Pakistani citizens: ಭಟ್ಕಳದಲ್ಲೂ ಇದ್ದಾರೆ 14 ಪಾಕಿಸ್ತಾನಿ ಪ್ರಜೆಗಳು; ಗಡಿಪಾರು ಆಗ್ತಾರಾ?
Pakistani citizens: ಭಟ್ಕಳದಲ್ಲಿ ಒಟ್ಟು 14 ಪಾಕಿಸ್ತಾನಿ ಮೂಲದವರಿದ್ದು, ಅವರಲ್ಲಿ 10 ಮಹಿಳೆಯರಾಗಿದ್ದರೆ, ಮೂವರು ಮಕ್ಕಳು ಇದ್ದಾರೆ. ಇನ್ನೊಬ್ಬ ಮಹಿಳೆ ಅಕ್ರಮ ವಲಸಿಗರಾಗಿದ್ದಾರೆ. ಭಟ್ಕಳದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಪಾಕ್ ಪ್ರಜೆಗಳು ಇರುವ ಸಾಧ್ಯತೆ ಇದ್ದು, ಈ ಕುರಿತು ಪೊಲೀಸರು ಮಾಹಿತಿ ಕಲೆಹಾಕುತಿದ್ದಾರೆ.


ಕಾರವಾರ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನಿ ಪ್ರಜೆಗಳು (Pakistani citizens) 48 ಗಂಟೆಯಲ್ಲಿ ದೇಶ ತೊರೆಯಲು ಕೇಂದ್ರ ಸರ್ಕಾರದ ಗಡುವು ನೀಡಿದೆ. ಆದರೆ, ರಾಜ್ಯದಲ್ಲೂ ಹಲವರು ಪಾಕಿಸ್ತಾನ ಪ್ರಜೆಗಳು ಇರುವುದು ತಿಳಿದುಬಂದಿದ್ದು, ಈ ಪೈಕಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲೇ 14 ಪಾಕಿಸ್ತಾನ ಮೂಲದ ಪ್ರಜೆಗಳು ನೆಲೆಸಿದ್ದಾರೆ. ಇವರೆಲ್ಲರೂ ದೀರ್ಘಾವಧಿ ವೀಸಾ ಇರುವ ಕಾರಣ ಭಟ್ಕಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಭಟ್ಕಳದಲ್ಲಿ ಒಟ್ಟು 14 ಪಾಕಿಸ್ತಾನಿ ಮೂಲದವರಿದ್ದು, ಅವರಲ್ಲಿ 10 ಮಹಿಳೆಯರಾಗಿದ್ದರೆ, ಮೂವರು ಮಕ್ಕಳು ಇದ್ದಾರೆ. ಇನ್ನೊಬ್ಬ ಮಹಿಳೆ ಅಕ್ರಮ ವಲಸಿಗರಾಗಿದ್ದು, ಅವರ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಇನ್ನು ಭಟ್ಕಳ ಹಾಗೂ ಪಾಕಿಸ್ತಾನದ ನಡುವೆ ಸ್ವತಂತ್ರ ಪೂರ್ವದಿಂದಲೇ ವೈವಾಹಿಕ ಸಂಬಂಧಗಳು ಬೆಳೆದಿವೆ. ಭಟ್ಕಳದವರು ಮುಸ್ಲಿಂ ಹೆಣ್ಣನ್ನು ಪಾಕಿಸ್ತಾನದ ವರನಿಗೆ ನೀಡಿದರೆ, ಪಾಕಿಸ್ತಾನದ ಹೆಣ್ಣನ್ನು ಭಟ್ಕಳಕ್ಕೆ ನೀಡುವುದು ನಡೆದುಕೊಂಡು ಬಂದಿದೆ.
ಈಗಾಗಲೇ ಹಲವು ವರ್ಷದಿಂದ 10 ಪಾಕಿಸ್ತಾನ ಮೂಲದ ಮಹಿಳೆಯರಿದ್ದು, ಇವರಲ್ಲಿ ನಾಲ್ಕು ಮಂದಿಗೆ ಭಾರತದಲ್ಲೇ ಮಕ್ಕಳು ಜನಿಸಿದ್ದಾರೆ. ಪ್ರತಿ ಎರಡು ವರ್ಷಕ್ಕೆ ಒಮ್ಮೆ ಇವರ ವೀಸಾ ನವೀಕರಣವಾಗುತ್ತದೆ. ಈ ಮಹಿಳೆಯರು ಭಾರತದ ಪೌರತ್ವಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಇವರಿಗಾಗಲಿ, ಭಾರತದಲ್ಲೇ ಹುಟ್ಟಿದ ಇವರ ಮಕ್ಕಳಿಗೂ ಪೌರತ್ವ ನೀಡಿಲ್ಲ. ದೀರ್ಘಾವಧಿ ವೀಸಾ ಹಾಗೂ ಭಾರತೀಯ ಪುರುಷರನ್ನು ವಿವಾಹವಾಗಿದ್ದರಿಂದ ಸದ್ಯ ಈ 14 ಪಾಕ್ ಪ್ರಜೆಗಳು ಭಟ್ಕಳದಲ್ಲೇ ಇರಲಿದ್ದಾರೆ.
ಕೆಲವು ವರ್ಷದ ಹಿಂದೆ ಬಾಂಗ್ಲಾದ ಮಹಿಳೆ ಸಹ ಗಡಿ ಉಲ್ಲಂಘಿಸಿ ಭಟ್ಕಳಕ್ಕೆ ಬಂದು ಇಲ್ಲಿನ ಯುವಕನನ್ನು ವಿವಾಹವಾಗಿದ್ದು, ಈಕೆ ಸದ್ಯ ಜೈಲಿನಲ್ಲಿದ್ದು ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ.
ಈ ಸುದ್ದಿಯನ್ನೂ ಓದಿ | Pahalgam Terror Attack: ರೆಡಿ ಆಯ್ತು ಪಾಕಿಸ್ತಾನವನ್ನು ಕಟ್ಟಿ ಹಾಕಲು ಮತ್ತೊಂದು ಪ್ಲಾನ್; ಕಾನೂನು ತೊಡಕು ಬಂದರೂ ಬಿಡೆವು ಎಂದ ಕೇಂದ್ರ
ಭಟ್ಕಳದಲ್ಲಿ 14 ಪಾಕಿಸ್ತಾನಿಯರು ಮಾತ್ರವಲ್ಲದೆ ಹೆಚ್ಚಿನ ಸಂಖ್ಯೆಯ ಪಾಕ್ ಪ್ರಜೆಗಳು ಇರುವ ಸಾಧ್ಯತೆ ಇದ್ದು, ಈ ಕುರಿತು ಪೊಲೀಸರು ಮಾಹಿತಿ ಕಲೆಹಾಕುತಿದ್ದಾರೆ.