Wankhede stadium: ವಾಂಖೇಡೆ ಸ್ಟೇಡಿಯಂಗೆ 50ರ ಸಂಭ್ರಮ; ಸ್ಮರಣೀಯ ಕ್ಷಣದ ಇಣುಕು ನೋಟ
Wankhede stadium: ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಮ್ಮ 24 ವರ್ಷದ ಕ್ರಿಕೆಟ್ ಬಾಳ್ವೆಯನ್ನು ಕೊನೆಗೊಳಿಸಿದ್ದು ಕೂಡ ಇದೇ ಮೈದಾನಲ್ಲಿ ಎಂಬುದು ವಿಶೇಷ.


ಮುಂಬಯಿ: ಪ್ರತಿಷ್ಠಿತ ವಾಂಖೇಡೆ ಸ್ಟೇಡಿಯಂ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ. ಈ 50ನೇ ವರ್ಷದ ಸವಿನೆನಪಿಗಾಗಿ ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ಇಂದಿನಿಂದ(ಜ.19) ಒಂದು ವಾರಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈ ಐತಿಹಾಸಿಕ ಕ್ರೀಡಾಂಗಣ ಭಾರತೀಯ ಕ್ರಿಕೆಟಿಗೆ ಅದೆಷ್ಟೋ ಕೊಡುಗೆಗಳನ್ನು ನೀಡಿದೆ. 2011ರ ಏಕದಿನ ವಿಶ್ವಕಪ್, ಧೋನಿಯ ಗೆಲುವಿನ ಸಿಕ್ಸರ್, ಸಚಿನ್ ತೆಂಡೂಲ್ಕರ್ ಟೆಸ್ಟ್ ವಿದಾಯ ಇವುಗಳಲ್ಲಿ ಪ್ರಮುಖವಾದದ್ದು. ಈ ಐತಿಹಾಸಿಕ ಮೈದಾನದ ಕೆಲವು ಸ್ಮರಣೀಯ ಕ್ಷಣಗಳ ಇಣುಕು ನೋಟ ಇಲ್ಲಿದೆ.
ಭಾರತ-ವಿಂಡೀಸ್ ಮೊದಲ ಪಂದ್ಯ
1975ರಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ವಾಂಖೇಡೆಯಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಲಾಯಿತು. ಇದು ಈ ಕ್ರೀಡಾಂಗಣದಲ್ಲಿ ನಡೆದ ಮೊತ್ತ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಭಾರತ 201 ರನ್ ಅಂತರದ ಸೋಲು ಕಂಡಿತ್ತು. ವಿಂಡೀಸ್ ನಾಯಕ ಕ್ಲೈವ್ ಲಾಯ್ಡ್ ದ್ವೀಶತಕ ಬಾರಿಸಿದ್ದರು. ಅಜೇಯ 242 ರನ್ ಬಾರಿಸಿದ್ದರು. ಭಾರತ ಪರ ಏಕನಾಥ್ ಸೋಲ್ಕರ್(102) ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದರು. ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಕೊನೆಯ ಪಂದ್ಯ ಕೂಡ ಇದಾಗಿತ್ತು. ಒಟ್ಟಾರೆ ಈ ಮೈದಾನದಲ್ಲಿ ಈ ವರೆಗೆ 27 ಟೆಸ್ಟ್ ಪಂದ್ಯಗಳು ನಡೆದಿವೆ.
1987ರಲ್ಲಿ ಮೊದಲ ಏಕದಿನ
ಈ ಸ್ಟೇಡಿಯಂನಲ್ಲಿ ಮೊತ್ತ ಮೊದಲ ಏಕದಿನ ಪಂದ್ಯ ನಡೆದದ್ದು ಜ.17, 1987ರಲ್ಲಿ. ಶ್ರೀಲಂಕಾ ವಿರುದ್ಧದ ಪಂದ್ಯ ಇದಾಗಿತ್ತು. ಕಪಿಲ್ ದೇವ್ ಸಾರಥ್ಯದ ಭಾರತ ತಂಡ 10 ರನ್ ಅಂತರದ ಗೆಲುವು ಸಾಧಿಸಿತ್ತು. ಮೊಹಮ್ಮದ್ ಅಜರುದ್ದೀನ್(108) ಅಜೇಯ ಶತಕ ಬಾರಿಸಿ ಭಾರತದ ಗೆಲುವು ಹೀರೋ ಎನಿಸಿಕೊಂಡಿದ್ದರು. ಈ ಸ್ಟೇಡಿಯಂನಲ್ಲಿ ಗರಿಷ್ಠ ಏಕದಿನ ಮೊತ್ತ ಕಲೆ ಹಾಕಿದ ದಾಖಲೆ ದಕ್ಷಿಣ ಆಫ್ರಿಕಾ ತಂಡದ ಹೆಸರಿನಲ್ಲಿದೆ. 2015ರಲ್ಲಿ ಭಾರತ ವಿರುದ್ಧ 4 ಕ್ಕೆ 438 ರನ್ ಬಾರಿಸಿತ್ತು.
2012ರಲ್ಲಿ ಟಿ20
ಭಾರತ ತಂಡ ವಾಂಖೇಡೆ ಸ್ಟೇಡಿಯಂನಲ್ಲಿ ಮೊತ್ತ ಮೊದಲ ಅಂತಾರಾಷ್ಟ್ರೀಯ ಟಿ20 ವಿಶ್ವಕಪ್ ಆಡಿದ್ದು 2012ರಲ್ಲಿ. ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಸೋಲು ಕಂಡಿತ್ತು.
ನಾಲ್ಕು ಏಕದಿನ ವಿಶ್ವಕಪ್
ವಾಂಖೇಡೆ ಸ್ಟೇಡಿಯಂನಲ್ಲಿ ಒಟ್ಟು ನಾಲ್ಕು ವಿಶ್ವಕಪ್‌ಗಳ( 1987, 1996, 20211, 2023) ಪಂದ್ಯಗಳು ನಡೆದಿದೆ. 1987ರಲ್ಲಿ ಜಿಂಬಾಬ್ವೆ ಮತ್ತು ಭಾರತ ನಡುವಿನ ಪಂದ್ಯ ಈ ಮೈದಾನದಲ್ಲಿ ನಡೆದ ಮೊದಲ ವಿಶ್ವಕಪ್ ಪಂದ್ಯ. ಒಟ್ಟಾರೆ ಭಾರತ ಈ ಮೈದಾನದಲ್ಲಿ 11 ಏಕದಿನ ವಿಶ್ವಕಪ್ ಪಂದ್ಯಗಳನ್ನು ಆಡಿದೆ. 4 ಗೆಲುವು, 7 ಸೋಲು ಎದುರಾಗಿದೆ. 20211ರ ವಿಶ್ವಕಪ್ ಫೈನಲ್ ಗೆಲುವು ಸ್ಮರಣೀಯ ಗೆಲುವಾಗಿದೆ.
ಇದನ್ನೂ ಓದಿ ಚಾಂಪಿಯನ್ಸ್ ಟ್ರೋಫಿ ಉದ್ಘಾಟನೆಯಲ್ಲಿ ರೋಹಿತ್ ಶರ್ಮ ಹಾಜರ್?
ವಿಶ್ವಕಪ್ ಗೆದ್ದಾಗ ಮೈದಾನಕ್ಕೆ ಬರುವ ವಾಡಿಕೆ
ವಾಂಖೆಡೆ ಕ್ರೀಡಾಂಗಣದ ಇನ್ನೊಂದು ವಿಶೇಷತೆ ಎಂದರೆ, ಭಾರತ ತಂಡ ಯಾವುದೇ ಐಸಿಸಿ ವಿಶ್ವಕಪ್ ಟ್ರೋಫಿ ಗೆದ್ದಾಗಲೂ ಈ ಸ್ಟೇಡಿಯಂಗೆ ಬಂದು ಛಾಯಾಚಿತ್ರವೊಂದನ್ನು ತೆಗೆಯುವುದು ವಾಡಿಕೆ.1983ರಲ್ಲಿ ಕಪಿಲ್ ಡೆವಿಲ್ ಸಾರಥ್ಯದ ಭಾರತವು ಚೊಚ್ಚಲ ವಿಶ್ವಕಪ್ ಗೆದ್ದಾಗಿನಿಂದ 2024 ರ ಟಿ20 ವಿಶ್ವಕಪ್ ಗೆಲುವಿನ ವರೆಗೂ ಈ ಸಂಪ್ರದಾಯ ಕಂಡುಬಂದಿದೆ.
2011ರ ವಿಶ್ವಕಪ್ ವೇಳೆ ನವೀಕರಣ
2011ರ ವಿಶ್ವಕಪ್ ಟೂರ್ನಿಯ ಭಾಗವಾಗಿ ವಾಂಖೇಡೆ ಸ್ಟೇಡಿಯಂನ ನವೀಕರಣ ಮಾಡಲಾಯಿತು. ಈ ವೇಳೆ 45 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದ ಮೈದಾನವನ್ನು 33 ಸಾವಿರಕ್ಕೆ ಇಳಿಸಲಾಯಿತು.
#50YearsOfWankhede unforgettable moments for Indian cricket history..... pic.twitter.com/IW6EkGxSOB
— अभि 🇮🇳 (@abhi7781_) January 19, 2025
ಸಚಿನ್ ವಿದಾಯ
ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಮ್ಮ 24 ವರ್ಷದ ಕ್ರಿಕೆಟ್ ಬಾಳ್ವೆಯನ್ನು ಕೊನೆಗೊಳಿಸಿದ್ದು ಕೂಡ ಇದೇ ಮೈದಾನಲ್ಲಿ. 2013 ರಲ್ಲಿ ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯವನ್ನಾಡುವ ಮೂಲಕ ಸಚಿನ್ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾದರು. ಸಚಿನ್ ಸಾಧನೆಗೆ ಗೌರವಾರ್ಥವಾಗಿ ವಾಂಖೆಡೆ ಕ್ರೀಡಾಂಗಣದೊಳಗೆ ಮುಂಬೈ ಕ್ರಿಕೆಟ್ ಸಂಸ್ಥೆ ಸಚಿನ್ ಅವರ ಪ್ರತಿಮೆಯನ್ನು ನಿರ್ಮಿಸಿದೆ. ಸಚಿನ್ ಸ್ಟ್ರೋಕ್ ಮಾಡುವ ಭಂಗಿಯಲ್ಲಿರುವ ಪ್ರತಿಮೆ ಇದಾಗಿದೆ.