ರಾಂಚಿ: ಪ್ರಾಣಿಗಳು ಸೂಕ್ಷ್ಮಜಿವಿಗಳು. ಅದರಲ್ಲೂ ನಾವೆಲ್ಲಾ ಪೂಜ್ಯ ಭಾವದಿಂದ ಕಾಣುವ ಗೋವುಗಳು ಈ ಸೂಕ್ಷ್ಮತೆಯಲ್ಲಿ ಒಂದು ಹೆಜ್ಜೆ ಹೆಚ್ಚೇ ಎನ್ನಬಹುದು. ಇದಕ್ಕೊಂದು ನಿದರ್ಶನವೆಂಬಂತೆ, ಕಾರಿನಡಿಗೆ ಬಿದ್ದಿದ್ದ ಕರುವೊಂದನ್ನು ರಕ್ಷಿಸುವಂತೆ ಅಲ್ಲಿದ್ದವರೆಲ್ಲರ ಗಮನ ಸೆಳೆಯಲು ಮತ್ತು ಕಾರು ಚಾಲಕನಿಗೆ ಮಾಹಿತಿ ನಿಡಲು ದನಗಳ ಹಿಂಡು ಆ ಕಾರನ್ನು ಬೆನ್ನಟ್ಟಿಬಂದು ನಿಲ್ಲಿಸಿದ ಮತ್ತು ಆ ಬಳಿಕ ಅಲ್ಲಿದ್ದ ಸ್ಥಳೀಯರು ಆ ಕಾರಿನಡಿಯಲ್ಲಿ ಸಿಲುಕಿಕೊಂಡಿದ್ದ ದನದ ಕರುವನ್ನು ಯಶಸ್ವಿಯಾಗಿ ಕಾಪಾಡಿದ ಘಟನೆಯ ವಿಡಿಯೋ ಒಂದು ಇದೀಗ ಎಲ್ಲೆಡೆ ವೈರಲ್ (Viral Video) ಆಗಿ ನೆಟ್ಟಿಗರ ಲೋಕದಲ್ಲಿ (Social Media) ಚರ್ಚೆಗೊಳ್ಳುತ್ತಿದೆ.
ಛತ್ತೀಸ್‌ಗಢದ (Chhattisgarh) ರಾಯ್‌ಗಢ (Raigarh) ಎಂಬಲ್ಲಿ ಈ ಘಟನೆ ನಡೆದಿದ್ದು, ಸಂಚಾರ ನಿಬಿಡ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನ ಅಡಿಗೆ ಬಿದ್ದ ಕರುವನ್ನು ದನಗಳ ಹಿಂಡು ಕಾರನ್ನು ಬೆನ್ನಟ್ಟಿ ನಿಲ್ಲಿಸುವ ಮೂಲಕ ರಕ್ಷಿಸಿವೆ. ಕರುವೊಂದು ಆಕಸ್ಮಿಕವಾಗಿ ಕಾರಿನಡಿಗೆ ಸಿಲುಕಿದೆ. ಆದರೆ, ಆ ಕಾರು ಚಾಲಕ ತನ್ನ ಕಾರನ್ನು ನಿಲ್ಲಿಸದೆ, ಅಡಿಗೆ ಸಿಲುಕಿದ್ದ ಕರುವಿನ ಸಮೇತ ತನ್ನ ಕಾರನ್ನು ಸುಮಾರು 200 ಮೀಟರ್ ಚಲಾಯಿಸಿಕೊಂಡು ಬಂದಿದ್ದಾನೆ. ಈ ವೇಳೆಗೆ ಆ ಕಾರನ್ನೇ ಹಿಂಬಾಲಿಸುತ್ತಾ ಬಂದ ದನಗಳ ಹಿಂಡು ಕಾರನ್ನು ಸಿನಿಮಿಯ ರೀತಿಯಲ್ಲಿ ಅಡ್ಡಗಟ್ಟಿ ನಿಲ್ಲಿಸಿವೆ.
ಅಲ್ಲಿದ್ದವರೆಲ್ಲಾ ಈ ಘಟನೆಯನ್ನು ಅಚ್ಚರಿಯಿಂದ ಕಂಡು ಬಳಿಕ ಕಾರಿನ ಬಳಿ ಬಂದು ನೋಡಿದಾಗ, ಆ ಕಾರಿನ ಅಡಿಯಲ್ಲಿ ಕರುವೊಂದು ಸಿಲುಕಿಕೊಂಡಿರುವುದು ಗೊತ್ತಾಗುತ್ತದೆ. ತಕ್ಷಣವೇ ಸ್ಥಳೀಯರೆಲ್ಲಾ ಸೇರಿ ಕಾರಿನ ಒಂದು ಭಾಗವನ್ನು ಎತ್ತಿದಾಗ, ಕಾರಿನಡಿಯಲ್ಲಿ ಸಿಲುಕಿಕೊಂಡಿದ್ದ ಕರು ಸೇಫಾಗಿ ಹೊರಬಂದಿದೆ. ಕಾರಿನ ಚಾಲಕ ಸುಮಾರು 200 ಮೀಟರ್ ದೂರ ಕರುವನ್ನು ಎಳೆದುಕೊಂಡು ಬಂದಿದ್ದ ಕಾರಣ ಕರು ಸಣ್ಣಪುಟ್ಟ ಗಾಯಗೊಂಡಿದ್ದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ಈ ಘಟನೆಯ ವೈರಲ್ ವಿಡಿಯೋ ಇಲ್ಲಿದೆ ನೀವೇ ಒಮ್ಮೆ ನೋಡಿಬಿಡಿ:
ಕರುವನ್ನು ಅಡಿಗೆ ಹಾಕಿಕೊಂಡು ಹೋದ ಕಾರನ್ನು ಘಟನಾ ಸ್ಥಳದಿಂದ ಮುಂದಕ್ಕೆ ಚಲಿಸದಂತೆ ದನಗಳ ಹಿಂಡು ಅದನ್ನು ಅಡ್ಡಗಟ್ಟಿ ಬಳಿಕ ಕಾರನ್ನು ಸುತ್ತುವರೆಯುತ್ತಿರುವ ಹಾಗೂ ಈ ಮೂಲಕ ಅಪಾಯದ ಮುನ್ಸೂಚನೆಯನ್ನು ಅಲ್ಲಿದ್ದವರಿಗೆ ನೀಡುವ ದೃಶ್ಯಗಳೂ ಸಹ ಈ ವಿಡಿಯೋದಲ್ಲಿ ದಾಖಲಾಗಿದ್ದು, ಇದನ್ನು ನೊಡಿದವರು ಈ ಮೂಕ ಪ್ರಾಣಿಗಳ ಸೂಕ್ಷ್ಮಮನಃಸ್ಥಿತಿಯನ್ನು ಕಂಡು ಬೆರಗಾಗಿದ್ದಾರೆ.
ಈ ಸುದ್ದಿಯನ್ನೂ ಓದಿ: Allu Arjun: ಅಲ್ಲು ಅರ್ಜುನ್ ಕುಟುಂಬಕ್ಕೆ ಇದ್ಯಾ ಜೀವ ಬೆದರಿಕೆ? ಮನೆ ಮೇಲೆ ದಾಳಿ ನಡೆಯುತ್ತಿದ್ದಂತೆ ಮಕ್ಕಳು ಬೇರೆಡೆ ಶಿಫ್ಟ್
ವಿಡಿಯೊದ ಕೊನೆಯಲ್ಲಿರುವಂತೆ ಸ್ಥಳೀಯರ ಪ್ರಯತ್ನದಿಂದ ಕಾರಿನಡಿಯಲ್ಲಿ ಸಿಲಿಕಿದ್ದ ಕರು ಪ್ರಾಣಾಪಾಯದಿಂದ ಪಾರಾಗಿ ಕುಂಟುತ್ತಾ ಹೊರಬರುತ್ತಿರುವುದು ದಾಖಲಾಗಿದೆ. ಸುಮಾರು ದೂರ ಕಾರಿನಡಿಯಲ್ಲಿ ಸಿಲುಕಿ ಅದು ಎಳೆದುಕೊಂಡು ಬಂದಿದ್ದ ಕಾರಣದಿಂದ ಈ ಕರುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಕಾಲಿಕವಾಗಿ ಕರುವಿನ ಪ್ರಾಣವನ್ನು ಉಳಿಸಲು ಈ ದನಗಳ ಹಿಂಡು ತೋರಿದ ಸಮಯಪ್ರಜ್ಞೆ ಹಾಗೂ ಧೈರ್ಯ ಇದೀಗ ಎಲ್ಲರನ್ನೂ ವಿಸ್ಮಯಗೊಳಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪ್ರಾಣಿಗಳ ಈ ಭಾವನಾತ್ಮಕ ಸಂಬಂಧವನ್ನು ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.