ಕೋಲ್ಕತಾ: ಶನಿವಾರ ನಡೆದಿದ್ದ 18ನೇ ಆವೃತ್ತಿಯ ಐಪಿಎಲ್‌ನ(IPL 2025) ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್‌ಸಿಬಿ(KKR vs RCB) ಮುಖಾಮುಖಿಯಾಗುವ ಮೂಲಕ ಪಂದ್ಯಾವಳಿಗೆ ಚಾಲನೆ ಲಭಿಸಿದೆ. ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್ ಅಂತರದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಬ್ಯಾಟಿಂಗ್ ವೇಳೆ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಅಭಿಮಾನಿಯೊಬ್ಬ ನೇರವಾಗಿ ಮೈದಾನಕ್ಕೆ ನುಗ್ಗಿದ್ದ ಘಟನೆ ಕೂಡ ನಡೆಯಿತು.
ಚೇಸಿಂಗ್ ವೇಳೆ ಬ್ಯಾಟಿಂಗ್ ನಡೆಸುತ್ತಿದ್ದ ಕೊಹ್ಲಿ ಅರ್ಧಶತಕ ಪೂರ್ತಿಗೊಳಿಸುತ್ತಿದ್ದಂತೆ ಅಭಿಮಾನಿಯೊಬ್ಬ ಗ್ಯಾಲರಿಯಿಂದ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ನೇರವಾಗಿ ಮೈದಾನಕ್ಕೆ ನುಗ್ಗಿ ಕೊಹ್ಲಿಯ ಕಾಲಿಗೆ ಬಿದ್ದು ಪಾದ ಮುಟ್ಟಿ ನಮಸ್ಕರಿಸಿ ಬಳಿಕ ಕೊಹ್ಲಿಯನ್ನು ತಬ್ಬಿಕೊಂಡಿದ್ದಾನೆ. ತಕ್ಷಣ ಭದ್ರತಾ ಸಿಬ್ಬಂದಿಗಳು ಕ್ರೀಸ್‌ಬಳಿ ಬಂದು ಅಭಿಮಾನಿಯನ್ನು ಹಿಡಿದಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಬಳಿ ವಿರಾಟ್ ಕೊಹ್ಲಿ ಅಭಿಮಾನಿಯನ್ನು ನೋಯಿಸದಂತೆ ಮನವಿ ಮಾಡಿದ್ದಾರೆ.
ಪಂದ್ಯ ಆರಂಭಕ್ಕೂ ಮುನ್ನ ನಡೆದಿದ್ದ ಉದ್ಘಾಟನ ಕಾರ್ಯಕ್ರಮದಲ್ಲಿ ಕೊಹ್ಲಿ ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಎಂದೇ ಕರೆಸಿಕೊಳ್ಳುವ ಕೆಕೆಆರ್ ತಂಡದ ಮಾಲೀಕ, ನಟ ಶಾರುಖ್ ಖಾನ್ ಜತೆ ಒಟ್ಟಾಗಿ ಡಾನ್ಸ್ ಮಾಡಿ ಉದ್ಘಾಟನಾ ಸಮಾರಂಭಕ್ಕೆ ಮತ್ತಷ್ಟು ಕಳೆ ನೀಡಿದರು. ಇದೇ ವೇಳೆ ಸತತ 18ನೇ ಐಪಿಎಲ್‌ನಲ್ಲಿ ಒಂದೇ ತಂಡದ ಪರ ಆಡುತ್ತಿರುವ ವಿರಾಟ್ ಕೊಹ್ಲಿಗೆ ಬಿಸಿಸಿಐ ವತಿಯಿಂದ ವಿಶೇಷ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ಕಾರ್ಯದರ್ಶಿ ದೇವಜೀತ್ ಸೈಕಿಯಾ, ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಉಪಸ್ಥಿತರಿದ್ದರು.
ಇದನ್ನೂ ಓದಿ IPL 2025: ಐಪಿಎಲ್ ಅಭಿಮಾನಿಗಳಿಗೆ ಸೂಪರ್ ಸಂಡೆ; ಇಂದು ಎರಡು ಪಂದ್ಯ
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಅಜೇಯ 59 ರನ್ ಬಾರಿಸಿದರು. ಅವರ ಈ ಅಮೋಘ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 3 ಆಕರ್ಷಕ ಸಿಕ್ಸರ್ ಮತ್ತು 4 ಬೌಂಡರಿ ಸಿಡಿಯಿತು.