈಡೇರಿಸುವ ಬದ್ಧತೆ ಹೊಮ್ಮದಿದ್ದಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಸಾಲದೆಂಬಂತೆ ಜ್ಞಾನೇಂದ್ರರು ನೇಪಾಳದ ವಿವಿಧೆಡೆಯ ಧಾರ್ಮಿಕ ಸ್ಥಳಗಳಿಗೆ ಅನುಯಾಯಿ ಗಳೊಂದಿಗೆ ನೀಡಿ ಭಾರಿ ಬಹಿರಂಗ ಸಭೆಗಳನ್ನು ನಡೆಸಿದ್ದಾರೆ. ಇದು ‘ಪ್ರಭುತ್ವ ಬದಲಾವಣೆ’ಯ ಪರ್ವದ ಮುನ್ಸೂಚನೆ ಎನ್ನಲಾ ಗುತ್ತಿದೆ.

ಹೊಮ್ಮಿತು ಟೀಕೆ-ಟಿಪ್ಪಣಿ

ಫೆಬ್ರವರಿ 19ರ ಗಣತಂತ್ರ ದಿನದಂದು ಜ್ಞಾನೇಂದ್ರ ಶಾ ಅವರಿಂದ ಹೊಮ್ಮಿದ ಪರೋಕ್ಷ ಮಾತುಗಳ ಅರ್ಥವನ್ನು ಗ್ರಹಿಸಿದ ನೇಪಾಳದ ನಾಗರಿಕ ಸಮಾಜದ ಗುಂಪೊಂದು ಮಾರ್ಚ್ 24ರಂದು, “ರಾಜ ಪ್ರಭುತ್ವದ ಮರುಸ್ಥಾಪನೆಯ ಗುರಿಯೊಂದಿಗೆ ‘ರಾಜಕೀಯವಾಗಿ’ ಸಕ್ರಿಯರಾಗಿರುವ ಜ್ಞಾನೇಂದ್ರ ಶಾ, ತನ್ಮೂಲಕ ತಮ್ಮ ಪೂರ್ವಜರ ರಾಷ್ಟ್ರ ನಿರ್ಮಾಣದ ಪ್ರಯತ್ನಗಳನ್ನು ಹಾಳು ಗೆಡವಲು ಹೊರಟಿದ್ದಾರೆ; ಅವರ ಈ ಚಟುವಟಿಕೆಯಿಂದಾಗಿ ದೇಶವು ನೆರೆಹೊರೆಯ ರಾಷ್ಟ್ರಗಳು ಮತ್ತು ಪ್ರಪಂಚದ ಸಮ್ಮುಖದಲ್ಲಿ ದುರ್ಬಲಗೊಳ್ಳುವ ಅಪಾಯವಿದೆ" ಎಂದು ಟೀಕಿಸಿದ್ದೂ ಉಂಟು.

ಆಸ್ತಿಪಾಸ್ತಿಗೆ ಹಾನಿ

ಮಾರ್ಚ್ 28ರಂದು ಬೀದಿಗಿಳಿದ ಪ್ರತಿಭಟನಾಕಾರರು ಕಠ್ಮಂಡುವಿನ ಟಿಂಕುನೆ-ಬನೇಶ್ವರ್ ಪ್ರದೇಶ ದಲ್ಲಿ ರಾಜಕೀಯ ಪಕ್ಷವೊಂದರ ಕಚೇರಿಯ ಮೇಲೆ ದಾಳಿ ಮಾಡಿದ್ದರ ಜತೆಗೆ, ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚುವಿಕೆ ಮತ್ತು ಅಂಗಡಿಗಳ ಲೂಟಿಯಲ್ಲೂ ತೊಡಗಿಸಿಕೊಂಡ ಪರಿಣಾಮ ಕಠ್ಮಂಡುವಿನ ಒಂದಷ್ಟು ಭಾಗಗಳಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ಸಾರ್ವಜನಿಕ ಸ್ವತ್ತುಗಳಿಗೆ ಮತ್ತು ಪರಿಸರಕ್ಕೆ ಹಾನಿಯಾದ ಹಿನ್ನೆಲೆಯಲ್ಲಿ, ಮಾಜಿ ರಾಜ ಜ್ಞಾನೇಂದ್ರ ಶಾ ಅವರಿಗೆ ಕಠ್ಮಂಡು ಮೆಟ್ರೋಪಾಲಿಟನ್ ನಗರದ ಮೇಯರ್ ಪತ್ರ ಬರೆದು, ಸ್ವತ್ತು-ಹಾನಿ ಸಂಬಂಧದ ದಂಡವನ್ನು ಪಾವತಿಸುವಂತೆ ಆಗ್ರಹಿಸಿದ ಬೆಳವಣಿಗೆಯೂ ಆಗಿದೆ.

ಕುದಿಯುತ್ತಿದೆ ನೇಪಾಳ

ಹಿಮದ ಮಡಿಲಲ್ಲಿ ತಣ್ಣಗಿರಬೇಕಿದ್ದ ನೇಪಾಳ ಅಕ್ಷರಶಃ ಕುದಿಯುತ್ತಿದೆ. ಮೇಲೆ ಉಲ್ಲೇಖಿಸ ಲಾಗಿ ರುವ ರಾಜಕೀಯ ಕಾರಣಗಳಲ್ಲದೆ, ನೇಪಾಳದಲ್ಲಿ ಆರ್ಥಿಕ ಸಂಕಷ್ಟ ಅವ್ಯಾಹತವಾಗಿದೆ, ಬೆಲೆಯೇ ರಿಕೆಯಿಂದ ಜನರು ತತ್ತರಿಸಿದ್ದಾರೆ. ಶತಮಾನಗಳಿಂದ ಉಳಿದು-ಬೆಳೆದುಕೊಂಡು ಬಂದಿದ್ದ ನೇಪಾಳಿಯರ ಧಾರ್ಮಿಕ ಮತ್ತು ಸಾಂಸ್ಕೃತಿಕ ಅನನ್ಯತೆಗಳು, ಪರಂಪರೆಗಳು ಅಡಕತ್ತರಿಯಲ್ಲಿ ಸಿಲುಕಿವೆ. ಹೀಗಾಗಿ ನೇಪಾಳಿಗರಲ್ಲಿ, ‘ರಾಜಪ್ರಭುತ್ವವಿದ್ದಾಗ ರಾಷ್ಟ್ರಕ್ಕೆ ಇಂಥ ದುಸ್ಥಿತಿ ಒದಗಿರಲಿಲ್ಲ, ರಾಜರು ಮಾತ್ರವೇ ನಮ್ಮ ಸಮಸ್ಯೆಗಳಿಗೆ ಮದ್ದು ಅರೆಯಬಲ್ಲರು’ ಎಂಬ ಗ್ರಹಿಕೆ ಒಡಮೂಡಿದೆ. ನಿರುದ್ಯೋ ಗಿಗಳು/ಯುವಕರು, ರೈತರು, ಮಧ್ಯಮ ವರ್ಗದವರು ಹೀಗೆ ಸಮಾಜದ ವಿವಿಧ ಸ್ತರದ ಜನರು ಈ ಪ್ರತಿಭಟನೆಗೆ ದನಿಗೂಡಿಸಿದ್ದಾರೆ. ಆಳುಗ ವಲಯದಿಂದ ಸೂಕ್ತ ಪ್ರತಿಸ್ಪಂದನೆ ದಕ್ಕದಿ ದ್ದಲ್ಲಿ, ಅವರ ಬೇಗುದಿ ಸ್ಫೋಟಗೊಳ್ಳುವ ನಿರೀಕ್ಷೆಯಿದೆ. ದೇಶದ 40ಕ್ಕೂ ಹೆಚ್ಚಿನ ಸಂಘಟನೆಗಳು ಈ ಪ್ರತಿಭಟನೆಗೆ ಒತ್ತಾಸೆಯಾಗಿ ನಿಂತಿವೆ ಎನ್ನಲಾಗಿದೆ.

ಅಸಮಾಧಾನದ ಮೊಳಕೆ

ವಿಶ್ವದ ಏಕೈಕ ಹಿಂದೂ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಹೆಗಲಿಗೇರಿಸಿಕೊಂಡಿತ್ತು ನೇಪಾಳ. ಆದರೆ 2008ರಲ್ಲಿ ಅದಕ್ಕೆ ‘ಜಾತ್ಯತೀತ ರಾಷ್ಟ್ರ’ ಎಂಬ ಹಣೆಪಟ್ಟಿಯನ್ನು ನೇತುಹಾಕಿದ್ದು ಬದಲಾದ ‘ಪ್ರಭುತ್ವ’ ವ್ಯವಸ್ಥೆ. ಅಂದರೆ ‘ರಾಜಪ್ರಭುತ್ವ’ದಿಂದ ‘ಪ್ರಜಾಪ್ರಭುತ್ವ’ದೆಡೆಗಿನ ಸ್ಥಿತ್ಯಂತರದ ಘಟ್ಟ. ರಾಜಪ್ರಭುತ್ವಕ್ಕೆ ಒಗ್ಗಿಕೊಂಡಿದ್ದ ದೇಶದ ಜನರಲ್ಲಿ ಪ್ರಜಾಪ್ರಭುತ್ವವು ಹುಟ್ಟಿಸಿದ ಬೇಸರ ಮತ್ತು ಅಸಮಾಧಾನಗಳು ದಿನಗಳೆಯುತ್ತ ಬಂದಂತೆ ಹೆಮ್ಮರವಾಗಿ ಈಗಿನ ಪ್ರತಿಭಟನೆ ಮತ್ತು ಹಿಂಸಾ ಚಾರದ ಸಂದರ್ಭವನ್ನು ಹುಟ್ಟುಹಾಕಿವೆ ಎನ್ನಬೇಕು. ಪ್ರಜಾಪ್ರಭುತ್ವದ ಮುಖವಾಡ ಹೊತ್ತು ಕಾಲಾನುಕಾಲಕ್ಕೆ ಬಂದ ಸರಕಾರಗಳು ಹಿಂದೂ ಪರಂಪರೆ ಮತ್ತು ಮೌಲ್ಯಗಳನ್ನು ಮೂಲೆಗೊತ್ತಿ, ಪರಧರ್ಮಗಳಿಗೆ/ಪರಧರ್ಮೀಯರಿಗೆ ಮಣೆ ಹಾಕಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ನೆಲದ ಧಾರ್ಮಿಕ ಅಸ್ಮಿತೆ ಮತ್ತು ಸಾಂಸ್ಕೃತಿಕ ಪರಂಪರೆಗೇ ಧಕ್ಕೆಯೊದಗುವ ಸ್ಥಿತಿ ಬಂದ ಹಿನ್ನೆಲೆಯಲ್ಲಿ ಜನ ಬೀದಿಗಿಳಿದಿದ್ದಾರೆ ಎನ್ನುತ್ತಾರೆ ವಿಶ್ಲೇಷಕರು.

*

ದೇಶವನ್ನು ರಕ್ಷಿಸುವ ಮತ್ತು ರಾಷ್ಟ್ರೀಯ ಏಕತೆಯನ್ನು ಮರುಸ್ಥಾಪಿಸುವ ಹೊಣೆಯನ್ನು

ನಾವೀಗ ಹೊರಬೇಕಾಗಿ ಬಂದಿದೆ.

ಮಾಜಿ ರಾಜ ಜ್ಞಾನೇಂದ್ರ