ಭೋಪಾಲ್: ಮಧ್ಯ ಪ್ರದೇಶದ ಭಿಂಡ್ ಜಿಲ್ಲೆಯ ತಹಸೀಲ್ದಾರ್ ಕಚೇರಿಯಲ್ಲಿ ಕಂದಾಯ ಇಲಾಖೆ ನೌಕರನೊಬ್ಬ ಮಹಿಳೆಯೊಬ್ಬರನ್ನು ಥಳಿಸಿದ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಈ ವಿಡಿಯೊ ಸದ್ದು ಮಾಡುತ್ತಿದ್ದಂತೆ ಕಂದಾಯ ಇಲಾಖೆಯ ನೌಕರನನ್ನು ಅಮಾನತುಗೊಳಿಸಲಾಗಿದೆ (Viral Video).
ಮಧ್ಯ ಪ್ರದೇಶದ ಗೋಹಾಡ್‌ನಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, 52 ವರ್ಷದ ಮಹಿಳೆ ಮತ್ತು ಆಕೆಯ ಪತಿ ತಮ್ಮ ಜಮೀನನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಲು ತಹಸೀಲ್ದಾರ್ ಕಚೇರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅಧಿಕಾರಿ ಕೆಲಸ ಮಾಡಲು ನಿರಾಕರಿಸಿ ಮಹಿಳೆಯೊಂದಿಗೆ ಜಗಳ ಮಾಡಿ ಆಕೆಯನ್ನು ಶೂಗಳಿಂದ ಥಳಿಸಿದ್ದಾನೆ ಎನ್ನಲಾಗಿದೆ.
ಮಹಿಳೆಯೊಬ್ಬರ ಮೇಲೆ ಅಸಭ್ಯತೆ ಮತ್ತು ಹಲ್ಲೆಯಲ್ಲಿ ತೊಡಗಿರುವ ಗುಮಾಸ್ತ ನವಲ್ ಕಿಶೋರ್‌ನನ್ನು ಅಮಾನತುಗೊಳಿಸಿರುವುದಾಗಿ ಗೋಹಾಡ್‌ನ ಉಪ ವಿಭಾಗದ ಅಧಿಕಾರಿ ಹೇಳಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಗೋಹಾಡ್ ಪೊಲೀಸ್ ಠಾಣೆ ಅಧಿಕಾರಿ ಪ್ರಭಾರಿ ಮನೀಶ್ ಧಾಕಡ್ ತಿಳಿಸಿದ್ದಾರೆ.
ಕಳೆದ ಆರು ತಿಂಗಳಿನಿಂದ ಅನ್‌ಲೈನ್ ನೋಂದಣಿಗಾಗಿ ಈ ಮಹಿಳೆ ಕಚೇರಿಗೆೆ ಭೇಟಿ ನೀಡುತ್ತಿದ್ದು ಆದರೂ ಈ ಕೆಲಸ ಪೂರ್ಣಗೊಂಡಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿ ಕೆಲಸ ಮಾಡಲು ನಿರಾಕರಿಸಿದ್ದಲ್ಲದೆ ಮಹಿಳೆಯೊಂದಿಗೆ ಜಗಳವಾಡಿ ಆಕೆಯನ್ನು ಶೂಗಳಿಂದ ಥಳಿಸಿ ಒದ್ದಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಇದನ್ನು ಓದಿ: Saif Ali Khan: ಆಸ್ಪತ್ರೆಯಿಂದ ನಟ ಸೈಫ್ ಆಲಿ ಖಾನ್ ಡಿಸ್ಚಾರ್ಜ್
ಸದ್ಯ ತಹಸೀಲ್ದಾರ್ ಕಚೇರಿಯಲ್ಲಿ ಮಹಿಳೆಗೆ ಥಳಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದ್ದು ಸರಕಾರಿ ನೌಕರನ ಈ ರೀತಿಯ ವರ್ತನೆ ಸರಿಯಲ್ಲ ಎಂದು ವಿಡಿಯೊ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.