ಗೋಕರ್ಣ: ಪ್ರವಾಸಕ್ಕೆ ಹೋಗಿದ್ದ ವೇಳೆ ತಮಿಳುನಾಡು ಮೂಲದ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ (Gokarna tragedy) ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯರನ್ನು ಕಾಂಝಿಮೋಳಿ ಮತ್ತು ಸಿಂಧುಜಾ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳು ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ಇಲ್ಲಿನ ಜಟಾಯು ತೀರ್ಥದಲ್ಲಿ ಈಜಲು ಇಳಿದಿದ್ದಾಗ ಸಮುದ್ರದ ಅಲೆಗಳಿಗೆ ಸಿಲುಕಿ ಮೃತಪಟ್ಟಿದ್ದಾರೆ.
ವಿದ್ಯಾರ್ಥಿನಿಯರು ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅವರನ್ನು ರಕ್ಷಿಸಲು ಧಾವಿಸಿದ್ದಾರೆ. ಆದರೆ ಸಮುದ್ರದ ಅಲೆಗಳು ಜೋರಾಗಿದ್ದರಿಂದ ರಕ್ಷಿಸಲು ಸಾಧ್ಯವಾಗಿಲ್ಲ. ಮೃತರು ತಮಿಳುನಾಡಿನ ತಿರುಚ್ಚಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಇವರು ಅಂತಿಮ ವರ್ಷದ ಅಧ್ಯಯನವನ್ನು ಮುಗಿಸಿ ಪ್ರವಾಸಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.
ಸುದೀರ್ಘ ಹುಡುಕಾಟದ ನಂತರ ರಕ್ಷಣಾ ತಂಡವು ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದರು. ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಟ್ರ್ಯಾಕ್ಟರ್ ಕಾಲುವೆಗೆ ಪಲ್ಟಿ, ಮಹಿಳೆ ಸಾವು, 6 ಜನರಿಗೆ ಗಾಯ
ರಾಯಚೂರು: ಭತ್ತದ ರಾಶಿ ಮಾಡಲು ಕೂಲಿಕಾರರನ್ನು ಕರೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಒಂದು ಚಾಲಕನ ನಿಯಂತ್ರಣ ತಪ್ಪಿ ತುಂಗಭದ್ರಾ ಎಡದಂಡೆ ಉಪ ಕಾಲುವೆಯಲ್ಲಿ (Road Accident) ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ಮಹಿಳೆ (woman death) ಸಾವನ್ನಪ್ಪಿದ್ದು, 6 ಜನರಿಗೆ ಗಾಯಗಳಾಗಿರುವ (injured) ಘಟನೆ ರಾಯಚೂರು (Raichur news) ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಗಂಗಮ್ಮ (40) ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡ ಆರು ಜನರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ರಾಯಚೂರಿಗೆ ದಾಖಲಿಸಲಾಗಿದೆ.
ಇದನ್ನೂ ಓದಿ: Om Prakash Murder Case: ಓಂ ಪ್ರಕಾಶ್ ಹತ್ಯೆ ಕೇಸ್, ಆರೋಪಿ ಪಲ್ಲವಿ 7 ದಿನ ಸಿಸಿಬಿ ಕಸ್ಟಡಿಗೆ
ಭತ್ತದ ರಾಶಿ ಮಾಡಲು ಕೂಲಿಕಾರರನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ. ಘಟನೆ ತಿಳಿಯುತ್ತಲೇ ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಜಿಲ್ಲಾ ವೈದ್ಯಾಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿ ರಾಯಚೂರಿಗೆ ಬಂದ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.