#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

VAOs strike: ಮೂಲಸೌಕರ್ಯ ಸೇರಿ ವಿವಿಧ ಬೇಡಿಕೆ ಈಡೇರಿಸಿ: ಸರ್ಕಾರಕ್ಕೆ ಪಾವಗಡ ವಿಎಒಗಳ ಆಗ್ರಹ

VAOs strike: ಕಂದಾಯ ಇಲಾಖೆ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್, ಲ್ಯಾಪ್‌ಟಾಪ್, ಅದಕ್ಕೆ ಅವಶ್ಯವಿರುವ ಇಂಟರ್‌ನೆಟ್ ಹಾಗೂ ಸ್ಕ್ಯಾನರ್‌ಗಳನ್ನು ಒದಗಿಸದೇ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ ಎಂದು ನೌಕರರು ಆರೋಪಿಸಿದ್ದಾರೆ.

ಮೂಲಸೌಕರ್ಯ ಸೇರಿ ವಿವಿಧ ಬೇಡಿಕೆ ಈಡೇರಿಸಿ: ಪಾವಗಡ ವಿಎಒಗಳ ಆಗ್ರಹ

Profile Prabhakara R Feb 10, 2025 10:26 PM

ಪಾವಗಡ: ಸೂಕ್ತ ಕಚೇರಿ, ಬಡ್ತಿ, ಕೆಲಸದ ಸಮಯದಲ್ಲಿ ಭದ್ರತೆ, ಮೂಲಸೌಕರ್ಯ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಾವಗಡ ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಂದ 2ನೇ ಹಂತದ ಮುಷ್ಕರ ಸೋಮವಾರ ನಡೆಯಿತು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ಸ್ವಂತ ಕಟ್ಟಡ ಇಲ್ಲದೆ 15, 20 ವರ್ಷಗಳಿಂದ ಜಗಲಿ ಕಟ್ಟೆ, ದೇವಸ್ಥಾನ, ಶಾಲೆ ಆವರಣದಲ್ಲೇ ನಮ್ಮ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದೇವೆ. ಸೂಕ್ತ ಸೌಲಭ್ಯಗಳಿಲ್ಲದೆ ಕೆಲಸ ನಿರ್ವಹಿಸುವುದು ಕಷ್ಟವಾಗಿದೆ. ಹೀಗಾಗಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ರಾಜೇಶ್ ಅವರು, ಕಂದಾಯ ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರಲಾಗುತ್ತಿದೆ. ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್, ಲ್ಯಾಪ್‌ಟಾಪ್, ಅದಕ್ಕೆ ಅವಶ್ಯವಿರುವ ಇಂಟರ್‌ನೆಟ್ ಹಾಗೂ ಸ್ಕ್ಯಾನರ್‌ಗಳನ್ನು ಒದಗಿಸದೇ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ.

‌ನಮ್ಮ ಬೇಡಿಕೆ ಈಡೇರಿಸದ ಹಿನ್ನೆಲೆ ಆಧಾರ್ ಸೀಡಿಂಗ್, ಲ್ಯಾಂಡ್ ಬೀಟ್, ಬಗರ್‌ಹುಕುಂ, ಹಕ್ಕುಪತ್ರ, ನಮೂನೆ 1–5 ವೆಬ್ ಅಪ್ಲಿಕೇಷನ್ ಮತ್ತು ಪೌತಿ ಆಂದೋಲನ ಆ್ಯಪ್ ತಂತ್ರಾಂಶಗಳ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಪದೋನ್ನತಿ, ವರ್ಗಾವಣೆ ಸೇರಿ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಅವುಗಳನ್ನು ಈಡೇರಿಸಲು ಸರ್ಕಾರ ಸ್ಪಂದಿಸದೇ ಇರುವುದರಿಂದ ಇಂದಿನಿಂದ ಎಲ್ಲ ಬಗೆಯ ಮೊಬೈಲ್ ಆ್ಯಪ್ ಹಾಗೂ ನೆಟ್ ಅಪ್ಲಿಕೇಶನ್ ಸ್ಥಗಿತಗೊಳಿಸಿ ರಾಜ್ಯವ್ಯಾಪಿ ಮುಷ್ಕರ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈ ಹಿಂದೆ ಮುಷ್ಕರ ಕೈಗೊಂಡಾಗ, 2024ರ ಅ.3ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ರಾಜ್ಯವ್ಯಾಪಿ ಮುಷ್ಕರವನ್ನು ಹಿಂಪಡೆಯಲಾಗಿತ್ತು. ನಂತರ ಸರ್ಕಾರವು ಈ ವೃಂದದ ನೌಕರರ ಬೇಡಿಕೆಗಳ ವಿಚಾರವಾಗಿ ಯಾವುದೇ ತೃಪ್ತಿಕರ ಕ್ರಮಗಳನ್ನು ಕೈಗೊಂಡಿಲ್ಲ. ಬದಲಾಗಿ ಮುಷ್ಕರದ ಪೂರ್ವದ ಅವಧಿಗಿಂತಲೂ ಹೆಚ್ಚಿನ ಕಾರ್ಯದ ಒತ್ತಡ ಉಂಟಾಗಿದೆ. ಆದ್ದರಿಂದ ಮೇಲ್ಕಂಡ ಎಲ್ಲಾ ಕಾರಣಗಳಿಗಾಗಿ ಮುಷ್ಕರದ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿಗೆ ತೀರ್ಮಾನಿಸಲಾಗಿದೆ. ಕೆಲಸ ಸ್ಥಗಿತಗೊಳಿಸಿ ಮುಷ್ಕರವನ್ನು ಇಂದಿನಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನೌಕರರಾದ ತಿಮ್ಮಾರೆಡ್ಡಿ, ರಘುವೀರ್, ರಾಘವೇಂದ್ರರೆಡ್ಡಿ, ರಂಜಿತ್ ಕುಮಾರ್, ಇಮಾಮ್, ಶ್ರೀನಿವಾಸ್ ಮೂರ್ತಿ, ಷಣ್ಮುಖರಾದ್ಯ, ಸಂಜಯ್, ಆಸಿಫ್, ಈರಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ |

Basanagouda Patil Yatnal: ಯತ್ನಾಳ್‌ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ಮತ್ತೆ ನೋಟಿಸ್‌

ಮುಷ್ಕರದ ಬಗ್ಗೆ ತಿಳಿಯದೇ ಕಚೇರಿಗಳಿಗೆ ಜನರ ಅಲೆದಾಟ

ಗ್ರಾಮ ಆಡಳಿತ ಅಧಿಕಾರಿಗಳ ಎರಡನೇ ಹಂತದ ಮುಷ್ಕರದಿಂದ ಬೆಳಗ್ಗೆಯಿಂದಲೇ ನಡೆಯುತ್ತಿದೆ. ಆದರೆ, ಮುಷ್ಕರದ ವಿಷಯ ತಿಳಿಯದೆ ಸಾರ್ವಜನಿಕರು ಕೆಲಸಕ್ಕಾಗಿ ಕಚೇರಿಗಳ ಸುತ್ತ ಅಲೆದಾಡುತ್ತಿದ್ದಾರೆ. ರೈತರು, ಸಾರ್ವಜನಿಕರು ಕಚೇರಿಗೆ ಬಂದು ಕೇಳಿದಾಗ ನೌಕರರು ಮುಷ್ಕರದಲ್ಲಿರುವುದು ತಿಳಿದು ಬಂದಿದೆ. ಆಗ ಸಾರ್ವಜನಿಕರು ಆದಷ್ಟು ಬೇಗ ಸರ್ಕಾರವು ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳನ್ನು ಈಡೇರಿಸಿ, ಮುಷ್ಕರ ಕೈಬಿಡಲು ಸಹಕರಿಸುವಂತೆ ಆಗ್ರಹಿಸಿದ್ದಾರೆ.