ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಬಹುಜನ ಹಿತಾಯ, ಬಹುಜನ ಸುಖಾಯ...

ಯಡಿಯೂರಪ್ಪ ಅವರ ಮೊದಲ ಅಧಿಕಾರಾವಧಿಯಲ್ಲಿ ರಾಜ್ಯದ ಬಜೆಟ್ ಗಾತ್ರ ಒಂದು ಲಕ್ಷ ಕೋಟಿ ರು. ದಾಟಿದ್ದು ಇತಿಹಾಸ. ಆದರೆ ಅಲ್ಲಿಂದ ಈವರೆಗೆ ವಿವಿಧ ಸರಕಾರಗಳು, ಭಿನ್ನ ಸನ್ನಿ ವೇಶಗಳಲ್ಲಿ ಮಾಡಿಕೊಂಡು ಬಂದಿರುವ ಸಾಲದ ಹೊರೆ ಇಂದು 7 ಲಕ್ಷ ಕೋಟಿ ರು. ದಾಟಿದೆ. ಈ ಸಾಲದ ಹೊರೆ ಹೆಚ್ಚಾಗುವುದಕ್ಕೆ ಯಾವುದೇ ಒಂದು ಸರಕಾರ ಕಾರಣ ಎನ್ನಲು ಸಾಧ್ಯವಿಲ್ಲ

ಬಹುಜನ ಹಿತಾಯ, ಬಹುಜನ ಸುಖಾಯ...

ಮುಖ್ಯ ವರದಿಗಾರ ಹಾಗೂ ಅಂಕಣಕಾರ ರಂಜಿತ್‌ ಎಚ್.ಅಶ್ವತ್ಥ

ಅಶ್ವತ್ಥಕಟ್ಟೆ

ಗ್ಯಾರಂಟಿ’ಗಳ ಭರವಸೆಯೊಂದಿಗೆ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್ ಸರಕಾರದ ಎರಡ ನೇ ಬಜೆಟ್ ಮಂಡನೆಯಾಗಿದೆ. ಅಲ್ಪಸಂಖ್ಯಾತರ ಓಲೈಕೆಯ ಆರೋಪದ ಹೊರತಾ ಗಿಯೂ ಯಾರಿಗೂ ನೋವಾಗದಂತೆ, ಎಲ್ಲರನ್ನೂ ಸಂತೃಪ್ತಿ ಪಡಿಸುವ ಲೆಕ್ಕದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಐತಿಹಾಸಿಕ 16ನೇ ಬಜೆಟ್ ಅನ್ನು ಮಂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿಯವರು ಈ ಬಜೆಟ್ ಅನ್ನು ಓಲೈಕೆಯ ಬಜೆಟ್ ಎಂದಿರ ಬಹುದು, ಕಾಂಗ್ರೆಸ್ಸಿಗರು ‘ಸರ್ವಜನಾಂಗದ’ ಬಜೆಟ್ ಎಂದು ವಿಶ್ಲೇಷಿಸಿರಬಹುದು. ಮುಸ್ಲಿ ಮರ ಓಲೈಕೆಗೆ ಸಿದ್ದ ರಾಮಯ್ಯ ಅವರು ತುಸು ಹೆಚ್ಚೇ ಎನಿಸುವಷ್ಟು ಅನುದಾನ ವನ್ನು ನೀಡಿದ್ದಾರೆ ಎನ್ನುವ ಆರೋಪವನ್ನು ಮಾಡಬಹುದು. ಆದರೆ ರಾಜ್ಯದ ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಸಿದ್ದ ರಾಮಯ್ಯ ಅವರಲ್ಲದೆ, ಬೇರೆ ಯಾರೇ ಆಗಿದ್ದರೂ ಈ ರೀತಿಯ ಬಜೆಟ್ ಮಂಡಿಸಲು ಸಾಧ್ಯ ವಿತ್ತೇ ಎನ್ನುವ ಪ್ರಶ್ನೆ ಮೂಡುವುದು ಸಹಜ.

ಇದನ್ನೂ ಓದಿ: Ranjith H Ashwath Column: ಬಹುಮತ ಬಂದಾಗಲೇ ಕೈನಲ್ಲಿ ಕೊಸರಾಟ

ಕಳೆದ ವಾರ ಮಂಡಿಸಿದ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಿಸಿದ್ದರೂ ಅನು ದಾನವನ್ನು ಮೀಸಲಿಟ್ಟಿಲ್ಲ ಎನ್ನುವ ಆರೋಪವನ್ನು ಪ್ರತಿಪಕ್ಷ ಬಿಜೆಪಿ ಮಾಡಿದೆ. ಆದರೆ ಕೇಂದ್ರದಿಂದ ಬರಬೇಕಿರುವ ಅನುದಾನದ ಕೊರತೆ, ರಾಜ್ಯದಲ್ಲಿನ ಗ್ಯಾರಂಟಿಗಳ ಭಾರ, ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿಯೇ ಸಾಗುತ್ತಿರುವ ಬದ್ಧತಾ ವೆಚ್ಚದ ಹೊರೆಯ ನಡುವೆಯೂ ಗ್ಯಾರಂಟಿ ಯೋಜನೆಗೆ ಬರೋಬ್ಬರಿ 50 ಸಾವಿರ ಕೋಟಿ ರು. ಮೀಸಲಿಟ್ಟು, ಅನುದಾನ ಹಂಚಿಕೆ ಮಾಡುವುದು ಸುಲಭವಲ್ಲ.

ಹಾಗೆ ನೋಡಿದರೆ, ಕರ್ನಾಟಕದ್ದು 2025-26ನೇ ಸಾಲಿನಲ್ಲಿ 4.08 ಲಕ್ಷ ಕೋಟಿ ರು. ಬಜೆಟ್ ಆಗಿದ್ದರೆ, ಸಾಲದ ಮೊತ್ತ 7 ಲಕ್ಷ ಕೋಟಿ ರು. ದಾಟಲಿದೆ. ಇದೇ ಸಿದ್ದರಾಮಯ್ಯ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದಾಗ, ಕರ್ನಾಟಕದ ಬಜೆಟ್ ಗಾತ್ರ 10 ಸಾವಿರ ಕೋಟಿ ರು. ಆಸುಪಾಸಿನಲ್ಲಿದ್ದರೆ, ಸಾಲದ ಮೊತ್ತ ಒಂದು ಸಾವಿರ ಕೋಟಿಯ ಆಚೀಚೆಯಿತ್ತು.

ಯಡಿಯೂರಪ್ಪ ಅವರ ಮೊದಲ ಅಧಿಕಾರಾವಧಿಯಲ್ಲಿ ರಾಜ್ಯದ ಬಜೆಟ್ ಗಾತ್ರ ಒಂದು ಲಕ್ಷ ಕೋಟಿ ರು. ದಾಟಿದ್ದು ಇತಿಹಾಸ. ಆದರೆ ಅಲ್ಲಿಂದ ಈವರೆಗೆ ವಿವಿಧ ಸರಕಾರಗಳು, ಭಿನ್ನ ಸನ್ನಿವೇಶಗಳಲ್ಲಿ ಮಾಡಿಕೊಂಡು ಬಂದಿರುವ ಸಾಲದ ಹೊರೆ ಇಂದು 7 ಲಕ್ಷ ಕೋಟಿ ರು. ದಾಟಿದೆ. ಈ ಸಾಲದ ಹೊರೆ ಹೆಚ್ಚಾಗುವುದಕ್ಕೆ ಯಾವುದೇ ಒಂದು ಸರಕಾರ ಕಾರಣ ಎನ್ನಲು ಸಾಧ್ಯವಿಲ್ಲ.

ಆದರೆ ವಿತ್ತೀಯ ಶಿಸ್ತನ್ನು ಮೀರಿ, ‘ಜನಪರ’ ಸರಕಾರ ಎನಿಸಿಕೊಳ್ಳುವ ಧಾವಂತದಲ್ಲಿ ಹಿಂದಿನ ಸರಕಾರಗಳು ಮಾಡಿದ್ದ ಸಾಲದ ಹೊರೆಯೇ ಇಂದು ರಾಜ್ಯವನ್ನು ಕಾಡುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಹಾಗೆ ನೋಡಿದರೆ, ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಐದು ವರ್ಷದಲ್ಲಿ ಕರ್ನಾಟಕದ ಆರ್ಥಿಕ ಶಿಸ್ತಿನೊಳಗೆ ಸರಕಾರ ವನ್ನು ನಡೆಸಿದ್ದರು.

ಈಗ ಯಾವ ಸರಕಾರ ಹೆಚ್ಚು ಸಾಲ ಮಾಡಿತ್ತು ಎನ್ನುವುದನ್ನು ವಿಶ್ಲೇಷಣೆ ಮಾಡುವು ದಕ್ಕಿಂತ, ಅದರಿಂದ ಆಗುತ್ತಿರುವ ‘ಸೈಡ್ ಎಫೆಕ್ಟ್’ಗಳ ಬಗ್ಗೆ ಯೋಚಿಸಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕುಂಠಿತವಾಗಿದೆ ಎನ್ನುವ ಆರೋಪವನ್ನು ಬಿಜೆಪಿಗರು ಪದೇಪದೆ ಮಾಡಿಕೊಂಡು ಬರುತ್ತಿ ದ್ದಾರೆ.

ಆದರೆ ಗ್ಯಾರಂಟಿಯೊಂದರಿಂದಲೇ, ಅಭಿವೃದ್ಧಿ ಕುಂಠಿತವಾಗಿದೆ ಎನ್ನುವುದಕ್ಕಿಂತ, ರಾಜ್ಯ ದಲ್ಲಿ ವೆಚ್ಚ ಎಲ್ಲೆಲ್ಲಿ ಚದುರಿಹೋಗುತ್ತಿದೆ ಎನ್ನುವುದನ್ನು ಗಮನಿಸುವುದು ಸೂಕ್ತ. 2025-26ನೇ ಸಾಲಿನ ಬಜೆಟ್‌ನಲ್ಲಿನ ಅಂಶಗಳನ್ನು ಗಮನಿಸಿದರೆ, ಈ ಬಾರಿ 4.08 ಲಕ್ಷ ಕೋಟಿಯ ಬಜೆಟ್ ಅನ್ನು ಸಿದ್ದರಾಮಯ್ಯ ಅವರು ಮಂಡಿಸಿದ್ದಾರೆ. ಆದರೆ, ಈ ಪೈಕಿ ರಾಜ್ಯ ಸರಕಾರಕ್ಕೆ ಅಭಿವೃದ್ಧಿ ಅಥವಾ ಬಂಡವಾಳ ಹೂಡಿಕೆಗೆ ಸಿಗುವ ಮೊತ್ತ 70 ರಿಂದ 72 ಸಾವಿರ ಕೋಟಿ ರು. ಆಸುಪಾಸಿನಲ್ಲಿದೆ ಎನ್ನುವುದನ್ನು ಮರೆಯುವಂತಿಲ್ಲ.

ಕಾರಣ, 4.08 ಲಕ್ಷ ಕೋಟಿ ಬಜೆಟ್‌ನಲ್ಲಿ ರಾಜ್ಯ ಸರಕಾರವು ಸಾಲದ ಬಡ್ಡಿಗಾಗಿಯೇ ಸುಮಾ ರು 45 ಸಾವಿರ ಕೋಟಿ ರು. ವ್ಯಯಿಸಬೇಕಿದೆ. ಇನ್ನು ವೇತನಕ್ಕಾಗಿ 85 ಸಾವಿರ ಕೋಟಿ, ಪಿಂಚಣಿಗಾಗಿ 38,580 ಕೋಟಿ ಹಾಗೂ ಇತರೆ ಬದ್ಧತಾ ವೆಚ್ಚದಲ್ಲಿ 10835 ಕೋಟಿ ರು. ಖರ್ಚಾಗುತ್ತದೆ. ಜತೆಗೆ ಈವರೆಗೆ ಮಾಡಿರುವ 7 ಲಕ್ಷ ಕೋಟಿ ರು. ಚಿಲ್ಲರೆ ಸಾಲದ ಅಸಲು ಮರುಪಾವತಿಗೆ ಬಹುಪಾಲು ಮೊತ್ತ ಖರ್ಚಾಗುತ್ತದೆ.

ಇದರೊಂದಿಗೆ ಕಾಂಗ್ರೆಸ್ ಸರಕಾರದ ಬಹುನಿರೀಕ್ಷಿತ ಘೋಷಣೆಗಳು ಎನಿಸಿರುವ, ರಾಜ್ಯ ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರವಹಿಸಿದ್ದ ಗ್ಯಾರಂಟಿ ಯೋಜನೆ ಗಳಿಗೆಂದು 51 ಸಾವಿರ ಕೋಟಿ ರು. ಎತ್ತಿಡಬೇಕಿದೆ. ಈ ಎಲ್ಲದಕ್ಕೂ ಅನುದಾನ ಎತ್ತಿಟ್ಟರೆ ಸರಕಾರಕ್ಕೆ 71 ಸಾವಿರ ಕೋಟಿ ರು. ಮಾತ್ರ ಅಭಿವೃದ್ಧಿಗೆ ಸಿಗುತ್ತದೆ. ಈ ಅನುದಾನದಲ್ಲಿ ವಿವಿಧ ಯೋಜನೆಗಳನ್ನು ರೂಪಿಸಬೇಕಿರುವುದು ಸವಾಲಿನ ಕೆಲಸವಾಗಿದೆ.

ಹಾಗೆ ನೋಡಿದರೆ, ಬಿಜೆಪಿ ಸರಕಾರದ ಕೊನೆಯ ಬಜೆಟ್ ಗೆ ಈ ಬಜೆಟ್ ಅನ್ನು ಹೋಲಿಸಿ ದರೆ, ಬಂಡವಾಳ ವೆಚ್ಚದಲ್ಲಿ ಸುಮಾರು 11 ಸಾವಿರ ಕೋಟಿ ರು. ಹೆಚ್ಚುವರಿಯಾಗಿಯೇ ಸಿಗುತ್ತದೆ ಎಂದರೆ ಅಚ್ಚರಿಯಾಗುತ್ತದೆ. ಹೌದು, ಬಿಜೆಪಿ ಸರಕಾರದ ಕೊನೆಯ ಬಜೆಟ್‌ನಲ್ಲಿ ಬಂಡವಾಳ ವೆಚ್ಚಕ್ಕೆಂದು 60599 ಕೋಟಿ ರು. ಮೀಸಲಿಟ್ಟಿದ್ದರೆ, ಪ್ರಸ್ತುತ 71,336 ಕೋಟಿ ರು. ಮೀಸಲಿಡಲಾಗಿದೆ.

ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ (ಕರೋನಾ ಕಾಲದಲ್ಲಿ) ಸಾಲವನ್ನು ಪಡೆದು ಬದ್ಧತಾ ವೆಚ್ಚಕ್ಕೆ ಭರ್ತಿ ಮಾಡಿದ್ದ ಉದಾಹರಣೆಗಳಿವೆ. ಯಾವುದೇ ಒಂದು ರಾಜ್ಯ ಸಾಲ ಮಾಡುವುದು ತಪ್ಪಲ್ಲ. ಆದರೆ ಸಾಲದ ಮೊತ್ತವನ್ನು ಬಂಡವಾಳಕ್ಕೆ ಹೂಡಿಕೆ ಮಾಡದೇ, ಬದ್ಧತಾ ವೆಚ್ಚಕ್ಕೆ ಖರ್ಚು ಮಾಡಿದರೆ ಅಪಾಯಕಾರಿ ಮನ್ಸೂಚನೆ. ಕರ್ನಾಟಕ ಮಾದರಿ ಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅಧಿಕಾರದ ಗದ್ದುಗೆ ಏರಿದ್ದ ಹಲವು ರಾಜ್ಯ ಗಳು ಈಗಾಗಲೇ ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿವೆ.

ಆದರೆ ರಾಜ್ಯದಲ್ಲಿ ಈ ಪರಿಸ್ಥಿತಿ ಬಾರದಿರಲು ಪ್ರಮುಖ ಕಾರಣವೆಂದರೆ, ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ತೆರಿಗೆ ಸಂಗ್ರಹ. ಜಿಎಸ್‌ಟಿ ಸಂಗ್ರಹದಲ್ಲಿ ದೇಶದ ಲ್ಲಿಯೇ ಟಾಪ್-3 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವಿದೆ. ಆದ್ದರಿಂದ ಖರ್ಚನ್ನು ನಿಭಾ ಯಿಸುವಷ್ಟು ಆದಾಯ ಸದ್ಯಕ್ಕೆ ಬರುತ್ತಿದೆ. ಆದರೆ ವರ್ಷದಿಂದ ವರ್ಷಕ್ಕೆ ಬದ್ಧತಾ ವೆಚ್ಚ ಹೆಚ್ಚುತ್ತಾ ಹೋದಂತೆ, ಮುಂದೊಂದು ದಿನ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ ಎನ್ನುವುದು ಸ್ಪಷ್ಟ.

ರಾಜ್ಯ ಸರಕಾರದ ಈ ವರ್ಷದ ಬಜೆಟ್ ಗಾತ್ರ 4 ಲಕ್ಷ ಕೋಟಿ ಮೀರಿದ್ದರೂ, ಇದರಲ್ಲಿ ಕೇಂದ್ರದಿಂದ ಬರಬೇಕಿರುವ ಅನುದಾನದ ಮೊತ್ತವೂ ಸೇರಿದೆ. ಆದರೆ ಕಳೆದ ಒಂದು ದಶಕದಲ್ಲಿ ಕೇಂದ್ರವು ಕರ್ನಾಟಕಕ್ಕೆ ಅನುದಾನ ನೀಡುವ ವಿಷಯದಲ್ಲಿ ಮಾಡುತ್ತಿರುವ ತಾರತಮ್ಯವನ್ನು ಗಮನಿಸಿದರೆ, ಈ ಬಾರಿ ನಿರೀಕ್ಷೆ ಮಾಡಿರುವಷ್ಟು ಅನುದಾನ ನೀಡು ವುದೇ ಎನ್ನುವ ಅನುಮಾನ ಕಾಡುವುದು ನಿಶ್ಚಿತ. ಅದರಲ್ಲಿಯೂ 2022-23ನೇ ಸಾಲಿನ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ನೀಡಿದ್ದ ಆರು ಸಾವಿರ ಕೋಟಿ ರು. ಅನುದಾನವನ್ನು ಘೋಷಣೆ ಮಾಡಿ ಎರಡು ವರ್ಷ ಕಳೆಯುತ್ತಾ ಬಂದರೂ ನೀಡದಿರು ವುದು, 15ನೇ ಆರ್ಥಿಕ ಸಮಿತಿ ನೀಡಿರುವ ಶಿಫಾರಸಿನಂತೆ ಫೆರಿಫೆರಲ್ ರಿಂಗ್ ರಸ್ತೆಗೆ ನೀಡ ಬೇಕಿರುವ ಅನುದಾನವನ್ನು ನೀಡದಿರುವುದನ್ನು ಗಮನಿಸಿದಾಗ, ಈ ಬಾರಿಯೂ ಇದೇ ರೀತಿಯಾದರೆ ಏನು ಎನ್ನುವ ಗೊಂದಲ ಅನೇಕರಲ್ಲಿದೆ.

ಇನ್ನು ಈ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಎಲ್ಲರನ್ನೂ ಸಂತೈಸುವ ಪ್ರಯತ್ನ ಮಾಡಿರುವುದು ಸ್ಪಷ್ಟ, ಬಹುದಿನಗಳ ಬೇಡಿಕೆಯಾಗಿದ್ದ, ಸ್ವಾತಂತ್ರ್ಯ ಉದ್ಯಾನವನದಲ್ಲಿ ಪದೇಪದೆ ಪ್ರತಿಭಟನೆ ನಡೆಸಿದ್ದ ಅಂಗನವಾಡಿ ಕಾರ್ಯಕರ್ತೆಯರು, ಅತಿಥಿ ಉಪನ್ಯಾ ಸಕರು ಹಾಗೂ ಶಿಕ್ಷಕರು, ಬಿಸಿಯೂಟದ ಸಿಬ್ಬಂದಿಗಳ ವೇತನ ಸೇರಿದಂತೆ ಜನಸಾಮಾನ್ಯರು ಧ್ವನಿ ಎತ್ತದ ರೀತಿಯಲ್ಲಿ ‘ಸಮಾಧಾನಕರ ಘೋಷಣೆಯ ಮೂಲಕ ಬೀಸುವ ದೊಣ್ಣೆ ಯಿಂದ ಪಾರಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಆದರೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆಯಾಗಿರುವ ‘ಒಪಿಎಸ್’ ಜಾರಿ ಸರಕಾರದ ಮುಂದಿರುವ ಬಹುದೊಡ್ಡ ಸವಾಲು ಎನಿಸಿದೆ. ಒಂದು ವೇಳೆ ಒಪಿಎಸ್ ಜಾರಿಗೊಳಿಸ ದಿದ್ದರೆ ಮುಂದಿನ ದಿನದಲ್ಲಿ ಇಡೀ ಸರಕಾರಿ ಅಧಿಕಾರಿಗಳ ಸಮೂಹವೇ ಸರಕಾರದ ವಿರು ದ್ಧ ತಿರುಗಿ ಬೀಳುವ ಸಾಧ್ಯತೆಯಿದೆ.

ಸರಕಾರಿ ನೌಕರರಿಗೆ ನೀಡಿರುವ ಒಪಿಎಸ್ ಜಾರಿಗೊಳಿಸಲು ಮುಂದಾದರೆ, ಪಿಂಚಣಿಗೆ ಈಗ ವ್ಯಯಿಸುತ್ತಿರುವ ಅನುದಾನದ ಕನಿಷ್ಠ ಐದಾರು ಪಟ್ಟು ಹೆಚ್ಚುವರಿ ಅನುದಾನ ಅಗತ್ಯ ವಿರಲಿದೆ. ಆದ್ದರಿಂದ ಇನ್ನು ಮುಂದೆ ಒಪಿಎಸ್ ಜಾರಿಯೇ ಅಪ್ರಸ್ತುತ. ಆದರೆ ಇದನ್ನು ಸರಕಾರಿ ನೌಕರರಿಗೆ ಯಾವ ರೀತಿಯಲ್ಲಿ ‘ಒಪ್ಪಿಸುತ್ತಾರೆ’ ಎನ್ನುವುದ ಸರಕಾರದ ಮುಂದಿ ರುವ ಬಹುದೊಡ್ಡ ಸವಾಲು.

ಕೊನೆಯದಾಗಿ, ಆರ್ಥಿಕ ಸಚಿವರಾಗಿ 16 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಹಿಂದಿನ ಬಜೆಟ್‌ಗಳಿಗಿಂತ ಈ ಬಜೆಟ್ ತುಸು ಹೆಚ್ಚೇ ಶ್ರಮ ದಾಯಕವಾಗಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. 2024-25ನೇ ಸಾಲಿನಲ್ಲಿ ಮಂಡಿ ಸಿದ್ದ ಬಜೆಟ್‌ನಲ್ಲಿ ಅರ್ಧ ವರ್ಷಕ್ಕೆ ಮಾತ್ರ ಸೀಮಿತವಾಗಿತ್ತು ಹಾಗೂ ಗ್ಯಾರಂಟಿ ಅಲೆಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಆದರೆ ಈ ಬಾರಿ ರಾಜ್ಯದ ಜನ ಹಾಗೂ ಸ್ವಪಕ್ಷೀಯ ಶಾಸಕರಿಂದಲೇ ಮೂಲಸೌಕರ್ಯಕ್ಕೆ ಹೆಚ್ಚಿನ ಅನುದಾನದ ಒತ್ತಡವಿತ್ತು.

ಗ್ಯಾರಂಟಿ ಯೋಜನೆಗೆ ಅನುದಾನ ನೀಡುವ ಜತೆಜತೆಗೆ ಅಭಿವೃದ್ಧಿಗೂ ಅನುದಾನ ಹೊಂದಿ ಸಬೇಕಿತ್ತು. ಈ ಎರಡರೊಂದಿಗೆ ಇಷ್ಟು ದಿನ ಅರ್ಥ ಸಚಿವರಾಗಿ ಕಾಪಾಡಿಕೊಂಡು ಬಂದಿ ದ್ದ ವಿತ್ತೀಯ ಶಿಸ್ತನ್ನು ನಿಭಾಯಿಸಬೇಕಿತ್ತು. ಈ ಎಲ್ಲದರೊಂದಿಗೆ ಕೇಂದ್ರದಿಂದ ಬರಬೇಕಿ ರುವ ಅನುದಾನದಲ್ಲಿನ ‘ಅನಿಶ್ಚಿತತೆ’, ವರ್ಷದಿಂದ ವರ್ಷಕ್ಕೆ ಏರುತ್ತಿರುವ ಸಾಲದ ಹೊರೆಯೂ ಭಾರವಾಗದಂತೆ ನೋಡಿಕೊಳ್ಳುವ ‘ತಕ್ಕಡಿ’ಯನ್ನು ನಿಭಾಯಿಸಬೇಕಿದೆ.

ಯಾವುದೇ ಸರಕಾರ ಎಂಥ ಅದ್ಭುತ ಬಜೆಟ್ ಮಂಡಿಸಿದರೂ ಪ್ರತಿಪಕ್ಷಗಳು ಹಾಗೂ ಒಂದು ವರ್ಗ ‘ನೀರಸ’ ಬಜೆಟ್ ಎನ್ನುವುದು ನಿಶ್ಚಿತ. ಆದ್ದರಿಂದ ಬಿಜೆಪಿಯವರ ಟೀಕೆಗೆ ಸಂಬಂಧಿ ಸಿಧಂತೆ ಕಾಂಗ್ರೆಸ್ ನಾಯಕರಾಗಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಆದರೆ ಗ್ಯಾರಂಟಿ ಬದ್ಧತೆಯ ನಡುವೆಯೂ ವಿವಿಧ ಇಲಾಖೆಗಳಲ್ಲಿ ಘೋಷಣೆಯಾಗಿರುವ ಹತ್ತಾರು ಯೋಜನೆಗಳನ್ನು ಸಿದ್ದರಾಮಯ್ಯ ಅವರು ಯಾವ ರೀತಿಯಲ್ಲಿ ಜಾರಿಗೊಳಿಸಲಿದ್ದಾರೆ? ಅದಕ್ಕೆ ಬೇಕಿರುವ ಅನುದಾನವನ್ನು ಯಾವ ರೀತಿಯಲ್ಲಿ ಕ್ರೋಡೀಕರಿಸಲಿದ್ದಾರೆ ಎನ್ನುವುದೇ ಈಗಿರುವ ಕುತೂಹಲ.