Viral Video: ಚೇಂಜ್ ಇದ್ದರೂ ನೀಡದ ಅಧಿಕಾರಿ; ಟಿಕೆಟ್ ಕೌಂಟರ್‌ನಲ್ಲಿ ಮಾರಾಮಾರಿ: ವಿಡಿಯೊ ವೈರಲ್
Viral Video: ನಮ್ಮ ದೇಶದಲ್ಲಿ ಎಲ್ಲಿ ನೋಡಿದರೂ ಚಿಲ್ಲರೆ ಸಮಸ್ಯೆ! ಆದರೆ ಈಗ ಡಿಜಿಟಲ್ ಪೇಮೆಂಟ್ ಬಂದಮೇಲೆ ಈ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರಗೊಂಡಿದೆಯಾದ್ರೂ ಆಗೊಮ್ಮೆ ಈಗೊಮ್ಮೆ ಅಲ್ಲಲ್ಲಿ ಚಿಲ್ಲರೆ ಸಂಬಂಧಿ ಗಲಾಟೆಗಳು ನಡೆಯುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಒಂದು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.
ನವದೆಹಲಿ: ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ (CCTC) ಮತ್ತು ಪ್ರಯಾಣಿಕರೊಬ್ಬರ ನಡುವೆ ಚಿಲ್ಲರೆ ವಿಚಾರದಲ್ಲಿ ನಡೆದ ವಾಗ್ವಾದವೊಂದರ ವಿಡಿಯೊ ತುಣುಕು ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ. ಈ ವಿಡಿಯೊ ನೋಡಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಈ ವಿಡಿಯೊವನ್ನು ಪ್ರಯಾಣಿಕರು ರೆಕಾರ್ಡ್ ಮಾಡಿಕೊಂಡಿದ್ದು, ಅಧಿಕಾರಿಯೊಬ್ಬರ ನೇಮ್ ಪ್ಲೇಟ್ ತೋರಿಸುವ ವಿಡಿಯೊ ಪ್ರಾರಂಭವಾಗುತ್ತದೆ. ಮತ್ತೆ ಅಲ್ಲಿ ಟೇಬಲ್ ಮೇಲಿದ್ದ ಚಿಲ್ಲರೆ ನೋಟುಗಳ ಕಟ್ಟಿನತ್ತ ಕ್ಯಾಮೆರಾ ತಿರುಗುತ್ತದೆ. ಅದರಲ್ಲಿ 50 ಮತ್ತು 20 ರೂಪಾಯಿಗಳ ಬಂಡಲ್ ಗಳು ಕಾಣಿಸುತ್ತವೆ.
‘ನಾನು ಇವರಿಗೆ 50 ರೂಪಾಯಿ ನೀಡಿ ಕಾಂಡಿವಾಲಿಗೆ ರಿಟರ್ನ್ ಟಿಕೆಟ್ ಕೇಳಿದೆ. ಇವರು ಚೇಂಜ್ ಇಲ್ಲವೆಂದು ಹೇಳ್ತಿದ್ದಾರೆ. ಆದರೆ ಇಲ್ಲಿ 20-20 ರೂ. ನೋಟುಗಳು ಕಾಣಿಸುತ್ತಿವೆ. ಕೊಡೋದಿಲ್ಲ ಅಂದ್ರೆ ಹೇಗೆ, ನನಗೆ ಕಾಣಿಸ್ತಿದೆ’ ಎಂದು ಹೇಳುತ್ತಿರುವುದು ರೆಕಾರ್ಡ್ ಆಗಿದೆ.
ಆ ಪ್ರಯಾಣಿಕ ಚೇಂಜ್ ಕೇಳುತ್ತಿದ್ದಂತೆ, ಟಿಕೆಟ್ ನೀಡುವ ಅಧಿಕಾರಿ ಅದನ್ನು ನಿರಾಕರಿಸಿ ಪ್ರಯಾಣಿಕನನ್ನು ಬದಿಗೆ ಸರಿಯುವಂತೆ ಹೇಳುತ್ತಿರುವುದೂ ಈ ವಿಡಿಯೊದಲ್ಲಿ ಸೆರೆಯಾಗಿದೆ.
‘ಸೈಡ್ ಮೆ ಹಟೋ’ ಎಂದು ಪ್ರಯಾಣಿಕನನ್ನು ಬೆದರಿಸುವ ರೀತಿಯಲ್ಲಿ ಹೇಳುತ್ತಿರುವುದನ್ನು ಕೇಳಬಹುದು ಮತ್ತು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಕರೆಸಬೇಕಾಗುತ್ತದೆ ಎಂದು ಪ್ರಯಾಣಿಕನಿಗೆ ಆ ಅಧಿಕಾರಿ ಹೇಳುತ್ತಿರುವುದು ರೆಕಾರ್ಡ್ ಆಗಿದೆ.
ಇವರಿಬ್ಬರ ನಡುವೆ ಈ ವಾಗ್ವಾದ ನಡೆಯುತ್ತಿರುವಾಗಲೇ ಇನ್ನೊಬ್ಬನ ಮಧ್ಯಪ್ರವೇಶದೊಂದಿಗೆ ಈ ಜಗಳ ಇನ್ನಷ್ಟು ಜೋರಾಗುತ್ತದೆ. ಹಾಗೆ ಮಧ್ಯಪ್ರ ವೇಶಿಸಿದ ಆ ವ್ಯಕ್ತಿ ಡಿಜಿಟಲ್ ಸ್ಕ್ಯಾನರ್ ಬಳಸುವಂತೆ ಆ ಪ್ರಯಾಣಿಕನಿಗೆ ಸೂಚಿಸುತ್ತಾನೆ. ಅದಕ್ಕೆ ಅತ ‘ನನ್ನ ಬಳಿ ಸ್ಕ್ಯಾನರ್ ಇಲ್ಲ’ ಎಂದು ಹೇಳುತ್ತಾನೆ.
Kalesh b/w an Passenger and the railway's CCTC officer over not giving change, despite him having the money.
— Ghar Ke Kalesh (@gharkekalesh) January 17, 2025
pic.twitter.com/C3tDGy4IdO
‘ದುಡ್ಡಿದ್ದರೂ ಚೇಂಜ್ ಕೊಡದ ಸಿಸಿಟಿಸಿ ಆಫೀಸರ್ ಮತ್ತು ಪ್ರಯಾಣಿಕನ ನಡುವೆ ನಡೆದ ಕ್ಲ್ಯಾಶ್’ ಎಂದು ಈ ವಿಡಿಯೊಗೆ ಕ್ಯಾಪ್ಷನ್ ನೀಡಲಾಗಿದೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಸಿಸಿಟಿಸಿ ವರ್ತನೆಯನ್ನು ಟೀಕಿಸಿ ಕಾಮೆಂಟ್ ಹಾಕಿದ್ದಾರೆ. ಚೇಂಜ್ ಇದ್ದರೂ ಪ್ರಯಾಣಿಕನಿಗೆ ನೀಡದ ಆ ಅಧಿಕಾರಿಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ‘ದೇಶದ ಆತ್ಮ ನಾಶಗೊಂಡಿದೆ’ ಎಂದು ಒಬ್ಬರು ಹೇಳಿದ್ದಾರೆ. ‘ಆ ಪ್ಯಾಸೆಂಜರ್ ಚಿಲ್ಲರೆ ತೆಗೆದುಕೊಳ್ಳದೇ ಹೋಗಲಿ ಎಂದು ಆತ ನಾಟಕ ಮಾಡುತ್ತಿದ್ದಾನೆ’ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ‘ಕೊಡೋದಿಲ್ಲ ಅಂದ್ರೆ ಕೊಡೋದಿಲ್ಲ! ಸರ್ಕಾರಿ ಅಧಿಕಾರಿಯ ಮರ್ಜಿ’ ಎಂದು ಇನ್ನೊಬ್ಬರು ಕಾಮೆಂಟ್ ಹಾಕಿದ್ದಾರೆ.
ಇನ್ನೊಬ್ಬರು ಅಧಿಕಾರಿ ಪರವಾಗಿ ವಾದಿಸಿದ್ದು, ’10-20 ರೂಪಾಯಿ ಟಿಕೆಟಿಗೆ 500 ರೂಪಾಯಿ ನೋಟು ಹಿಡಿದುಕೊಂಡು ಬರುತ್ತಾರೆ, ಎಲ್ಲರಿಗೂ ಚೇಂಜ್ ಕೊಡಲು ಸಾಧ್ಯವಿಲ್ಲ’ ಎಂದಿದ್ದಾರೆ.