ಕೌಲಾಲಂಪುರ: ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಅಜೇಯವಾಗಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಸೂಪರ್- 6 ಹಂತಕ್ಕೆ ಪ್ರವೇಶಿಸಿದೆ. ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ 60 ರನ್‌ಗಳ ಗೆಲುವು ಸಾಧಿಸಿ ಈ ಸಾಧನೆಗೈದಿದೆ. ಶ್ರೀಲಂಕಾ ಸೋತರೂ ಸೂಪರ್- 6 ಹಂತಕ್ಕೇರುವಲ್ಲಿ ಯಶಸ್ವಿಯಾಯಿತು.
ಗುರುವಾರ ನಡೆದ 'ಎ' ಗುಂಪಿನ ಅಂತಿಮ ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮಹಿಳಾ ತಂಡ ನಿಗದಿತ 20 ಒವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 118 ರನ್ ಬಾರಿಸಿತು. ಅಲ್ಪ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ಭಾರತದ ಸಂಘಟಿತ ದಾಳಿಯ ಮುಂದೆ ಮಂಕಾಗಿ 9 ವಿಕೆಟ್‌ಗೆ ಕೇವಲ 58 ರನ್ ಬಾರಿಸಲಷ್ಟೇ ಶಕ್ತವಾದರು.
ಭಾರತ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ಶಬ್ನಮ್ ಎಂಡಿ ಶಕೀಲ್(9 ಕ್ಕೆ 2), ಪರುಣಿಕಾ ಸಿಸೋಡಿಯಾ(7 ಕ್ಕೆ 2) ಮತ್ತು ಜೋಶಿತಾ ವಿ ಜೆ(17 ಕ್ಕೆ 2) ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಆಯುಷಿ ಶುಕ್ಲಾ ಮತ್ತು ವೈಷ್ಣವಿ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ ಚಾಂಪಿಯನ್ಸ್ ಟ್ರೋಫಿ ಉದ್ಘಾಟನೆಯಲ್ಲಿ ರೋಹಿತ್ ಶರ್ಮ ಹಾಜರ್?
ಶ್ರೀಲಂಕಾ ಪರ ರಶ್ಮಿಕಾ ಸೇವಂಡಿ(15) ಅವರದ್ದೇ ಗರಿಷ್ಠ ಮೊತ್ತ. ಉಳಿದವರೆಲ್ಲ ಒಂದಂಕಿಗೆ ಮೊತ್ತ ಬಾರಿಸಿದರು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಪರ ಆರಂಭಿಕ ಆಟಗಾರ್ತಿ ಗೊಂಗಡಿ ತ್ರಿಷಾ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 49 ರನ್ ಬಾರಿಸಿ ಕೇವಲ ಒಂದು ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದರು. ನಾಯಕಿ ನಿಕಿ ಪ್ರಸಾದ್(11), ಜಿ. ಕಮಲಿನಿ(5) ಈ ಪಂದ್ಯದಲ್ಲಿ ದೊಡ್ಡ ಮೊತ್ತ ಬಾರಿಸುವಲ್ಲಿ ವಿಫಲರಾದರು. ಭಾರತ ತನ್ನ ಮೊದಲ ಸೂಪರ್-6 ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಈ ಪಂದ್ಯ ಜ.26 ರಂದು ನಡೆಯಲಿದೆ.