Champions Trophy ಟೂರ್ನಿಯ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಿವೃತ್ತಿ?
Will Virat Kohli, Rohit Sharma Retire after CT 2025? ಸ್ಥಿರ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿರುವ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವೃತ್ತಿ ಜೀವನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಳಿಕ ಕೊಹ್ಲಿ ಮತ್ತು ರೋಹಿತ್ ನಿವೃತ್ತಿ ಹೇಳಬಹುದೆಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಪಾಕಿಸ್ತಾನ ಆತಿಥ್ಯದಲ್ಲಿ ಬುಧವಾರ ಆರಂಭವಾಗಲಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಈ ಸರಣಿಯಲ್ಲಿನ ಪ್ರದರ್ಶನ ಇವರ ವೃತ್ತಿ ಜೀವನದ ಭವಿಷ್ಯವನ್ನು ನಿರ್ಧರಿಸಬಹುದು.
ಇಂಗ್ಲೆಂಡ್ ವಿರುದ್ಧ ಇತೀಚೆಗೆ ಮುಕ್ತಾಯವಾಗಿದ್ದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿಯಿಂದ ಒಂದು ಅರ್ಧಶತಕ ಮೂಡಿ ಬಂದಿದ್ದರೆ, ರೋಹಿತ್ ಶರ್ಮಾ ಅವರಿಂದ ಒಂದು ಶತಕ ಮೂಡಿ ಬಂದಿತ್ತು. ಈ ಸರಣಿಯನ್ನು ಟೀಮ್ ಇಂಡಿಯಾ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ. ಈಗಾಗಲೇ ಟಿ20ಐ ವೃತ್ತಿ ಜೀವನಕ್ಕೆ ವಿದಾಯ ಹೇಳಿರುವ ಈ ಇಬ್ಬರೂ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ದೀರ್ಘಾವಧಿಯಿಂದ ವೈಫಲ್ಯ ಅನುಭವಿಸುತ್ತಿದ್ದಾರೆ.
ICC Champions Trophy: 'ಮಿನಿ ವಿಶ್ವಕಪ್' ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ
ವಿರಾಟ್ ಕೊಹ್ಲಿಗೆ 36 ವರ್ಷ ವಯಸ್ಸಾಗಿದ್ದರೆ, ರೋಹಿತ್ ಶರ್ಮಾಗೆ 37 ವರ್ಷ ವಯಸ್ಸಾಗಿದೆ. ಮುಂದಿನ ಏಕದಿನ ವಿಶ್ವಕಪ್ 2027ರಲ್ಲಿ ನಡೆಯಲಿದೆ. ಇಲ್ಲಿಯ ತನಕ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಮುಂದುವರಿಯುವ ಬಗ್ಗೆ ಯಾವುದೇ ಅನುಮಾನವಿಲ್ಲ. ಈ ಹಿನ್ನೆಲೆಯಲ್ಲಿ ಚಾಂಪಿಯನ್ಸ್ ಟ್ರೋಫಿ ಈ ಇಬ್ಬರ ಪಾಲಿಗೆ ಕೊನೆಯ ಐಸಿಸಿ ಟೂರ್ನಿಯಾದರೂ ಅಚ್ಚರಿ ಇಲ್ಲ. ಅಂದ ಹಾಗೆ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ದ ಭಾರತ ತಂಡ ತನ್ನ ಮೊದಲನೇ ಪಂದ್ಯವನ್ನು ಆಡಲಿದೆ.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕಳೆದ 15 ವರ್ಷಗಳಿಂದ ಭಾರತ ತಂಡಕ್ಕೆ ಪ್ರಮುಖ ಆಧಾರ ಸ್ಥಂಭಗಳಾಗಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಳಿಕ ತಮ್ಮ ಮುಂದಿನ ಯೋಜನೆಗಳೇನೆಂಬುದನ್ನು ರೋಹಿತ್ ಶರ್ಮಾಗೆ ಬಿಸಿಸಿಐ ಕೇಳಿದ ಎಂದು ವರದಿಯಾಗಿದೆ. ಅಲ್ಲದೆ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ತೆಗೆದು ಅವರ ಸ್ಥಾನಕ್ಕೆ ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾ ಅವರನ್ನು ತುಂಬಲು ಬಿಸಿಸಿಐ ಎದುರು ನೋಡುತ್ತಿದೆ ಎಂಥಲೂ ವರದಿಯಾಗಿದೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರೋಹಿತ್ ಶರ್ಮಾಗೆ ಕಹಿ ಸುದ್ದಿ ನೀಡಿದ ಬಿಸಿಸಿಐ!
ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದೇನು?
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ನಾಯಕ ಕಪಿಲ್ ದೇವ್,"ಸೂಕ್ತ ಸಮಯ ಬಂದಾಗ ಈ ಬಗ್ಗೆ ಅವರೇ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಆಡುವುದು ಬೇಡ ಎಂದು ಅವರಿಗೆ ಅನಿಸಿದರೆ, ಅಂದು ಅವರು ನಿವೃತ್ತಿಯನ್ನು ಪಡೆಯಲಿದ್ದಾರೆ.
ರೋಹಿತ್ ಶರ್ಮಾಗೆ ಸಂಜಯ್ ಮಾಂಜ್ರೇಕರ್ ಬೆಂಬಲ
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಶತಕ ಸಿಡಿಸಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ನಿರೂಪಕ ಸಂಜಯ್ ಮಾಂಜ್ರೇಕರ್ ಬೆಂಬಲ ವ್ಯಕ್ತಪಡಿಸಿದ್ದಾರೆ. "ಅವರಿಗೆ (ರೋಹಿತ್ ಶರ್ಮಾ) ಒಂದೇ ದೊಡ್ಡ ಶತಕದ ಅಗತ್ಯವಿತ್ತು, ಅದರಂತೆ ಅವರು ಅದನ್ನು ಮಾಡಿದ್ದಾರೆ. ಅಲ್ಲದೆ ಅವರಿಂದ ಇನ್ನಷ್ಟು ಶತಕಗಳು ಮೂಡಿ ಬರಲಿವೆ. ಆದ್ದರಿಂದ ನಾವು ಕಾಯಬೇಕಾದ ಅಗತ್ಯವಿದೆ," ಎಂದು ಮಾಂಜ್ರೇಕರ್ ತಿಳಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಧಿಕ ಸಿಕ್ಸರ್, ಬೌಂಡರಿ ಸಿಡಿಸಿದ ಬ್ಯಾಟರ್‌ಗಳು
ಭಾರತ ತಂಡಕ್ಕೆ ಕೆವಿನ್ ಪೀಟರ್ಸನ್ ಎಚ್ಚರಿಕೆ
"ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ನಿವೃತ್ತಿ ಪಡೆಯಬಾರದು. ಇದರ ಬಗ್ಗೆ ಅವರೇ ಸ್ವತಃ ನಿರ್ಧಾರ ತೆಗೆದುಕೊಳ್ಳಬೇಕು. ಇವರ ನಿವೃತ್ತಿ ಬಗೆಗಿನ ಪ್ರಶ್ನೆ ನನಗೆ, ನಿಮಗೆ, ಆಯ್ಕೆದಾರರಿಗೆ, ತರಬೇತುದಾರರಿಗೆ ಮತ್ತು ಇತರ ಆಟಗಾರರಿಗೆ ಬರುವುದಿಲ್ಲ," ಎಂದು ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ತಿಳಿಸಿದ್ದಾರೆ.
"ಎಷ್ಟು ವರ್ಷಗಳ ಕಾಲ ಕ್ರಿಕೆಟ್ ಆಡಬೇಕು ಹಾಗೂ ಎಲ್ಲರೂ ನಿರೀಕ್ಷೆ ಮಾಡುವ ಅಗ್ರ ದರ್ಜೆಯ ಆಟಕ್ಕೆ ಹಿಂತಿರುಗಲು ತಾವು ಏನು ಮಾಡಬೇಕೆಂಬುದರ ಪ್ರಶ್ನೆಗೆ ಸ್ವತಃ ವಿರಾಟ್ ಕೊಹ್ಲಿ ಅವರೇ ಉತ್ತರಿಸಬೇಕಾಗಿದೆ," ಎಂದು ಇಂಗ್ಲೆಂಡ್ ಮಾಜಿ ನಾಯಕ ಹೇಳಿದ್ದಾರೆ.