ನವದೆಹಲಿ: ಗಾಂಜಾದ ಮತ್ತಿನಲ್ಲಿ ಯುವಕನೋರ್ವ ರೈಲಿನಲ್ಲಿ ದಾಂಧಲೆ ಎಬ್ಬಿಸಿರುವ ಘಟನೆ ವರದಿಯಾಗಿದೆ. ಈತನ ಪುಂಡಾಟಕ್ಕೆ ಬೇಸತ್ತ ಸಹಪ್ರಯಾಣಿಕರು ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. 'ಘರ್ ಕೆ ಕಲೇಶ್' ಎಂಬ ಎಕ್ಸ್‌ನಲ್ಲಿ ಈ ಘಟನೆಯ ವಿಡಿಯೊವನ್ನು ಹಂಚಿಕೊಂಡಿದ್ದು, ಪ್ರಯಾಣಿಕರು ಈ ಕೃತ್ಯದ ಬಗ್ಗೆ ರೈಲ್ವೆ ಪೊಲೀಸರಿಗೆ ದೂರು ನೀಡುತ್ತಿರುವ ದೃಶ್ಯ ಸೆರೆಹಿಡಿಯಲಾಗಿದೆ.
ಯುವಕ ತನ್ನ ಸೀಟಿನ ಮೇಲೆ ಕುಳಿತು ನಿರಂತರವಾಗಿ ಗಾಂಜಾ ಸೇದಿದ್ದಾನೆ. ಅಲ್ಲದೇ ಬೋಗಿಯೊಳಗೆ ಗಾಂಜಾದ ಹೊಗೆಯನ್ನು ಇತರ ಪ್ರಯಾಣಿಕರಿಗೆ ಬಿಟ್ಟಿದ್ದಾನೆ ಎಂದು ಪ್ರಯಾಣಿಕರು ಪೊಲೀಸರಿಗೆ ತಿಳಿಸಿದ್ದಾರೆ. ಮೌಖಿಕ ದೂರನ್ನು ಗಮನಿಸಿದ ಆರ್‌ಪಿಎಫ್ ಅಧಿಕಾರಿ ತಕ್ಷಣ ರೈಲಿನಲ್ಲಿ ಗಾಂಜಾ ಸೇವನೆ ಮಾಡಿದ್ದಕ್ಕಾಗಿ ಕಪಾಳಮೋಕ್ಷ ಮಾಡುವ ಮೂಲಕ ಶಿಕ್ಷೆ ವಿಧಿಸಿದ್ದಾರೆ.
ಭಾರತೀಯ ರೈಲ್ವೆಯಲ್ಲಿ ಪ್ರಯಾಣದ ಸಮಯದಲ್ಲಿ ಇಂತಹ ನಿಷೇಧಿತ ಕೃತ್ಯದಲ್ಲಿ ತೊಡಗಿದ್ದಕ್ಕಾಗಿ ಪ್ರಯಾಣಿಕರು ಮತ್ತು ಪೊಲೀಸರು ಯುವಕನನ್ನು ಖಂಡಿಸಿದ್ದಾರೆ. ವಿಡಿಯೊದಲ್ಲಿ, ಪ್ರಯಾಣಿಕರೊಬ್ಬರು ಆರ್‌ಪಿಎಫ್ ಅಧಿಕಾರಿಗೆ ಮಾಹಿತಿ ನೀಡಿದ್ದು, ವ್ಯಕ್ತಿಯು ರೈಲಿನ ಸೀಟಿನಲ್ಲಿ ಕುಳಿತು ಗಾಂಜಾ ಸೇದಿದ್ದಾನೆ. ಇದರಿಂದ ಬೋಗಿಯಲ್ಲಿ ಪ್ರಯಾಣಿಸುವ ಮಕ್ಕಳು ಮತ್ತು ಮಹಿಳೆಯರಿಗೆ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.
ಸ್ಥಳಕ್ಕೆ ಬಂದ ಆರ್‌ಪಿಎಫ್ ಅಧಿಕಾರಿ ಯುವಕನ ಕೃತ್ಯಕ್ಕಾಗಿ ಕಪಾಳಮೋಕ್ಷ ಮಾಡಿದ್ದಾರೆ. ಅವರು ಯುವಕನ ಕೂದಲನ್ನು ಹಿಡಿದೆಳೆದುಕೊಂಡು ಕಪಾಳಮೋಕ್ಷ ಮಾಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಆದರೆ ರೈಲಿನಲ್ಲಿ ಗಾಂಜಾ ಸೇವಿಸುವ ಬಗ್ಗೆ ಅಧಿಕಾರಿ ಆತನನ್ನು ಪ್ರಶ್ನಿಸಿದಾಗ, ಆತ ತಾನು ಗಾಂಜಾ ಸೇದಿಲ್ಲ ಎಂದು ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾನೆ.
ಈ ಸುದ್ದಿಯನ್ನೂ ಓದಿ:UP Shocker: ಫಸ್ಟ್ ನೈಟ್‌ನಂದೇ ಪತಿಯ ಬಳಿ ಬಿಯರ್, ಗಾಂಜಾಕ್ಕಾಗಿ ಬೇಡಿಕೆಯಿಟ್ಟ ವಧು!
ಈ ಘಟನೆ ನಡೆದ ಸ್ಥಳ ತಿಳಿದುಬಂದಿಲ್ಲ. ಈ ಬಗ್ಗೆ ರೈಲ್ವೆ ಇಲಾಖೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹಾಗೇ ಯಾವುದೇ ಪ್ರಕರಣ ಅಥವಾ ಬಂಧನದ ಬಗ್ಗೆ ವರದಿಯಾಗಿಲ್ಲ.