ಬೆಂಗಳೂರು: ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ (Bengaluru News) ಹಾಡಹಗಲೇ ಯುವತಿಯೊಬ್ಬಳು ರಸ್ತೆಯಲ್ಲಿ ನಗ್ನವಾಗಿ ಓಡಾಡಿರುವ ಘಟನೆ ನಡೆದಿದೆ. ಪಿಜಿಯೊಂದರಲ್ಲಿ ವಾಸವಿರುವ ಯುವತಿ ಮೈಮೇಲೆ ಬಟ್ಟೆಯಿಲ್ಲದೇ ಓಡಾಗಿದ್ದು, ಈ ಅನಾಗರಿಕ ವರ್ತನೆಗೆ ಸ್ಥಳೀಯರಿಂದ ಟೀಕೆಗಳು ವ್ಯಕ್ತವಾಗುತ್ತಿವೆ.
ಜನನಿಬಿಡ ರಸ್ತೆಯಲ್ಲಿ ನಗ್ನವಾಗಿ ಯುವತಿ ಓಡಾಡುವ ಮೂಲಕ ಜನರಿಗೆ ಮುಜುಗರ ಉಂಟುಮಾಡಿದ್ದಾಳೆ. ಯುವತಿ ಎಲ್ಲಿಗೋ ಹೋಗಿ ನಗ್ನವಾಗಿ ಪಿಜಿಗೆ ಮರಳುತ್ತಿರುವುದು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯುವತಿ ನಶೆಯಲ್ಲಿ ತೇಲಾಡುತ್ತಾ ಹೋಗುತ್ತಿದ್ದುದಾಗಿ ಸ್ಥಳೀಯರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿ ಲೇಔಟ್ ಪೊಲೀಸ್ ಠಾಣೆಗೆ ಸ್ಥಳೀಯರು ದೂರು ನೀಡಿದರೂ ಯುವತಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Goa Stampede: ಗೋವಾದ ಜಾತ್ರೆಯಲ್ಲಿ ಕಾಲ್ತುಳಿತ, 7 ಜನ ಸಾವು, 50 ಮಂದಿಗೆ ಗಾಯ
ಎಚ್‌ಎಸ್‌ಆರ್ ಬಡಾವಣೆಯ ಪಿಜಿಗಳಲ್ಲಿ ನಡೆಯುತ್ತಿರುವ ಈ ರೀತಿಯ ಅನಾಗರಿಕ ವರ್ತನೆ ವಿರುದ್ಧ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಪಿಜಿಗಳ ನಿಯಂತ್ರಣ ಮತ್ತು ಸುರಕ್ಷತೆ ಕುರಿತು ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇನ್ನು ಬೊಮ್ಮನಹಳ್ಳಿ, ಕೋರಮಂಗಲ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹೊರರಾಜ್ಯಗಳು ಹಾಗೂ ವಿದೇಶಗಳಿಂದ ಬಂದ ಯುವಕ-ಯುವತಿಯರು ನೆಲೆಸಿರುವ ಪಿಜಿಗಳ ಬಳಿ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಹಾಡಹಗಲೇ ಮದ್ಯ, ಗಾಂಜಾ ಸೇವನೆ ಮಾಡಿ ರಸ್ತೆಯಲ್ಲಿ ಕುಣಿದಾಡುತ್ತಾರೆ. ಸ್ಥಳೀಯ ಸಾರ್ವಜನಿಕರಿಗೆ ಸುಖಾ ಸುಮ್ಮನೆ ಕಿರುಕುಳ ನೀಡುತ್ತಾರೆ. ಪಾರ್ಕ್‌ಗಳು ಹಾಗೂ ಇತರೆ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯಗಳಲ್ಲಿ ತೊಡಗಿರುತ್ತಾರೆ. ಇನ್ನು ಪಿಜಿಗಳಲ್ಲಿ ಮಧ್ಯರಾತ್ರಿವರೆಗೆ ಕುಡಿದು ಸಾಂಗ್ ಹಾಕಿಕೊಂಡು ಡ್ಯಾನ್ಸ್ ಮಾಡುವ ಮತ್ತು ರಸ್ತೆಗಳಲ್ಲಿ ಪುಂಡಾಟಿಕೆ ಮಾಡುವ ಘಟನೆಗಳು ಹೆಚ್ಚಾಗಿವೆ. ಇದರಿಂದ ಸ್ಥಳೀಯರು ರೋಸಿ ಹೋಗಿದ್ದಾರೆ.