ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Trailer Release: 'ಕಸ್ಟಡಿ', 'ಪಾಲ್ಗುಣಿ' ಸಿನಿಮಾಗಳ ಟ್ರೇಲರ್ ರಿಲೀಸ್‌; ಎರಡೂ ಚಿತ್ರಗಳು ಆ.8ಕ್ಕೆ ಬಿಡುಗಡೆ

ನಾಗೇಶ್ ಕುಮಾರ್ ಯು.ಎಸ್. & ಜೆ.ಜೆ. ಶ್ರೀನಿವಾಸ್ ನಿರ್ಮಿಸಿರುವ, ಜೆ.ಜೆ. ಶ್ರೀನಿವಾಸ್ ನಿರ್ದೇಶಿಸಿರುವ ʼಕಸ್ಟಡಿʼ ಹಾಗೂ ʼಪಾಲ್ಗುಣಿʼ ಚಿತ್ರಗಳ ಟ್ರೇಲರ್ ಬಿಡುಗಡೆಯಾಗಿದ್ದು, ಈ ಎರಡು ಚಿತ್ರಗಳು ಆಗಸ್ಟ್ 8 ರಂದು ವರಮಹಾಲಕ್ಷ್ಮೀ ಹಬ್ಬದ ಶುಭದಿನ ಬಿಡುಗಡೆಯಾಗುತ್ತಿವೆ ಎಂದು ನಿರ್ದೇಶಕ ಜೆ.ಜೆ. ಶ್ರೀನಿವಾಸ್ ತಿಳಿಸಿದ್ದಾರೆ.

'ಕಸ್ಟಡಿ', 'ಪಾಲ್ಗುಣಿ' ಚಿತ್ರಗಳ ಟ್ರೇಲರ್ ರಿಲೀಸ್‌

Profile Siddalinga Swamy Jul 30, 2025 2:27 PM

ಬೆಂಗಳೂರು: ನಾಗೇಶ್ ಕುಮಾರ್ ಯು.ಎಸ್. & ಜೆ.ಜೆ. ಶ್ರೀನಿವಾಸ್ ನಿರ್ಮಿಸಿರುವ, ಜೆ.ಜೆ. ಶ್ರೀನಿವಾಸ್ ನಿರ್ದೇಶಿಸಿರುವ ʼಕಸ್ಟಡಿʼ ಹಾಗೂ ʼಪಾಲ್ಗುಣಿʼ ಚಿತ್ರಗಳ (Custody and Palguni Movies) ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಕನ್ನಡಪರ ಹೋರಾಟಗಾರರಾದ ಸಾ.ರಾ. ಗೋವಿಂದು ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಈ ಎರಡು ಚಿತ್ರಗಳ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಉಪಾಧ್ಯಕ್ಷ ಶಿಲ್ಪಾ ಶ್ರೀನಿವಾಸ್, ಗೌ. ಕಾರ್ಯದರ್ಶಿ ಪ್ರವೀಣ್ ಕುಮಾರ್, ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ. ವಿಶ್ವನಾಥ್, ನಿರ್ಮಾಪಕರಾದ ಭಾ.ಮ.ಹರೀಶ್, ಎಂ.ಜಿ. ರಾಮಮೂರ್ತಿ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ʼಕಸ್ಟಡಿʼ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾದರೆ, ʼಪಾಲ್ಗುಣಿʼ ಮಂಡ್ಯದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿದ ಕಥಾಹಂದರ ಹೊಂದಿರುವ ಚಿತ್ರ. ʼಭೀಮʼ ಖ್ಯಾತಿಯ ಪ್ರಿಯಾ ಅವರು ʼಕಸ್ಟಡಿʼ ಚಿತ್ರದ ಪ್ರಮುಖ ಪಾತ್ರದಲ್ಲಿ, ರೇಖಾಶ್ರೀ ಅವರು ʼಪಾಲ್ಗುಣಿʼ ಪಾತ್ರದಲ್ಲಿ ನಟಿಸಿದ್ದಾರೆ. ನನ್ನ ನಿರ್ದೇಶನದ ಎರಡು ಚಿತ್ರಗಳನ್ನು ನಾಗೇಶ್ ಕುಮಾರ್ ಯು.ಎಸ್. ಅವರೇ ನಿರ್ಮಾಣ ಮಾಡಿದ್ದಾರೆ. ನನಗೆ ತಿಳಿದ ಹಾಗೆ ಒಬ್ಬರೆ ನಿರ್ಮಿಸಿರುವ ಹಾಗೂ ಒಬ್ಬರೆ ನಿರ್ದೇಶಿಸಿರುವ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಈ ಎರಡು ಚಿತ್ರಗಳು ಆಗಸ್ಟ್ 8 ರಂದು ವರಮಹಾಲಕ್ಷ್ಮೀ ಹಬ್ಬದ ಶುಭದಿನ ಬಿಡುಗಡೆಯಾಗುತ್ತಿದೆ. ನಮ್ಮ ಎರಡು ಚಿತ್ರಗಳಿಗೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಜೆ.ಜೆ. ಶ್ರೀನಿವಾಸ್.

ನಮ್ಮ ಎರಡು ಚಿತ್ರಗಳ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಇಷ್ಟು ಜನ ಗಣ್ಯರು ಬಂದು ಹಾರೈಸಿದ್ದು ಬಹಳ ಖುಷಿಯಾಗಿದೆ. ಅವರಿಗೆಲ್ಲಾ ಧನ್ಯವಾದ. ಇನ್ನೂ ಈ ಎರಡು ಚಿತ್ರಗಳು ವಿಭಿನ್ನ ಜಾನರ್‌ನ ಸಿನಿಮಾಗಳು. ಚಿತ್ರತಂಡದ ಸಹಕಾರದಿಂದ ಎರಡು ಚಿತ್ರಗಳು ಆಗಸ್ಟ್ 8 ರಂದು ತೆರೆಗೆ ಬರುತ್ತಿದೆ. ನಾವೇ ಕೆಲವು ಸ್ನೇಹಿತರು ಸೇರಿ ಈ ಚಿತ್ರಗಳನ್ನು ವಿತರಣೆ ಕೂಡ ಮಾಡುತ್ತಿದ್ದೇವೆ‌ ಎಂದು ನಿರ್ಮಾಪಕ ನಾಗೇಶ್ ಕುಮಾರ್ ಯು.ಎಸ್. ತಿಳಿಸಿದರು.

ನನಗೆ ನಿರ್ದೇಶಕರು ಬಂದು ಕಥೆ ಹೇಳಿದ್ದು ಬೇರೆ ಚಿತ್ರದ್ದು. ಆದರೆ, ಮೂರು ದಿನಗಳು ಬಳಿಕ ಮತ್ತೊಂದು ಕಥೆ ಹೇಳಿದರು. ಅದೇ ʼಕಸ್ಟಡಿʼ ಚಿತ್ರದ ಕಥೆ. ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ. ದುರ್ಗಾ ಪರಮೇಶ್ವರಿ ನನ್ನ ಪಾತ್ರದ ಹೆಸರು ಎಂದರು‌ ʼಭೀಮʼ ಚಿತ್ರದ ಖ್ಯಾತಿಯ ನಟಿ ಪ್ರಿಯಾ. ʼಪಾಲ್ಗುಣಿʼ ನನ್ನ ಅಭಿನಯದ ನಾಲ್ಕನೇ ಚಿತ್ರ. ಈ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ʼಪಾಲ್ಗುಣಿʼ ನನ್ನ ಪಾತ್ರದ ಹೆಸರು ಎಂದು ನಟಿ ರೇಖಾಶ್ರೀ ತಿಳಿಸಿದರು. ನಾನು ʼಕಸ್ಟಡಿʼ ಹಾಗೂ ʼಪಾಲ್ಗುಣಿʼ ಎರಡು ಚಿತ್ರಗಳಲ್ಲೂ ನಟಿಸಿದ್ದೇನೆ. ʼಕಸ್ಟಡಿʼ ಚಿತ್ರಕ್ಕೆ ಸಂಕಲನವನ್ನೂ ಮಾಡಿದ್ದೇನೆ ಎಂದು ನಾಗೇಂದ್ರ ಅರಸ್ ಹೇಳಿದರು.‌

ಈ ಸುದ್ದಿಯನ್ನೂ ಓದಿ | Shravana Fashion 2025: ಶ್ರಾವಣ ಸಂಭ್ರಮಕ್ಕೆ ಎಂಟ್ರಿ ಕೊಟ್ಟ ಅತ್ಯಾಕರ್ಷಕ ಎಥ್ನಿಕ್‌ವೇರ್ಸ್

ನಿರ್ಮಾಪಕ ʼಚಿಂಗಾರಿʼ ಮಹದೇವು, ವಿಕ್ಟರಿ ವಾಸು, ಆರಾಧ್ಯ, ವಿನ್ಯಾ ಶೆಟ್ಟಿ, ʼಚೀತಾʼ ಸೀನು, ಶ್ರೀನಿವಾಸ್,‌ ಮ್ಯಾಜಿಕ್ ರಮೇಶ್, ಅಶ್ವಿತ ಸೇರಿದಂತೆ ʼಕಸ್ಟಡಿʼ ಹಾಗೂ ʼಪಾಲ್ಗುಣಿʼ ಚಿತ್ರಗಳ ಕಲಾವಿದರು ಹಾಗೂ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.