ಮುಂಬಯಿ: ಕಳೆದ ಐಪಿಎಲ್ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್(Mumbai Indians) ತಂಡ 3 ಸಲ ನಿಧಾನ ಗತಿಯ ಓವರ್ ರೇಟ್ ಕಾಯ್ದುಕೊಂಡ ತಪ್ಪಿಗೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) 2025ನೇ ಋತುವಿನ ಮೊದಲ ಐಪಿಎಲ್(IPL 2025) ಪಂದ್ಯಕ್ಕೆ ನಿಷೇಧಕ್ಕೊಳಗಾಗಲಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ ಮುಂಬೈ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳದ್ದು. ಮುಂಬೈ ತಂಡ ಮಾರ್ಚ್ 23 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಮಾಜಿ ನಾಯಕ ರೋಹಿತ್ ಶರ್ಮ ತಂಡದಲ್ಲಿದ್ದರೂ ಕೂಡ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯದಲ್ಲಿ ಮುಂಬೈ ತಂಡವನ್ನು ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರು ಮುನ್ನಡೆಸುವ ಸಾಧ್ಯತೆ ಅಧಿಕವಾಗಿದೆ. ಮಾರ್ಚ್ 29 ರಂದು ನಡೆಯುವ ಗುಜರಾತ್ ಟೈಟಾನ್ಸ್ ವಿರುದ್ಧದ ದ್ವಿತೀಯ ಪಂದ್ಯಲ್ಲಿ ಪಾಂಡ್ಯ ನಿಷೇಧ ಮುಕ್ತವಾಗಿ ಮೈದಾನಕ್ಕಿಳಿಯಬಹುದು.
ಸ್ಲೋ ಓವರ್ ನಿಯಮ
ಐಪಿಎಲ್ ನಿಯಮದ ಪ್ರಕಾರ ಸ್ಲೋ ಓವರ್ ರೇಟ್ ಕಾಯ್ದುಕೊಂಡ ಮೊದಲ ಪ್ರಮಾದಕ್ಕೆ ನಾಯಕನನ್ನು ದೂಷಿಸಲಾಗುತ್ತದೆ. ಅದರಂತೆ ಮೊದಲ ತಪ್ಪಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದು ಪುನರಾವರ್ತನೆಯಾದರೆ 24 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಅಲ್ಲದೆ ತಂಡದ ಇತರೆ ಆಟಗಾರರಿಗೂ ಪಂದ್ಯದ ಶುಲ್ಕದ ಶೇ.25 ರಷ್ಟು ದಂಡವಾಗಿ ಪಾವತಿಸಬೇಕಾಗುತ್ತದೆ. ಮೂರನೇ ಬಾರಿ ಈ ತಪ್ಪೆಸಗಿದರೆ ನಾಯಕನಿಗೆ 30 ಲಕ್ಷ ದಂಡ ಮತ್ತು ಒಂದು ಪಂದ್ಯ ನಿಷೇಧ ಶಿಕ್ಷೆ ನೀಡಲಾಗುತ್ತದೆ.
ಸಂಪೂರ್ಣ ಫಿಟ್‌ನೆಸ್ ಹೊಂದಿಲ್ಲದ ಕಾರಣ ಜಸ್‌ಪ್ರೀತ್ ಬುಮ್ರಾ ಮೊದಲ 5 ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಅಭ್ಯಾಸ ಶಿಬಿರದಲ್ಲಿ ಕಾಣಿಸಿಕೊಂಡಿದ್ದ ಬುಮ್ರಾ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವ ಮುನ್ಸೂಚನೆಯನ್ನು ನೀಡಿದ್ದರು. ಆದರೆ, ಫಿಟ್‌ನೆಸ್ ಪರೀಕ್ಷೆಯಲ್ಲಿ ಬುಮ್ರಾ ಸಂಪೂರ್ಣವಾಗಿ ಗುಣಮುಖರಾಗಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ IPL 2025: ಆರ್‌ಸಿಬಿ ಕ್ಯಾಂಪ್ ಸೇರಿದ ಕಿಂಗ್ ಕೊಹ್ಲಿ
ಮುಂಬೈ ಇಂಡಿಯನ್ಸ್ ತಂಡ
ಜಸ್‌ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ತಿಲಕ್ ವರ್ಮಾ, ಟ್ರೆಂಟ್ ಬೌಲ್ಟ್, ನಮನ್ ಧೀರ್, ರಾಬಿನ್ ಮಿಂಜ್, ಕರ್ಣ್ ಶರ್ಮ, ದೀಪಕ್ ಚಹರ್ ,ವಿಲ್ ಜಾಕ್ಸ್ , ಮಿಚೆಲ್ ಸ್ಯಾಂಟ್ನರ್ , ರ್ಯಾನ್ ರಿಕೆಲ್ಟನ್ , ಅಶ್ವನಿ ಕುಮಾರ್, ರೀಸ್ ಟಾಪ್ಲೆ, ಕೆಎಲ್ ಶ್ರೀಜಿತ್ , ರಾಜ್ ಅಂಗದ್ ಬಾವ , ಸತ್ಯನಾರಾಯಣ ರಾಜು, ಬೆವನ್ ಜೇಕಬ್ಸ್, ವಿಘ್ನೇಶ್ ಪುಥರ್, ಅರ್ಜುನ್ ತೆಂಡೂಲ್ಕರ್, ಲಿಜಾಡ್ ವಿಲಿಯಮ್ಸ್.