ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

WPL 2025: ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ದಾಖಲೆ ಬರೆದ ಜಿ ಕಮಲಿನಿ!

youngest debutant G Kamalini: 2025ರ ಮಹಿಳಾ ಪ್ರೀಮಿಯರ್ ಲೀಗ್ ಐದನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಗುಜರಾತ್ ಜಯಂಟ್ಸ್‌ ವಿರುದ್ಧ ಕಾದಾಟ ನಡೆಸಿತು. ಈ ಪಂದ್ಯದಲ್ಲಿ ಮುಂಬೈ ತಂಡವು 16 ವರ್ಷ ವಯಸ್ಸಿನ ಕಮಲಿನಿ ಗುಣಲನ್‌ಗೆ ಡಬ್ಲ್ಯುಪಿಎಲ್‌ಗೆ ಪದಾರ್ಪಣೆ ಮಾಡಲು ಅವಕಾಶ ನೀಡಿತು. ಇದರೊಂದಿಗೆ ಕಮಿಲಿನಿ ವಿಶೇಷ ದಾಖಲೆ ಬರೆದಿದ್ದಾರೆ.

ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಅತ್ಯಂತ ಕಿರಿಯ ಆಟಗಾರ್ತಿ ಕಮಲಿನಿ!

G Kamalini

Profile Ramesh Kote Feb 18, 2025 11:56 PM

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ ಈಗಾಗಲೇ ಆರಂಭವಾಗಿದೆ. ಟೂರ್ನಿಯ ಪ್ರತಿಯೊಂದು ಪಂದ್ಯದಲ್ಲೂ ಏನಾದರೊಂದು ಹೊಸತನ ಕಂಡುಬರುತ್ತಿದೆ. ಟೂರ್ನಿಯ 5ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜಯಂಟ್ಸ್‌ ನಡುವೆ ಮಂಗಳವಾರ ನಡೆದಿತ್ತು. ಈ ಪಂದ್ಯದಲ್ಲಿ ಗುಜರಾತ್‌ ವಿರುದ್ಧ ಮುಂಬೈ 5 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಈ ಪಂದ್ಯದಲ್ಲಿ ಜಿ ಕಮಲಿನಿ ಮುಂಬೈ ಇಂಡಿಯನ್ಸ್‌ ಪರ ಡಬ್ಲ್ಯುಪಿಎಲ್‌ಗೆ ಪದಾರ್ಪಣೆ ಮಾಡಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಇದರೊಂದಿಗೆ ಜಿ ಕಮಲಿನಿ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಕಮಲಿನಿ ಭಾಜನರಾಗಿದ್ದಾರೆ.

ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕಮಲಿನಿ 16 ವರ್ಷ 213 ದಿನಗಳಲ್ಲಿ ಡಬ್ಲ್ಯುಪಿಎಲ್‌ಗೆ ಪದಾರ್ಪಣೆ ಮಾಡಿದ್ದಾರೆ.ಇದಕ್ಕೂ ಮೊದಲು, ಡಬ್ಲ್ಯುಪಿಎಲ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆ ಶಬ್ನಮ್ ಶಕೀಲ್ ಅವರ ಹೆಸರಿನಲ್ಲಿತ್ತು. ಅವರು 16 ವರ್ಷ ಮತ್ತು 263 ದಿನಗಳಲ್ಲಿ ಪದಾರ್ಪಣೆ ಮಾಡಿದ್ದರು. ಈ ಪಟ್ಟಿಯಲ್ಲಿ ಪಾರ್ಶ್ವಿ ಚೋಪ್ರಾ ಅವರ ಹೆಸರೂ ಇದೆ. ಪಾರ್ಶ್ವಿ ಚೋಪ್ರಾ 16 ವರ್ಷ 312 ದಿನಗಳಲ್ಲಿ WPLಗೆ ಪದಾರ್ಪಣೆ ಮಾಡಿದ್ದರು. ಕಮಲಿನಿ ಇತ್ತೀಚೆಗೆ ಐಸಿಸಿ ಅಂಡರ್-19 ಟಿ20 ವಿಶ್ವಕಪ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ಕಳೆದ ವರ್ಷದ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಕಮಲಿನಿ ಅವರನ್ನು ಮುಂಬೈ ಇಂಡಿಯನ್ಸ್ 1.6 ಕೋಟಿ ರೂ.ಗೆ ಖರೀದಿಸಿತ್ತು. ಕಮಲಿನಿ ಗುಣಲನ್ ವಿಕೆಟ್ ಕೀಪಿಂಗ್ ಜೊತೆಗೆ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.

WPL 2025: ಸ್ಮೃತಿ ಮಂಧಾನ ಸ್ಫೋಟಕ ಅರ್ಧ ಶತಕ; ಡೆಲ್ಲಿ ವಿರುದ್ಧ ಆರ್‌ಸಿಬಿಗೆ ಭರ್ಜರಿ ಜಯ

ಪಂದ್ಯದ ಬಗ್ಗೆ ಹೇಳುವುದಾದರೆ, ಗುಜರಾತ್ ಜಯಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಬೌಲಿಂಗ್ ಅತ್ಯುತ್ತಮವಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಗುಜರಾತ್‌ ಜಯಂಟ್ಸ್‌ ತಂಡ, ಕೇವಲ 43 ರನ್‌ಗಳನ್ನು ಗಳಿಸಿರುವಾಗ ಪ್ರಮುಖ 5 ವಿಕೆಟ್‌ಗಳನ್ನು ಕಬಳಿಸಿತ್ತು. ಹರ್ಲೀನ್‌ ಡಿಯೋಲ್‌ (32) ಜಯಂಟ್ಸ್‌ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಅಂತಿಮವಾಗಿ ಗುಜರಾತ್‌ ತಂಡ ನಿಗದಿತ 20 ಓವರ್‌ಗಳಲ್ಲಿ ಕೇವಲ 120 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಬೌಲಿಂಗ್‌ನಲ್ಲಿ ಮುಂಬೈ ತಂಡದ ಹೇಯ್ಲಿ ಮ್ಯಾಥ್ಯೂಸ್ 4 ಓವರ್‌ಗಳಲ್ಲಿ 16 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು. ಇದಲ್ಲದೆ, ನ್ಯಾಟ್ ಸಿವರ್-ಬ್ರಂಟ್ ಮತ್ತು ಅಮೆಲಿಯಾ ಕೆರ್ ತಲಾ ಎರಡೆರಡು ವಿಕೆಟ್ ಪಡೆದರೆ, ಶಬ್ನಮ್ ಇಸ್ಮಾಯಿಲ್ ಮತ್ತು ಅಮನ್ಜೋತ್ ಕೌರ್ ಕೂಡ ತಲಾ ಒಂದೊಂದು ವಿಕೆಟ್ ಪಡೆದರು.



ಬಳಿಕ ಗುರಿ ಹಿಂಬಾಲಿಸಿದ ಮುಂಬೈ ಇಂಡಿಯನ್ಸ್‌ ತಂಡ, ಆರಂಭಿಕ ಆಘಾತ ಅನುಭವಿಸಿದ ಹೊರತಾಗಿಯೂ ನ್ಯಾಟ್‌ ಸೀವಿಯರ್‌ ಬ್ರಂಟ್‌ ಅವರ ಅರ್ಧಶತಕದ ಬಲದಿಂದ 16.1 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 122 ರನ್‌ಗಳನ್ನು ಕಲೆ ಹಾಕಿ ಐದು ವಿಕೆಟ್‌ಗಳ ಗೆಲುವು ದಾಖಲಿಸಿತು. ಮುಂಬೈ ಪರ ಅತ್ಯುತ್ತಮ ಬ್ಯಾಟ್‌ ಮಾಡಿದ ಸೀವಿಯರ್‌ ಬ್ರಂಟ್‌, 39 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ 57 ರನ್‌ಗಳನ್ನು ಗಳಿಸಿದರು. ಆ ಮೂಲಕ ಮುಂಬೈ ತಂಡದ ಗೆಲುವಿಗೆ ನೆರವಾದರು. ಗುಜರಾತ್‌ ಜಯಂಟ್ಸ್‌ ಪರ ಪ್ರಿಯಾ ಮಿಶ್ರಾ ಮತ್ತು ಕೇಶವೀ ಗೌತಮಿ ತಲಾ ಎರಡೆರಡು ವಿಕೆಟ್‌ ಕಿತ್ತರೆ, ತನುಜಾ ಕಾನ್ವಾರ್‌ ಒಂದು ವಿಕೆಟ್‌ ಪಡೆದರು.